“ಸಮಯ” ಪದದ ಬಗ್ಗೆ ಒಂದು ವಿವೇಚನೆ

ಹರಿಯ ಬರಹ

“ಸಮಯ” ಪದದ ಬಗ್ಗೆ ಒಂದು ವಿವೇಚನೆ

ಎಸ್. ಕೆ. ಹರಿಹರೇಶ್ವರ

ಕನಕದಾಸರು ಉಡುಪಿಯ ಕೃಷ್ಣನನ್ನು `ಬಾಗಿಲನು ತೆರೆದು ಸೇವೆಯನು ಕೊಡು’ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ, “ಭಕ್ತರ ಮೊರೆ ಕೇಳಿ ಅವರ ನೆರವಿಗೆ ಬರಲು, `ಇದು ಸರಿಯಾದ ವೇಳೆಯೋ, ಅಲ್ಲವೋ’ ಎಂದು ಯೋಚಿಸುತ್ತಾ ನೀನು ನಿಲ್ಲುವುದಿಲ್ಲ, ಕೂಡಲೇ ಆ ಆರ್ತನಾದಕ್ಕೆ ಓಗೊಡುವೆ” – ಎನ್ನುವ ಭಾವದಲ್ಲಿ, “`ಸಮಯ-ಅಸಮಯ’ವುಂಟೆ, ಭಕ್ತವತ್ಸಲ, ನಿನಗೆ?”, ಎಂದು ಪ್ರಶ್ನಿಸುತ್ತಾರೆ. ಈ `ಸಮಯ’ ಎಂಬುದು ನಾವೇ ಕಲ್ಪಿಸಿಕೊಂಡಿರುವ, ಆದರೆ, ಮುಟ್ಟಿ ಅನುಭವಿಸಲಾಗದ, ನಮಗೆ ಅತಿ ಆವಶ್ಯಕವಾದ, ಬಾಳಿನುದ್ದಕ್ಕೂ ಇರುವ ನಮ್ಮೊಡನಾಟದ ಒಂದು ವಿಚಿತ್ರ `ವಸ್ತು’! ಏನಿದು ಈ `ಸಮಯ’?
ಸಂಸ್ಕೃತದಲ್ಲಿ `ಸಮಯ’
ಸಂಸ್ಕೃತದಲ್ಲಿ `ಸಮಯ’ಕ್ಕೆ ಕಾಲ, ವೇಳೆ – ಎಂಬ ಸಾಮಾನ್ಯ ಅರ್ಥವಿದೆ. ಅಮರಕೋಶದಲ್ಲಿ, `ಕಾಲ’ಕ್ಕೇ ಮೀಸಲಾದ ಒಂದು ವರ್ಗ (ಅಧ್ಯಾಯ) ಇದೆ; ಅದರಲ್ಲಿ, ಪ್ರಾರಂಭದಲ್ಲೇ, `ಕಾಲೋ ದಿಷ್ಟೋ ಅಪಿ ಅನೇಹ ಅಪಿ ಸಮಯೋ ಅಥ ಪಕ್ಷಿತ:||’ ಎಂದು, `ಕಾಲ’ಕ್ಕೆ ದಿಷ್ಟ, ಅನೇಹಸ್, ಮತ್ತು ಸಮಯ: – ಎಂಬ ಪರ್ಯಾಯ ಪದಗಳನ್ನು ಹೇಳಿದೆ (ಇಲ್ಲಿ `ಪಕ್ಷತಿ:’ ಎಂಬುದನ್ನು ಕೆಲವರು `ಕಾಲ’ಕ್ಕೂ, ಕೆಲವರು ಹದಿನೈದು ದಿನಗಳ `ಪಕ್ಷ’ಕ್ಕೂ ಸಮಾನಾರ್ಥಕ ಪದವಾಗಿ ಬಳಸುತ್ತಾರೆ, ಇರಲಿ).
ವಿಶೇಷ ಅರ್ಥಗಳಲ್ಲಿ `ಸಮಯ’ಕ್ಕೆ ಈ ಬೇರೆ ಬೇರೆ ಅರ್ಥಗಳೂ ಸಹ ಬಳಕೆಯಲ್ಲಿವೆ:
(೧)ಕ್ಲಪ್ತವಾದ ಕಾಲ, ಗೊತ್ತಾದ ವೇಳೆ; (೨)ಗೊತ್ತು, ಗುರುತು, ಸಂಕೇತ; (೩)ಪ್ರತಿಜ್ಞೆ, ಶಪಥ; (೪)ಆಚಾರ, ಸಂಪ್ರದಾಯ, ನಡವಳಿಕೆ, ನಿಯಮ; (೫)ಸಿದ್ಧಾಂತ; (೬)ಅವಕಾಶ, ಅನುಕೂಲ -ಇತ್ಯಾದಿ.
ಸಮಯ ಪದ ಹುಟ್ಟಿ ಬಂದದ್ದು ಹೇಗೆ?
ಸಂಸ್ಕೃತ ಧಾತುಗಳಲ್ಲಿ `ಇಣ್ (=ಗತೌ)’ ಎಂಬ ಒಂದು ಧಾತು, ಕ್ರಿಯಾಪದದ ಮೂಲ ವಸ್ತು ಇದೆ. ಈ `ಇಣ್’ ಎಂಬುದು ಹೋಗು, ಸೇರು, ತಲುಪು, ಹೊಂದು, ಪಡೆ – ಇತ್ಯಾದಿ ಅರ್ಥಗಳಲ್ಲಿ ಉಪಯೋಗವಾಗುತ್ತದೆ. ಅದು ಕ್ರಿಯಾಪದವಾದಾಗ, ಉದಾಹರಣೆಗೆ, `ಏತಿ’ (ವರ್ತಮಾನ ಕಾಲ, `ಹೋಗುತ್ತಾನೆ’); `ಏತು’ (ವಿಧ್ಯರ್ಥಕ `ಲೋಟ್’ ಗಣ, `ಹೊಂದಲಿ’) ಎಂಬಂಥ ರೂಪಗಳನ್ನು ಹೊಂದುತ್ತದೆ. `ಏತಿ’ಗೆ ಒಂದು ಸ್ವಾರಸ್ಯಕರವಾದ ಶ್ಲೋಕವನ್ನು ಉದ್ಧರಿಸಿ ಹೇಳಲು ಬಯಸುತ್ತೇನೆ:
“ಎಲ್ಲಾ ತಿಳಿದವ (`ಬ್ರಾಹ್ಮಣ’)ನ ಬಳಿಗೆ ಬಂದು, ವಿದ್ಯೆ ಕೇಳಿಕೊಳ್ಳುತ್ತದೆಯಂತೆ: `ನಾನು ನಿನ್ನ ನಿಧಿಯಿದ್ದಂತೆ; ನನ್ನನ್ನು ಕಾಪಾಡು! ಅಸೂಯೆವುಳ್ಳವನಿಗೆ ನನ್ನನ್ನು ಕೊಡಬೇಡಯ್ಯಾ! ಹೀಗೆ ನೀನು ನನ್ನನ್ನು ನೋಡಿಕೊಂಡರೆ, ನಾನು ವೀರ್ಯವತಿಯಾಗಿ ಇರಬಲ್ಲೆ!’ ವಿದ್ಯಾ ಬ್ರಾಹ್ಮಣಂ ಏತಿ, ಆಹ-`ಶೇವಧಿ ಷ್ಟೇ ಅಸ್ಮಿ; ರಕ್ಷ ಮಾಂ| ಅಸೂಯಕಾಯ ಮಾಂ ಮಾ ಅದಾಸ್; ತಥಾ ಸ್ಯಾಂ ವೀರ್ಯವತ್ತಮಾ||’ -ಮನುಸ್ಮೃತಿ ೨. ೧೧೪; ನಿರುಕ್ತ ೨. ೪. ಇಲ್ಲಿ `ಏತಿ’ ಎಂದರೆ, `ಹತ್ತಿರ ಹೋಗುತ್ತದೆ’ ಎಂದರ್ಥ.
ಉಪಸರ್ಗದೊಡನೆ ಸೇರಿದಾಗ ಬಗೆ ಬಗೆಯ ಅರ್ಥಕ್ಕೆ ಈಡಾಗಿ, ಈ `ಇಣ್’ ಧಾತು ಬಣ್ಣ ಬದಲಾಯಿಸುತ್ತದೆ. ನಿದರ್ಶನಕ್ಕೆ: `ಅನು + ಏತು = ಅನ್ವೇತು’, ಅನುಸರಿಸುವಂತಾಗಲಿ (ಉದಾಹರಣೆ: `ವಿಷ್ಣು ತ್ವಾ ಅನ್ವೇತು’ = `ನಿನು ನನ್ನನ್ನು ಅನುಸರಿಸುವಂತೆ ಆ ಭಗವಂತ ಮಾಡಲಿ’ – ಮದುವೆಯ ಸಪ್ತಪದಿಯ ಮಂತ್ರಭಾಗ); `ಉಪ + ಏತು = ಉಪೈತು’, ಸಮೀಪಕ್ಕೆ ಬರಲಿ (ಉದಾ: `ಉಪೈತು ಮಾಂ ದೇವಸಖ:..’ = `ನನ್ನ ಸಮೀಪಕ್ಕೆ ನೀನು ಬರುವಂತೆ ಆ ದೇವತೆಗಳ ಗೆಳೆಯ ಅಗ್ನಿ ಅನುಗ್ರಹಿಸಲಿ’ – ಶ್ರೀ ಸೂಕ್ತ) ಇತ್ಯಾದಿ.
ಈ ದಿಕ್ಕಿನಲ್ಲಿ, ಧಾತುಗಳೊಂದಿಗೆ ಪ್ರತ್ಯಯಗಳು ಸೇರಿ ಹೊಸ ಪದಗಳು ರಚಿತವಾದ ದಾರಿಯಲ್ಲಿ, `ಸಮ್ಯಕ್ + ಇಣ್(ಏತಿ)’ ಇದರಿಂದ `ಸಮಯ’ ಎಂಬ ಪದ ಬಂದಿದೆ, ಎಂದು ನಿಷ್ಪತ್ತಿಯನ್ನು ಹೇಳಬಹುದು.
`ಸಮಯ’ ಎಷ್ಟು ಹಳತು?
ಸೋಜಿಗವೆಂದರೆ, ಕಾಲ-ಸೂಚಕವಾದ `ಸಮಯ’ ಎಂಬ ಪದ ವೇದಗಳಲ್ಲಿ ಬಂದಿಲ್ಲ; ಉಪನಿಷತ್ತುಗಳಲ್ಲಿ ಕಂಡುಬರುವುದಿಲ್ಲ; ಭಗವದ್ಗೀತೆಯಲ್ಲಿ ಕಾಣಿಸುವುದಿಲ್ಲ; ಬಹಳ ಪ್ರಾಚೀನವೆಂದು ಬಲ್ಲವರು ಒಪ್ಪುವ, ಆಚಾರ್ಯ ಶ್ರೀ ಶಂಕರರ ಗೀತಾ ಭಾಷ್ಯದಲ್ಲೂ ಈ `ಸಮಯ’ ಪದ ಗೋಚರಿಸುವುದಿಲ್ಲ. ಆದರೆ `ಕಾಲ’ ಇದೆ.
ಹಾಗೆ ನೋಡಿದರೆ, `ಕಾಲ’ ಎಂಬ ಸಮಯಸೂಚಕ ಪದ ಸಹ ಮೊಟ್ಟ ಮೊದಲ ನಮಗೆ ಸಿಗುವುದು ಋಗ್ವೇದದ ಹತ್ತನೆಯ ಮಂಡಲದಲ್ಲಿ, ೧೦.೪೨.೯ರಲ್ಲಿ. `ಉತ ಪ್ರಹಾಂ ಅತಿ ದೀವ್ಯಾಂ ಜಯಾತಿ, ಕೃತಂ ಯಚ್ ಶ್ವಘ್ನೀ ವಿಚಿನೋತಿ ಕಾಲೇ| ಯೋ ದೇವಕಾಮೋ ನ ಧನಾ ರುಣದ್ ಹಿ ಸಮಿತ್ ತಂ ರಾಯಾ ಸೃಜತಿ ಸ್ವಧಾವಾನ್||’ -ಎಂಬಲ್ಲಿ. (ಎದುರಾದವನನ್ನು ಹೊರಗೋಡಿಸಿ, ಅವನು ಗೆಲ್ಲುತ್ತಾನೆ; ಆ (ಸಮರದ) ಕಾಲದಲ್ಲಿ ಒಬ್ಬ ಜೂಜುಗಾರ ಮಾಡುವಂತೆ, ತನ್ನ ಪ್ರತಿಸ್ಪರ್ದಿಯನ್ನು ಆರಿಸಿಕೊಳ್ಳುತ್ತಾನೆ. ದೇವತೆಗಳನ್ನು ತೃಪ್ತಿ ಪಡಿಸಲಿಚ್ಛಿಸುವ ವ್ಯಕ್ತಿ ಹಣ ವಿನಿಯೋಗಿಸಲು ಹಿಂದೆಮುಂದೆ ನೋಡುವುದಿಲ್ಲ; ಅಂಥವನಿಗೆ ಆ ಬಲಶಾಲಿ ಇಂದ್ರ ಸಂಪತ್ತನ್ನ ಅನುಗ್ರಹಿಸುತ್ತಾನೆ- ಎಂಬುದು ಋಷಿ ಕೃಷ್ಣ ಆಂಗೀರಸರ ಭಾವ.)
ಇದು, ಈ `ಕಾಲ’ ಬರುವುದೂ ಅಲ್ಲಿ ಒಂದೇ ಸಲ. ನಂತರ ಅಥರ್ವವೇದದಲ್ಲಿ `ವೇಳೆ’ ಎಂಬರ್ಥದಲ್ಲೇ ಮತ್ತೆ `ಕಾಲ’ ಪ್ರತ್ಯಕ್ಷವಾಗುತ್ತದೆ. (೧೯.೫೩ರ ೧-೧೦ ಮತ್ತು ೧೯.೫೪ರ ೧-೫ರಲ್ಲಿ.) “ಒಂದು ಕುದುರೆಯಂತೆ `ಕಾಲ’; ಅದಕ್ಕೆ ಏಳು ಲಗಾಮುಗಳು; ಸಹಸ್ರಾರು ಕಣ್ಣುಗಳು; ಮುಪ್ಪಿಲ್ಲ (ಮುಗಿವಿಲ್ಲ); ಸಮೃದ್ಧ ಬಲಶಾಲಿ ಇದು; ಇಡೀ ವಿಶ್ವವೇ ಇದರ ಗಾಲಿಗಳು; (ರಥವನ್ನು ಏರಿದಂತೆ) ಬಲ್ಲವರು, `ಕವಿಗಳು’ ಈ ಕಾಲವನ್ನು ಹತ್ತುತ್ತಾರೆ!… … ಕಾಲದಲ್ಲಿ ಮನವಿದೆ. ಕಾಲದಲ್ಲಿ ಪ್ರಾಣವಿದೆ, ಕಾಲದಲ್ಲಿಯೇ ಗುರುತಿಸುವ ಹೆಸರೂ ಒಳಗೊಂಡಿದೆ. ಎಲ್ಲರೂ ನಲಿಯುವುದು ಕಾಲ ಬಂದಾಗಲೇ!” – ಇಂಥ ಮಾತುಗಳಿಂದ, `ಕಾಲ’ವನ್ನು `ವೇಳೆ’ಯ ರೂಪದಲ್ಲೂ, `ಪರಮ ಶಕ್ತಿ’ಯೊಂದರ ಸಂಕೇತವಾಗಿಯೂ ವೈದಿಕ ಸಾಹಿತ್ಯ ಬಳಸಿತ್ತು.
ಇವೆರಡರ ನಡುವೆ, ಋಗ್ವೇದೀಯ ಶತಪಥ ಬ್ರಾಹ್ಮಣದಲ್ಲಿ ಹಲವೆಡೆ (ಉದಾಹರಣೆಗೆ, ೧.೭.೩.೩, ೨.೪.೨.೪, ೩೮.೩.೩೬ ಇತ್ಯಾದಿ) `ಸಮಯ’ ಬಂದು, ಇದಕ್ಕೆ ಹಿಂದೆ ಬಳಕೆಯಲ್ಲಿದ್ದ `ಋತು’ವನ್ನು ಹಿಮ್ಮೆಟ್ಟಿಸುತ್ತದೆ. ಹಿಂದೆ, ಇಂದು, ನಾಳೆಗಳ ನಿರ್ದಿಷ್ಟ ಸೂಚನೆಗೆ, `ಭೂತ’, `ಭವತ್’ ಮತ್ತು `ಭವಿಷ್ಯತ್’ ರೂಪಗಳನ್ನು ಕಾಣಲು ನಾವು ಶಾಂಖ್ಯಾಯನ ಅರಣ್ಯಕ(೭.೨೦) ಗಳ ಕಾಲದವರೆಗೆ ಕಾಯಬೇಕು.
ಛಾಂದೋಗ್ಯ ಉಪನಿಷತ್ತಿನಲ್ಲಿ, ಬೃಹದಾರಣ್ಯಕದಲ್ಲಿ, ಮೈತ್ರಿ, ಶ್ವೇತಾಶ್ವತರ, ತೈತ್ತಿರೀಯ, ಮಹಾನಾರಾಯಣ ಮುಂತಾದ ಉಪನಿಷತ್ತುಗಳಲ್ಲಿ ಕಾಲದ ಪ್ರಸ್ತಾಪ ಬರುತ್ತದೆ.
`ಕಾಲ’ದ ಸಂವಾದಿಯಾಗಿ, ವೇದ ವಾಙ್ಮಯದಲ್ಲಿ ಬರುವ ಪದಗಳನ್ನು ಹೀಗೆ ಪಟ್ಟಿ ಮಾಡಬಹುದು. ಅಷ್ಟಕ (ಹುಣ್ಣಿಮೆಯ ಬಳಿಕ ಬರುವ ಎಂಟನೆಯ ದಿನ), ಅಹನ್(ದಿನ), ಆರ್ತವ (ಋತುಗಳು, ವರ್ಷದ ಭಾಗಗಳು), ಋತು, ಏಕಾಷ್ಟಕ (ಮಾಘ ಮಾಸ, ಕೃಷ್ಣ ಪಕ್ಷ, ಅಷ್ಟಮಿ), ದೋಷ (ಸಂಜೆ), ನಕ್ತ (ರಾತ್ರೆ), ನಿದಾಘ (ಬೇಸಗೆ), ನಿಮೃಚ್ (ಸೂರ್ಯಾಸ್ತ), ಪಕ್ಷ (ಅರ್ಧ ತಿಂಗಳು/ ಹದಿನೈದು ದಿನಗಳು), ಪರಿವತ್ಸರ (ಒಂದು ಪೂರ್ಣ ವರುಷ), ಪರುಸ್/ ಪರ್ವನ್ (ಕಾಲದ ಭಾಗ), ಪಾಪಸಮ (ಕೆಟ್ಟ ಋತು), ಪೂರ್ಣಮಾಸ (ಹುಣ್ಣಿಮೆ), ಪೂರ್ವಪಕ್ಷ (ಮಾಸದ ಮೊದಲ ಅರ್ಧ ಭಾಗ), ಪೂರ್ವಾಹ್ನ (ದಿನದ ಮೊದಲ ಅರ್ಧ ಭಾಗ), ಪೂರ್ಣಮಾಸಿ (ಹುಣ್ಣಿಮೆಯ ರಾತ್ರಿ), ಪ್ರಪಿತ್ವಾ (ದಿನದ ಕೊನೆ), ಪ್ರಬುಧ್ (ಸೂರ್ಯೋದಯ), ಪ್ರಾತರ್ (ಬೆಳಗ್ಗೆ), ಪ್ರಾವೃಷ್ (ಮಳೆಗಾಲ), ಮಧ್ಯಾಂದಿನ (ದಿನದ ನಡು ಭಾಗ), ಮಧ್ಯಾವರ್ಷ (ಮಳೆಗಾಲದ ನಡುವಿನ ಕಾಲ), ಮಹಾರಾತ್ರ (ಕೆಲವು ಗಂಟೆಗಳು ಕಳೆದ ಮೇಲಿನ ರಾತ್ರಿಯ ವೇಳೆ), ಮಹಾಹ್ನ (ದಿನದ ನಡು ಭಾಗದ ನಂತರದ ಮಳೆ, ಅಪರಾಹ್ನ), ಮಾಸ (ತಿಂಗಳು), ಯವ್ಯ (ತಿಂಗಳು), ಯುಗ, ರಾತ್ರಿ, ವರ್ಷ (ಮಳೆಗಾಲ), ವಸ್ತು (ಮುಂಜಾನೆ), ಶತಶಾರದ (ನೂರು ಶರದ್ ಋತುಗಳು), ಸಂವತ್ಸರ (ವರುಷ), ಸಂಗವ (ಪರಾಹ್ನ), ಸಂಧಿ (ಅರುಣೋದಯ ಮತ್ತು ಮುಚ್ಚಂಜೆ), ಸಮಾ (ಬೇಸಗೆ), ಸಾಯ (ಸಂಜೆ), ಸಿನೀವಾಲಿ (ಅಮವಾಸ್ಯೆ), ಸ್ವಸರ (ಬೆಳಗ್ಗೆ), ಹಾಯನ (ವರುಷ), ಹಿಮ (ಶೀತ ವಾತಾವರಣ), ಹಿಮಾ (ಚಳಿಗಾಲ), ಹೇಮನ್ / ಹೇಮನ್ತ (ಹೇಮಂತ ಋತು), ಹ್ಯಸ್ (ನೆನ್ನೆ) -ಇತ್ಯಾದಿ.
ಪಾಣಿನಿ ತನ್ನ ಸೂತ್ರಗಳಲ್ಲಿ `ಕಾಲ’ದ ಬಗ್ಗೆ `ಸಮಯ’ದ ಅರ್ಥದಲ್ಲಿ ಬಹಳೆಡೆ ಬಳಸುತ್ತಾನೆ. ಪತಂಜಲಿ ತನ್ನ ಭಾಷ್ಯದಲ್ಲಿ ಪಾಣಿನಿಯ `ಕಾಲ ಸಮಯ ವೇಳಾಸು ತುಮುನ್’ – ಎಂಬಲ್ಲಿ (೩.೩.೧೬೭), ಕಾಲದ ಬಗ್ಗೆ “ಕಾಲ ಮಲಗಿದ್ದವನಲ್ಲೂ ಎಚ್ಚೆತ್ತಿರುತ್ತದೆ, ಕಾಲವನ್ನು ಗೆಲ್ಲಲಾಗದು” (ಕಾಲೋ ಜಾಗರ್ತಿ ಸುಪ್ತೇಷು, ಕಾಲೋ ಹಿ ದುರತಿಕ್ರಮಃ|) ಎಂಬ ಮಹಾಭಾರತದ (ಆದಿಪರ್ವ ೧. ೨೪೮; ಸ್ತ್ರೀಪರ್ವ ೨.೨೪; ಶಾಂತಿ ಪರ್ವ ೨೨೧.೪೧) ಮಾತುಗಳನ್ನು ಉದ್ಧರಿಸುತ್ತಾನೆ. ಜೊತೆಗೆ, ಕಾಲದ ಬಗ್ಗೆ ಇನ್ನೊಂದು ಮುಖ್ಯ ಸಿದ್ಧಾಂತವನ್ನೂ ಪತಂಜಲಿ ಇಲ್ಲಿ (ಪಾಣಿನಿ ೨.೨೫ ರ ವಾರ್ತಿಕ ೨) ಮಂಡಿಸುತ್ತಾನೆ: `ಕಾಲಕ್ಕೂ ಬೆಳವಣಿಗೆಗೂ ಸಂಬಂಧವಿದೆ. ಈ ಚಟುವಟಿಕೆಗೆ ಮುಖ್ಯ ಕಾರಣ ಸೂರ್ಯನ ನಿರಂತರ ಚಲನೆ’.
ಅಂದರೇನು? ಕಾಲ ಎನ್ನುವುದು ಬೇರೇನೂ ಅಲ್ಲ; ನಮ್ಮ ಕಣ್ಣಿಗೆ ಗೋಚರಿಸುವ ಎಡೆಬಿಡದ ನಡೆಯುವ ಬದಲಾವಣೆಯನ್ನು ಗುರುತಿಸಲು, ಅಳೆಯಲು ಸಹಾಯಕವಾಗಿರುವ ಒಂದು ಅನುಕೂಲಕರ ಮಾನದಂಡ. ದಿಕ್ಕು (ಸ್ಪೇಸ್) ಮತ್ತು ಕಾಲ (ಟೈಮ್) – ಮಾನವ ಜನಾಂಗದ ಎಲ್ಲಾ ಸಂಸ್ಕೃತಿಗಳಲ್ಲೂ ಬಹಳ ಹಿಂದಿನ ಕಾಲದಿಂದಲೂ ತುಂಬಾ ಚರ್ಚೆಗೊಳಗಾದ ವಿಷಯ.
ನಮ್ಮ ಪುರಾಣಗಳಲ್ಲಿ (ಉದಾಹರಣೆಗೆ, ಕೂರ್ಮ ಪುರಾಣ ೧.೫, ವಿಷ್ಣು ಪುರಾಣ ೧.೨.೨೫, ವಾಯು ೩೨.೨೯-೩೦, ವಿಷ್ಣು ಧರ್ಮೋತ್ತರ ೧.೭೨.೧-೭ ಇತ್ಯಾದಿ) ಕಾಲದ ಚರ್ಚೆ ನಡೆದಿದೆ. ತನ್ನ ಇಪ್ಪತ್ತೈದು ತತ್ತ್ವಗಳಲ್ಲಿ ಕಾಲವನ್ನು ಒಂದೆಂದು ಪರಿಗಣಿಸದಿದ್ದರೂ, `ಸಾಂಖ್ಯ’ ದರ್ಶನ `ಕಾಲ’ವನ್ನು ಮರೆತಿಲ್ಲ. `ಕಾಲವನ್ನು’ ತನ್ನ ಒಂಭತ್ತು `ದ್ರವ್ಯ’ಗಳಲ್ಲಿ ಒಂದನ್ನಾಗಿ `ವೈಶೇಷಿಕ’ ದರ್ಶನ ಪರಿಗಣಿಸಿದೆ.
ಶ್ರೀವಿಜಯನ `ಕವಿರಾಜಮಾರ್ಗ’ದಲ್ಲಿ `ಸಮಯ’ ಮತ್ತು `ಸಮಯವಿರುದ್ಧ’ ದ ಹೇಳಿಕೆಯಿದೆ. ಸಾಂಖ್ಯ ದರ್ಶನಕಾರರಾದ ಕಪಿಲ, ಸುಗತರೆನಿಸಿದ ಗೌತಮ ಬುದ್ಧ, ವೈಶೇಷಿಕ ಸಿದ್ಧಾಂತದ ಕಣಾದ, ನಾಸ್ತಿಕಮತದ ಚಾರ್ವಾಕನ ಅನುಯಾಯಿ ಲೋಕಾಯತ -ಇವರುಗಳ ಮಾರ್ಗಭೇದಗಳು `ಸಮಯ’ಗಳು; ಅವುಗಳ ತಪ್ಪು ತಿಳಿವಳಿಕೆಯೇ `ಸಮಯವಿರುದ್ಧ’ ; ಈ ದೋಷ ಕಾವ್ಯದಲ್ಲಿ ಸಲ್ಲ ಎನ್ನುತ್ತದೆ, ನೃಪತುಂಗಾನುಮಪ್ಪ ಕವಿರಾಜಮಾರ್ಗಂ.
ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು `ಸಮಯಜ್ಞ'(೩೫೮) ಎಂದು ಕರೆದೆವು. `ಹುಟ್ಟು ಇರುವು, ಅಳಿವು-ಇವುಗಳ `ಸಮಯ’ವನ್ನ ಬಲ್ಲವನು’, ಎಂದು ಒಂದು ವ್ಯಾಖ್ಯೆಯಾದರೆ, `ಆರೂ ಬಗೆಯ `ಸಮಯ’ಗಳನ್ನು ಬಲ್ಲವನು’ ಎನ್ನುತ್ತದೆ ಶ್ರೀ ಶಾಂಕರ ಭಾಷ್ಯ. `ಅಗ್ನಿಯೇ ಮೊದಲಾದವರ `ಸಮಯ’ ಅಂದರೆ, ಅಧಿಕಾರವನ್ನು ಬಲ್ಲವನು’ ಎನ್ನುತ್ತಾರೆ ಶ್ರೀ ಪರಾಶರರು. `ಭಕ್ತರಿಗೆ ಅಭೀಷ್ಟವನ್ನು ಅನುಗ್ರಹಿಸಲು ತಕ್ಕ ಕಾಲವನ್ನು ಬಲ್ಲವನು’ ಎನ್ನುತ್ತಾರೆ ಶ್ರೀ ಸತ್ಯಸಂಧರು.
ಗಣಿತ ಮತ್ತು ಖಗೋಳಶಾಸ್ತ್ರೀಯ ಗ್ರಂಥಗಳಂತೂ ಈ `ಕಾಲ’, ಅದರ ಗಣನೆಯ ಬಗ್ಗೆ ವಿಪುಲ ಅಧ್ಯಯನ ಸಾಮಗ್ರಿ ಒದಗಿಸಿದೆ (ಇದು ಇನ್ನೊಂದು ಲೇಖನಕ್ಕೆ ಹೊಟ್ಟೆತುಂಬಾ ಆಹಾರ; ಇಲ್ಲಿ ಬೇಡ).
ಕ್ರಿಯಾ ವಿಶೇಷವಾಗಿ ಆವ್ಯಯಗಳು:
ನಾಮಪದಗಳಿಗೆ ವಿಶೇಷಣಗಳು ಬೇಕಾದಾಗ, ಸಂಸ್ಕೃತದಲ್ಲಿ ಒಂದು ವೈಶಿಷ್ಟ ವಿದೆ: ನಾಮಪದದ ಲಿಂಗ. ವಚನ ಇತ್ಯಾದಿಗಳನ್ನೇ ಆ ವಿಶೇಷಣಗಳೂ ಮೈಯುಂಡಿರಬೇಕು – ಎಂಬುದು ಒಂದು ನಿಯಮ. `ಸುಂದರ: ಪುರುಷ: ಸುಂದರೀ ನಾರೀ, ಸುಂದರಂ ವನಮ್’ -ಎಂಬಂತೆ.
ಕನ್ನಡದಲ್ಲೂ ಸ್ವಲ್ಪ ಹೆಚ್ಚೂ ಕಡಿಮೆ ಇಂಥದೇ ನಿಯಮವಿದೆ. ನೋಡಿ: `ಸುಂದರನಾದ, ಸುಂದರಳಾದ, ಸುಂದರವಾದ…’, ಹೀಗೆ. ಆದರೆ, `ಅವ್ಯಯ’ಗಳಿಗೆ ಈ ನಿಯಮ ತಗಲುವುದಿಲ್ಲ. ಮೂರು ಲಿಂಗ, ವಚನಗಳಲ್ಲಿ, ಏಳೂ ವಿಭಕ್ತಿಗಳಲ್ಲಿ ಏನೂ ಬದಲಾಗದೇ ಇದ್ದಂತೆಯೇ ಇರುವ `ದೇವರ’ಂಥಾ ಪದ ಇದು! `ಸಮಯ’ದ ವಿಚಾರ ಬಂದಾಗ, `ಕಾಲ’ಕ್ಕೆ ಸಂಬಂಧಿಸಿದಂತೆ, ಕ್ರಿಯಾಪದಗಳ ವಿಶೇಷಣವಾಗಿ ಇರುವ `ಅವ್ಯಯ’ಗಳ ಕಡೆ ಈಗ ಗಮನ ಹರಿಸೋಣ:
`ಅದೇ ಸಮಯದಲ್ಲಿ’ ಎಂಬ ಅರ್ಥದಲ್ಲಿ, `ಸಾಕಮ್’ ಎಂಬ ಸಮಯ ಸೂಚಕ ಸಂಸ್ಕೃತ ಪದವನ್ನ, ಬಹಳ ಬಹಳ ಹಿಂದೆಯೇ (ಉದಾ: ಋಗ್ವೇದದ ಹತ್ತನೆಯ ಮಂಡಲದ ೫೪.೩ರಲ್ಲಿ) ನೋಡುತ್ತೇವೆ. ಇದರ ಹಿಂದೆ, ಮುಂದೆ ಇಲ್ಲಿ ಈ ಕ್ರಿಯಾ ವಿಶೇಷಣ ಅವ್ಯಯಗಳ ದೊಡ್ಡ ಸೈನ್ಯವೇ ಇದೆ. ಈ ಸೈನ್ಯದಲ್ಲಿ, ಸಂಸ್ಕೃತವನ್ನು ಸ್ವಲ್ಪ ಬದಿಗಿರಿಸಿ, ಕನ್ನಡದ ಕಾಲಸೂಚಕ ಸಾಮಾನ್ಯ ಅವ್ಯಯಗಳೆಂಬ ಪದಾತಿಗಳನ್ನು ಮಾತ್ರ ಪಟ್ಟಿ ಮಾಡೋಣ:
ಕೂಡಲೇ, ಈಗಲೇ, ಒಡನೆ, ಬೇಗ, ವೇಗವಾಗಿ, ತ್ವರೆಯಿಂದ, ತ್ವರಿತವಾಗಿ; ಮೆಲ್ಲಗೆ, ಮೆಲ್ಲ ಮೆಲ್ಲಗೆ, ನಿಧಾನವಾಗಿ, ಸಾವಕಾಶವಾಗಿ; ಮೊದಲು, ಮುನ್ನ; ಇನ್ನು, ಬಳಿಕ, ತರುವಾಯ, ಅನಂತರ, ನಂತರ; ಈಗ, ಈವಾಗ, ಆಗ, ಆವಾಗ, ಯಾವಾಗ, ಎಂದು; ಇಂದು, ನಾಳೆ, ನಾಳಿದ್ದು, ನಾಡಿದ್ದು; ನೆನ್ನೆ, ಮೊನ್ನೆ; ಯಾವಾಗಲೂ, ಸದಾ, ನಿರಂತರ, ಚಿರಕಾಲ -ಮುಂತಾದವು.
ಹಳೆಗನ್ನಡದಲ್ಲಿ ಕಾಲಸೂಚಕ ಪ್ರತ್ಯಯಗಳನ್ನು ಗಮನಿಸಿ: `ಒಡೆ’ (ತೀಡುವೊಡಲ್ಲಿ ಕಮ್ಮೆಲರ್ ತೀಡುಗಂ), `ಎ’ (ಗಾಯಕಂ ಪಾಡೆ ದೇವಂ ಮೆಚ್ಚಿದಂ), `ಆಲ್’ (ಕೆಂಬಿಸಲ್ ಎಳೆಸಲ್ ಎಸೆದುವು ಆಶ್ರಮತರುಗಳ್), `ಅಲ್ ಒಡಂ (ವಸಂತಂ ಬರಲೊಡಂ ಕೋಗಿಲೆ ಉಲಿಗುಂ), `ಅನ್ನಂ’ (ಹರಿ ಬರ್ಪನ್ನಂ ತಪ ಗೆಯ್ದೆಪಂ), `ಅನ್ನೆಗಂ’ (ನೆನೆವನ್ನೆಗಂ ಬಂದಂ), `ಇನಂ’ (ಬೆಳಗಪ್ಪಿನಂ ಕೇಳಿಸಿದಂ), `ಇನೆಗಂ’ (ಅವಧಿ ಬರ್ಪಿನೆಗಂ ಸೈರಿಸಿದಂ), `ಉದುಂ’ (ಬರವೇರೆಂಬುದಂ)- ಮುಂತಾದ ಪ್ರಯೋಗಗಳಿವೆ.
`ಶಬ್ದಮಣಿದರ್ಪಣ’ದಲ್ಲಿ ಕೇಶಿರಾಜ `ಅವ್ಯಯ ಪ್ರಕರಣ’ದಲ್ಲಿ, `ಅನೆ’ಯ ವಿಚಾರವಾಗಿ `ಇಮ್ಮನೆ, ಸಿಯ್ಯನೆ, ಮೆಲ್ಲನೆ’ಯ ಮಾತಾಡಿ, `ಆನುಂ ಎನಿಪ್ಪ ಅವ್ಯಯಮಂ ಸ್ಥಾನ- ದಿಶಾ- ಕಾಲ- ಸಂಖ್ಯೆಗಳೊಳ್ ಉಸಿರ್ವರ್’ (೩೧೮) ಎಂದಾಗ, `ಎಂದಾನುಂ’ ಇದಕ್ಕೆ ಉದಾಹರಣೆ ಆಗುತ್ತದೆ. ಇವೆಲ್ಲ ಪದಪುಷ್ಪಗಳು ನಮ್ಮ `ಸಮಯ’ದ `ಕಾಲ’ದ ದಾಯಾದಿಗಳು, ಒಂದಲ್ಲ ಒಂದು ತರಹಾ.
ವಿಶಿಷ್ಟ ಪಾರಿಭಾಷಿಕ ಪದವಾಗಿ `ಸಮಯ’:
ದೇವರನ್ನು `ಶಕ್ತಿ’ಯನ್ನಾಗಿ, `ದೇವಿ’ಯನ್ನಾಗಿ ಪರಿಭಾವಿಸಿಕೊಂಡು ಉಪಾಸನೆ ಮಾಡುವವರು, ಇದಕ್ಕೆ ಸಂಬಂಧಿಸಿದ `ತಂತ್ರಶಾಸ್ತ್ರ’ ಗ್ರಂಥಗಳನ್ನು ಆಧರಿಸಿ, ಪೂಜೆಮಾಡುತ್ತಾರೆ. ಇಂಥ ತಂತ್ರಶಾಸ್ತ್ರ ಗ್ರಂಥಗಳಲ್ಲಿ ಸಂಕೇತಮಯವಾದ ಮತ್ತು ಗುಪ್ತಸಂಜ್ಞೆಗಳಿಂದ ಕೂಡಿದ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳು ಇವೆ. `ಸಮಯ’ ಎಂಬುದು ಅವುಗಳಲ್ಲಿ ಒಂದು.
`ಲಲಿತಾ ಸಹಸ್ರನಾಮ’ ಈ ಬಗೆಯ ಆರಾಧನೆಗೆ ಒಂದು ಸಾಧನ. ಬ್ರಹ್ಮಾಂಡಪುರಾಣದ ಆ ಭಾಗದಲ್ಲಿ, ಶ್ರೀಮಾತಾ-ಲಲಿತಾಂಬಿಕಾ `ದೇವಿ’ಯ ಸಾವಿರ ಹೆಸರುಗಳಲ್ಲಿ `ಸಮಯ ಅಂತಸ್ಥಾ (೯೭)’ ಮತ್ತು `ಸಮಯಾಚಾರ ತತ್ಪರಾ (೯೮)’ ಎಂಬ ಸ್ತುತಿಯೂ ಉಂಟು. `ಸಮಯ’ದ ಒಳಗಿರುವವಳು, `ಸಮಯ’ಕ್ಕೆ ಒಳಗಾಗಿರುವವಳು – ಎಂದು ವಾಚ್ಯಾರ್ಥ. `ಸಮಯ’ ಎಂದರೆ, ಹೃದಯಾಕಾಶದಲ್ಲಿ ಇರುವ ಚಕ್ರಕ್ಕೆ ಪೂಜೆಯನ್ನು ಸಲ್ಲಿಸುವುದು- ಎಂದು. `ಸಮಯ’ದ ಇನ್ನೊಂದು ಅರ್ಥ: ವಸಿಷ್ಟ, ಶುಕ, ಸನಕ, ಸನಕನಂದನ, ಸನತ್ಕುಮಾರ -ಈ ಐವರ ತಂತ್ರಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ಆಂತರಿಕ ಪೂಜಾ ವಿಧಾನ. `ಸಮ’ ಎಂದರೆ `ಎಲ್ಲಾ ಬಗೆಯಲ್ಲಿ ಒಂದೇ ರೀತಿ’, `ಯ’ ಎಂದರೆ `ಆ ಭಾವವನ್ನು ಹೊಂದುವವನು / ಳು’ -ಎಂಬ ವ್ಯಾಖ್ಯಾನವೂ `ಸಮಯ’ಕ್ಕೆ ಉಂಟು. ತನ್ನ `ವಾಸನಾ ಶುಭಗೋದಯ’ ಸಂಸ್ಕೃತ ಭಾಷ್ಯ ಗ್ರಂಥದಲ್ಲಿ ಲೊಲ್ಲ ಎಂಬ ವಿದ್ವಾಂಸ ಇನ್ನೊಂದು ರೀತಿ `ಸಮಯ’ಕ್ಕೆ ವಿವರಣೆ ಕೊಡುತ್ತಾನೆ: “ಶಿವ ಮತ್ತು ಶಕ್ತಿಯರಿಗೆ ಬಹಳ `ಸಾಮ್ಯ’ ಉಂಟು; ಇದನ್ನು ನಾವು ಐದು ಬಗೆಯಲ್ಲಿ ಕಾಣಬಹುದು: ೧. ಅಧಿಷ್ಠಾನ ಸಾಮ್ಯ, ಅಂದರೆ ಚಕ್ರ, ಪೂಜಾಕ್ರಮಗಳಲ್ಲಿ. ೨. ಅನುಷ್ಠಾನ ಸಾಮ್ಯ, ಅಂದರೆ ಸೃಷ್ಟಿ, ಸ್ಥಿತಿ, ಸಂಹಾರ ಇತ್ಯಾದಿಗಳಲ್ಲಿ. ೩. ಅವಸ್ಥಾನ ಸಾಮ್ಯ, ಅಂದರೆ ನೃತ್ಯ, ಗೀತಾದಿಗಳಲ್ಲಿ. ೪. ನಾಮ ಸಾಮ್ಯ, ಅಂದರೆ ಶಿವ-ಶಿವೆ ಎಂಬ ಹೆಸರುಗಳಲ್ಲಿ. ೫. ರೂಪ ಸಾಮ್ಯ, ಅಂದರೆ ಆಕಾರ, ಬಣ್ಣಗಳಲ್ಲಿ ಒಂದೇ ರೀತಿಯಲ್ಲಿ ತೋರುವುದು.”
ಶ್ರೀದೇವಿ `ಸಮಯಾಚಾರ ತತ್ಪರಾ’ ಎಂದರೆ, (ಮಹಾಭಾರತದಷ್ಟೇ ದೊಡ್ಡದಾದ ಆದರೆ, ಅದರ ಕೆಲವು ಭಾಗಗಳು ಮಾತ್ರ ಉಪಲಬ್ದವಾಗಿರುವ) `ರುದ್ರಯಾಮಳ’ ತಾಂತ್ರಿಕ ಗ್ರಂಥದ ಹತ್ತೂ ಅಧ್ಯಾಯಗಳಲ್ಲಿ ಹೇಳಿದ ರೀತಿಯ ನಡವಳಿಕೆಗಳಲ್ಲಿ ತೊಡಗಿರುವವಳು – ಎಂದು ಒಂದು ವ್ಯಾಖ್ಯೆ. ಇನ್ನೊಂದು ವಿಶಿಷ್ಟ ಪೂಜಾ ವಿಧಾನದಲ್ಲಿ, ಮೂಲಾಧಾರದಲ್ಲಿ ಮಣಿಪೂರಚಕ್ರದಲ್ಲಿ `ದೇವಿ’ಯನ್ನು ಕಂಡು, ವಿವಿಧ ಚಕ್ರಗಳಲ್ಲಿ ಪಾದ್ಯದಿಂದ ಹಿಡಿದು ನೀರಾಜನದವರೆಗೆ ಷೋಡಶ ಉಪಚಾರಗಳಿಂದ ಪೂಜಿಸಿ, ಕೊನೆಗೆ ಸಹಸ್ರದಳ ಕಮಲದಲ್ಲಿ, ಸರಘಾಮಧ್ಯದಲ್ಲಿ ಸದಾಶಿವನೊಡನೆ ಶಿವೆಯನ್ನು ಸಂಯೋಜಿಸುತ್ತಾರೆ. ಇದು `ಸಮಯಾಚಾರ’.
ಆಚಾರ್ಯ ಶ್ರೀ ಶಂಕರರ `ಆನಂದ ಲಹರೀ’ ಈ ಸಮಯಾಚಾರ ತತ್ತ್ವದ ಸಾರಸರ್ವಸ್ವವನ್ನು ಒಳಗೊಂಡಿದೆ – ಎಂದು ಅದಕ್ಕೆ ವ್ಯಾಖ್ಯಾನಿಸುವವರು ಅಭಿಪ್ರಾಯಿಪಡುತ್ತಾರೆ.
ಎಲ್ಲರಿಗೂ ಬೇಕಾದ ಇಂದಿನ `ಸಮಯಾಚಾರ’:
`ಕಾಲ’ಕ್ಕೆ ಮಹತ್ವ ಏಕೆ ಕೊಡಬೇಕು – ಎಂಬ ಪ್ರಶ್ನೆ ಕೇಳಿದರೆ, ಅದು ಮೂರ್ಖತನವೆಂದು ಯಾರೂ ಮೂಗು ಮುರಿದಾರು. ಆದರೆ, ಹಿಂದೆ, ಬಹಳ ದಿನಗಳ ಹಿಂದೆ, `ಮಳೆಗಾಲ’ದಿಂದ `ಮಳೆಗಾಲ’ಕ್ಕೆ ಇರುವ ಅವಧಿ ನಮಗೆ `ವರ್ಷ’ವಾದರೆ ಸಾಕಿತ್ತು. ನಮಗೆ ಸಾಕಷ್ಟು `ವೇಳೆ’ಯ ಶ್ರೀಮಂತಿಕೆ ಇತ್ತು: ವಿಳಂಬಿಸಿ ಕೆಲಸ ನಡೆಸಿದರೂ ತೊಂದರೆಯಿರಲಿಲ್ಲ; `ತದ್ ಏವ ಲಗ್ನಂ, ಸುದಿನಂ ತದ್ ಏವ; ತಾರಾಬಲಂ ಚಂದ್ರಬಲಂ ತದ್ ಏವ; ವಿದ್ಯಾಬಲಂ ದೈವಬಲಂ ತದ್ ಏವ’ (`ಅವನನ್ನು ನೆನೆಯಲು ಹೊತ್ತೇನು, ಗೊತ್ತೇನು?’) ಎಂಬುದು ಗೊತ್ತಿದ್ದರೂ, `ಒಳ್ಳೆಯ ಕಾಲ ಅಥವಾ ಮುಹೂರ್ತ ಬರುವವರೆಗೂ ಕಾದೇವು!’ -ಎಂದು, ಕೆಲಸ ಮಾಡುವುದನ್ನ ಮುಂದೂಡುತ್ತಿದ್ದ ಜನ ನಾವು, `ನಾಳೆ ಬರ್ಪುದು ನಮಗೆ ಇಂದೇ ಬರಲಿ!’ ಎಂದು ಹೇಳಿಕೊಳ್ಳುತ್ತಿದ್ದುದು ಕಡಿಮೆ. `ಹೊತ್ತು ಹೋಗದ ಮುನ್ನ ಅಘ್ಘವಣಿ ಪತ್ರೆಯ ತಂದು ಲಿಂಗವ ಪೂಜಿಸಲು’ ನಮಗೆ ಎಚ್ಚರಿಸುವವರು ಬೇಕಾಯಿತು. `ಸಮಯವನರಿತು… ಅರ್ಚನೆಯ ಮಾಡಿಸಿ, ಒಕ್ಕುದ ಕೊಂಡು, ಓಲಾಡುತ್ತಿಪ್ಪುದೇ ಭಕ್ತಿ’ ಎಂದು ತಿಳಿಸುವವರು ಬೇಕಾಯಿತು. ಹೇಳಿ, ಕೇಳಿ ನಿಧಾನಸ್ಥರು ನಾವು, ನಮ್ಮಲ್ಲಿ ಬಹಳ ಮಂದಿ ಗಡಿಯಾರದ ಬದಲು ಕ್ಯಾಲೆಂಡರನ್ನು ಪ್ರೀತಿಸುವವರು, ಆಶ್ರಯಿಸುವವರು.
ಇಂಥ ನಾವು, ಧಿಡೀರನೆ `ಸಮಯಾಚಾರ ತತ್ಪರ’ರಾಗಬೇಕಾಗಿದೆ. `ಸಮಯ’ಕ್ಕೆ ಸರಿಯಾಗಿ ಹೋಗುವ, ಬರುವ, ತಲುಪುವ, ಉಳಿಯುವ, ಉಣ್ಣುವ, ವಿಶ್ರಮಿಸುವ, ಮಲಗುವ, ಏಳುವ, ಬಾಳಿನೊಡನೆ ಒಡನಾಡುವ – ಪರಿಪಾಠವನ್ನು ಬೆಳೆಸಿಕೊಳ್ಳದೆ ವಿಧಿಯಿಲ್ಲ. `ಸಮಯ-ಪ್ರಜ್ಞೆ’ಯಿಲ್ಲದವನ/ಳ ಬಾಳು ಬಲು ಗೋಳು! ಇಂಥವರನ್ನು ನಂಬಿ ನಡೆಸುವ ಕಾರ್ಯಕ್ರಮಗಳಂತೂ ಅವ್ಯವಸ್ಥೆಯ ಹಳಸಿದ ಕೂಳು! ಹುಳುಗಳು ಮುಕ್ಕಿ ಉಳಿಸಿದ ಜೊಳ್ಳು, ಮುರಿದ ಮುಳ್ಳು!
ಈ ನಾಲ್ಕನೆಯ ಆಯಾಮದ ಹಿನ್ನೆಲೆಯಲ್ಲಿ, ನಾನು ಹಿಂದೆ ಬರೆದ ಒಂದು ಕವನವನ್ನು ನೆನೆಸಿಕೊಳ್ಳುತ್ತಿದ್ದೇನೆ:
ಕಾಲಲಕ್ಷ್ಮಿ!
ಚಿಲಿಪಿಲಿಯ ದನಿ ಕಣ್ಣ ಬಿಡಿಸಿತು, ಎದ್ದೆ:
`ಎಂದೂ ನಿದ್ದೆ ಮಾಡದ ಹಕ್ಕಿ
ಎಲ್ಲಿಯವರೆಗೆ ಹಾರಿದೆ’, ನೋಡಿ,
ಅಭ್ಯಾಸ-ಬಲ, “ಅಂಗೈ ತುದಿಯಲ್ಲೇ ಇದ್ದಾಳೆ….”
ಗುನುಗುನಿಸುತ್ತಿದ್ದೆ;
ಆಗ ಹೊಳೆದದ್ದು ಇದು:
ಧನ ಲಕ್ಷ್ಮಿ, ವನ ಲಕ್ಷ್ಮಿ, ತೆನೆ ಲಕ್ಷ್ಮಿ, ಮನೆ ಲಕ್ಷ್ಮಿ,
ಹತ್ತಿ ಇಳಿಯುವ ಆನೆ ಕುದುರೆ ವಾಹನಗಳೆಲ್ಲವೂ ಲಕ್ಷ್ಮಿ;
ಬೆಳಕು, ಚೆಲುವು, ಗೆಲುವು, ಹೂವು, ಹಾವೂ ಲಕ್ಷ್ಮಿ;
ಮಜ್ಜಿಗೆಯೊಳಗಣ ಬೆಣ್ಣೆಯ ಭಾಗ್ಯ ದಾಸರ ಲಕ್ಷ್ಮಿ;
`ಜೊತೆಗಿರೆ ಎಂಟೆದೆ’ -ಎಂದಿರಾ?
ಅದಕ್ಕೆ ಇರಬೇಕು, ಎಂಟು ಬಗೆ ಇಂದಿರಾ!
ಹೆಸರ ಮೊದಲಿಗೇ ಹಾರಿ, ಪದದ ಬಾಲವ ಸೇರಿ,
ಅವಳ ನೆನಪಿನ ಹಗ್ಗ ಜಗ್ಗಿ ಜಗ್ಗಿ ಶ್ರೀಮುದ್ರೆ
ಸವಕಲು-ನಾಣ್ಯಶ್ರೀಯಾಗಿ ಹೋಯ್ತಲ್ಲ, ಇರಲಿ,
ಆದರೂ, ನಮ್ಮವರಾರೂ ಕರೆದಿಲ್ಲ – `ಕಾಲಲಕ್ಷ್ಮಿ’!
ಅನ್ನ ನೆಮ್ಮದಿ ಸೌಖ್ಯ ಮನ್ನಣೆಯ ತಾವೇ ದುಡಿದು
ಗಳಿಸಲವಕಾಶವ ಅರಸಿ, ಹೊಸಿಲು ದಾಟಿದ ಜನಕ್ಕೆ
ಈ ನಾಲ್ಕನೆಯ ಆಯಾಮ, ಆರಾಧ್ಯಲಕ್ಷ್ಮಿ!

ವಿಳಾಸ: ಎಸ್. ಕೆ. ಹರಿಹರೇಶ್ವರ, ೮೪೧೨, ಫೋಂಟನೇ ವೇ, ಸ್ಟಾಕಟನ್, ಕ್ಯಾಲಿಫೋರ್ನಿಯಾ-೯೫೨೧೦-೫೨೩೭, ಅಮೆರಿಕಾ.

2 Responses to “ಸಮಯ” ಪದದ ಬಗ್ಗೆ ಒಂದು ವಿವೇಚನೆ

  1. Anant Vaidya

    ತುಂಬಾ ಸುಂದರವಾಗಿ ಸರಳವಾಗಿ ವಿಶ್ಲೇಷಿಸಿದ್ದೀರಿ. ಧನ್ಯವಾದಗಳು.

  2. Anant Vaidya

    ತುಂಬಾ ಸುಂದರವಾಗಿ ಸರಳವಾಗಿ ವಿಶ್ಲೇಷಿಸಿದ್ದೀರಿ. ಧನ್ಯವಾದಗಳು. ಅತ್ಯತ್ತಮವಾಗಿ ಸಮಯ ಪಾಲನೆಯ ಕುರಿತು ಬರೆದಿರುವುದು ವಿಚಾರವಂತರಿಗೆ ಅನುಕೂಲ.

Leave a Reply