ವೈ ಫೈ ಯುಗಕ್ಕೆ ಕಾಲಿಟ್ಟ ಟಿಬೆಟ್ – ಚೀನಾ ಸಂಘರ್ಷ
– ಬೇಳೂರು ಸುದರ್ಶನ
ಅಲ್ಲಿ ಯಾವಾಗಲೂ ವಿದ್ಯುತ್ ಕಡಿತ. ದೂರವಾಣಿ ಸಂಪರ್ಕಕ್ಕೂ ತತ್ವಾರ. ಮೊಬೈಲ್ ಇದ್ದರೂ ನೆಟ್ವರ್ಕ್ ಇರೋದೇ ಇಲ್ಲ. ಆದರೂ ಇಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿದೆ!
ಟಿಬೆಟ್ನ ದಶಭ್ರಷ್ಟ ಸರ್ಕಾರದ ಜೊತೆಗೆ ನೂರಾರು ಟಿಬೆಟನ್ ಕುಟುಂಬಗಳೂ ಇರುವ ಧರ್ಮಶಾಲೆಯಲ್ಲಿ ಈ ಮಾಹಿತಿ ತಂತ್ರeನದ ಪವಾಡ ನಡೆದಿದೆ. ಟಿಬೆಟ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭೂಗತ ಸುರಕ್ಷತಾ ಪಡೆಯ ಕಾರ್ಯಕರ್ತರು ಈ ವಿಶಿಷ್ಟ ವೈ ಫೈ (ವೈರ್ಲೆಸ್ ಫಿಡೆಲಿಟಿ) ಇಂಟರ್ನೆಟ್ ಜಾಲವನ್ನು ಸ್ಥಳೀಯ ಪರಿಕರಗಳನ್ನೇ ಬಳಸಿ ರೂಪಿಸಿದ್ದಾರೆ.
ಎಸೆದ ಎಲೆಕ್ಟ್ರಾನಿಕ್ ಪರಿಕರಗಳು, ಸೌರಶಕ್ತಿ, ಮುಕ್ತ ತಂತ್ರಾಂಶಗಳು (ಎರಡು ವಾರಗಳ ಹಿಂದೆ `ಹೊಸದಿಗಂತದಲ್ಲಿ ಪ್ರಕಟವಾದ ಸುದ್ದಿ ಓದಿದ್ದೀರಾ?) ಮತ್ತು ಸ್ಥಳೀಯ ತಿಳಿವಳಿಕೆಯನ್ನೇ ಬಳಸಿ ಈ ವೈರ್ಲೆಸ್ ಜಾಲ ಇಡೀ ಧರ್ಮಶಾಲೆಯನ್ನು ಸುತ್ತಿಕೊಂಡಿದೆ. ಟಿಬೆಟನ್ ಸರ್ಕಾರದ ಪ್ರಧಾನಮಂತ್ರಿ ಶಾಮ್ದೊಂಗ್ ರಿಂಪೊಶೆಯವರೇ ಈ ತಂತ್ರಜ್ಞಾನ ಕ್ರಾಂತಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.
ಚೀನಾವು ಸಂಪೂರ್ಣವಾಗಿ ಕಬಳಿಸಿದ ಟಿಬೆಟನ್ನು ಮತ್ತೆ ಮುಕ್ತಗೊಳಿಸಬೇಕೆಂಬ ಅದಮ್ಯ ಆಸೆಯಿಂದ ವಿಶ್ವದೆಲ್ಲೆಡೆ ಟಿಬೆಟನ್ನರು ಕಾರ್ಯನಿರತರಾಗಿದ್ದಾರೆ. ಕಾರ್ಯಪಡೆಯ ನಾಯಕ ಯಾಹೆಲ್ ಬೆನ್ ಡೇವಿಡ್ ಸಾಮಾನ್ಯನಲ್ಲ. ಇಸ್ರೇಲಿನ ಮಿಲಿಟರಿಯಿಂದ ಗುಡ್ಡ-ಬೆಟ್ಟ ಕಾರ್ಯಾಚರಣೆಯ ತರಬೇತಿ ಪಡೆದಿರುವ ಹುರುಪಿನ ವ್ಯಕ್ತಿ.
ಈತ ವೈರ್ಲೆಸ್ ಜಾಲವನ್ನು ಸರಿಯಾಗಿಡಲು ಗೋಪುರಗಳನ್ನು ಹತ್ತುತ್ತಾನೆ; ದೂರದೂರದ ಆಂಟೆನ್ನಾಗಳನ್ನು ಸರಿಪಡಿಸಲು ಕಣಿವೆಯಿಂದ ಕಣಿವೆಗೆ ಜಿಗಿಯುತ್ತಾನೆ. ಯಾಕೆಂದರೆ ಇಲ್ಲಿ ಗೊರಿಲ್ಲಾ ಗಾತ್ರದ ಮಂಗಗಳೂ ಅವರ ಜೊತೆಗೇ ಜಿಗಿಯುತ್ತವೆ; ಆಂಟೆನ್ನಾಗಳನ್ನು ಹಿಡಿದೇ ಜೋಕಾಲಿಯಾಡುತ್ತವೆ. ಆದ್ದರಿಂದ ಮಂಕೀ ಪ್ರೂಫ್ ಆಂಟೆನ್ನಾಗಳನ್ನು ತಯಾರಿಸುವುದೇ ದೊಡ್ಡ ಕೆಲಸ. ಈಗಾಗಲೇ ಆಕಾಶದಿಂದ ಗ್ರಹಿಸಿದ ತರಂಗಗಳನ್ನು ಕೆಳಗಡೆಯ ಕಚೇರಿಗಳಿಗೆ ರವಾನಿಸುವ ವೈರ್ಲೆಸ್ ಜಾಲದ ತಂತಿಗಳನ್ನು ಈ ಮಂಗಗಳು ಕಿತ್ತು ಹಾಕಿದ್ದೂ ಇದೆ.
ಡೇವಿಡ್ಗೆ ಜೊತೆಗಾರನಾಗಿ ನಿರ್ವಹಣೆ ನೋಡಿಕೊಳ್ಳುತ್ತಿರುವ ಫುನ್ಸ್ತೂಕ್ದೋರ್ಜೀ ಹುಟ್ಟಿದ್ದೇ ದೇಶಭ್ರಷ್ಟನಾಗಿ. ಅದಮೇಲೆ ದೇಶಭಕ್ತಿಯನ್ನು ಕೇಳಬೇಕೆ? ಟಿಬೆಟನ್ ಹ್ಯಾಕರ್ಗಳು, ಸ್ಥಳೀಯ ಟಿಬೆಟನ್ ನಾಯಕರು ಮತ್ತು ದಲಾಯಿ ಲಾಮಾರವರ ಕಚೇರಿ ನಡುವೆ ಸದಾ ಸಮನ್ವಯ ಸಾಧಿಸುವುದು ಈತನ ಮುಖ್ಯ ಹೊಣೆ.
ಇಂಟರ್ನೆಟ್ ಎಂದರೆ ದಿಢೀರ್ ದೂರವಾಣಿಯೇ ತಾನೆ? ಸ್ಕೈಪ್ ತಂತ್ರಾಂಶವನ್ನು ಬಳಲ್ಲರೂ ಜಗತ್ತಿನ ಮೂಲೆಮೂಲೆಯಲ್ಲಿ ಇರುವವರೊಂದಿಗೆ ಮಾತಾಡುತ್ತಾರೆ. ಇಲ್ಲಿ ಟಿಬೆಟನ್ ಕೀಲಿಮಣೆಯೂ ಇಲ್ಲ. ಟಿಬೆಟನ್ ಭಾಷೆಯಲ್ಲಿ ಎಸ್ ಎಂ ಎಸ್ (ಸಮೊಸ: ಸರಳಮೊಬೈಲ್ ಸಂದೇಶ) ಕಳಿಸುವುದೂ ಕಷ್ಟ.
ಇಲ್ಲಿರುವ ವೈ ಫೈ ಜಾಲಕ್ಕೆ ಬಿ ಎಸ್ ಎನ್ ಎಲ್ನ ವೈರ್ಲೆಸ್ ಸಂಪರ್ಕ ಸೇವೆ ಸಿಕ್ಕಿದೆ. ಇಲ್ಲಿನ ಬಳಕೆದಾರರು ಅಮೆರಿಕಾದಲ್ಲಿ ಇರುವ ಹಾಗೆ ಲ್ಯಾಪ್ಟಾಪ ಹೊತ್ತು ಓಡಾಡುವವರಲ್ಲ; ಅಲ್ಲದೆ ಇಲ್ಲಿ ಸಿಗುವ ಇಂಟರ್ನೆಟ್ ಮಾಹಿತಿ ಹರಿವಿನ ಗಾತ್ರವೂ ಕಡಮೆ. ಆದ್ದರಿಂದ ವಿಶ್ವವ್ಯಾಪಿ ಮಾಹಿತಿಯನ್ನು ಹಂಚಿ ಉಣ್ಣುವ ಪ್ರಯಾಸದ ಕೆಲಸ ಇಲ್ಲಿ ಯಶಸ್ವಿಯಾಗಿ ನಡೆದಿದೆ. ಎಲ್ಲರೂ ಈ ಸೇವೆಯನ್ನು ಪಡೆದಿದ್ದಕ್ಕೆ ಕನಿಷ್ಠ ಶುಲ್ಕವನ್ನೂ ನೀಡುತ್ತಾರೆ.
ಇಲ್ಲೂ ಮನುಷ್ಯರೇ ಇರುವುದರಿಂದ ಕೊಂಚ ಕಾಲ ಪಡ್ಡಹುಡುಗರು ಕೊಂಚ ಕಾಲ ಪೋಲಿ ವೆಬ್ಸೈಟ್ಗಳತ್ತ ಕಣ್ಣು ಹಾಯಿಸಿದ್ದರು. ಇದರಿಂದಾಗಿ ಇಂಟರ್ನೆಟ್ ಬಳಕೆ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಆದರೆ ಈಗ ಇದಕ್ಕೆ ಕಡಿವಾಣ ಹಾಕಲಾಗಿದೆ. ತತ್ಕ್ಷಣ ಇಂಟರ್ನೆಟ್ ಬಳಕೆ ಸಾಮಾನ್ಯ ಪ್ರಮಾಣಕ್ಕೆ ಕುಸಿದಿದೆ!
ಇಲ್ಲೂ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಸಿಗುತ್ತಿದೆ. ಪಶ್ಚಿಮ ದಶದಿಂದ ಬಂದ ಸ್ವಯಂಸೇವಕರು ಈ ಸೇವೆ ನೀಡುತ್ತಾರ. ಜಾವಾಸ್ಕ್ರಿಪ್ಟ್, ಪಿ ಎಚ್ ಪಿ, ವೆಬ್ ಸೈಟ್ ನಿರ್ಮಾಣ – ಇವು ಇಲ್ಲಿ ಜನಪ್ರಿಯವಾಗಿರುವ ವಿಷಯಗಳು.
ಇಂಟರ್ನೆಟ್ ಏನೋ ಬಂತು. ಇದರ ಮೂಲಕ ಥಾಂಗ್ಕಾಗಳನ್ನು, ಯಾಕ್ ಗಿಣ್ಣನ್ನು ಮಾರಬಹುದೆ? ಕಾಲ್ಸೆಂಟರ್ ಸೇವೆಯನ್ನೂ ಆರಂಭಿಸಬಹುದೆ? – ಧರ್ಮಶಾಲೆಯ ಟಿಬೆಟನ್ನರಲ್ಲಿ ಹಲವು ಕನಸುಗಳು ಚಿಗುರಿವೆ.
`ಬದುಕೇ ಒಂದು ಜಾಲ ಎಂದು ಟಿಬೆಟನ್ ತತ್ವಶಾಸ್ತ್ರ ಹೇಳುತ್ತೆ. ಯಾವುದೂ ಸ್ವತಂತ್ರವಲ್ಲ; ಎಲ್ಲರೂ, ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ. ಇತರರೊಂದಿಗ ಸಂಪರ್ಕ ಬೆಳೆಸಲು ಸಂಪರ್ಕ ಜಾಲ ತುಂಬಾ ಮುಖ್ಯ ನೋಡಿ. ಈಗಂತೂ ಬೇಕಾದಷ್ಟು ಸೌಲಭ್ಯಗಳಿವೆ’ ಎಂದು ಸಮಾಧಾನದಿಂದ ಹೇಳುತ್ತಾರೆ ೬೭ರ ಹರೆಯದ ಪ್ರಧಾನಿ ರಿಂಪೊಶೆ. ಟಿಬೆಟಿನ ಹಳೆಯ ದಾಖಲೆಗಳನ್ನು ಸುಭದ್ರವಾಗಿ ತೆಗೆದಿಡುವುದಕ್ಕೂ ಮಾಹಿತಿ ತಂತ್ರeನ ಬಳಸಬೇಕು ಎಂಬುದು ಅವರ ಕನಸು. ಸುಮಾರು ೩೦೦ ಸಂಪುಟಗಳ ಟಿಬೆಟನ್ ಧರ್ಮಶಾಸ್ತ್ರ ಮಾಹಿತಿಯನ್ನು ಅವರು ಒಂದೇ ಸಿಡಿ (ಕಾಂಪಾಕ್ಟ್ ಡಿಸ್ಕ್)ಯಲ್ಲಿ ಒಯ್ಯುತ್ತಿದ್ದೇನೆ ಎನ್ನುತ್ತಾರೆ.
ಈಗಾಗಲೇ ಇಲ್ಲಿ ಹಳೆಯ ಗ್ರಂಥಗಳನ್ನು ಸ್ಕ್ಯಾನ್ ಮಾಡಿ (ಛಾಯಾದಾಖಲೆ) ಸಂಗ್ರಹಿಸುತ್ತಿದ್ದಾರೆ. ಇವುಗಳಲ್ಲಿ ಚೀನಾದಿಂದ ಕದ್ದು ತಂದ ಸರ್ಕಾರಿ ದಾಖಲೆಗಳೂ ಸೇರಿವೆ. ಇನ್ನೇನು, ಅವು ಸಾರ್ವಜನಿಕರಿಗೂ ಸಿಗಲಿವೆ. ಟಿಬೆಟನ್ನು ಚೀನಾವು ತಿಂದು ತೇಗಿದ ಸದ್ದನ್ನಷ್ಟೇ ನಾವು ಕೇಳಿದ್ದೆವು. ಆದರೆ ಹೇಗೆ ಟಿಬೆಟ್ ಜೀರ್ಣವಾಗುತ್ತಿದೆ ಎಂಬ ಕಟು ಸತ್ಯ ನಮ್ಮೆದುರು ಬಿಚ್ಚಿಕೊಳ್ಳಲಿದೆ.
ಟಿಬೆಟನ್ ವೈಫೈ ಜಾಲದ ಈ ಸುದ್ದಿಯು [http://www.wired.com|ವೈರ್ಡ್ ಡಾಟ್ಕಾಮ್] ನಲ್ಲಿ ಪ್ರಕಟವಾಗುತ್ತಿದ್ದಂತೆಯೇ ಚೀನೀ ಸರ್ಕಾರದ ಕಣ್ಣು ಕೆಂಗಣ್ಣಾಗಿ, ಅಲ್ಲಿಂದ [http://tibtec.org|ಟಿಬೆಟನ್ ವೆಬ್ಸೈಟ್] ನ್ನು ಹಾಳುಗೆಡಹುವ ಕೆಲಸವೂ ಶುರುವಾಗಿದೆ.
ಚೀನಾ – ಟಿಬೆಟ್ ಸಂಘರ್ಷ ಇದೀಗ ವೈರ್ಲೈಸ್ ಯುಗಕ್ಕೆ ಕಾಲಿಟ್ಟಿದೆ. ವಿಶ್ವದ ಅತಿದೊಡ್ಡ ಕಾರ್ಮಿಕ ಶಿಬಿರಗಳನ್ನು ನಡೆಸುತ್ತಲೇ ಮಾಹಿತಿ ತಂತ್ರeನದಲ್ಲಿ ಸಾಧನೆಗಳ್ನೂ ತೋರುತ್ತಿರುವ ಚೀನಾಗೆ ವಿಶ್ವದ ಅತಿ ಪ್ರಾಚೀನ ಧರ್ಮಾಧಾರಿತ ದೇಶ ಟಿಬೆಟ್ ತಂತ್ರಜ್ಞಾನದಿಂದಲೇ ಸವಾಲು ಒಡ್ಡಿದೆ.
(ಕೃಪೆ: ಹೊಸದಿಗಂತ)