ವೆಂಕಟಸುಬ್ಬಯ್ಯನವರಿಗೆ ಅಭಿನಂದನೆಗಳು
“ಇಗೋ ಕನ್ನಡ” ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಹಂಪೆ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ವಿ. ಅವರು ಬರೆಯುತ್ತಿರುವ ಇಗೋ ಕನ್ನಡ ಅಂಕಣ ನನಗೆ ತುಂಬ ಅಚ್ಚುಮೆಚ್ಚು. ಈ ಅಂಕಣದ ಲೇಖನಗಳು ಪುಸ್ತಕರೂಪದಲ್ಲಿ ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಂದಿವೆ. ಅವೆರಡೂ ನನ್ನಲ್ಲಿ ಇವೆ. ಲೇಖನ ಬರೆಯುವಾಗ ಯಾವುದಾದರೊಂದು ಪದದದ ಬಗೆಗೆ ಅನುಮಾನ ಬಂದಾಗ ನಾನು ಈ ಪುಸ್ತಕಗಳ ಮೊರೆಹೋಗುತ್ತೇನೆ. ಕನ್ನಡಕ್ಕೆ ಜಿ.ವಿ.ಯವರ ಕೊಡುಗೆ ಅಪಾರ. ನಿಘಂಟು ರಚನೆಯಲ್ಲಿ ಅವರ ಕೆಲಸ ಮಾಡಿದ್ದಾರೆ.
ಜಿ.ವಿ.ಯವರ “ಇಗೋ ಕನ್ನಡ” ಪುಸ್ತಕವನ್ನು ಆಧರಿಸಿ ಬೆಂಗಳೂರಿನ ವಿವಿಧಭಾರತಿ ಆಕಾಶವಾಣಿ ಕೇಂದ್ರದಿಂದ (102.9 MHz FM) ಪ್ರತಿದಿನ ಬೆಳಿಗ್ಗೆ ೮:೧೫ಕ್ಕೆ ಪ್ರಸಾರವಾಗುವ ಸಿರಿಗನ್ನಡ ಕಾರ್ಯಕ್ರಮವೂ ನನಗೆ ತುಂಬ ಇಷ್ಟ. ನೀವೂ ಕೇಳಿ.
ಅವರಿಗೆ ತೊಂಬತ್ತೆರಡು ವರ್ಷ ವಯಸ್ಸೆಂದರೆ ನಂಬುವುದಕ್ಕೇ ಅಸಾಧ್ಯ. ವಿಜಯನಗರ ಗ್ರಂಥಾಲಯದಲ್ಲಿ ಯಾವುದೋ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ಅವರು ಆರಾಮವಾಗಿ ಎರಡನೇ ಮಹಡಿಗೆ ನಡೆದುಕೊಂಡು ಬಂದಿದ್ದು ನೋಡಿ ನನಗೆ ಆಶ್ಚರ್ಯವಾಗಿತ್ತು.
ಜಿ.ವಿ.ಯವರಿಗೆ ಸಲ್ಲಬೇಕಾದಷ್ಟು ಗೌರವ ಸಂದಿಲ್ಲ ಎಂದು ನನ್ನ ಅಭಿಪ್ರಾಯ. ಈ ಗೌರವ ಅವರಿಗೆ ಎಂದೋ ಬರಬೇಕಿತ್ತು. ನಮ್ಮಲ್ಲಿ ಒಂದು ವಿಚಿತ್ರ ಸಂಪ್ರದಾಯವಿದೆ -ಸಾಹಿತ್ಯವನ್ನು ಸೃಜನಶೀಲ ಮತ್ತು ಸೃಜನೇತರ ಎಂದು ವರ್ಗೀಕರಿಸುವುದು. ಕತೆ, ಕವನ, ಕಾದಂಬರಿ ಬರೆಯುವವರು ಸೃಜನಶೀಲರು. ಅವರಿಗೆ ಗೌರವ ಸ್ವಲ್ಪ ಜಾಸ್ತಿ. ಈ ವಿಚಿತ್ರ ಯಾಕೆ ನನಗೆ ಗೊತ್ತಿಲ್ಲ. ಎಲ್ಲ ಸಾಹಿತ್ಯ ಪ್ರಕಾರಗಳೂ ಮುಖ್ಯವೇ. ಈ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.