ಮೈಕ್ರೋಸಾಫ್ಟ್ ಝೂನ್

– ಡಾ. ಯು. ಬಿ. ಪವನಜ

ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್‌ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್‌ವೇರ್) ತಯಾರಿಸುತ್ತಾರೆ ಎನ್ನುವ ವಿಷಯ ಅಷ್ಟು ಪ್ರಚಾರ ಪಡೆದಿಲ್ಲ. ಮೈಕ್ರೋಸಾಫ್ಟ್ ಕಂಪೆನಿ ಮೌಸ್ ಮತ್ತು ಕೀಬೋರ್ಡ್‌ಗಳನ್ನು ಹಲವು ವರ್ಷಗಳಿಂದ ತಯಾರಿಸುತ್ತಿದೆ. ಅವುಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವುದು ಝೂನ್ (Zune). ಇದನ್ನು ಆಪಲ್ ಕಂಪೆನಿಯ ತುಂಬ ಖ್ಯಾತವಾಗಿರುವ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ ತಯಾರಿಸಲಾಗಿದೆ. ಆಪಲ್ ಐಪಾಡ್ ಮತ್ತು ಮೈಕ್ರೋಸಾಫ್ಟ್ ಝೂನ್ ಎರಡೂ ಸಂಗೀತ ಮತ್ತು ಚಲನಚಿತ್ರಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ಪ್ಲೇ ಮಾಡುವ ಕಿಸೆಯಲ್ಲಿ ಹಿಡಿಸಬಹುದಾದ ಪುಟ್ಟ ಸಲಕರಣೆಗಳಾಗಿವೆ.

ಝೂನ್ ಮೂರು ಇಂಚು ಗಾತ್ರದ ಪರದೆ ಹೊಂದಿದೆ. ಅದರ ಪರದೆಯ ಉದ್ದ ಮತ್ತು ಅಗಲದ ಅನುಪಾತ 4:3 ಇದೆ. ಪರದೆ 320 x 240 ಪಿಕ್ಸೆಲ್‌ಗಳ ರೆಸೊಲೂಶನ್ ಹೊಂದಿದೆ. ಇದು ಬಣ್ಣದಲ್ಲಿದೆ. ಅಂದರೆ ಬಣ್ಣದ ಚಲನಚಿತ್ರ ಮತ್ತು ಸಾಮಾನ್ಯ ಚಿತ್ರಗಳನ್ನು ವೀಕ್ಷಿಸಬಹುದು. ಆಪಲ್ ಐಪಾಡ್‌ಗಿಂತ ಗಾತ್ರದಲ್ಲಿ ಇದು ಸ್ವಲ್ಪ ದೊಡ್ಡದಾಗಿದೆ. ಬ್ಯಾಟರಿಯನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ ಮೇಲೆ ಸುಮಾರು 14 ಘಂಟೆಗಳ ಕಾಲ ಸಂಗೀತ ಕೇಳಬಹುದು. ಚಲನಚಿತ್ರವಾದರೆ ಸುಮಾರು 4 ಘಂಟೆಗಳ ಕಾಲ ನೋಡಬಹುದು. ಬ್ಯಾಟರಿ ಚಾರ್ಜ್ ಮಾಡಲು ಸುಮಾರು ಮೂರು ಘಂಟೆ ಸಮಯ ಹಿಡಿಯುತ್ತದೆ.

ಸಂಗೀತದ, ಚಿತ್ರಗಳ ಮತ್ತು ಚಲನಚಿತ್ರಗಳ ಹಲವು ಪ್ರಕಾರಗಳ ಫೈಲುಗಳನ್ನು ಇದು ಬೆಂಬಲಿಸುತ್ತದೆ. ಇವುಗಳಲ್ಲಿ ತುಂಬ ಜನಪ್ರಿಯವಾದ ಎಂಪಿ3 (MP3), ವಿಂಡೋಸ್ ಮೀಡಿಯಾ, AAC, ಇತ್ಯಾದಿ ಸೇರಿವೆ. ಚಿತ್ರಗಳಲ್ಲಿ ಜೆಪಿಎಜಿ (JPEG) ಯನ್ನು ಮಾತ್ರ ಇದು ಬೆಂಬಲಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಚಿತ್ರಗಳಿಗೆ ಬಳಸುವುದು ಇದೇ ವಿಧಾನವನ್ನೆ. ಚಲನಚಿತ್ರಗಳಲ್ಲಿ ವಿಂಡೋಸ್ ಮೂವಿ (WMV), ಎಂಪಿ-4 (MPEG-4) ಮತ್ತು ಡಿವ್‌ಎಕ್ಸ್ (DIVX) ಪ್ರಕಾರಗಳನ್ನು ಇದು ಬೆಂಬಲಿಸುತ್ತದೆ.

ಆಪಲ್ ಐಪಾಡ್‌ನಲ್ಲಿ ಇಲ್ಲದ ಎರಡು ಬಹುಮುಖ್ಯವಾದ ಸವಲತ್ತುಗಳು ಝೂನ್‌ನಲ್ಲಿವೆ. ನಿಸ್ತಂತು ಅರ್ಥಾತ್ ವಯರ್‌ಲೆಸ್ (WiFi, 802.11 b/g) ಸೌಲಭ್ಯವನ್ನು ಬಳಸಿ ಇನ್ನೊಂದು ಝೂನ್ ಅಥವಾ ಕಂಪ್ಯೂಟರ್ ಜೊತೆ 30 ಅಡಿಗಳಷ್ಟು ದೂರದ ವರೆಗೆ ತಂತಿರಹಿತವಾಗಿ ಸಂಪರ್ಕ ಮಾಡಬಹುದು, ಫೈಲ್‌ಗಳ ವಿನಿಮಯ ಮಾಡಿಕೊಳ್ಳಬಹುದು. ಇನ್ನೊಂದು ಸೌಲಭ್ಯವೆಂದರೆ ತುಂಬ ಜನರು ಬಯಸುವ ಎಫ್‌ಎಂ ರೇಡಿಯೋ.

ಝೂನ್‌ನಲ್ಲಿ 30 ಗಿಗಾಬೈಟ್ ಗಾತ್ರದ ಹಾರ್ಡ್‌ಡಿಸ್ಕ್ ಇದೆ. ಎರಡೂವರೆ ಘಂಟೆಗಳ ಒಂದು ಚಲನಚಿತ್ರ ಸುಮಾರು ಒಂದೂವರೆ ಗಿಗಾಬೈಟ್‌ನಷ್ಟಿರುತ್ತದೆ. ಅಂದರೆ ಒಂದು ಝೂನ್‌ನಲ್ಲಿ ಕನಿಷ್ಠ ಇಪ್ಪತ್ತು ಚಲನಚಿತ್ರಗಳನ್ನು ಶೇಖರಿಸಿಡಬಹುದು. ಝೂನ್‌ನ ಪರದೆಯ ಗಾತ್ರಕ್ಕೆ ಚಲನಚಿತ್ರವನ್ನು ಸಂಕುಚಿತಗೊಳಿಸಿದರೆ ಒಂದು ಚಲನಚಿತ್ರಕ್ಕೆ ಕೇವಲ 250 ಮೆಗಾಬೈಟ್‌ನಷ್ಟು ಜಾಗ ಸಾಕು. ಅಂದರೆ ಇಂತಹ ಸುಮಾರು 120 ಚಲನಚಿತ್ರಗಳನ್ನು ಶೇಖರಿಸಿಡಬಹುದು. ಐದು ನಿಮಿಷಗಳ ಒಂದು ಹಾಡಿಗೆ ಸುಮಾರು 5 ಮೆಗಾಬೈಟ್‌ನಷ್ಟು ಜಾಗ ಸಾಕು. ಅಂದರೆ ಒಂದು ಝೂನ್‌ನಲ್ಲಿ ಸುಮಾರು 6000 ಹಾಡುಗಳನ್ನು ಶೇಖರಿಸಿಡಬಹುದು. ಬಹುಶಃ ಒಂದು ಎಫ್‌ಎಂ ರೇಡಿಯೋ ಕೇಂದ್ರಕ್ಕೆ ಒಂದು ವರ್ಷಕ್ಕೆ ಸಾಕಾಗುವಷ್ಟು ಹಾಡುಗಳನ್ನು ಒಂದು ಝೂನ್‌ನಲ್ಲಿ ಸಂಗ್ರಹಿಸಿಡಬಹುದು.

ಝೂನ್ ಮೂರು ಬಣ್ಣಗಳಲ್ಲಿ -ಕಪ್ಪು, ಕಂದು ಮತ್ತು ಬಿಳಿ -ದೊರೆಯುತ್ತದೆ.

ಝೂನ್ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ತಾಣಗಳಿಗೆ ಭೇಟಿ ನೀಡಿ – www.zune.net, www.zunemax.com. ಝೂನ್ ಮತ್ತು ಆಪಲ್ ಐಪಾಡ್‌ಗಳ ಮಧ್ಯೆ ಹೋಲಿಸಿ ನೋಡಲು ಈ ತಾಣಕ್ಕೆ ಭೇಟಿ ನೀಡಿ – www.zunescene.com/comparison.

(ಕೃಪೆ: ಸಪ್ಪೋರ್ಟರ್‍)

Leave a Reply