ಭಾಷೆ ಯಾರಿಗೆ ಸೇರಿದ್ದು?
ನಮ್ಮ ಭಾಷೆ ಯಾರಿಗೆ ಸೇರಿದ್ದು ಎಂದು ಯಾವೊತ್ತಾದರೂ ಸಂದೇಹಿಸಿದ್ದೀರಾ? ಇಲ್ಲ ತಾನೆ? ಅದು ನಮಗೇ ಸೇರಿದ್ದು. ಸರಿ. ಈ ನಾವು ಎಂದರೆ ಯಾರು? ಯಾಕೆ ಈ ಪ್ರಶ್ನೆಗಳು ಅನ್ನುತ್ತೀರಾ? ಇಲ್ಲೊಂದು ಸ್ವಾರಸ್ಯಕರ ಪ್ರಸಂಗದ ಉದಾಹರಣೆ ಇದೆ.
ಮೈಕ್ರೋಸಾಫ್ಟ್‌ನವರು ವಿಂಡೊಸ್‌ಗೆ ಕನ್ನಡದ ಹೊದಿಕೆ ನೀಡಿದ್ದು ತಿಳಿದಿರಬಹುದು. ಕನ್ನಡ ಮಾತ್ರವಲ್ಲ, ಇತರೆ ಭಾರತೀಯ ಭಾಷೆಗಳಿಗೂ ವಿಂಡೋಸ್‌ನ ಆದೇಶಗಳನ್ನು ಅನುವಾದಿಸಲಾಗಿದೆ. ಈ ಅನುವಾದಗಳನ್ನು ಮಾಡಲು ಮೈಕ್ರೋಸಾಫ್ಟ್‌ನವರಿಗೆ ಯಾರು ಅನುಮತಿ ನೀಡಿದ್ದು ಎಂದು ನಾವೇನಾದರೂ ಕೇಳಿದ್ದೇವೆಯೇ? ಇಲ್ಲ ತಾನೆ? ಕನ್ನಡದಲ್ಲಿ ವಿಂಡೋಸ್ ನೀಡಿದರೆ ನಮಗೆ ಅನುಕೂಲವಷ್ಟೆ? ಆದರೆ ಎಲ್ಲರೂ ಹಾಗೆ ತಿಳಿಯುವುದಿಲ್ಲ. ದಕ್ಷಿಣ ಅಮೇರಿಕ ಖಂಡದ ಚಿಲಿ ದೇಶದ ಒಂದು ಬುಡಕಟ್ಟು ಜನಾಂಗದ ಭಾಷೆಗೆ ವಿಂಡೋಸ್ ಅನ್ನು ಅನುವಾದಿಸಿದ್ದಕ್ಕೆ ಆ ಜನಾಂಗದವರಿಗೆ ಸಿಟ್ಟು ಬಂದಿದೆ. ಅವರು ಮೈಕ್ರೋಸಾಫ್ಟ್‌ನವರ ಮೇಲೆ ದಾವೆ ಹೂಡಿದ್ದಾರೆ. ನಮ್ಮ ಅನುಮತಿಯಿಲ್ಲದೆ ನಮ್ಮ ಭಾಷೆಗೆ ಯಾಕೆ ಅನುವಾದಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ನೂರಾರು ಕೇಸುಗಳಲ್ಲಿ ಹೋರಾಡುತ್ತಿರುವ ಮೈಕ್ರೋಸಾಫ್ಟ್‌ಗೆ ಇದು ಮತ್ತೊಂದು ಕೋರ್ಟು ಕೇಸು ಆಗಲಿದೆ. ಅಷ್ಟೆ.