ಭಾರತೀಯ ಗೋವು – ವಿದೇಶೀ ಗೋವು

ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಭಾರತೀಯ ಗೋತಳಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ ತಿಳಿದಿರಬಹುದು. ವಿದೇಶಿ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಒಗ್ಗುವುದಿಲ್ಲ, ಅವುಗಳಿಗೆ ತುಂಬ ಔಷಧೋಪಚಾರ, ನಿಯಂತ್ರಿತ ಹವೆ ಎಲ್ಲ ಅಗತ್ಯ ಎಂಬುದಾಗಿ ನಾವೆಲ್ಲ ಕೇಳಿದ್ದೇವೆ. ಭಾರತೀಯ ಗೋತಳಿಗಳು ಇಲ್ಲಿಯ ಹವಾಮಾನಕ್ಕೆ ಒಗ್ಗಿದವು. ಅವುಗಳಿಗೆ ಈ ಉಪಚಾರಗಳ ಅಗತ್ಯವಿಲ್ಲ. ನಾವು ಚಿಕ್ಕವರಿದ್ದಾಗ ಭಾರತೀಯ ಹಸುಗಳ ಹಾಲನ್ನೇ ಕುಡಿದವರು. ಆಗ ಯಾವ ಹಸುವಿಗೂ ದೊಡ್ಡ ಖಾಯಿಲೆ ಬಾಧಿಸಿದ್ದು ನನಗೆ ನೆನಪಿಲ್ಲ. ಚಿಕ್ಕಪುಟ್ಟ ಖಾಯಿಲೆಗಳು ಬಾಧಿಸಿದರೂ ಹಳ್ಳಿ ಔಷಧಿಂದಲೇ ಅವು ಗುಣವಾಗುತ್ತಿದ್ದವು. ಈಗ ಎಲ್ಲರೂ ಸಾಕುತ್ತಿರುವ ವಿದೇಶೀ ಮೂಲದ ತಳಿಸಂಕರದಿಂದ ಹುಟ್ಟಿದ ಹಸುಗಳಿಗೆ ದೊಡ್ಡ ದೊಡ್ಡ ಖಾಯಿಲೆಗಳೇ ಬಾಧಿಸುತ್ತವೆ. ಅವಕ್ಕೆ ನೀಡಬೇಕಾದ ಔಷಧಿಗೂ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ಒಂದು ಉದಾಹರಣೆ ನನ್ನಲ್ಲೇ ಇದೆ.

ಇದು ಜರುಗಿದ್ದು ಸುಮಾರು ಒಂದು ತಿಂಗಳ ಮೊದಲು. ಒಮ್ಮೆ ಸುಳ್ಯದ ಸಮೀಪದ ಊರಿನಿಂದ ನನ್ನ ತಮ್ಮ ರಾಧಾಕೃಷ್ಣನ ಫೋನು ಬಂತು. ತಮ್ಮ ಅಂದರೆ ಖಾಸಾ ತಮ್ಮ ಅಲ್ಲ, ಬೆಂಗಳೂರಿಗರ ಭಾಷೆಯಲ್ಲಿ ಕಸಿನ್. ನಾನು ಮಾತ್ರ ತಮ್ಮ ಎಂದೇ ಕರೆಯುವುದು. ಅವನೂ ನನ್ನನ್ನು ಅಣ್ಣ ಎಂದೇ ಕರೆಯುವುದು. ಇರಲಿ. ಅವನು ಫೋನು ಮಾಡಿ ಹೇಳಿದ “ಪವನಜಣ್ಣ, ಒಂದು ಔಷಧಿ ಹೆಸರು ಬರೆದುಕೊ, ಅದು ಬೆಂಗಳೂರಿನಲ್ಲಿ ಸಿಗುತ್ತದೋ ನೋಡು. ನನ್ನ ದನಕ್ಕೆ ತೀವ್ರ ಖಾಯಿಲೆ ಇದೆ. ಅದಕ್ಕೆ ಈ ಔಷಧಿಯೇ ಬೇಕಂತೆ. ಅದು ಇಲ್ಲಿ ಎಲ್ಲೂ ಸಿಗುವುದಿಲ್ಲ. ಅಲ್ಲಿ ಸಿಕ್ಕರೆ ಕೊಂಡುಕೊಂಡು ಕೂಡಲೆ ಕಳುಹಿಸುವ ಏರ್ಪಾಡು ಮಾಡು”. ನಾನು ಬೆಂಗಳೂರಿನ ಕೆಲವು ಔಷಧಿ ಅಂಗಡಿಗಳಲ್ಲಿ ಹುಡುಕಾಡಿದಾಗ ಒಂದು ಅಂಗಡಿಯಲ್ಲಿ ಆ ಔಷಧಿ ದೊರೆಯಿತು. ೨೫ ಮಿ.ಲಿ. ಔಷಧಿಯ ಬಾಟಲಿಗೆ ೧೨೦೦ ರೂ. ಬೆಲೆ. ಅದನ್ನು ೨೫ ಡಿಗ್ರಿ ಸೆಲಿಷಿಯಸ್ ತಾಪಮಾನದ ಒಳಗೆ ಇರುವಂತೆ ನೋಡಿಕೊಳ್ಳಬೇಕು. ಕೊಂಡುಕೊಂಡರೂ ಅದನ್ನು ಬಿಸಿಯಾಗದಂತೆ ಊರಿಗೆ ಕಳುಹಿಸಬೇಕು. ನನ್ನ ಸಂಬಂಧಿಯೊಬ್ಬ ಮಂಗಳೂರು ಬೆಂಗಳೂರು ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಾನೆ. ಅವನಿಗೆ ಫೋನಾಯಿಸಿದೆ. ಅದೃಷ್ಟಕ್ಕೆ ಅವನು ಆ ದಿನ ಬೆಂಗಳೂರಿನಲ್ಲಿದ್ದ. ಅಂದರೆ ಆ ದಿನ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಾನೆ ಎಂದಾಯಿತು. ಅವನಿಗೂ, ರಾಧಾಕೃಷ್ಣನಿಗೂ ಫೋನಾಯಿಸಿ ಎಲ್ಲ ಏರ್ಪಾಡು ಮಾಡಿಯಾಯಿತು. ಔಷಧಿಯನ್ನು ನನ್ನ ಮನೆಗೆ ಕೊಂಡುಹೋಗಿ ಫ್ರಿಜ್‌ನಲ್ಲಿ ಇಟ್ಟುದಾಯಿತು. ರಾತ್ರಿ ಬಸ್ಸು ಹೊರಡಲು ಇನ್ನೇನು ೧೫ ನಿಮಿಷ ಇದೆ ಎಂದಾಗ ಔಷಧಿಯನ್ನು ಅವನ ಕೈಯಲ್ಲಿ ಇಟ್ಟೆ. ಅವನ ಬಸ್ಸು ಹವಾನಿಯಂತ್ರಿತವಾಗಿದ್ದದ್ದು ನಮಗೆ ಲಾಭದಾಯಕವಾಗಿತ್ತು. ಅವನು ಔಷಧಿಯನ್ನು ಕೂಡಲೆ ಬಸ್ಸಿನ ಒಳಗೆ ಅಂದರೆ ಹವಾನಿಯಂತ್ರಿತವಾಗಿದ್ದ ಜಾಗದಲ್ಲಿ ಸುರಕ್ಷಿತವಾಗಿಟ್ಟ. ರಾಧಾಕೃಷ್ಣ ತನ್ನ ಮನೆಯಿಂದ ೫ ಕಿ.ಮೀ. ದೂರವಿರುವ ಸುಳ್ಯಕ್ಕೆ ಬಂದು ರಾತ್ರಿ ೩.೩೦ ಘಂಟೆಗೆ ಬಸ್ಸಿನಿಂದ ಆ ಔಷಧಿಯನ್ನು ತೆಗೆದುಕೊಂಡು ಹೋದ. ಬೆಳಗ್ಗೆ ಪಶುವೈದ್ಯರು ಬಂದು ಇಂಜೆಕ್ಷನ್ ನೀಡಿದರು.

ಇಷ್ಟೆಲ್ಲ ಪ್ರಯತ್ನ ಪಟ್ಟೂ ಆ ಹಸು ಸತ್ತು ಹೋಯಿತು. ಆಗ ನನಗೆ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಮಾತುಗಳ ನೆನಪಾಯಿತು. ರಾಧಾಕೃಷ್ಣ ಸಾಕಿದ್ದು ಭಾರತೀಯ ತಳಿಯ ಹಸುವಾಗಿದ್ದಿದ್ದರೆ ಈ ಎಲ್ಲ ಸಮಸ್ಯೆಗಳೂ ಇರುತ್ತಿರಲಿಲ್ಲ ಎಂದು ಅನ್ನಿಸಿದ್ದೂ ಹೌದು.

Leave a Reply