ನಾವೂ ಹೀಗೆ ಮಾಡಬೇಕು

ಚೀನಾದಲ್ಲಿ ಒಬ್ಬ ಲಾಯರ್‍ ಮೆಕ್‌ಡೊನಾಲ್ಡ್ ಕಂಪೆನಿಯ ಮೇಲೆ ಕೇಸು ಹಾಕಿರುವುದು ವರದಿಯಾಗಿದೆ. ಮೆಕ್‌ಡೊನಾಲ್ಡ್‌ನವರು ಬಿಸಿಯಾದ ಕಾಫಿ ನೀಡುವುದರ ವಿರುದ್ಧ, ಪ್ರಾಣಿ ಮಾಂಸದಿಂದ ತಯಾರಿಸಿದ ಎಣ್ಣೆಯನ್ನು ಬಳಸುವುದರ ವಿರುದ್ಧ ಎಲ್ಲ ಈ ಹಿಂದೆ ಕೇಸುಗಳು ದಾಖಲಾಗಿದ್ದವು. ಆದರೆ ಈ ಕೇಸು ಸ್ವಲ್ಪ ವಿಶೇಷವಾಗಿದೆ. ಚೀನಾದ ಭಾಷೆಯನ್ನು ಬಳಸದಿರುವುದರ ವಿರುದ್ಧ ಈ ಕೇಸು ಹಾಕಲಾಗಿದೆ.

ಈ ಪ್ರಕರಣ ನಮಗೆ ಕಣ್ಣುತೆರೆಸಬೇಕು. ನಮ್ಮದೇ ಆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕರಾರಸಾಸಂ) ಉದಾಹರಣೆಯನ್ನು ನೋಡೋಣ. ಅವರು ಕನ್ನಡವನ್ನು ಬಳಸುವುದಿಲ್ಲ. ಅವರ ನಿರ್ವಾಹಕರು (ಕಂಡಕ್ಟರ್‍) ಕುತ್ತಿಗೆಗೆ ನೇತಾಡಿಸಿಕೊಳ್ಳುವ ಟಿಕೆಟ್ ನೀಡುವ ಯಂತ್ರದಲ್ಲಿ ಕನ್ನಡವಿಲ್ಲ. ಕರ್ನಾಟಕದ ಹಳ್ಳಿಯೊಂದರಿಂದ ಇನ್ನೊಂದು ಹಳ್ಳಿಗೆ ಹೋಗಬೇಕಾಗಿರುವ ಕನ್ನಡಿಗರು ಇಂಗ್ಲಿಶ್ ಭಾಷೆಯಲ್ಲಿ ಟಿಕೆಟ್ ಕೊಳ್ಳಬೇಕಾಗಿದೆ. ಅವರು ಅಂತರಜಾಲ ತಾಣದ ಮೂಲಕ ಮುಂಗಡ ಟಿಕೆಟ್ ಕಾದಿರಿಸುವ ವ್ಯವಸ್ಥೆ ಮಾಡಿದ್ದಾರೆ. ಈ ತಾಣದಲ್ಲೂ ಕನ್ನಡವಿಲ್ಲ. ಇಲ್ಲ ಎಂದರೆ ಇಲ್ಲವೇ ಇಲ್ಲವೆಂದಲ್ಲ. ಕರಾರಸಾಸಂ ಬಗ್ಗೆ ವಿವರಗಳು ಕನ್ನಡದಲ್ಲೂ ಇವೆ. ಆದರೆ ಬಸ್ಸುಗಳ ವೇಳಾಪಟ್ಟಿ, ದರ, ಮಾರ್ಗಸೂಚಿ, ಮುಂಗಡ ಆಸನ ಕಾದಿರಿಸುವಿಕೆ ಇತ್ಯಾದಿಗಳು ಇಂಗ್ಲೀಶಿನಲ್ಲೇ ಇವೆ. ಅಂದರೆ ದತ್ತಸಂಚಯದಿಂದ ಮಾಹಿತಿ ಪಡೆಯುವಿಕೆಗಳು ಇಂಗ್ಲೀಶಿನಲ್ಲೇ ಇವೆ (ಡಾಟಾಬೇಸ್ ಇಂಗ್ಲೀಶಿನಲ್ಲಿದೆ). ಕರಾರಸಾಸಂಯ ಸೋದರ ಸಂಸ್ಥೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಮಸಾಸಂ) ಕೂಡ ಇದೇ ಮಾದರಿಯನ್ನು ಅನುಕರಿಸುತ್ತಿದೆ. ಅದರ ಅಂತರಜಾಲ ತಾಣದಲ್ಲೂ ದತ್ತಸಂಚಯದಿಂದ ಬರುವ ಮಾರ್ಗಸೂಚಿ ಮಾಹಿತಿ ಇಂಗ್ಲೀಶಿನಲ್ಲೇ ಇದೆ.

ಕನ್ನಡಿಗರು ಖಂಡಿತವಾಗಿಯೂ ಈ ಎರಡು ಸಂಸ್ಥೆಗಳ ವಿರುದ್ಧ ಗ್ರಾಹಕ ವೇದಿಕೆಯಲ್ಲಿ ಕೇಸು ದಾಖಲಿಸಬಹುದು.

Leave a Reply