ನಾನು ಬ್ಲಾಗಿಸುವುದು ನನಗೆಂದು
ಸುಧಾ ಪತ್ರಿಕೆಯಲ್ಲಿ ಬ್ಲಾಗ್ ಬಗ್ಗೆ ರಘುನಾಥ ಚ ಹ ಅವರ ಲೇಖನ ಪ್ರಕಟವಾಗಿತ್ತು. ಆ ಲೇಖನದ ಜೊತೆ ನನ್ನದೊಂದು ಕಿರು ಸಂದರ್ಶನ -ಬ್ಲಾಗಿಂಗ್ ಬಗ್ಗೆ – ಪ್ರಕಟವಾಗಿತ್ತು. ಅದನ್ನು ಇಲ್ಲಿ ನೀಡುತ್ತಿದ್ದೇನೆ.
ಪ್ರ: ನಿಮಗೆ ಬ್ಲಾಗ್ ಬರೆಯುವ ಐಡಿಯಾ ಬಂದದ್ದು ಹೇಗೆ?
ಸುಮಾರು ಮೂರು ವರ್ಷಗಳ ಹಿಂದೆಯೇ ಬ್ಲಾಗಿಂಗ್ ಜನಪ್ರಿಯವಾಗಲು ಪ್ರಾರಂಭವಾಗುತ್ತಿದ್ದಂತೆ ನಾನೂ ಒಂದೆರಡು ಬ್ಲಾಗ್ ಹಾಕಿದೆ. ಕನ್ನಡದಲ್ಲಿ ಬ್ಲಾಗಿಂಗ್ ಸಾಧ್ಯವೇ ಎನ್ನುವುದನ್ನು ಪರೀಕ್ಷಿಸುವುದು ನನ್ನ ಉದ್ದೇಶವಾಗಿತ್ತು. ಕನ್ನಡದಲ್ಲಿ ಬ್ಲಾಗಿಂಗ್ ಸಾಧ್ಯ ಎಂದು ತೀರ್ಮಾನಕ್ಕೆ ಬಂದ ನಂತರ ಅದನ್ನು ಅಲ್ಲಿ ಮುಂದುವರಿಸಲಿಲ್ಲ. ನಂತರ ಇತ್ತೀಚೆಗೆ ವಿಶ್ವಕನ್ನಡವನ್ನು ಯುನಿಕೋಡ್‌ಗೆ ಪರಿವರ್ತಿಸಿ ಹೊಸ ರೂಪ ನೀಡಿದಾಗ ಅದರಲ್ಲಿ ನನ್ನ ವೈಯಕ್ತಿಕ ಬ್ಲಾಗ್‌ಗೇ ಅಂತ ಒಂದು ಪ್ರತ್ಯೇಕ ವಿಭಾಗವನ್ನು ಸೇರಿಸಿದೆ. ಅದರಲ್ಲಿ ನಿಯಮಿತವಾಗಿ ಬ್ಲಾಗಿಂಗ್ ನಡೆಸುತ್ತಿದ್ದೇನೆ.
ಪ್ರ:ನೀವು ಬ್ಲಾಗ್ ಬರೆಯುವುದು ಏಕೆ?
ಏನೋ ಹೇಳಬೇಕೆಂಬ ತೀಟೆ ಹಲವರಂತೆ ನನ್ನಲ್ಲೂ ಇದೆ. ಹೀಗೆ ಹೇಳಬೇಕಾಗಿರುವುದನ್ನು ಯಾರ ಕತ್ತರಿಗೂ ಎಟುಕದಂತೆ ಸ್ವತಂತ್ರವಾಗಿ ಹೇಳುವುದು ಬ್ಲಾಗಿಂಗ್‌ನಿಂದ ಮಾತ್ರ ಸಾಧ್ಯ. ಅದನ್ನೇ ನಾನು ಮಾಡುತ್ತಿರುವುದು. ನನ್ನ ಬ್ಲಾಗಿಂಗ್‌ನಲ್ಲಿ ನಾನು ಬರೆದ ನನ್ನ ಕೆಲವು ವೈಯಕ್ತಿಕ ಅಭಿಪ್ರಾಯಗಳನ್ನು ಯಾವ ಪತ್ರಿಕೆಯೂ ಮುದ್ರಿಸಲಾರದು. ಯಾಕೆಂದರೆ ನಾನು ಅದರಲ್ಲಿ ಮುದ್ರಿತ ರೂಪದಲ್ಲಿ ಬರುವ ಪತ್ರಿಕೆಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದೇನೆ. ಇದು ಕೇವಲ ಬ್ಲಾಗಿಂಗ್‌ನಿಂದ ಸಾಧ್ಯ. ಇನ್ನು ಕೆಲವು ತೀರಾ ವೈಯಕ್ತಿಕ ಅನುಭವ, ಅಭಿಪ್ರಾಯ, ಕಾಲಹರಣ ಮಾಡಲು ಸುಮ್ಮನೆ ಬರೆಯುವಿಕೆ -ಇತ್ಯಾದಿಗಳನ್ನು ಕೂಡ ಯಾವ ಪತ್ರಿಕೆಯೂ ಮುದ್ರಿಸಲಾರದು. ಬ್ಲಾಗ್ ಮೂಲಕ ಅತಿ ವೇಗವಾಗಿ ಓದುಗರನ್ನು ತಲುಪಬಹುದು. ಮುದ್ರಿತ ಪತ್ರಿಕೆಗಳ ಮೂಲಕ ಜನರನ್ನು ತಲುಪಲು ಜಾಸ್ತಿ ಸಮಯ ಬೇಕು.
ಪ್ರ: ಬ್ಲಾಗ್ ಬರೆಯುತ್ತಾ ಬರೆಯುತ್ತಾ ನಿಮಗೆ ಏನು ಸಿಕ್ಕಿದೆ?
ನಾನು ಈಗಾಗಲೇ ತಿಳಿಸಿದಂತೆ ನನಗೆ ಸಾರ್ವಜನಿಕವಾಗಿ ಹೇಳಬೇಕೆಂದುಕೊಂಡಿರುವುದನ್ನು ಹೇಳಿದ್ದೇನೆ. “ನಾನು ಬ್ಲಾಗಿಸುವುದು ನನಗೆಂದು ಎದೆ ಭಾರ ಇಳಿಯಲೆಂದು”! 🙂
ಪ್ರ: ಓದುಗರ ಸ್ಪಂದನ ಹೇಗಿದೆ?
ತುಂಬ ಚೆನ್ನಾಗಿದೆ. ಕೆಲವರು ಬ್ಲಾಗ್‌ನ ಕೆಳಗೇ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ. ಕೆಲವರು ದೂರವಾಣಿ ಮೂಲಕ ಮತ್ತೆ ಕೆಲವರು ವಿ-ಅಂಚೆಯ ಮೂಲಕವೂ ತಮ್ಮ ಪ್ರತಿಕ್ರಿಯೆ ಹಾಗೂ ಮೆಚ್ಚಿಗೆ ಸೂಚಿಸಿದ್ದಾರೆ. ಕೆಲವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡದ್ದೂ ಇದೆ!
ಪ್ರ: ದೇಸೀ ಭಾಷೆಯೊಂದನ್ನು ಬೆಚ್ಚಗಿಡುವಲ್ಲಿ ಬ್ಲಾಗ್ ಪಾತ್ರ ಏನು?
ಅತಿ ಮಹತ್ವವಾದುದು. ಆಧುನಿಕ ಕಾಲದಲ್ಲಿ ಗಣಕ, ಅಂತರಜಾಲ, ಸಂಪರ್ಕ ತಂತ್ರಜ್ಞಾನ – ಇವುಗಳಲ್ಲಿ ನಮ್ಮ ಭಾಷೆಯನ್ನು ಅಳವಡಿಸುವ ಮತ್ತು ಬಳಸುವ ಮೂಲಕ ನಾವು ಭಾಷೆಯನ್ನು ಜೀವಂತವಾಗಿ ಇಡಬಲ್ಲೆವು. ಈ ನಿಟ್ಟಿನಲ್ಲಿ ಬ್ಲಾಗಿಂಗ್ ಕೂಡ ಸೇರಿದೆ. ಬ್ಲಾಗಿಂಗ್‌ನ ವೈಶಿಷ್ಟ್ಯವೆಂದರೆ ಓದುಗರು ತಮ್ಮ ಟೀಕೆ ಟಿಪ್ಪಣಿಗಳನ್ನು ಬ್ಲಾಗ್‌ನ ಕೆಳಗೆ ಬರೆಯಬಹುದು. ಇದರಿಂದಾಗಿ ಒಂದು ಪ್ರತಿಸ್ಪಂದನಾತ್ಮಕ ಚರ್ಚಾವೇದಿಕೆಯೇ ನಿರ್ಮಾಣವಾಗಿಬಿಡುತ್ತದೆ. ಹೀಗೆ ಹೊಸ ತಂತ್ರಜ್ಞಾನದಲ್ಲಿ ಭಾಷೆಯ ಬಳಕೆ ಜಾಸ್ತಿಯಾದಂತೆಲ್ಲ ಅದು ಹೆಚ್ಚು ಚಲಾವಣೆಯಲ್ಲಿರುತ್ತದೆ.
ಪ್ರ: ನಿಮ್ಮ ಮೆಚ್ಚಿನ ಬ್ಲಾಗ್‌ಗಳು ಯಾವುವು?
majavani.blogspot.com, kannadablogs.blogspot.com, kannada-kathe.blogspot.com, noorentusullu.blogspot.com, sampada.net -ಇವೆಲ್ಲ ಕನ್ನಡ ಭಾಷೆಯಲ್ಲಿರುವ ಬ್ಲಾಗ್‌ಗಳು. ತಂತ್ರಜ್ಞಾನ ಸಂಬಂಧಿ ನಾನು ಓದುವ ಹಲವು ಬ್ಲಾಗ್‌ಗಳು ಇಂಗ್ಲೀಶಿನಲ್ಲಿವೆ. ಅವನ್ನು ಇಲ್ಲಿ ಉಲ್ಲೇಖಿಸುತ್ತಿಲ್ಲ. “ಸಂಪದ” ಬಗ್ಗೆ ನನ್ನ ಲೇಖನ ಈಗಾಗಲೇ “ಸುಧಾ” ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹಲವರ ಲೇಖನ ಮತ್ತು ಬ್ಲಾಗ್‌ಗಳನ್ನು ಒಂದೇ ಕಡೆ ಓದುವ ಸೌಲಭ್ಯವನ್ನು ಈ ತಾಣ ನೀಡುತ್ತದೆ.
ಪ್ರ: ವಿಶ್ವಕನ್ನಡ ವೆಬ್ಸೈಟ್ ಹಾಗೂ ಬ್ಲಾಗ್- ವ್ಯತ್ಯಾಸ ಏನು?
ವಿಶ್ವ ಕನ್ನಡವು ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆಯಾಗಿದೆ. ಹಾಗೆಯೇ ಅದು ಕನ್ನಡದ ಪ್ರಥಮ ಅಂತರಜಾಲ ತಾಣವೂ ಆಗಿದೆ. ಪತ್ರಿಕೆ ಅಂದ ಮೇಲೆ ಅದರಲ್ಲಿ ಹಲವರ ಲೇಖನಗಳಿರಬೇಕು. ಇವೆ. ಒಂದು ಪತ್ರಿಕೆಗೆ ಇರಬೇಕಾದ ರೂಪುರೇಷೆ, ಧ್ಯೇಯ, ಸಂಯಮ -ಇತ್ಯಾದಿಗಳೆಲ್ಲ ವಿಶ್ವಕನ್ನಡ ಪತ್ರಿಕೆಗೆ ಇವೆ. ಬ್ಲಾಗ್ ಕೇವಲ ವೈಯಕ್ತಿಕ. ಅದು ಪತ್ರಿಕೆಯಲ್ಲ. ಅದಕ್ಕೆ ಯಾವ ನಿಯಮಗಳಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಯಾವ ಮುಲಾಜಿಲ್ಲದೆ ಹೇಳಲು ಬ್ಲಾಗಿನ ಬಳಕೆ ಮಾಡುತ್ತೇನೆ.