ದೀಪ ಬೆಳಗಿ ಉದ್ಘಾಟಿಸುವುದು

ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗುವ ಮೂಲಕ ಆಗುತ್ತದೆ. ಪೂಜೆ ಮಾಡಲು ನಿರಾಕರಿಸುವ ವಿಚಾರವಾದಗಳೂ ದೀಪ ಬೆಳಗುವುದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ದೀಪ ಎಂದರೆ ಬೆಳಕು ಎಂದರೆ ಜ್ಞಾನದ ಸಂಕೇತ. ಖಂಡಿತ ಹೌದು. ಅದನ್ನು ಎಲ್ಲರಿಗಿಂತ ಮೊದಲು ಹೇಳಿದ್ದು ಉಪನಿಷತ್ತಿನಲ್ಲಿ .”ತಮಸೋಮಾ ಜ್ಯೋತಿರ್ಗಮಯ” ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ. ಅರೆಬೆಂದ ವಿಚಾರವಾದಿಗಳ ಮಾತು ಹಾಗಿರಲಿ. ಈಗ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವ ಬಗ್ಗೆ ಬರೋಣ. ಮೊದಲನೆಯದಾಗಿ ದೀಪ ಬೆಳಗಲು ಅವರು ಬಳಸುವುದು ಕ್ಯಾಂಡಲನ್ನು. ಅದೇಕೋ ನನಗೆ ಸರಿ ಕಾಣುವುದಿಲ್ಲ. ಅದರ ಬದಲು ಒಂದು ಚಿಕ್ಕ ಹಣತೆ ತಂದರೆ ಚೆನ್ನಾಗಿರುತ್ತದಲ್ಲವೇ? ದೀಪ ಬೆಳಗುವುದು ಭಾರತೀಯ ಪದ್ಧತಿಯಾಗಿರುವಾಗ ಅದನ್ನೂ ಭಾರತೀಯವಾಗಿಯೇ ಮಾಡಿದರೆ ಚೆನ್ನಾಗಿರುತ್ತದಲ್ಲವೇ?

ಹೆಚ್ಚಿನ ಜನರು ದೀಪ ಬೆಳಗಲು ಕರೆದಾಗ ಪಾದರಕ್ಷೆ ಕಳಚಿ ಬರುತ್ತಾರೆ. ಇದು ಸರಿಯಾದ ಕ್ರಮ. ಸುಮಾರು ೧೫ ವರ್ಷಗಳ ಹಿಂದೆ ನಾನು ವೃತ್ತಿನಿರತ ವಿಜ್ಞಾನಿಯಾಗಿದ್ದಾಗ (ಈಗಲೂ ನಾನು ಮಾನಸಿಕವಾಗಿ ವಿಜ್ಞಾನಿಯೇ ;-)) ಒಂದು ವಿಜ್ಞಾನ ವಿಚಾರ ಸಂಕಿರಣವನ್ನು ದೀಪ ಬೆಳಗುವ ಮೂಲಕ ಡಾ. ಅಬ್ದುಲ್ ಕಲಾಂ ಉದ್ಘಾಟಿಸಿದ್ದರು. ಆಗ ಅವರು ಶೂ ಕಳಚಿದ್ದರು.

ದೀಪ ಬೆಳಗುವ ವಿಚಾರವನ್ನೇ ಗಮನಿಸೋಣ. ಬತ್ತಿ ಚೆನ್ನಾಗಿಲ್ಲದಿದ್ದಲ್ಲಿ,ಎಣ್ಣೆ ಹಾಕಿದ್ದು ಕಡಿಮೆಯಾಗಿದ್ದಲ್ಲಿ ಅಥವಾ ಹೆಚ್ಚಾಗಿದ್ದಲ್ಲಿ ಬತ್ತಿ ಸರಿಯಾಗಿ ಹೊತ್ತಿಕೊಳ್ಳುವುದಿಲ್ಲ. ಇದಕ್ಕೊಂದು ಸರಳ ಪರಿಹಾರವಿದೆ. ಕರ್ಪೂರವನ್ನು ಪುಡಿ ಮಾಡಿ ಆ ಹುಡಿಯನ್ನು ಬತ್ತಿಗಳಿಗೆ ಸಿಂಪಡಿಸಿದರೆ ಬತ್ತಿಗಳು ಬೇಗನೆ ಹೊತ್ತಿಕೊಳ್ಳುತ್ತವೆ.

ಇನ್ನು ಬೆಳಗಿದ ದೀಪ ಉಳಿಯುವ ವಿಚಾರಕ್ಕೆ ಬರೋಣ. ಹೆಚ್ಚಿನ ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸಿ ಮುಖ್ಯ ಅತಿಥಿಗಳು ತಮ್ಮ ಆಸನಗಳಲ್ಲಿ ಆಸೀನರಾದಾಗಲೇ ಅರ್ಧದಷ್ಟು ಬತ್ತಿಗಳು ನಂದಿಹೋಗಿರುತ್ತವೆ. ಕಾರ್ಯಕ್ರಮದ ಆಯೋಜಕರು ಬೆಳಗಿದ ದೀಪ ಸರಿಯಾಗಿ ಉರಿಯುವಂತೆ ನೋಡಿಕೊಳ್ಳಲು ಮತ್ತು ಅದಕ್ಕೆ ಆಗಾಗ ಎಣ್ಣೆ ಹಾಕಲು ಒಬ್ಬ ವ್ಯಕ್ತಿಯನ್ನು ನೇಮಿಸುವುದು ಒಳ್ಳೆಯದು. ಕಾರ್ಯಕ್ರಮದ ಕೊನೆ ತನಕ ಆ ದೀಪ ಉರಿಯಲೇ ಬೇಕು.

Leave a Reply