ಜನೋಪಯೋಗಿ ಮತ್ತು ನಿರುಪಯೋಗಿ ಸಾಹಿತ್ಯ
ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬರುತ್ತಿದೆ. ಮತ್ತೊಮ್ಮೆ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಾಗುವ ಗೋಷ್ಠಿಗಳನ್ನು ವರ್ಷಗಳಿಂದ ಗಮನಿಸುತ್ತಿದ್ದೇನೆ. ಮೂಡುಬಿದಿರೆಯಲ್ಲಿ ಜರುಗಿದ ಸಮ್ಮೇಳನವನ್ನು ಹೊರತುಪಡಿಸಿದರೆ ಬೇರೆ ಯಾವ ಸಮ್ಮೇಳನದಲ್ಲೂ “ವಿಷಯ ಸಾಹಿತ್ಯ”ದ ಬಗ್ಗೆ ಯಾವುದೇ ಗೋಷ್ಠಿ ಇರಲಿಲ್ಲ. ಬಹುತೇಕ ಸಾಹಿತಿಗಳು ಬಳಸುವ “ಸೃಜನೇತರ ಸಾಹಿತ್ಯ” ಎಂಬ ಪದಕ್ಕೆ ಪರ್ಯಾಯವಾಗಿ ನಾನು ಇಲ್ಲಿ ವಿಷಯ ಸಾಹಿತ್ಯ ಎಂಬ ಪದವನ್ನು ಬಳಸಿದ್ದೇನೆ. ಹಾಗೆ ನೋಡಿದರೆ ಈ ಪದ ನನ್ನದೇನೂ ಅಲ್ಲ. ನವಕರ್ನಾಟಕ ಪ್ರಕಾಶನದ ಆರ್. ಎಸ್. ರಾಜಾರಾಂ ಅವರು ಈ ಪದವನ್ನು ಎಂದೋ ಬಳಸಿದ್ದಾರೆ.
ಸಾಹಿತ್ಯವನ್ನು ಸೃಜನಶೀಲ ಮತ್ತು ಸೃಜನೇತರ ಎಂದು ವಿಂಗಡಿಸುವುದಕ್ಕೇ ನನ್ನ ವಿರೋಧವಿದೆ. ನಾನೊಮ್ಮೆ ಒಬ್ಬ ಸಾಹಿತಿಯನ್ನು “ನೀವು ಸಾಹಿತ್ಯವನ್ನು ಸೃಜನಶೀಲ ಮತ್ತು ಸೃಜನೇತರ ಎಂದು ಹೇಗೆ ವಿಂಗಡಿಸುತ್ತೀರಿ? ಅದು ಯಾಕೆ ಸಾಹಿತ್ಯ ಸಮ್ಮೇಳನ, ಗೋಷ್ಠಿಗಳಲ್ಲಿ ವಿಜ್ಞಾನ ಮತ್ತು ಇತರೆ ಸಾಹಿತ್ಯವನ್ನು ಅಂದರೆ ನಿಮ್ಮ ಪ್ರಕಾರ ಸೃಜನಶೀಲವಲ್ಲದ ಸಾಹಿತ್ಯವನ್ನು ಯಾಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ?” ಎಂದು ಪ್ರಶ್ನಿಸಿದೆ. ಅವರ ಪ್ರಕಾರ ಸೃಜನೇತರ ಎಂದರೆ ಇತರೆ ಆಕರಗಳ ಆಧಾರದಿಂದ ರಚಿತವಾದ ಸಾಹಿತ್ಯ -ಇದರಲ್ಲಿ ವಿಜ್ಞಾನ ಸಾಹಿತ್ಯ ಪ್ರಮುಖವಾದುದು -ಸೃಜನೇತರ ಸಾಹಿತ್ಯ. ಯಾವುದೇ ಆಧಾರವಿಲ್ಲದ, ಕಲ್ಪನಾ ಲಹರಿಯಿಂದ ಸೃಜಿತವಾದ ಸಾಹಿತ್ಯ ಸೃಜನಶೀಲ ಸಾಹಿತ್ಯ. ನಾನು ಪ್ರಶ್ನಿಸಿದೆ -“ಹಾಗಿದ್ದರೆ ನಮ್ಮ ಬಹುತೇಕ ಪ್ರಶಸ್ತಿ ವಿಜೇತ ಸಾಹಿತಿಗಳ ರಚನೆಗಳು ನಮ್ಮ ಪುರಾಣಗಳನ್ನು ಆಧರಿಸಿವೆ. ಅವು ಹೇಗೆ ಸೃಜನಶೀಲ ಸಾಹಿತ್ಯ ಎಂದೆನಿಸಿಕೊಳ್ಳುತ್ತವೆ?”. ಆದುದರಿಂದ ನನಗೆ ಈ ಸೃಜನಶೀಲ ಮತ್ತು ಸೃಜನೇತರ ಎಂಬ ವಿಭಾಗೀಕರಣಕ್ಕಿಂತ ವಿಷಯ ಸಾಹಿತ್ಯ ಮತ್ತು ಕಥನ ಸಾಹಿತ್ಯ ಎಂಬ ವಿಭಾಗೀಕರಣವೇ ಸೂಕ್ತ ಎನಿಸುತ್ತದೆ.
ಜನಸಾಮಾನ್ಯರ ಅಗತ್ಯಗಳನ್ನು ಗಮನಿಸಿದಾಗ ಅವರಿಗೆ ಅತೀ ಅಗತ್ಯವಾಗಿ ಬೇಕಾದುದು ಸೃಜನಶೀಲ ಸಾಹಿತ್ಯವಲ್ಲ, ವಿಷಯ ಸಾಹಿತ್ಯ. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕೃಷಿ, ವೈದ್ಯಕೀಯ, ಕಾನೂನು, ಅರ್ಥಶಾಸ್ತ್ರ, ಇತ್ಯಾದಿ ಹಲವು ಹತ್ತು ವಿಷಯಗಳ ಬಗ್ಗೆ ಜನರಿಗೆ ತಿಳಿದುಕೊಳ್ಳಲು ಆಸಕ್ತಿ ಇದೆ. ಅವುಗಳನ್ನು ತಿಳಿದುಕೊಳ್ಳುವುದರಿಂದ ಅವರಿಗೆ ಜೀವನಕ್ಕೂ ಪ್ರಯೋಜನವಿದೆ. ಒಂದು ಚಿಕ್ಕ ಕಂಪೆನಿ ಹುಟ್ಟುಹಾಕಬೇಕಾದರೆ ಏನೆಲ್ಲ ಮಾಡಬೇಕು ಎಂದು ತಿಳಿಸುವ ಪುಸ್ತಕ ಮಾರುಕಟ್ಟೆಯಲ್ಲಿದೆಯೇ? ಕನ್ನಡ ಸಾಹಿತ್ಯವೆಂದರೆ ಕೇವಲ ಸೃಜನಶೀಲ ಸಾಹಿತ್ಯ ಮಾತ್ರವೇ? ಜನೋಪಯೋಗಿ ಸಾಹಿತ್ಯ ಸಾಹಿತ್ಯವಲ್ಲವೇ? ಸಾಹಿತ್ಯವನ್ನು ಜನೋಪಯೋಗಿ ಮತ್ತು ನಿರುಪಯೋಗಿ ಎಂದು ವಿಭಾಗೀಕರಣ ಮಾಡಬಹುದು ಎಂದು ಹೇಳಿದರೆ ಅದು ದುರಹಂಕಾರದ ಮಾತು ಎಂದು ಮೂದಲಿಸುವರೇ?
ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚಿಸಲ್ಪಡುವುದು ಈ ಸೃಜನಶೀಲ ಎಂದೆನಿಸಿಕೊಂಡ ಸಾಹಿತ್ಯ ಮಾತ್ರ. ವಿಷಯ ಸಾಹಿತ್ಯಕ್ಕೆ ಅಲ್ಲಿ ಅವಕಾಶವಿಲ್ಲ. ಈ ಸೃಜನಶೀಲ ಸಾಹಿತ್ಯದಲ್ಲೂ ಸಾಹಿತಿಗಳು ನವ್ಯ, ನವ್ಯೋತ್ತರ, ದಲಿತ, ಬಂಡಾಯ, ಹೀಗೆ ಹಲವಾರು ಪ್ರಕಾರಗಳನ್ನು ಮಾಡಿಕೊಂಡು ಪ್ರತಿಯೊಂದಕ್ಕೂ ಒಂದೊಂದು ಗೋಷ್ಠಿ ನಡೆಸುತ್ತಾರೆ. ಮೂಡುಬಿದಿರೆ ಸಮ್ಮೇಳನವನ್ನು ಹೊರತುಪಡಿಸಿ ಇನ್ನಾವುದೇ ಸಮ್ಮೇಳನದಲ್ಲಿ ವಿಷಯ ಸಾಹಿತ್ಯದ ಬಗ್ಗೆ ಯಾವುದೇ ಗೋಷ್ಠಿ ನಡೆದ ಉದಾಹರಣೆಗಳಿಲ್ಲ. ವಿಷಯ ಸಾಹಿತ್ಯ ಲೇಖಕರನ್ನು ಸಾಹಿತಿ ಎಂದು ಗುರುತಿಸಿ ಸಾಹಿತ್ಯ ಗೋಷ್ಠಿಗಳಿಗೆ ಆಹ್ವಾನಿಸಿದ ಉದಾಹರಣೆ ಇದೆಯೇ?
ವೃತ್ತಿಯಿಂದ ವೈದ್ಯ, ಇಂಜಿನಿಯರ್, ಕಾನೂನು ತಜ್ಞ -ಹೀಗೆ ವಿವಿಧ ಕ್ಷೇತ್ರಗಳಲ್ಲಿರುವ ಹಲವರು ಕಥೆ, ಕಾದಂಬರಿ, ನಾಟಕ, ಇತ್ಯಾದಿ ಕಥನ ಸಾಹಿತ್ಯ ರಚನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಸೇರ್ಪಡೆಯಾಗುವವರಲ್ಲಿ ಹಲವು ಮಂದಿ ಅಮೇರಿಕಾದಲ್ಲೂ ಇದ್ದಾರೆ. ಅವರಲ್ಲಿ ಹಲವರಿಗೆ ಸಾಹಿತಿ ಎಂದು ಬೇಕಾದಷ್ಟು ಮನ್ನಣೆ, ಗೌರವ ಸಿಕ್ಕಿದೆ, ಸಿಗುತ್ತಿದೆ. ಅವರು ಯಾರೂ ತಮ್ಮ ತಮ್ಮ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಯಾಕೆ ಬರೆಯುತ್ತಿಲ್ಲ? ಅವರವರ ಕ್ಷೇತ್ರದಲ್ಲಿಯ ಇತ್ತೀಚೆಗಿನ ಬೆಳವಣಿಗೆಗಳ ಬಗೆಗೆ ಬರೆದರೆ ಅದರಿಂದ ಕನ್ನಡಿಗರಿಗೆ ನಿಜವಾಗಿಯೂ ಪ್ರಯೋಜನಕಾರಿ ಎಂದು ಅವರಿಗೆ ತಿಳಿದಿಲ್ಲವೇ? ಹಾಗೆ ಬರೆಯುವುದುರಿಂದ ತಮಗೆ ಗೌರವ, ಮನ್ನಣೆ ಸಿಗವುದಿಲ್ಲ ಎಂಬುದೇ ಕಾರಣವಿರಬಹುದೇ?
ಒಂದನೇ ತರಗತಿಯಿಂದಲೇ ಇಂಗ್ಲೀಶ್ ಭಾಷೆಯನ್ನು ಕಲಿಸಬೇಕು ಎಂದು ವಾದಿಸುವವರ ಒಂದು ಮುಖ್ಯವಾದ ವಾದವೆಂದರೆ ಕನ್ನಡದಲ್ಲಿ ಕಲಿಯುವುದರಿಂದ ಜಗತ್ತಿನ ಜ್ಞಾನ ಸಿಗುವುದಿಲ್ಲ. ಇದರಿಂದ ಮುಂದಕ್ಕೆ ಉದ್ಯೋಗ ಪಡೆಯಲು ಕಷ್ಟಪಡಬೇಕಾಗುತ್ತದೆ ಎಂದು. ಈ ಸಮಸ್ಯೆಗೆ ಪರಿಹಾರ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಭಾಷೆಯನ್ನು ಕಲಿಯುವುದಲ್ಲ. ಕನ್ನಡ ಭಾಷೆಯಲ್ಲಿ ಜಗತ್ತಿನ ಜ್ಞಾನವನ್ನು ತರುವುದು. ಇದಕ್ಕಾಗಿ ನಮ್ಮ ಸಾಹಿತಿಗಳು ಏನು ಕೆಲಸ ಮಾಡಿದ್ದಾರೆ? ಶಿವರಾಮ ಕಾರಂತರಂತೆ ಕನ್ನಡ ಭಾಷೆಯಲ್ಲಿ ಜಗತ್ತಿನ ಜ್ಞಾನವನ್ನು ತಂದು ಹಂಚುವ ಕೆಲಸ ಮಾಡುವ ಒಬ್ಬ ಸಾಹಿತಿ ತೋರಿಸಿ ನೋಡುವ -ಪೂರ್ಣಚಂದ್ರ ತೇಜಸ್ವಿಯವರನ್ನು ಹೊರತು ಪಡಿಸಿ.
ವಿಷಯ ಸಾಹಿತ್ಯ ರಚನೆ ಕಥನ ಸಾಹಿತ್ಯ ರಚನೆಗಿಂತ ಸ್ವಲ್ಪ ಕಷ್ಟ ನಿಜ. ಅದಕ್ಕೆ ಪರಿಶ್ರಮ ಪಡಬೇಕು. ಈಗಾಗಲೇ ವೃತ್ತಿಯಿಂದ ಸಾಹಿತಿಗಳಲ್ಲದವರು, ಆದರೆ ಪ್ರವೃತ್ತಿಯಿಂದ ಸಾಹಿತಿಗಳಾಗಿರುವವರು ತಮ್ಮ ತಮ್ಮ ಕ್ಷೇತ್ರದ ಬಗ್ಗೆ ಸಾಹಿತ್ಯ ರಚನೆಗೆ ಮುಂದಾಗಬೇಕು. ಭಾರತೀಯ ವಿಜ್ಞಾನ ಮಂದಿರದಂತಹ ಕಡೆ ಕೆಲಸದಲ್ಲಿರುವ ವಿಜ್ಞಾನಿಗಳು ವಿಜ್ಞಾನ ಸಾಹಿತ್ಯ ರಚನೆಗೆ ತೊಡಗಬೇಕು. ಕಾನೂನು ಪಂಡಿತರು ಕಾನೂನು ಸಾಹಿತ್ಯ ರಚಿಸಬೇಕು. ಹೀಗೆ ಬೇಕುಗಳ ಪಟ್ಟಿ ದೊಡ್ಡದಿದೆ. “ವಿಷಯ ಸಾಹಿತ್ಯ ರಚನೆ ಕಥನ ಸಾಹಿತ್ಯ ರಚನೆಗಿಂತ ಕಷ್ಟವಿದೆ ಎಂದು ನೀವೇ ಹೇಳೀದ್ದೀರಲ್ಲ. ಆದುದರಿಂದ ನಾವು ಅದರಿಂದ ದೂರವಿದ್ದೇವೆ” ಎನ್ನುತ್ತೀರಾ? ನಿಮಗೆ ಆಸಕ್ತಿ ಇದೆ ಆದರೆ ದಾರಿ ಗೊತ್ತಿಲ್ಲವಾದಲ್ಲಿ ಅದಕ್ಕಾಗಿ ಒಂದು ಚಿಕ್ಕ ಶಿಬಿರದ ಆಯೋಜನೆ ಮಾಡಬಹುದು. ಅಂತಹ ಶಿಬಿರವೊಂದನ್ನು ಆಯೋಜಿಸಿದರೆ ಅದರಲ್ಲಿ ಭಾಗಿಗಳಾಗಿ ಬರುತ್ತೀರಾ? ನಿಮಗಾಗಿ ಅಲ್ಲದಿದ್ದರೂ ಕನ್ನಡ ಮತ್ತು ಕನ್ನಡಿಗರಿಗಾಗಿ ಬರುತ್ತೀರಾ?