ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಿಯಲ್ಲಿ ಖ್ಯಾತರಾಗಿರುವ ಈಗ ಸದ್ಯಕ್ಕೆ ಮೈಕ್ರೋಸಾಫ್ಟ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಮೈಕೇಲ್ ಕಪ್ಲಾನ್ ತಮ್ಮ ಬ್ಲಾಗಿನಲ್ಲಿ ಒಮ್ಮೆ, ಎಲ್ಲ ಅಕ್ಷರಗಳೂ ಇರುವ ವಾಕ್ಯದ ಬಗ್ಗೆ ಬರೆದರು. ಸಾಮಾನ್ಯವಾಗಿ ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು The quick brown fox jumps over the lazy dog. ಏನೀ ವಾಕ್ಯದ ವಿಶೇಷ? ಈ ವಾಕ್ಯದಲ್ಲಿ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರಗಳೂ ಇವೆ. ಯಾವುದಾದರೊಂದು ಫಾಂಟ್‌ನಲ್ಲಿ ಅಕ್ಷರಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಉದಾಹರಿಸಲು ಈ ವಾಕ್ಯವನ್ನು ಬಳಸುತ್ತಾರೆ.

ಅದೇ ಬ್ಲಾಗಿನಲ್ಲಿ ಕಪ್ಲಾನ್ ಅವರು ಇತರೆ ಹಲವು ಭಾಷೆಗಳಲ್ಲಿ ಇಂತಹುದೇ ಕೆಲವು ವಾಕ್ಯಗಳ ಉದಾಹರಣೆ ನೀಡಿದ್ದರು. ಆದರೆ ಅವರು ಹಿಂದಿ ಭಾಷೆಯಲ್ಲಿ ನೀಡಿದ ವಾಕ್ಯ ನನಗೆ ಹಿಡಿಸಲಿಲ್ಲ. ಅದರಲ್ಲಿ ಹಿಂದಿ ಭಾಷೆಯ ಎಲ್ಲ ಅಕ್ಷರಗಳಿರಲಿಲ್ಲ. ಹಾಗೆ ನೋಡಿದರೆ ಯಾವ ಭಾರತೀಯ ಭಾಷೆಯಲ್ಲಿಯೇ ಆಗಲಿ, ಅದರಲ್ಲಿ ಸಾಧ್ಯವಿರುವ ಎಲ್ಲ ಅಕ್ಷರಗಳ ಎಲ್ಲ ತೋರಿಕೆಯ ಪ್ರಕಾರಗಳನ್ನು ತೋರಿಸಬೇಕಾದರೆ ಹದಿನೈದು ಸಾವಿರದಷ್ಟು ಅಕ್ಷರಗಳು ಬೇಕಾಗಬಹುದು. ಹಾಗೆಂದು ಅದೇ ಬ್ಲಾಗಿನಲ್ಲಿ ನನ್ನ ಟಿಪ್ಪಣಿಯನ್ನೂ ಸೇರಿಸಿದೆ. ಎಲ್ಲ ಅಕ್ಷರಗಳ ಅಲ್ಲ ಸಂಯುಕ್ತಾಕ್ಷರಗಳೂ ಬೇಕಾಗಿಲ್ಲ. ಆದರೆ ಎಲ್ಲ ಮೂಲಾಕ್ಷರಗಳೂ ಇದ್ದರೆ ಸಾಕು ಎಂದು ಅವರೇ ಉತ್ತರಿಸಿದರು.

ನಾನೂ ಇಂತಹ ಒಂದು ವಾಕ್ಯವನ್ನು ಕನ್ನಡದಲ್ಲಿ ರಚಿಸುವ ಬಗ್ಗೆ ತುಂಬ ತಲೆಕೆಡಿಸಿಕೊಂಡಿದ್ದೆ. ಕೇವಲ ಎಲ್ಲ ಮೂಲಾಕ್ಷರಗಳನ್ನು ಮಾತ್ರ ಬಳಸಿದರೆ ಅದು ಅರ್ಥಹೀನ ಅಕ್ಷರಸಮೂಹವಾಗಬಹುದಷ್ಟೇ. ಸ್ವರಗಳನ್ನು ಬಳಸಲೇ ಬೇಕು. “ಇಗೋ ಕನ್ನಡ” ಖ್ಯಾತಿಯ ಪ್ರೊ| ಜಿ. ವೆಂಕಟಸುಬ್ಬಯ್ಯನವರಿಗೆ ಫೋನಾಯಿಸಿ ಇಂತಹ ಒಂದು ವಾಕ್ಯ ನಿಮಗೆ ಗೊತ್ತಿದೆಯೇ ಎಂದು ಕೇಳಿದೆ. ಸ್ವಾರಸ್ಯವೆಂದರೆ ಅವರೂ ಇಂತಹ ಒಂದು ವಾಕ್ಯ ಕನ್ನಡಕ್ಕೆ ಬೇಕು ಎಂದು ತಿಳಿದಿದ್ದರು. ಆದರೆ ಅವರಲ್ಲಿ ಇಂತಹ ವಾಕ್ಯ ಸಿದ್ಧವಿರಲಿಲ್ಲ.

ಇಂತಹ ಒಂದು ವಾಕ್ಯವನ್ನು ಕ್ಷಣದಲ್ಲೇ ಸಿದ್ಧ ಮಾಡಬಲ್ಲ ವ್ಯಕ್ತಿಯೆಂದರೆ ಪ್ರಪಂಚದಲ್ಲೇ ಏಕೈಕ ಕನ್ನಡ ಶತಾವಧಾನಿ ಎಂಬ ಖ್ಯಾತರಾಗಿರುವ ಡಾ| ರಾ. ಗಣೇಶ ಅವರು. ಸರಿ. ಅವರಿಗೇ ಫೋನಾಯಿಸದೆ. ಸಾಯಂಕಾಲ ಪುನ ಫೋನು ಮಾಡಿ. ಎಂದರು. ಸಾಯಂಕಾಲ ಅಲ್ಲ, ಮರುದಿನ ಅವರೇ ಫೋನು ಮಾಡಿದರು. ಕೂಡಲೇ ಕಾಗದ ಪೆನ್ನು ಸಿದ್ಧ ಮಾಡಿಕೊಂಡು ಅವರು ಹೇಳಿದ ವಾಕ್ಯಗಳನ್ನು ಬರೆದುಕೊಂಡೆ. ಅವು ಕೇವಲ ವಾಕ್ಯಗಳಾಗಿರಲಿಲ್ಲ. ಒಂದು ಸಂಪೂರ್ಣ ಅರ್ಥಪೂರ್ಣ ಛಂದೋಬದ್ಧವಾದ ಪದ್ಯವೇ ಆಗಿತ್ತು –


ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ
ಸಞ್ಚಲಿಸೆ, ಬೆಳಕು ಝರಿಯಂತೆ ಹರಿದಾಡಿ ಮೂಡಿ
ಜೀವ ಭಙ್ಗಿಯ ಜಾಣ್ಮೆ ಕಥಿಸೆ ಕೌಶಲ ಕೇಳಿ
ಫಲವೊ ಛಲರಹಿತ ರಸನಿಷ್ಠೈಕ ಮೋದಕೃತಿಯೇ

ಭಂಗಿ ಎಂಬುದನ್ನು ಭಙ್ಗಿ ಎಂದೂ ಬರೆಯಬಹುದು. ಅದೇ ರೀತಿ ಸಂಚಲಿಸೆ ಎಂಬುದನ್ನು ಸಞ್ಚಲಿಸೆ ಎಂದೂ ಬರೆಯಬಹುದು. ಇದು ಸಂಸ್ಕೃತದಲ್ಲಿ ಸಾಮಾನ್ಯವಾಗಿ ಬರೆಯುವ ವಿಧಾನ ಕೂಡ.

ದಯವಿಟ್ಟು ಎಲ್ಲ ಕನ್ನಡ ತಂತ್ರಜ್ಞರು ಈ ಪದ್ಯವನ್ನು ಪ್ರಚಲಿಸಬೇಕಾಗಿ ವಿನಂತಿ.

3 Responses to ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ

  1. Gurudatta

    Very awesome and brilliant poem.. Thanks for posting.. 🙂

  2. Santhosh Sharma

    “ಇಂತಹ ಒಂದು ವಾಕ್ಯವನ್ನು ಕ್ಷಣದಲ್ಲೇ ಸಿದ್ಧ ಮಾಡಬಲ್ಲ ವ್ಯಕ್ತಿಯೆಂದರೆ ಪ್ರಪಂಚದಲ್ಲೇ ಏಕೈಕ ಕನ್ನಡ ಶತಾವಧಾನಿ ಎಂಬ ಖ್ಯಾತರಾಗಿರುವ ಡಾ| ರಾ. ಗಣೇಶ ಅವರು. ಸರಿ. ಅವರಿಗೇ ಫೋನಾಯಿಸದೆ. ಸಾಯಂಕಾಲ ಪುನ ಫೋನು ಮಾಡಿ. ಎಂದರು. ಸಾಯಂಕಾಲ ಅಲ್ಲ, ಮರುದಿನ ಅವರೇ ಫೋನು ಮಾಡಿದರು.” – Fantastic explanation. Thanks for the posting. Salutes to Ra Ganesh.

  3. ಹರೀಶ

    ಅದ್ಭುತವಾಗಿದೆ..ಕನ್ನಡ ಧನ್ಯವಾಯಿತು..

Leave a Reply