ಇನ್ನೊಂದು ಕಥೆ

ಚಿಂತಾಮಣಿ ಕೊಡ್ಲೆಕೆರೆ

ಹೆಂಡತಿಯ ಜೊತೆ ಜಗಳವಾಡಿದ್ದೆ. ಸಿಟ್ಟಿಗೆದ್ದು ಮೆತ್ತಿ ಹತ್ತಿ ಕೂತಿದ್ದಳು. ಮಗುವೂ ಅವಳ ಜೊತೆಸೇರಿತ್ತು. ಹಾಲ್‌ನಲ್ಲಿ ನಾನು ನೆಪಕ್ಕೆ ಪೇಪರ್ ಓದುತ್ತ ಕುಳಿತಿದ್ದೆ. ಹೊರಗಡೆ ಇಣುಕಿದರೆ ಆಕಾಶ ಕಪ್ಪು ಮೋಡಗಳಿಂದ ತುಂಬಿ ಹೊರಗೆಲ್ಲೂ ಹೋಗುವುದು ಸಾಧ್ಯವಿರಲಿಲ್ಲ. ಗುಡುಗು ಅಬ್ಬರಿಸುತ್ತಿತ್ತು. ಆಗಾಗ ಮಿಂಚೂ ಕೋರೈಸಿ ಆಟವಾಡುತ್ತಿತ್ತು. ನಿರಾಸೆಯಿಂದ ಒಳಬಂದು ಕೂರೋಣ ಎನ್ನುವಷ್ಟರಲ್ಲಿ ದೊಡ್ಡ ದೊಡ್ಡ ಮಳೆಹನಿಗಳು ಒಮ್ಮೆಲೇ ಬೀಳಲಾರಂಭಿಸಿದವು. ಮಳೆ ಸುರುವಾಗಿತ್ತು. ವರ್ಷಕಾಲದ ಬಿರುಗಾಳಿಯ ಜತೆಗಿನ ಗಾಢ ಮಳೆ ಚಳಿಯ ನಡುಕವನ್ನೂ ಹುಟ್ಟಿಸಿತು. ಒಳ ಬಂದು ಸೋಫಾದ ಮೇಲೆ ಕಣ್ಣುಮುಚ್ಚಿ ಕೂತೆ.
ಎಲ್ಲಾ ಬಿಟ್ಟು ಇವತ್ತು ಸಿನಿಮಾಕ್ಕೆ ಹೋಗೋಣವೆಂದು ಶಾಂತಾಳ ವರಾತ. ಟಿ.ವಿ.ಯಲ್ಲಿ ಸಿನಿಮಾ ಚೆನ್ನಾಗಿಲ್ಲವಂತೆ. ಟಿ. ವಿ. ಯಲ್ಲಿ ಸಿನಿಮಾ ಯಾವತ್ತು ಚೆನ್ನಾಗಿರುತ್ತದೆ ಹೇಳಿ, ನಮಗಿರುವುದು ಒಂದೇ ರವಿವಾರ, ಅದನ್ನು ಹಾಯಾಗಿ ಮನೆಯಲ್ಲಿದ್ದು, ಮಾತಾಡಿಕೊಂಡು ಕಳೆಯೋಣವೆಂದು ನನ್ನ ಸೂಚನೆ. ಅದು ನನ್ನವಳಿಗೆ ಇಷ್ಟವಾಗಲಿಲ್ಲ. ಆ ಸಿನಿಮಾಮಂದಿರ, ಆ ಕ್ಯೂ, ಆ ಗದ್ದಲ ಯಾವುದೂ ನನಗಾಗದು. `ನಾನು ಬರುವುದು ಸಾಧ್ಯವೇ ಇಲ್ಲ’ ಎಂದೆ. ಅದಕ್ಕೆ ಶಾಂತಾ ಬೇಸರಗೊಂಡಳು. “ಹೇಳಿ, ನೀವು ನಾನು ಹೇಳಿದ ಮಾತನ್ನು ಎಂದಾದರೂ ಕೇಳಿದ್ದಿದೆಯೇ? ನಾನು ಇಡೀ ದಿನ ಮನೆಯಲ್ಲಿದ್ದು ಕೆಲಸ ಮಾಡಿಕೊಂಡು ಸಾಯುತ್ತಿರುತ್ತೇನೆ. ನಿಮಗೆ ವಾರದಲ್ಲಿ ಒಂದು ದಿನ ರಜ. ನನಗೆ? ನನ್ನ ಸುಖದುಃಖ ಯಾವತ್ತಾದರೂ ವಿಚಾರಿಸಿದ್ದೀರ? ಸಿನಿಮಾ ಬೇಡ, ಸುಮ್ಮನೇ ಒಂದು ವಾಕ್ ಮಾಡಿ ಬರೋಣ ಅಂತ ಒಂದುಸಲವಾದರೂ ಕರೆದಿದ್ದೀರ? ನಾನಿಲ್ಲಿ ಯಂತ್ರದಂತೆ ದುಡಿಯುತ್ತಿರಬೇಕು. ನಿಮಗೆ ನೀವಾಯಿತು, ನಿಮ್ಮ ಗೆಳೆಯರಾಯಿತು….” ಈ ವಾಕ್ಪ್ರವಾಹ ನಿಲ್ಲಲ್ಲೇ ಇಲ್ಲ. ಇನ್ನೂ ಅರ್ಧಘಂಟೆ ಮುಂದುವರಿಯಿತು. ಇಷ್ಟು ಬೈಸಿಕೊಂಡ ಮೇಲೆ ಸಿನಿಮಾಕ್ಕೆ ಹೊರಡಲು ನನಗೇನು ತಲೆಗಿಲೆ ಕೆಟ್ಟಿದೆಯೇ? `ನೀನು ಏನಾದರೂ ಮಾಡಿಕೋ, ಸಿನಿಮಾ ಸುದ್ದಿ ಮಾತ್ರ ಹೇಳಬೇಡ’ ಎಂದು ಬೆಡ್ ರೂಮಿಗೆ ಹೋಗಿ ಬಿದ್ದುಕೊಂಡೆ. `ನನ್ನ ಪ್ರಾರಬ್ಧ’ ಎನ್ನುತ್ತ ಪಾತ್ರೆ ಕುಕ್ಕಿದಳು. ಎಲ್ಲವನ್ನೂ ಮೀರಿನಿಲ್ಲಲು ಪ್ರಯತ್ನಿಸಿದೆ.
ಶಾಂತಾ ಹೇಳುವುದಲ್ಲ ಸುಳ್ಳು ಎಂದು ಹೇಳಲಾರೆ. ಮನೆ ಎಂದು ಇಡೀ ದಿನ ದುಡಿದು ಅವಳು ಸಣ್ಣಗಾಗುತ್ತಿರುವುದು ನಿಜ. ಅವಳಿಗೆ ರಜೆಯೇ ಇಲ್ಲ ಎಂಬುದೂ ಒಪ್ಪಬೇಕಾದ ಮಾತೇ. ಆದರೆ ಅವಳ ಮನರಂಜನೆಯ ಕಲ್ಪನೆ ಕುರಿತು ನನಗೆ ವಿಷಾದ. ಆ ಬಸ್‌ನಲ್ಲಿ ಜೋತಾಡಿಕೊಂಡು ಮೆಜೆಸ್ಟಿಕ್‌ಗೆ ಹೋಗಬೇಕು, ಆ ಕ್ಯೂನಲ್ಲಿ ಎರಡು ಘಂಟೆ ನಿಲ್ಲಬೇಕು, ಆಮೇಲೆ ಸಿನಿಮಾ ಸುರುವಾಗಲು ಇನ್ನೂ ಒಂದು ಘಂಟೆ ಇರುತ್ತದೆ, ತಿರುಗಾಡಿ ತಿರುಗಾಡಿ ಬೋರ್ ಹೊಡೆಸಿಕೊಳ್ಳಬೇಕು. ಇಷ್ಟೆಲ್ಲ ಆಗಿ ಸಿನಿಮಾಕ್ಕೆ ಹೋಗಿ ಕೂತ ಮೇಲೆ ನನಗೆ ವಾಪಸು ಹೋಗುವಾಗಿನ ಕಷ್ಟಗಳ ಚಿಂತೆ ಆರಂಭವಾಗಿರುತ್ತದೆ. ನೀವೇ ಹೇಳಿ, ಇಷ್ಟೊಂದು ಆಯಾಸ ಮಾಡಿಕೊಂಡು ಸಿನಿಮಾ ನೋಡಿದ್ದರಿಂದ ಬಂದ ಲಾಭವೇನು? `ಹೋಗಿ ಹೋಗಿ ಇಂಥ ಸಿನಿಮಾಕ್ಕೆ ಕರೆದುಕೊಂಡು ಹೋದರು’ ಎಂದು ಆಮೇಲೆ ಆಕ್ಷೇಪಣೆ ಬಂದರೂ ಬರಬಹುದು. ಆದ್ದರಿಂದ ಸಿನಿಮಾ ಅಂದರೆ ನಾನು ಮಾರು ದೂರ ನಿಲ್ಲುತ್ತೇನೆ. ಈಗ ಮಳೆ ಬಂದಿರುವುದೂ ನನ್ನ ನಿರ್ಧಾರ ಒಳ್ಳೆಯದಾಯಿತು ಎಂಬುದನ್ನೇ ತೋರಿಸುತ್ತಿದೆ.
ಈ ಹೊತ್ತಿಗೆ ಬಾಗಿಲು ಧಡಧಡ ಎಂದು ಬಡಿದ ಸಪ್ಪಳ. ಜೊತೆಗೇ `ಸ್ವಲ್ಪ ಬಾಗಿಲು ತೆರೆಯುತ್ತೀರ, ಪ್ಲೀಸ್’ ಎಂಬ ಆರ್ತಧ್ವನಿ. ಈಗಿತ್ತಲಾಗಿ ನಾವು ನಗರಗಳಲ್ಲಿ ಎಷ್ಟು ಇನ್‌ಸೆನ್ಸಿಟೀವ್ ಆಗಿದ್ದೇವೆಂದರೆ ಪಕ್ಕದ ಮನೆಯಲ್ಲೇ ಆಕ್ರಂದನ ಕೇಳಿಸಿದರೂ ಯಾರೂ ಅತ್ತ ಹೋಗುವುದಿಲ್ಲ. ಬದಲಾಗಿ ನಾವು ನಮ್ಮ ಭದ್ರತೆ ಮಾಡಿಕೊಳ್ಳುತ್ತಿರುತ್ತೇವೆ. ಇದನ್ನು ನಮ್ಮದೇ ರೀತಿಯಲ್ಲಿ ನಾವು ಸಮರ್ಥಿಸಲೂ ಬಲ್ಲೆವು. ಹೀಗೆಲ್ಲ ಯೋಚಿಸುತ್ತಿದ್ದಂತೆ ಮತ್ತೆ ಬಾಗಿಲು ಬಡಿದ ಸಪ್ಪಳ.
ನಾನು ಧೈರ್ಯಮಾಡಿ ಕದ ತೆರೆದೆ. `ಒಳಕ್ಕೆಬರಲೇ, ಚಳಿಯಾಗುತ್ತಿದೆ’ ಎಂದು ಗಡಗಡ ನಡುಗುತ್ತಿದ ವ್ಯಕ್ತಿ ಕೇಳಿತು. ಉಟ್ಟ ಬಟ್ಟೆಯೆಲ್ಲ ನೀರು ಸುರಿಯುತ್ತಿತ್ತು. ಧ್ವನಿಯೂ ಮಳೆ ನೀರಲ್ಲಿ ಅದ್ದಿಬಂದಂತ್ತಿತ್ತು. `ಬನ್ನಿ ಒಳಕ್ಕೆ’ ಎಂದು ಕರೆದೆ. ಬಂದ ವ್ಯಕ್ತಿ ತುಂಬ ಮುಜುಗರಕ್ಕೆ ಒಳಗಾದಂತಿತು. `ನಿಮಗೆ ತೊಂದರೆ ಕೊಡುತ್ತಿದ್ದೇನೆ, ನಾನು ಇತ್ತಕಡೆಯೇ ನಿಂತಿರುತ್ತೇನೆ’ ಎಂದ. ಒಳಹೋಗಿ ಎರಡು ಬಟ್ಟೆ ತಂದುಕೊಟ್ಟೆ. “ಬಾತ್‌ರೂಮಿಗೆ ಹೋಗಿ ನಿಮ್ಮ ಒದ್ದೆಬಟ್ಟೆಗಳನ್ನು ತೆಗೆದು ಹಿಂಡಿ ಹರವಿಡಿ. ಈ ಮಳೆ ಸಧ್ಯಕ್ಕೆ ನಿಲ್ಲಲಾರದು. ಕನಿಷ್ಠ ಇನ್ನೂ ಎರಡು ಘಂಟೆ ಸುರಿದೀತು. ಸಂಕೋಚ ಮಾಡಿಕೊಳ್ಳ ಬೇಡಿ” ಎಂದೆ. ಬಂದ ವ್ಯಕ್ತಿ ನಾನು ಹೇಳಿದಂತೆಯೇ ಮಾಡಿತು.
`ನಿಮ್ಮ ಹೆಸರು?’ ಎಂದೆ
`ಕಥೆ’ ಎಂದ.
`ಆಂ’ ಏನೆಂದಿರಿ ನಿಮ್ಮ ಹೆಸರು?
`ಕಥೆ’ ಪುನರುಚ್ಚರಿಸಿದ.
`ಕಥೆ! ಯಾಕೆ ಅಂತ ಹೆಸರು?’
`ನಾನು ಕಥೆ ಸಾರ್, ಕಥೆ’
`ಕೇಳಿಸಿತು, ಯಾಕೆ ಅಂಥ ಹೆಸರು?’
`ನೀವು ಕಥೆಗಳನ್ನು ಓದಿಲ್ಲವೇ?’
`ಓದಿದ್ದೇನೆ, ಕೇಳಿದ್ದೇನೆ’
`ಈಗ ನೋಡುತ್ತಿರುವುದೂ ಅದನ್ನೆ’
ನನಗೆ ದಿಗಿಲಾಯಿತು ಈ ವ್ಯಕ್ತಿ ಕುಡಿದು ಗಿಡಿದು ಬಂದಿಲ್ಲವಷ್ಟೆ?
`ಯಾಕ್ ಸಾರ್, ಸುಮ್ಮನೆ ಕುಳಿತುಬಿಟ್ಟಿರಿ!’
`ಏನಿಲ್ಲ, ಏನಿಲ್ಲ’ ಅಂದೆ.
`ನಿಮಗೆ ನಂಬಲಿಕ್ಕೇ ಆಗುತ್ತಿಲ್ಲವೆಂದು ಕಾಣತ್ತದೆ’
`ಇಲ್ಲ ನಂಬುತ್ತಿದ್ದೇನೆ, ಕಾಣುತ್ತಿದ್ದೇನಲ್ಲ!’ ಉಗುಳು ನುಂಗಿದೆ.
`ಸಾರ್ ಕಥೆಗೆ ಕಾಲಿಲ್ಲ ಅನ್ನುತ್ತಾರೆ. ಆದರೆ ಕಥೆಗೆ ಕಾಲುಗಳಿವೆ. ನನ್ನನ್ನು ನೋಡಿ ಕಾಲುಗಳಿಲ್ಲದ ಕಥೆ ಚಲಿಸಲು ಸಾಧ್ಯವೆ?’
`ನಿಜ’ ನಾನು ಮೋಡಿಗೊಳಗಾಗಿದ್ದೆ.
`ನನಗೆ ಉತ್ಸಾಹ ಬಂದಾಗಲೆಲ್ಲ ನಾನು ಸಂಚರಿಸುತ್ತಿರುತ್ತೇನೆ. ನನಗೆ ಅಣಿಮಾ ಲಘಮಾ ಸಿದ್ಧಿಗಳಿವೆ. ನಿಮ್ಮ ಈ ಕಿವಿಯಿಂದ ನುಸುಳಿ ಆ ಕಿವಿಯಿಂದ ಹೊರಬೀಳಬಲ್ಲೆ. ಈ ಮನೆಯನ್ನೇ ನುಂಗುವಷ್ಟು ದೊಡ್ಡದಾಗಲೂ ಬಲ್ಲೆ. ಇಂದೂ ಹೀಗೇ ಸಂಚರಿಸುತ್ತಿರುವಾಗ ಆ ಬಿರುಗಾಳಿ ನನ್ನನ್ನು ಇತ್ತ ತಳ್ಳಿತು. ನಿಮ್ಮನ್ನು ನೊಡಬೇಕು ಅಂತ ತುಂಬಾ ದಿವಸದಿಂದ ಆಸೆ ಇತ್ತು ಸಾರ್, ನಿಮ್ಮ ಪರಿಚಯವಾಗಿದ್ದು ನನ್ನಗೆ ತುಂಬಾ ಸಂತೋಷ.’
`ನನಗೂ ತುಂಬಾ ಸಂತೋಷ, ಇಲ್ಲವಾದರೆ ಕಥೆಗೆ ಕಾಲು ಕೈತಲೆ ಎಲ್ಲಾ ಇರುತ್ತದೆ ಎಂದು ನಾನು ನಂಬುತ್ತಲೆ ಇರಲ್ಲಿಲ್ಲ.’
ಕಥೆ ನಕ್ಕ. ಹತ್ತಿರ ಬಂದು `ಅಂದ ಹಾಗೆ ಇಂದು ನೀವು ನಿನ್ನ ಹೆಂಡತಿ ಜೊತೆ ಜಗಳವಾಡಿದ್ದೀರ?’ ಎಂದು ಕೇಳಿದ.
`ಇಲ್ಲವಲ್ಲ!’ ಎಂದೆ.
`ಯಾಕೆ ಸುಳ್ಳು ಹೇಳುತ್ತೀರಿ ಹೇಳಿ, ನಿಮ್ಮ ಮನೆಯ ವಾತಾವರಣವನ್ನು ಮೂಸಿಯೇ ಇಲ್ಲಿ ಏನೋ ಜಗಳವಾಗಿದೆ ಎಂದು ನಾನು ತಿಳಿಯಬಲ್ಲೆ ‘
`ಅಂದ ಮೇಲೆ ನಾನು ತಿಳಿಸುವಂಥದ್ದು ಏನೂ ಇಲ್ಲವಲ್ಲ’ ಎಂದು ಅಸಮಾಧಾನದಿಂದ ಹೇಳಿದೆ.
ಕೆಲಹೊತ್ತು ಮೌನ. ಆ ಮೇಲೆ ಅವನೇ `ನಾನು ನಿಮಗೊಂದು ಕಥೆ ಹೇಳಲೇ?’ ಅಂದ.
ಹೇಳು’ ಅಂದೆ.
`ಯಾವ ಕಥೆ ಹೇಳಲಿ?’
`ಯಾವುದು ಬೇಕಾದರೂ ಹೇಳು’
`ಅಲ್ಲ, ಏಳು ಸುತ್ತಿನ ಕೋಟೆಯ ಒಳಗೆ ಏಳು ಹಾಸಿಗೆಯ ಮೇಲೆ ಏಳು ಹೊದಿಕೆಗಳನ್ನು ಹೊದ್ದು ಮಲಗಿರುವ ಸುಂದರಿ ರಾಜಕುಮಾರಿಯ ಕಥೆ ಹೇಳಲೆ?’
`ಕಥೆ ಬೇಡ, ಅಲ್ಲಿಗೇ ನನ್ನನ್ನು ಕರೆದುಕೊಂಡು ಹೊಗು. ಆ ರಾಜಕುಮಾರಿಯನ್ನು ನಾನು ನೊಡಬೇಕು’ ಎಂದು ಹೇಳೋಣ ಎನ್ನಿಸಿತು. ನನ್ನ ಮೌನವನ್ನು ತನಗೆ ಉತ್ತೇಜನ ಎಂದು ತಿಳಿದನೋ ಏನೋ!
ನನ್ನ ಗೆಳೆಯನ ಅಜ್ಜಿ ಹೇಳುತ್ತಿದ್ದ ಕಥೆ ಅದು. ಆಗ ನಾನು ಚಿಕ್ಕ ಹುಡುಗನಾಗಿದ್ದೆ, ನನ್ನ ಅಪ್ಪ, ಅಮ್ಮ ಪಕ್ಕದ ಮನೆಯಲ್ಲ್ಲಿ ನನ್ನನ್ನು ಬಿಟ್ಟು ತಿಂಗಳ ಸಾಮಾನು ತರಲು ಅಂಗಡಿಗೆ ಹೋಗಿದ್ದರು. ಚಿಮಣಿ ದೀಪದ ಎದುರು ನಮ್ಮಿಬ್ಬರನ್ನು ಕೂರಿಸಿಕೊಂಡು ಮಗ್ಗಿ, ಬಾಯಿಪಾಠ, ಶ್ಲೋಕ ಎಲ್ಲ ಹೇಳಿಸಿ ಅವಳು ಹೇಳಿದ್ದಳು ಈ ಕಥೆಯನ್ನು.
ಏಳು ಕೋಟೆಯ ಒಳಗೆ ಒಬ್ಬ ರಾಜಕುಮಾರಿ. ಎಷ್ಟು ಸುಂದರಿ ಅವಳು!
ಅವಳನ್ನು ನೋಡಲಿಕ್ಕೆ ಎರಡು ಕಣ್ಣುಗಳು ಸಾಲವು.
ನೋಡಿದಷ್ಟು ನೋಡಬೇಕೆನ್ನಿಸಿಸುವಂಥ ಚೆಲುವು.
ನೋಡಿದಷ್ಟೂ ನೋಡಬೇಕೆನ್ನಿಸುವಂಥ ಚೆಲುವು.
ಏಳು ಹಾಸಿಗೆಗಳು ಒಂದರ ಮೇಲೊಂದು
ಅದರ ಮೇಲೆ ಮಲಗಿದ್ದಾಳೆ ನಮ್ಮ ರಾಜಕುಮಾರಿ
ನಿದ್ದೆಯೂ ಅವಳ ಸೌಂದರ್ಯಕ್ಕೆ ಶೋಭೆಯಂತಿದೆ.
ಎಂಥ ಚೆಲುವು ಅವಳದು!..
ಅಜ್ಜೀ, ಅವಳ ಸೌಂದರ್ಯದ ವರ್ಣನೆ ಸಾಕು. ಮುಂದೇನಾಯಿತು ಹೇಳು ಎನ್ನುವನು ಗೋಪಿ.
`ಅಜ್ಜೀ, ನೀನು ಪ್ರಾಯದಲ್ಲಿ ಅಷ್ಟು ಚಂದ ಇದ್ದೆಯಾ?’
ಇನ್ನೊಂದು ಪ್ರಶ್ನೆ
`ಥೂ ಹೋಗಿ ಮಕ್ಕಳೇ ನಿಮಗೆ ಕಥೆ ಹೇಳುವುದಿಲ್ಲ’
`ಇಲ್ಲ ಅಜ್ಜಿ ಹೇಳು’ ಎಂದು ಪುನಃ ಗೋಗೆರೆದ ಬಳಿಕ ಅಜ್ಜಿ, ಕಥೆ ಮುಂದುವರಿಸುವಳು, ನಾವು ಮಧ್ಯದಲ್ಲಿ ಮತಾಡಬಾರದು ಎಂಬ ಶರತ್ತಿನೊಂದಿಗೆ.
ಆ ಕಾಡಿನಲ್ಲಿ ರುವನು ಒಬ್ಬ ರಾಕ್ಷಸ.
ಕೋರೆ ಹಲ್ಲುಗಳು, ಮೇಲೆರಡು ಕೋಡುಗಳು, ತೆಂಗಿನ ಮರದಷ್ಟು ದೊಡ್ಡ ತೋಳುಗಳು, ಕಲ್ಲು ಕಂಭದಷು ದಪ್ಪ್ಪ ಕಾಲುಗಳು, ನಾಲ್ಕು ಜನರನ್ನು ತೂಗಿ ಬಿಡುವಂಥ ದೊಡ್ಡ ಮೀಸೆ, ದಿನಕ್ಕೆ ನಾಲ್ಕು ಮನುಷ್ಯರು ಅವನ ಆಹಾರ ಅವನ……
ಎಂದು ಅಜ್ಜಿ ಮುಂದೆ ಹೇಳುತ್ತಿದ್ದಂತೆ `ಅಯ್ಯೋ ಅಜ್ಜೀ, ರಾಕ್ಷಸನ ಕಥೆ ಬೇಡ ರಾತ್ರಿ ಹೊತ್ತು ಹೆದರಿಕೆಯಾಗುತ್ತದೆ’ ಎಂದು ಕಥೆ ಹೇಳದಂತೆ ತಡೆದರೆ “ಹೋಗಿ, ಹೋಗಿ, ಕಥೆಯಂತೆ ಕಥೆ. ಕಥೆ ಕಥೆ ಕಾರಣ” ಎಂದು ಅಜ್ಜಿ ಬೈದು ಕಳಿಸುತ್ತಿದ್ದಳು.
ಅದನ್ನೆಲ್ಲ ನೆನಪಿಗೆ ತಂದುಕೋಳುತ್ತ `ಈ ಕಥೆಯನ್ನು ನಾನು ಕೇಳಿದ್ದೇನೆ, ಬಿಡು’ ಎಂದೆ.
ರಾಮಾಯಣ ಮಹಾಭಾರತ ಎಲ್ಲ ನಿಮಗೆ ಗೊತ್ತೇ ಇರುತ್ತದೆ. ಅರೇಬಿಯನ್ ನೈಟ್ಸ್?
`ಗೊತ್ತು’
`ಹಾಗಾದರೆ ಯಾವ ಕಥೆ ಹೇಳಲಿ ನಿಮಗೆ?’ ಎಂದ.
“ಯಾವುದೂ ಬೇಡ ಬಿಡು” ಎಂದೆ.
ಸ್ವಲ್ಪ ಹೊತ್ತಿನ ಬಳಿಕ `ನೀವು ಹೆಂಡತಿಗೆ ಹೆದರುತ್ತೀರ?’ ಎಂದು ಕೇಳಿದ. ನಾನು ಸುಮ್ಮನಿದ್ದೆ.
`ಯಾರು ಹೆದರೊಲ್ಲ ಸಾರ್? ಎಲ್ಲರೂ ಹೆಂಡತಿಗೆ ಹೆದರೋರೇ. ಒಂದು ಸಲ ಏನಾಯ್ತಂತೆ ಗೊತ್ತ? ಒಬ್ಬ ರಾಜ ತನ್ನ ರಾಜ್ಯದಲ್ಲಿರೋ ಎಲ್ಲ ಗಂಡಸರಿಗೂ ಆಜ್ಞೆ ಮಾಡಿದ. ಹೆಂಡತಿಗೆ ಹೆದರೋರು ಯಾರು, ಹೆದರದೋರು ಯಾರು, ಒಂದು ಪಟ್ಟಿ ಮಾಡಬೇಕು, ಬಂದು ಸಾಲಾಗಿ ನಿಲ್ಲಿ ಅಂತ’.
ಹೆಂಡತಿಗೆ ಹೆದರೋರ ಸಾಲು ತುಂಬಾ ದೊಡ್ಡ್ಡದಾಗಿತ್ತು . ಹೆದರದೇ ಹೋದವರ ಸಾಲಲ್ಲಿ ಒಬ್ಬನೇ ಒಬ್ಬ `ಭೇಷ್, ನೀನೊಬ್ಬನಾದರೂ ಹೆಂಡತಿಗೆ ಹೆದರೋದಿಲ್ಲವಲ್ಲಾ’ ಅಂತ ರಾಜ ಅವನನ್ನು ಅಪ್ಪಿ ಕೊಳ್ಳೋಕೆ ಹೋದನಂತೆ. ಆಗ ಆ ಮನುಷ್ಯ `ಮಹಾ ಪ್ರ ಭೂ, ನಾನೂ ಹೆಂಡತಿಗೆ ಹೆದರುವವನೇ, ಆದರೆ ನನ್ನ ಹೆಂಡತಿ ಹೀಗೆ ಇದೇ ಸಾಲಲ್ಲಿ ನಿಂತುಕೊ ಎಂದು ಹೇಳಿದ್ದಾಳೆ, ರಾಜಾಜ್ಞೆ ಮೀರಬಹುದು, ಹೆಂಡತಿಯ ಆಜ್ಞೆಯನ್ನಲ್ಲ’ ಎಂದನಂತೆ.
ಕೇಳಿದ್ದೇ ಜೋಕು. ಆದರೂ ನಕ್ಕೆ. ಕಥೆ ಆ ಹಾಸ್ಯವನ್ನು ಹೇಳಿದ ಶೈಲಿ ಹಾಗಿತ್ತು . ಜೊತೆಗೇ ಚುಚ್ಚಿದೆ `ಅಲ್ಲಯ್ಯ ಕಥೆ ಅಂತ ಹೇಳ್ಕೋತೀಯ. ಆದರೆ ನಾನು ಈ ತನಕ ಕೇಳಿರದ ಒಂದೇ ಒಂದು ಕಥೆ ಹೇಳೋಕೆ ನಿನ್ನ ಹತ್ತಿರ ಆಗಿಲ್ಲವಲ್ಲ’ ಎಂದೆ.
`ಅದನ್ನೇ ಹುಡುಕ್ತಾ ತಿರುಗ್ತಾ ಇದೀನಿ ಸಾರ್, ನಿಮಗೇನಾದರೂ ಹೊಸ ಕಥೆ ಗೊತ್ತೆ?’ ವಿನಿಯದಿಂದ ಪ್ರಶ್ನಿಸಿದ.
ನಾನೇ ಅವನಿಗೆ ಕಥೆ ಹೇಳಬೇಕಂತೆ! ಎಂದೂ ಕೇಳಿರದ ಕಥೆ. ಕಥೆಗೇ ಗೊತ್ತಿರದ ಕಥೆ. ಮನಸ್ಸಿನಲ್ಲೇ ಯೋಚಿಸುತ ಹೋದೆ. ಹೊಸದೇ ಒಂದು ಕಥೆ ಹೇಳೋಣ ಎಂದು ಕಥೆ ಕಟ್ಟುತ್ತ ಹೋದೆ. ಅದು ವಾಪಸು ಬಂದು ಒಂದು ಹಳೆಯ ಕಥೆಯೇ ಆಗುತ್ತಿತ್ತು. ಪೌರಾಣಿಕವಾಗಿ ಕಥೆ ಹೆಣಿಯೋಣವೆಂದರೆ ವ್ಯಾಸ, ವಾಲ್ಮೀಕಿಯವರು, ಐತಿಹಾಸಿಕವಾಗಿ ಹೇಳಬೇಕೆಂದರೆ ಗಳಗನಾಥರು, ಸಾಮಾಜಿಕವಾಗಿ ಹೇಳೋಣವೆಂದರೆ ಅ. ನ. ಕೃ, ತರಾಸು, ಗಂಭೀರವಾಗಿ ನವ್ಯ, ನವ್ಯೋತ್ತರದ ಶೈಲಿಯಲ್ಲಿ ಹೇಳೋಣವೆಂದರೆ ನನ್ನ ಸಮಕಾಲೀನ ಹಿರಿಕಿರಿಯ ಲೇಖಕರು, ಗೆಳೆಯರು…. ಹೀಗೆ ಹೊಸಕಥೆ ಸಿಕ್ಕಲೇ ಇಲ್ಲ. ತಾಳ್ಮೆಗೆಟ್ಟ ಕಥೆ `ಏನು ಯೋಚಿಸುತ್ತಿದ್ದೀರ?’ ಎಂದ.
`ಕಥೆ’ ಎಂದೆ.
`ಗುಡ್, ಗುಡ್, ಹೊಸ ಕಥೆ ಹೇಳಿ ಸಾರ್, ಹೊಸ ಕಥೆ’ ಪೀಡಿಸತೊಡಗಿದ.
`ಇನ್ನೊಂದು ವಿಷಯ ಗೊತ್ತ ಸಾರ್, ಕಥೆಗಳಿಗೂ ಬೇರೆ ಬೇರೆ ಬಟ್ಟೆಹಾಕಬಹುದು. ಮನೆಯಲ್ಲಿರೋವಾಗ ಪಂಚೆ, ಹೊರಗಡೆ ಆಫೀಸಿಗೆ ಟೈ ಹೀಗೆ ಬೇರೆ ಬೇರೆ ಡ್ರೆಸ್ ಮಾಡಿದರೂ ನೀವು ನೀವೆ ಅಲ್ಲವೇ ಸಾರ್, ಹಾಗೇ ಕಥೆ ಕೂಡ’
ಇನ್ನೂ ಏನೇನೋ ಹೇಳತ್ತಿದ್ದ. ಅಷ್ಟು ಹೊತ್ತಿಗೆ ಮಳೆ ನಿಂತಿತ್ತು. `ಇನ್ನು ನಾನು ಹೊರಡುತ್ತೇನೆ’ ಎಂದ. `ಸರಿ’ ಎಂದೆ. ಬಾತ್‌ರೂಮಿಗೆ ಹೋದ, `ಬಟ್ಟೆ ಇಲ್ಲವಲ್ಲ ಸಾರ್’ ಎಂದ. `ಅಂ?’ ಎಂದೆ. `ಒಳಗಡೆ ಇಟ್ಟ ನನ್ನ ಬಟ್ಟೆಯೇ ಇಲ್ಲ’
`ನಾವು ಇಲ್ಲೇ ಇದ್ದೆವಲ್ಲ’ ನಾನು ಆಶ್ಚರ್ಯಪಟ್ಟೆ.
`ಇದ್ದೆವು’ ಎನ್ನುತ್ತ ಕಥೆ ಚಡಪಡಿಸಿ ನಿಂತ.
`ಛೇ, ಏನಾಗಿ ಹೋಯಿತು? ಎಲ್ಲೂ ಹೋಗಿರಲಾರದು. ಹುಡುಕೋಣ’ ಎಂದು ಅವನ ಬಟ್ಟೆಗಳನ್ನು ಹುಡುಕಲಾರಂಭಿಸಿದೆ. ಅವನಿಗೇನೆನ್ನಿಸಿತೋ `ಇರಲಿ ಬಿಡಿಸಾರ್’ ಅಂದ.
`ಇರಲಿಬಿಡಿ ಅಂದರೆ ನೀವು ಪಾಪ ಹೋಗೋದು ಹೇಗೆ?’
`ಸಿಂಪಲ್, ನಿಮ್ಮ ಒಂದು ಜೊತೆ ಅಂಗಿ, ಪ್ಯಾಂಟು ಕೊಡಿ. ನನ್ನ ಮೈ ಅದಕ್ಕೆ ತಕ್ಕಂತೆ ಹಿಗ್ಗಿಸಿಕೊಳ್ಳುವ ಇಲ್ಲವೇ ಕುಗ್ಗಿಸಿಕೊಳ್ಳುವ ಜವಾಬ್ದಾರಿ ನನ್ನದು. ನಾನು ಇನ್ನೊಮ್ಮೆ ಬರುವ ಹೊತ್ತಿಗೆ ನನ್ನ ಬಟ್ಟೆ ಹುಡುಕಿಡಿ, ಹಾಗೇ ಹೊಸ ಕಥೆ ಕೂಡ’ ಎಂದು ಹೇಳಿ ಹೆ ಹೆ ಹೆ ಎಂದ.
`ಸರಿ’ ಎನ್ನಲೇಬೇಕಾಯಿತು. ಹೊರಬಂದು ಬೀಳ್ಕೊಟ್ಟೆ, ಗೆಳೆಯನನ್ನು. ಬಿಳಿ ಆಕಾಶದಲ್ಲಿ ಮಂಜಿನಂತೆ ತೇಲಿಹೋದ, ಹರಿವ ನೀರಿನಲ್ಲಿ ಮೀನಿನಂತೆ ತೇಲಿಹೋದ, ಬೀಸುವ ಗಾಳಿಯಲ್ಲಿ ಉಸಿರಾಗಿ ಕರಗಿ ಹೋದ.
ಅವನಿಗೆ ನಾನು ಕೈ ಬೀಸುತ್ತಲೇ ಇದ್ದೆ…
ಸೋಫಾದ ಮೇಲೇ ಕುಳಿತೇ!
`ಯಾರಿಗೆ ಕೇ ಬೀಸುತ್ತಿದ್ದೀರಿ?’ ಎಂದುಳು ಮಡದಿ.
ಗಡಬಡಿಸಿ ಪ್ರಕ್ಞಾವಸ್ಥೆಗೆ ಬಂದೆ `ಓ ರಾಣಿ ಸಾಹೇಬರಿಗೆ ಸಿಟ್ಟು ಇಳಿಯಿತೇ?’ ಎಂದೆ. ನಕ್ಕಳು. `ಈ ಮಳೆಯಲ್ಲಿ ಹೊರಗಡೆ ಹೋಗಿದ್ದರೆ ಎಷ್ಟು ಕಷ್ಟವಾಗುತ್ತಿತ್ತು’ ಎಂದು ಹೂವಂತೆ ನಕ್ಕಳು. ಅವಳ ಕೈಯಲ್ಲಿ ಇನ್ನೊಂದು ಹೂವಂತೆ ನಮ್ಮ ಮಗು ಆಶಾ. ಪ್ರೀತಿಯಿಂದ ಅವಳ ತಲೆ ನೇವರಿಸಿದೆ. ಮಾತಾಡುತ್ತಾ ಗಾಲ್ಕನಿಗೆ ಬಂದು ನಿಂತೆವು. ನಿರಭ್ರವಾಗಿದ್ದ ಆಕಾಶ ಮತ್ತೆ ಮೋಡ ಕವಿದು ಒಮ್ಮೆಲೇ ಹುಚ್ಚು ಹಿಡಿದಂತೆ ಮಳೆ ಸುರಿಯಲಾರಂಭಿಸಿತು.
ನಮ್ಮ ಕಥೆಗೆ ಏನಾಯಿತೋ! ಯಾರ ಮನೆಗೆ ಹೋಗಿ ಬಾಗಿಲು ತಟ್ಟುವನೋ!
`ನಾನು ಅವನಿಗೆ ನನ್ನ ಅಂಗಿ, ಪ್ಯಾಂಟು ಕೊಟ್ಟು ಕಳಿಸಿದೆ’ ಎಂದೆ.
`ಯಾರಿಗೆ?’ ಎಂದಳು ಶಾಂತಾ.

Leave a Reply