ಆಪಲ್ ಐಫೋನ್ – ಪರ್ವತ ಪ್ರಸವ?
-ಡಾ. ಯು. ಬಿ. ಪವನಜ
ಕೆಲವು ಕಂಪೆನಿಗಳಿವೆ ಏನು ಮಾಡಿದರೂ ಸುದ್ದಿಯಾಗುತ್ತದೆ. ಈ ಪಟ್ಟಿಯಲ್ಲಿ ಆಪಲ್ ಕಂಪೆನಿಯ ಹೆಸರೂ ಸೇರಿದೆ. ಆಪಲ್ ಕಂಪೆನಿ ಒಂದು ಕಾಲದಲ್ಲಿ ವೈಯಕ್ತಿಕ ಗಣಕಗಳು (ಪರ್ಸನಲ್ ಕಂಪ್ಯೂಟರ್) ಮನೆಮಾತಾಗುವಂತೆ ಮಾಡಿದ ಕಂಪೆನಿ. ಐಬಿಎಂ ಮತ್ತು ಮೈಕ್ರೋಸಾಫ್ಟ್ನವರ ಹೊಡೆತದಿಂದಾಗಿ ತತ್ತರಿಸಿ, ಇನ್ನೇನು ಬಾಗಿಲು ಹಾಕಬೇಕೆಂದುಕೊಂಡಿದ್ದಾಗ ಐಪ್ಯಾಡ್ ಮೂಲಕ ಮತ್ತೆ ಚೇತರಿಸಿಕೊಂಡಿತು. ಎಂಪಿ-3 ಪ್ಲೇಯರ್ಗಳ ಲೋಕದಲ್ಲಿ ಐಪ್ಯಾಡ್ ತುಂಬ ಖ್ಯಾತಿಯನ್ನು ಹೊಂದಿದೆ. ಈ ಖ್ಯಾತಿಯನ್ನೇ ಬಂಡವಾಳವನ್ನಾಗಿಸಿಕೊಂಡು ಆಪಲ್ ಕಂಪೆನಿ ಇತ್ತೀಚೆಗೆ ಐಫೋನ್ ಎಂಬ ಹೆಸರಿನ ಮೊಬೈಲ್ ಫೋನ್ ತಯಾರಿಸಿ ಅಮೆರಿಕಾದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಆಪಲ್ ಐಪ್ಯಾಡ್ನ ಜನಪ್ರಿಯತೆ ಎಷ್ಟಿದೆಯೆಂದರೆ ಐಫೋನ್ ಬಿಡುಗಡೆಯ ದಿನ ಬೆಳಿಗ್ಗೆ 5 ಘಂಟೆಯಿಂದಲೇ ಜನ ಅಂಗಡಿಗಳ ಮುಂದೆ ಸಾಲು ನಿಂತಿದ್ದರು. ಮೊದಲ ವಾರದಲ್ಲೇ ಲಕ್ಷಕ್ಕಿಂತ ಅಧಿಕ ಐಫೋನ್ ಮಾರಾಟವಾಗಿತ್ತು. ಐಫೋನ್ನಲ್ಲಿ ಅಂತಹದ್ದೇನಿದೆ? ಅದನ್ನೇ ಈಗ ಸ್ವಲ್ಪ ಸ್ಥೂಲವಾಗಿ ಪರಿಶೀಲಿಸೋಣ.
ಚುಟುಕವಾಗಿ ಹೇಳುವುದಾದರೆ ಐಪ್ಯಾಡ್ ಮತ್ತು ಮೊಬೈಲ್ ಫೋನ್ಗಳಿಗೆ ಕಸಿ ಮಾಡಿದರೆ ಆಗ ಐಫೋನ್ ಆಗುತ್ತದೆ. ಐಫೋನ್ನಲ್ಲಿ ಆಪಲ್ನದ್ದೆ ಹಕ್ಕುಸ್ವಾಮ್ಯವಾಗಿರುವ ಐಟ್ಯೂನ್ ಮಾತ್ರವಲ್ಲದೆ ಎಂಪಿ-3 ವಿಧಾನದ ಹಾಡುಗಳನ್ನೂ ಆಲಿಸಬಹುದು. ಹಾಡುಗಳನ್ನು ಶೇಖರಿಸಲು 4 ಅಥವಾ 8 ಗಿಗಾಬೈಟ್ಗಳಷ್ಟು ಜಾಗವಿದೆ. ಅದರ ಪರದೆಯಂತೂ 480 x 320 ಪಿಕ್ಸೆಲ್ಗಳ ರೆಸೊಲೂಶನ್ ಹೊಂದಿದೆ. ಅಂದರೆ ಉತ್ತಮ ಗುಣಮಟ್ಟದಲ್ಲಿ ಚಲನಚಿತ್ರಗಳನ್ನು ಅಂಗೈಯಲ್ಲೇ ನೋಡಬಹುದು. 2 ಮೆಗಾಪಿಕ್ಸೆಲ್ ಕ್ಯಾಮರಾವೂ ಇದೆ.
ಐಫೋನ್ನ ಇನ್ನೊಂದು ಅದ್ಭುತ ಸಂಶೋಧನೆಯೆಂದರೆ ಇದರಲ್ಲಿ ಇತರೆ ಫೋನುಗಳಲ್ಲಿರುವಂತೆ ಯಾವುದೇ ಅಂಕಿ ಗುಂಡಿ (ಬಟನ್) ಇಲ್ಲ. ಫೋನು ಸಂಖ್ಯೆ ಒತ್ತುವುದು, ಹಾಡುಗಳ ಆಯ್ಕೆ, ಎಸ್ಎಂಎಸ್ ಕಳುಹಿಸಲು ಅಕ್ಷರಗಳನ್ನು ಒತ್ತುವುದು ಇವೆಲ್ಲವನ್ನೂ ಇದರ ಟಚ್ಸ್ಕ್ರೀನ್ ಮೂಲಕವೇ ಮಾಡಬೇಕು. ಟಚ್ಸ್ಕ್ರೀನನ್ನು ಅಳವಡಿಸುವುದರಲ್ಲೂ ಐಫೋನ್ ಪ್ರಥಮವಲ್ಲ. ಆದರೆ ಅದನ್ನು ಬಳಸುವ ಹೊಸ ವಿಧಾನದಲ್ಲಿ ಇದು ಪ್ರಥಮ. ಇದರ ಪರದೆಯಲ್ಲಿ ಬೆರಳನ್ನು ಒತ್ತಿ ಜಾರಿಸುವ ಮೂಲಕ ಪರದೆಯಲ್ಲಿ ಚಿತ್ರಿಕೆಗಳು (ಐಕಾನ್) ಜಾರಿ ಅವುಗಳ ಜಾಗದಲ್ಲಿ ಬೇರೆ ಚಿತ್ರಿಕೆಗಳು ಬರುತ್ತವೆ. ಅವನ್ನು ಒತ್ತುವ ಮೂಲಕ ಆ ಚಿತ್ರಿಕೆಗಳು ಏನನ್ನು ಸೂಚಿಸುತ್ತವೆಯೋ ಆ ಕೆಲಸ ಮಾಡಬಹುದು. ಫೋನು ಕರೆ ಮಾಡಲೂ ಇದೇ ವಿಧಾನವನ್ನು ಬಳಸಬೇಕು.
ಇಷ್ಟೆಲ್ಲ ಇದ್ದರೂ ಐಫೋನ್ ತನ್ನ ದುಬಾರಿ ಬೆಲೆಯನ್ನು (600 ಡಾಲರು) ಸಮರ್ಥಿಸಿಕೊಳ್ಳಲಾರದು. ಈಗಾಗಲೆ ಅದರ ಬ್ಯಾಟರಿ ಬಗ್ಗೆ ದೂರುಗಳು ಬಂದಿವೆ. ಹಲವು ಪ್ರಮುಖ ಸವಲತ್ತುಗಳು ಇದರಲ್ಲಿಲ್ಲ. ಅವುಗಳೆಂದರೆ – ಉತ್ತಮ ನಿಸ್ತಂತು (ವೈರ್ಲೆಸ್) ಸಂಪರ್ಕ ವ್ಯವಸ್ಥೆ, ಧ್ವನಿ ಮೂಲಕ ಕರೆ, ಬ್ಲೂಟೂತ್ ಮೂಲಕ ಫೈಲ್ ವರ್ಗಾವಣೆ, ಇತ್ಯಾದಿ. ಆಪಲ್ ಕಂಪೆನಿಗೆ ಅತಿ ವಿಧೇಯವಾಗಿರುವವರು ಮತ್ತು ಈಗಾಗಲೆ ಐಪ್ಯಾಡ್ನ ಅಭಿಮಾನಿಗಳಾಗಿರುವವರು ಮಾತ್ರ ಇದರ ದುಬಾರಿ ಬೆಲೆ ನೀಡಿ ಕೊಂಡುಕೊಂಡಿದ್ದಾರೆ. ಭಾರತದಲ್ಲಂತೂ ಇದು ಸದ್ಯಕ್ಕೆ ಲಭ್ಯವಿಲ್ಲ. ಇದರ ಬಹುಪಾಲು ಗುಣವಿಶೇಷಗಳನ್ನು ಉಳ್ಳಂತಹ ಎಚ್ಟಿಸಿ ಟಚ್ ಫೋನ್ ಈಗಾಗಲೇ ಭಾರತದಲ್ಲಿ ಲಭ್ಯವಿದೆ. ಅದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ.
(ಕೃಪೆ: ಸಪ್ಪೋರ್ಟರ್)