ಅವರೆ ಕಾಳು
ಶೀರ್ಷಿಕೆ ನೋಡಿ ನಾನು ಅವರೆ ಎನ್ನುವ ತರಕಾರಿ (ಅಲ್ಲ ಬೇಳೆ) ಯ ಬಗ್ಗೆ ಬರೆಯುತ್ತಿದ್ದೇನೆ ಎಂದುಕೊಳ್ಳಬೇಡಿ. ಇದು ಬೇರೆಯೇ ವಿಷಯ. ಓದಿ ನೋಡಿ.
ನಿಮ್ಮಲ್ಲಿ ಎಷ್ಟು ಜನ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಸಭಿಕರಾಗಿ ಹೋಗಿದ್ದೀರೋ ಗೊತ್ತಿಲ್ಲ. ನಾನು ಆಗಾಗ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಈ ಸಭೆಗಳಲ್ಲಿ ಒಂದು ವಿಶೇಷ ಗಮನಿಸಿರಬಹುದು. ಅದೆಂದರೆ ವೇದಿಕೆಯಲ್ಲಿರುವ ಎಲ್ಲ ಗಣ್ಯಾತಿಗಣ್ಯ ವ್ಯಕ್ತಿಗಳನ್ನು ಅವರೆ ಮಾಡಿಬಿಡುವುದು. ಅಂದರೆ ಎಲ್ಲರನ್ನು ಅವರೆಕಾಳಾಗಿ ಮಾರ್ಪಡಿಸಿ ಬೇಯಿಸುವುದು ಎಂದು ತಿಳಿಯಬೇಡಿ. ಪ್ರತಿಯೊಬ್ಬ ಭಾಷಣಗಾರನೂ ವೇದಿಕೆಯಲ್ಲಿರುವ ಪ್ರತಿ ಗಣ್ಯ ವ್ಯಕ್ತಿಯನ್ನೂ ಹೆಸರು ಹೇಳಿ —–ಅವರೇ ಎಂದು ಸಂಬೋಧಿಸಿ ನಂತರ ತನ್ನ ಭಾಷಣ ಪ್ರಾರಂಭಿಸುವ ಪರಿಪಾಠವಿದೆ. ಸ್ವಾರಸ್ಯವೆಂದರೆ ಗಣ್ಯವ್ಯಕ್ತಿಯ ಹೆಸರು ಮಾತ್ರ ಹೇಳಿ ಅವರೆ ಎಂದು ಸೇರಿಸಿದರೆ ಭಾಷಣಕಾರರಿಗೆ ತೃಪ್ತಿಯಾಗುವುದಿಲ್ಲ. ಗಣ್ಯವ್ಯಕ್ತಿಯ ಸಂಪೂರ್ಣ ಪ್ರವರ ಹೇಳಿ ನಂತರ ಅವರೆ ಎಂದು ಸೇರಿಸುತ್ತಾರೆ. ಉದಾಹರಣೆಗೆ ಮೊನ್ನೆಯಷ್ಟೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ವೇದಿಕೆಯಲ್ಲಿ ಬರಗೂರು ರಾಮಚಂದ್ರಪ್ಪ, ಜಿ ಎಸ್ ಶಿವರುದ್ರಪ್ಪ ಎಲ್ಲ ಇದ್ದರು. ಭಾಷಣಗಾರ ಪ್ರಾರಂಭಿಸಿದ್ದು ಹೀಗೆ – “ಬಂಡಾಯ ಸಾಹಿತ್ಯದಲ್ಲಿ ದೊಡ್ಡ ಹೆಸರಾದ, ಕನ್ನಡ ಆಬಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ, ಗಿನ್ನೆಸ್ ದಾಖಲೆಯ ಚಲನಚಿತ್ರ ನಿರ್ಮಿಸಿದ, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪ್ರೊ. ಬರಗೂರು ರಾಮಚಂದ್ರಪ್ಪ ಅವರೆ”. ಇದು ಒಬ್ಬರ ಗುಣಗಾನ ಮಾತ್ರವಲ್ಲ. ವೇದಿಕೆಯಲ್ಲಿದ್ದ ಪ್ರತಿಯೊಬ್ಬರನ್ನೂ ಹೀಗೆ ಅಟೆಂಡೆನ್ಸ್ ಹಾಕಿ ಅವರೆಕಾಳು ಮಾಡಿ ನಂತರ ತನ್ನ ಭಾಷಣವನ್ನು ಪ್ರಾರಂಭಿಸಲು ಕನಿಷ್ಠ ಐದು ನಿಮಿಷ ಸಮಯ ತೆಗೆದುಕೊಂಡಿದ್ದರು. ಈ ಕ್ರಮ ಎಲ್ಲಿಂದ ಹೇಗೆ ಪ್ರಾರಂಭವಾಯಿತೋ ಗೊತ್ತಿಲ್ಲ. ವೇದಿಕೆಯಲ್ಲಿ ೮ರಿಂದ ಹೆಚ್ಚು ಮಂದಿ ಗಣ್ಯ ವ್ಯಕ್ತಿಗಳಿದ್ದಲ್ಲಿ ಈ ಎಲ್ಲರ ಪ್ರವರ ಹೇಳಿ ನಂತರ ಅವರನ್ನು ಅವರೆ ಮಾಡಲೇ ಕನಿಷ್ಠ ಮೂವತ್ತು ನಿಮಿಷಗಳ ಸಮಯ ಬೇಕಾಗುತ್ತದೆ! ನಾನಂತೂ ಯಾವುದೇ ಭಾಷಣದಲ್ಲೂ ಈ ಅವರೆಕಾಳನ್ನು ಬಳಸಿಯೇ ಇಲ್ಲ 🙂