ಅನುದಾನ ಅಕಾಡೆಮಿ ಖಂಡಿತ ಬೇಕು

ಸಂಪಾದಕರು
ವಾಚಕರವಾಣಿ
ಪ್ರಜಾವಾಣಿ
ಬೆಂಗಳೂರು ೫೬೦೦೦೧ -ಇವರಿಗೆ

ವಿಷಯ: ಅನುದಾನ ಅಕಾಡೆಮಿ ಖಂಡಿತ ಬೇಕು

ಮಾನ್ಯರೇ,

ದಿ.೨೫-೧೧-೨೦೦೫ರ ಪ್ರಜಾವಾಣಿ ಪತ್ರಿಕೆಯಲ್ಲಿ “ಅನುದಾನ ಅಕಾಡೆಮಿ ಸ್ಥಾಪನೆ ಅನಗತ್ಯ” ಎಂದು ಪ್ರಕಟವಾದ ಸುದ್ದಿ ಓದಿ ಪ್ರತಿಕ್ರಿಯಿಸುತ್ತಿದ್ದೇನೆ. ಈ ಮಾತುಗಳನ್ನು ನಾನು ಒಪ್ಪುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅನುದಾನ ಅಕಾಡೆಮಿ ಅತೀ ಅಗತ್ಯ. ಸರಕಾರದ ಹಲವು ಇಲಾಖೆಗಳಲ್ಲಿ ಯಾವ ಯಾವ ಅನುದಾನಗಳು ಲಭ್ಯವಿವೆ ಮತ್ತು ಅವುಗಳನ್ನು ಪಡೆಯಲು ಯಾವ ರೀತಿಯಲ್ಲಿ ಅರ್ಜಿ ಗುಜರಾಯಿಸಬೇಕು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಇದರಿಂದಾಗಿ ಅರ್ಹ ವ್ಯಕ್ತಿ, ಸಂಸ್ಥೆಗಳ ಬದಲಿಗೆ ಅನರ್ಹರಿಗೆ ಅನುದಾನ ದೊರಕುತ್ತಿದೆ. ಸರಕಾರದಿಂದ ಅನುದಾನ ಪಡೆಯಲು ಕಾನೂನು ರೀತ್ಯ ವ್ಯವಹರಿಸಬೇಕಾದ ಎಲ್ಲ ರೀತಿ ರಿವಾಜುಗಳನ್ನು ಈ ಅನುದಾನ ಅಕಾಡೆಮಿ ಒಂದು ಕೈಪಿಡಿ ರೂಪದಲ್ಲಿ ಪ್ರಕಟಿಸಬಹುದು. ಸರಕಾರದಿಂದ ಅನುದಾನ ಪಡೆಯಲು ಹಲವು ಮಂದಿ ಹಲವು ರೀತಿಯ ಕಸರತ್ತುಗಳನ್ನು ನಡೆಸುವುದು ಎಲ್ಲರಿಗೆ ತಿಳಿದ ವಿಷಯ. ಯಾರು ಯಾರನ್ನು ಯಾವ ಯಾವ ರೀತಿಯಲ್ಲಿ ತೃಪ್ತಿಪಡಿಸಬೇಕು, ಯಾರು ಯಾರು ಎಲ್ಲೆಲ್ಲಿ ಯಾವ ಯಾವ ಏಜೆಂಟರ ಮೂಲಕ ಎಷ್ಟೆಷ್ಟು ಲಂಚ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಸುವ ಇನ್ನೊಂದು ಕಪ್ಪು ಕೈಪಿಡಿಯನ್ನು ಕೂಡ ಈ ಅಕಾಡೆಮಿ ಪ್ರಕಟಿಸಬಹುದು. ಬಹುಶಃ ಮೊದಲನೆಯ ಬಿಳಿ ಕೈಪಿಡಿಗಿಂತ ಈ ಕಪ್ಪು ಕೈಪಿಡಿಯೇ ಹೆಚ್ಚು ಮಾರಾಟವಾಗಬಹುದು. ಅನುದಾನ ಬಯಸುವವರಿಂದ ಪಡೆಯಬೇಕಾದುದನ್ನು ಪಡೆದು ತಲುಪಬೇಕಾದವರಿಗೆ ತಲುಪಿಸುವ ಕೆಲಸವನ್ನು ಕೂಡ ಇದೇ ಅಕಾಡೆಮಿ ಮಾಡಬಹುದು. ಈ ಕೆಲಸಕ್ಕೆ ಸಣ್ಣ ಕಮೀಶನ್ ಕೂಡ ತೆಗೆದುಕೊಳ್ಳುವ ಮೂಲಕ ಮತ್ತು ಕೈಪಿಡಿ ಮಾರುವ ಮೂಲಕ ಅಕಾಡೆಮಿ ತನ್ನ ಕೆಲಸಕ್ಕೆ ಹಣವನ್ನು ತಾನೆ ಸಂಪಾದಿಸಿಕೊಳ್ಳಬಹುದು. ಸರಕಾರದ ಕೆಲಸವೇನೆಂದರೆ ಇಂತಹ ಒಂದು ಅಕಾಡೆಮಿಯನ್ನು ಸ್ಥಾಪಿಸುವುದು ಮಾತ್ರ. ತನ್ನ ಸಂಪಾದನೆಯಿಂದಲೇ ಅದು ಬದುಕಬಲ್ಲುದು. ಸರಕಾರವು ಕೂಡಲೆ ಇಂತಹ ಅಕಾಡೆಮಿ ಸ್ಥಾಪಿಸಬೇಕು ಮತ್ತು ಈ ಸಲಹೆ ನೀಡಿದ್ದಕ್ಕೆ ನನಗೆ ತಕ್ಕ ಸಂಭಾವನೆ ನೀಡಬೇಕು ಎಂದು ಸವಿನಯಪೂರಕವಾಗಿ ಕೇಳಿಕೊಳ್ಳುತ್ತಿದ್ದೇನೆ.

ಇತಿ ನಿಮ್ಮವ,
ಪವನಜ

Leave a Reply