ಡಾ. ಯು.ಬಿ. ಪವನಜ
“ಜೈ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಜೈ! ಸುಂದರ ನದಿವನಗಳ ನಾಡೆ
“ಜೈ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಜೈ! ಸುಂದರ ನದಿವನಗಳ ನಾಡೆ
‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ' ಎಂದು ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಸಹಸ್ರಾರು ವರ್ಷಗಳಿಂದ ಭಾರತೀಯರು ತಮ್ಮ ‘ಜ್ಞಾನ'ಕ್ಕೆ ವಿಶ್ವವಿಖ್ಯಾತರಾಗಿದ್ದಾರೆ. ವಿಜ್ಞಾನದ ವಿಷಯ ಬಂದಾಗ ಇತ್ತೀಚಿನ ಎರಡು ಶತಮಾನಗಳಲ್ಲಿ ವಿದೇಶೀಯರು ನಮ್ಮನ್ನು ಹಿಂದೆಹಾಕಿ ಬಹುಮುಂದೆ ಹೋಗಿರುವುದು ಸತ್ಯ. ಇದಕ್ಕೆ ಮುಖ್ಯ ಕಾರಣ ನಾವು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಲು ವಿಶೇಷ ಪ್ರಯತ್ನ ಮಾಡದಿರುವುದು. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ನಡೆದಿದ್ದರೂ ನಮ್ಮ ಅಗಾಧ ಜನಸಂಖ್ಯೆಗೆ ಹೋಲಿಸಿದರೆ ಇದು ಏನೇನೂ ಸಾಲದು.
ಕೆಲವು ಉದಾಹರಣೆಗಳನ್ನು ಗಮನಿಸಿ:
೧. ಮುಂಬಯಿಯಿಂದ ಬೆಂಗಳೂರಿಗೆ ಹೋಗುತ್ತಿರುವ ವಿಮಾನ. ಚಿಕ್ಕಪ್ರಾಯದ ದಂಪತಿಗಳು ಸುಮಾರು ೩ ವರ್ಷ ಪ್ರಾಯದ ಮಗುವಿನ ಜೊತೆ ಕೂತಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಗಂಡ ಓದುತ್ತಿದ್ದುದು ಇಂಡಿಯಾ ಟುಡೇ ಪತ್ರಿಕೆ. ದಂಪತಿಗಳು ತಮ್ಮ ನಡುವೆ ಮತ್ತು ಮಗುವಿನೊಡನೆ ಮಾತನಾಡಲು ಉಪಯೋಗಿಸುತ್ತಿದ್ದ ಭಾಷೆ ಇಂಗ್ಲಿಷ್. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಿದ್ದಂತೆ ದಂಪತಿಗಳು ತಮ್ಮೊಡನೆ ಹಾಗೂ ಮಗುವಿನೊಡನೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಹೊರಬಂದು ರಿಕ್ಷಾ ಅಥವಾ ಟ್ಯಾಕ್ಸಿ ಡೆವರ್ ಜೊತೆ ಅಪ್ಪಟ ಕನ್ನಡದಲ್ಲಿ ವಾಗ್ವಾದಕ್ಕಿಳಿಯುತ್ತಾರೆ. ದಂಪತಿಗಳು ಕನ್ನಡಿಗರೆ. ವಿಮಾನ ಪ್ರಯಾಣ ಮಾಡುತ್ತಿರುವಾಗ ಎಲ್ಲರ ಮುಂದೆ (ತಮ್ಮ ಮಧ್ಯೆ) ಕನ್ನಡ ಭಾಷೆ ಉಪಯೋಗಿಸಲು ಕೀಳರಿಮೆ.
ಇತ್ತೀಚಿಗೆ ಕನ್ನಡ ಭಾಷೆ ಮಾತನಾಡುವ ಜನರ ನಾಡಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಸಂಗತಿ ನಡೆಯಿತು. ರಾಜ್ಯದ ಬಾಷೆಯಾದ ಕನ್ನಡದಲ್ಲಿ ನೋಂದಣಿ ಫಲಕ ಬರೆಸಿದ ರಿಕ್ಷಾ ಚಾಲಕರ ವಿರುದ್ಧ ಪೋಲೀಸರು ಕ್ರಮ ಕೈಗೊಂಡರು. ನಾಡಿನ ಜನರ ಭಾಷೆಯಲ್ಲಿ ನೋಂದಣಿ ಫಲಕ ಬರೆಸಿದ್ದು ಅವರ ತಪ್ಪು. ಭಾರತದ ಮೋಟಾರು ವಾಹನ ಕಾಯಿದೆ ಪ್ರಕಾರ ವಾಹನಗಳ ನೋಂದಣಿ ಫಲಕ ನಮ್ಮ ಭಾಷೆಯ ಬದಲು ಸಹಸ್ರಾರು ಮೈಲು ದೂರವಿರುವ ಬ್ರಿಟಿಷರ ಭಾಷೆಯಲ್ಲಿರಬೇಕು! ಈ ಕಾಯಿದೆ ಮಾಡಿದವರು ಕೇಂದ್ರ ಸರಕಾರದವರು. ವಾಹನಗಳ ನೋಂದಣಿ ಫಲಕ ಇಂಗ್ಲೀಷ್ ಭಾಷೆಯಲ್ಲಿರಬೇಕು ಎಂದು ಅಧಿಕಾರಿಗಳು, ಮುಖ್ಯವಾಗಿ ಪೋಲೀಸರು ಹೇಳುವುದಕ್ಕೆ ಅವರು ಕೊಡುವ ಕಾರಣ `ಯಾವುದಾದರೂ ವಾಹನ ಅಪಘಾತ ಮಾಡಿ ತಪ್ಪಿಸಿಕೊಂಡು ಹೋದರೆ ಅದರ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಇತರ ಭಾಷಿಕರಿಗೆ ಇದು ಸಹಾಯಕಾರಿಯಾಗುತ್ತದೆ'. ಮೇಲ್ನೋಟಕ್ಕೆ ಇದು ತರ್ಕಬದ್ಧವಾಗಿದೆ.