ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ | Vishva Kannada http://vishvakannada.com Thu, 26 Dec 2024 06:04:34 +0000 en-US hourly 1 https://wordpress.org/?v=7.0.7 ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ http://vishvakannada.com/article/internationalized-domain-name-idn/ http://vishvakannada.com/article/internationalized-domain-name-idn/#respond Fri, 20 Dec 2024 07:28:03 +0000 https://gadgetloka.net/?p=1070 ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ…

The post ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ first appeared on Vishva Kannada.

]]>
ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು –www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.vishvakannada.com, www.ejnana.com, hosadigantha.com ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡಿದ್ದೀರಾ? ಅಥವಾ ಅದು ಇರುವುದೇ ಹಾಗೆ, ಬೇರೆ ರೀತಿ ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೀರಾ? ಅದು ಈಗ ಇರುವುದು ಹಾಗೆ ಎಂದರೆ ಸರಿ. ಆದರೆ ಬೇರೆ ರೀತಿ ಸಾಧ್ಯವೇ ಇಲ್ಲ ಎಂದರೆ ಅದು ತಪ್ಪು. ಅಂದರೆ ಕನ್ನಡದ ಜಾಲತಾಣಗಳಿಗೆ ಕನ್ನಡದಲ್ಲೇ ವಿಳಾಸ ನಮೂದಿಸಬಹುದೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದರ ಉತ್ತರ ಈಗ ಅದು ಸಾಧ್ಯ ಎಂದು.

ಅಂತರಜಾಲದ ಒಂದು ಪ್ರಮುಖ ಅಂಗ ವಿಶ್ವವ್ಯಾಪಿ ಜಾಲ ಅರ್ಥಾತ್ ವರ್ಲ್ಡ್ ವೈಡ್ ವೆಬ್. ಇದು ಕೋಟ್ಯಾನುಕೋಟಿ ಜಾಲತಾಣಗಳ (ವೆಬ್‌ಸೈಟ್) ಮತ್ತು ಜಾಲಪುಟಗಳ (ವೆಬ್‌ಪೇಜ್) ಸಂಗ್ರಹ. ಪ್ರತಿ ಜಾಲತಾಣಕ್ಕೂ ಒಂದು ವಿಳಾಸ ಇರುತ್ತದೆ. www.vishvakannada.com ಎಂಬ ಈ ಜಾಲತಾಣ ವಿಳಾಸಕ್ಕೆ ಡೊಮೈನ್ ನೇಮ್ (domain name) ಎನ್ನುತ್ತಾರೆ. ದಶಕಗಳ ಕಾಲ ಈ ಡೊಮೈನ್ ನೇಮ್ ಇಂಗ್ಲಿಶಿನಲ್ಲೇ ಇತ್ತು. ಅಷ್ಟು ಮಾತ್ರವಲ್ಲ, ಅದು ಅಮೆರಿಕ ಸರಕಾರದ ಅಧೀನ ಸಂಸ್ಥೆಯ ಉಸ್ತುವಾರಿಯಲ್ಲಿತ್ತು. ನಿಧಾನವಾಗಿ ಅದನ್ನು ಜಾಗತಿಕ ಸಂಸ್ಥೆಯೊಂದಕ್ಕೆ ಅದು ವರ್ಗಾಯಿಸಿತು. ಇದುವೇ ಐಕಾನ್. ಇದರ ಪೂರ್ತಿ ಹೆಸರು  ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (Internet Corporation for Assigned Names and Numbers, ICANN) ಎಂದು. ಇದೊಂದು ಸರಕಾರೇತರ, ಲಾಭ ನಷ್ಟಗಳಿಲ್ಲದ ಸಂಸ್ಥೆ. ಇದನ್ನು ಸಮುದಾಯದ ಜನರೇ ನಡೆಸುವುದು. ಇದಕ್ಕೆ ಯಾರು ಬೇಕಾದರೂ ಕೊಡುಗೆ ನೀಡಬಹುದು.

ಪ್ರಪಂಚದಲ್ಲಿರುವ ಸುಮಾರು 6000ಕ್ಕೂ ಅಧಿಕ ಭಾಷೆಗಳಲ್ಲಿ ಇಂಗ್ಲಿಶ್ ಕೂಡ ಒಂದು. ಅಂದ ಮೇಲೆ ಅಂತರಜಾಲ ಮತ್ತು ಅದರಲ್ಲಿ ಅಡಕವಾಗಿರುವ ವಿಶ್ವವ್ಯಾಪಿ ಜಾಲದ ಎಲ್ಲ ವ್ಯವಹಾರಗಳು ಇಂಗ್ಲಿಶಿನಲ್ಲೇ ಯಾಕಿರಬೇಕು? ಇರಬೇಕಾಗಿಲ್ಲ ಎಂಬುದೇ ಉತ್ತರ. ಜಾಲತಾಣಗಳು ಇಂಗ್ಲಿಶ್ ಹೊರತಾಗಿ ಹಲವು ಭಾಷೆಗಳಲ್ಲಿ ಲಭ್ಯವಾಗತೊಡಗಿ ಹಲವು ದಶಕಗಳೇ ಕಳೆದಿವೆ. ಆದರೂ ಅವುಗಳ ವಿಳಾಸ ಮಾತ್ರ ಇನ್ನೂ ಬಹುತೇಕ ಇಂಗ್ಲಿಶಿನಲ್ಲೇ ಇವೆ. ಅವುಗಳೂ ಇಂಗ್ಲಿಶಿನ ಹೊರತಾಗಿ ಇತರೆ ಭಾಷೆಗಳಲ್ಲೂ ಲಭ್ಯವಾಗಬೇಕು ತಾನೆ? ಹೌದು. ಐಕಾನ್ ಈ ಬಗ್ಗೆ ಕೆಲಸ ಮಾಡುತ್ತಿದೆ. ಅದು ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸ (ಡೊಮೈನ್ ನೇಮ್) ತಯಾರಿಸಲು ಮತ್ತು ಅಳವಡಿಸಲು ಬೇಕಾದ ಶಿಷ್ಟತೆಯನ್ನು ರೂಪಿಸಿದೆ. ಈಗಾಲೆ ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸಗಳನ್ನು ಬಳಸಬಹುದು. ಇನ್ನೂ ಹಲವಾರು ಭಾಷೆಗಳಲ್ಲಿ ಜಾಲತಾಣ ವಿಳಾಸ ಬಳಸಲು ಬೇಕಾದ ಶಿಷ್ಟತೆಯನ್ನು ರೂಪಿಸಲಾಗುತ್ತಿದೆ. ಈ ರೀತಿಯ ಜಾಲತಾಣ ವಿಳಾಸಗಳಿಗೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಹಾಗಿದ್ದರೆ ಅದರಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಇರಬೇಕು ತಾನೆ? ಉತ್ತರ ಹೌದು ಎಂದು.

ಈ ಜಾಲತಾಣ ವಿಳಾಸಗಳಲ್ಲಿ ಮೂರು ಭಾಗವಿರುವುದನ್ನು ಗಮನಿಸರಬಹುದು. www.vishvakannada.com ಎಂಬಲ್ಲಿ .com ಎಂಬುದು ಕಮರ್ಶಿಯಲ್ ಎಂಬುದರ ಹ್ರಸ್ವ ರೂಪ. ಈಗ  www.techfocus.in  ಎಂಬುದನ್ನು ಗಮನಿಸಿ. ಇಲ್ಲಿ .in ಎಂಬುದು India ಅರ್ಥಾತ್ ಭಾರತ ಎಂಬುದು ಹ್ರಸ್ವ ರೂಪ. ಡೊಮೈನ್ ನೇಮ್‌ಗಳ ಈ ಭಾಗಕ್ಕೆ ಟಾಪ್ ಲೆವೆಲ್ ಡೊಮೈನ್ (Top Level Domain, TLD) ಎನ್ನುತ್ತಾರೆ. ಈ ಭಾಗದ .in ಗೆ ಪರ್ಯಾಯವಾದ .ಭಾರತ ಎಂಬುದು ಭಾರತೀಯ ಲಿಪಿಗಳಲ್ಲಿ ಲಭ್ಯ. ಅಂದರೆ ಕನ್ನಡವೂ ಈ ಪಟ್ಟಿಯಲ್ಲಿ ಇದೆ. ಉದಾಹರಣೆಗೆ ವಿಶ್ವಕನ್ನಡ.ಭಾರತ.

ಇಷ್ಟೇ ಆದರೆ ಕನ್ನಡದಲ್ಲಿ ಜಾಲತಾಣ ವಿಳಾಸ ಆದಂತೆಯೇ? ಇಲ್ಲ. vishvakannada.com ಇರುವಂತೆ ವಿಶ್ವಕನ್ನಡ.ಸಂಸ್ಥೆ, ಉದಯವಾಣಿ.ಪತ್ರಿಕೆ, ವಿಶ್ವವಾಣಿ.ಸುದ್ದಿ, ಇತ್ಯಾದಿ ಪಡೆದಾಗ ಮಾತ್ರ ಅದು ಸಂಪೂರ್ಣ ಕನ್ನಡದಲ್ಲೇ ಜಾಲತಾಣ ವಿಳಾಸ ಎನ್ನಬಹುದು. ಅದು ಸಾಧ್ಯವಿಲ್ಲವೇ ಎಂದು ಕೇಳಿದರೆ ಸಾಧ್ಯವಿದೆ ಎಂಬುದೇ ಉತ್ತರ. ಯಾವಾಗ ಎಂದು ಕೇಳಿದರೆ ಬಹುಶಃ ಇನ್ನೂ ಎರಡು ವರ್ಷ ಕಾಯಬೇಕಾಗಬಹುದು. ಅದು ಯಾಕೆ ನಿಧಾನ? ಯಾಕೆಂದರೆ ಈ ರೀತಿ ಜಾಲತಾಣ ವಿಳಾಸ ತಯಾರಿಸಬೇಕಾದಾಗ ಯಾವ ಅಕ್ಷರಗಳನ್ನು ಬಳಸಬಹುದು, ಯಾವ ಅಕ್ಷರಗಳನ್ನು ಬಳಸಬಾರದು, ಯಾವ ಅಕ್ಷರದ ನಂತರ ಯಾವ ಅಕ್ಷರ ಬಳಸಬಹುದು ಮತ್ತು ಬಳಸಬಾರದು, ಇತ್ಯಾದಿ ನಿಯಮಗಳನ್ನು ಮೊದಲು ರೂಪಿಸುವ ಕೆಲಸ ಆಗಬೇಕು. ಸಂತಸದ ಸಂಗತಿಯೆಂದರೆ ಈ ನಿಯಮ ತಯಾರಾಗಿದೆ. ಐಕಾನ್‌ನಲ್ಲಿ ನಿಯೊಬ್ರಾಹ್ಮಿ ಜನರೇಶನ್ ಪ್ಯಾನೆಲ್ ಎಂಬ ತಂಡ ಬ್ರಾಹ್ಮಿ ಲಿಪಿಯಿಂದ ಉಗಮಿಸಿದ ಎಲ್ಲ ಲಿಪಿಗಳಲ್ಲಿ ಡೊಮೈನ್ ನೇಮ್‌ತಯಾರಿಸಲು ಬೇಕಾದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಕನ್ನಡವೂ ಸೇರಿದೆ. ಪ್ರಥಮ ಹಂತದ ಭಾಷೆ/ಲಿಪಿಗಳಲ್ಲಿ ಕನ್ನಡವೂ ಸೇರಿದೆ. ಈ ನಿಯಮ ಜಾರಿಗೆ ಬಂದಾಗ ಟಾಪ್ ಲೆವೆಲ್ ಡೊಮೈನ್ (ಟಿಎಲ್‌ಡಿ) ಕನ್ನಡ ಲಿಪಿಯಲ್ಲೇ ಪಡೆದುಕೊಳ್ಳಬಹುದು. ಆಗ .ಪತ್ರಿಕೆ, .ಸುದ್ದಿ, .ಸಂಸ್ಥೆ, .ದೂರದರ್ಶನ, .ಕನ್ನಡ, ಇತ್ಯಾದಿ ಟಿಎಲ್‌ಡಿಗಳನ್ನು  ಪಡೆದುಕೊಳ್ಳಬಹುದು. 

ಆದರೆ ಈ ಟಾಪ್ ಲೆವೆಲ್ ಡೊಮೈನ್‌ನ ಬೆಲೆ ನಮ್ಮ ನಿಮ್ಮಂತಹವರ ಕೈಗೆಟುಕುವ ಸಾಧ್ಯತೆ ತುಂಬ ಕಡಿಮೆ. ಸದ್ಯಕ್ಕೆ ಅದು ಸುಮಾರು 1,85,000 ಅಮೆರಿಕನ್ ಡಾಲರ್ ಇದೆ. ಅಂದರೆ ಸುಮಾರು 1 ಕೋಟಿ 39 ಲಕ್ಷ ರೂ! ಯಾವ ಭಾರತೀಯ ಇಷ್ಟು ಹಣ ನೀಡಿ ಸ್ವಂತದ ಡೊಮೈನ್ ನೇಮ್ ತೆಗೆದುಕೊಳ್ಳುತ್ತಾನೆ? ಶ್ರೀಮಂತ ಸಂಸ್ಥೆಗಳೂ ಇಷ್ಟು ಹಣ ಖರ್ಚು ಮಾಡಲು ಹಿಂದೆ ಮುಂದೆ ಯೋಚನೆ ಮಾಡಬಹುದು. ಆದರೆ ಪರಿಸ್ಥಿತಿ ಅಷ್ಟು ಶೋಚನೀಯವಾಗಿಲ್ಲ. ಐಕಾನ್ ಒಂದು ಜನರೇ ನಡೆಸುವ ಸರಕಾರೇತರ ಸಂಸ್ಥೆ. ಇದರಲ್ಲಿ ಭಾರತೀಯರೂ ಸದಸ್ಯರಾಗಿದ್ದಾರೆ. ಅವರೆಲ್ಲ ಒತ್ತಡ ಹಾಕಿ ಈ ಹಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಸಾಧ್ಯತೆಯೇನು ಬಂತು? ಹಾಗೆ ಮಾಡದಿದ್ದಲ್ಲಿ ಐಕಾನ್‌ನವರ ಶ್ರಮವೆಲ್ಲ ವ್ಯರ್ಥ. ಯಾರೂ ಭಾರತೀಯ ಭಾಷೆಗಳಲ್ಲಿ ಟಿಎಲ್‌ಡಿ ಕೊಂಡುಕೊಳ್ಳದಿದ್ದರೆ ಶ್ರಮಕ್ಕೇನು ಫಲ? ಹಾಗೆ ಆಗಲಾರದು ಎಂದುಕೊಂಡಿದ್ದೇನೆ.

(ಲೇಖಕರು ಐಕಾನ್‌ನ ನಿಯೋಬ್ರಾಹ್ಮಿ ಪ್ಯಾನೆಲ್‌ನಲ್ಲಿ ಕನ್ನಡದ ಪರವಾಗಿ ಕೆಲಸ ಮಾಡುತ್ತಿದ್ದಾರೆ)

–ಡಾ| ಯು.ಬಿ. ಪವನಜ

gadgetloka @ gmail . com

The post ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ first appeared on Vishva Kannada.

]]>
http://vishvakannada.com/article/internationalized-domain-name-idn/feed/ 0