ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ-೫
ಒಂದು ಸೊನ್ನೆ – ೯ (೧೦-೧೦-೨೦೦೩)
ನುಡಿದಂತೆ ನಡೆಯದವರು
ಒಂದು ಒಳ್ಳೆಯ ಉದ್ದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಉತ್ತಮ ಕೆಲಸ ಮಾಡಲು ಆರಂಭಿಸಿ ಅದನ್ನು ಎಲ್ಲರೂ ಹೊಗಳಲು ಪ್ರಾರಂಭಿಸಿ ಈ ಹೊಗಳಿಕೆಯ ಮತ್ತು ತಲೆಗೇರಿ, ತಾನೆ ಸರ್ವಸ್ವ, ತಾನು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿಂದ, ಆರಂಭದ ಉದ್ದೇಶವನ್ನು ಮರೆತು ಇನ್ನೇನೋ ಮಾಡುವವವರನ್ನು ನಾವು ಸಮಾಜದಲ್ಲಿ ಆಗಾಗ ಅಲ್ಲಲ್ಲಿ ಕಾಣುತ್ತೇವೆ. ಈ ಸಾಲಿಗೆ ಹೊಸತಾಗಿ ಸೇರ್ಪಡೆಯಾಗಿರುವುದು ಕನ್ನಡ ಗಣಕ ಪರಿಷತ್ತು (ಕಗಪ).
೧೯೯೬ನೆ ಇಸವಿಯ ಡಿಸೆಂಬರ್ ತಿಂಗಳಲ್ಲಿ ಕಗಪದ ಬೀಜ ಬಿತ್ತಲಾಯಿತು. ಕನ್ನಡ ತಂತ್ರಾಂಶಗಳಲ್ಲಿ ಇಲ್ಲದಿದ್ದ ಏಕರೂಪತೆ ಕಗಪದ ಉಗಮಕ್ಕೆ ನಾಂದಿ. ಹಲವಾರು ತಂತ್ರಾಂಶಗಳು ಆಗ ಪ್ರಚಲಿತವಿದ್ದವು. ಒಂದು ತಂತ್ರಾಂಶದಲ್ಲಿ ತಯಾರಿಸಿದ ಫೈಲನ್ನು ಇನ್ನೊಂದು ತಂತ್ರಾಂಶ ಬಳಸಿ ತೆರೆಯುವುದು ಆಗುತ್ತಿರಲಿಲ್ಲ. ಇದಕ್ಕೆ ಕಾರಣ ಒಬ್ಬೊಬ್ಬರೂ ಒಂದೊಂದು ಸಂಕೇತ ರೂಪಿಸಿಕೊಂಡಿದ್ದು. ಒಂದು ಏಕರೂಪತೆ ಇರದಿದ್ದುದು ಗಣಕಗಳಲ್ಲಿ ಕನ್ನಡದ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿತ್ತು. ಈ ತೊಂದರೆಯನ್ನು ಮನಗಂಡ ಕೆಲವು ಕನ್ನಡ ಭಾಷಾಭಿಮಾನಿಗಳು ಮತ್ತು ಗಣಕ ತಜ್ಞರು ಒಂದಾಗಿ ಏಕರೂಪತೆ ಬಗ್ಗೆ ಕೆಲಸ ಮಾಡತೊಡಗಿದರು.
ಸರಕಾರವೂ ಈ ಸಮಸ್ಯೆಗಳಿಗೆ ಸ್ಪಂದಿಸಿ ಏಕರೂಪತೆ ಅರ್ಥಾತ್ ಶಿಷ್ಟತೆ ಬಗ್ಗೆ ಶಿಫಾರಸು ಮಾಡಲು ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯಲ್ಲಿ ಕಗಪದ ಕೆಲವು ಸದಸ್ಯರು ವೈಯಕ್ತಿಕ ನೆಲೆಯಲ್ಲಿ ಇದ್ದರಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಸೇರಿದಂತೆ ಒಟ್ಟು ಸುಮಾರು ಎಂಟು ಜನರಿದ್ದರು. ಕನ್ನಡ ಮತ್ತು ಸಂಸ್ಕೃತಿ ವಿಭಾಗದ ಕಾರ್ಯದರ್ಶಿಯವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯು ತಯಾರಿಸಿದ ಏಕರೂಪ ಕೀಲಿಮಣೆ ವಿನ್ಯಾಸ ಮತ್ತು ಏಕಭಾಷೆಯ ಫಾಂಟ್ (ಅಕ್ಷರಶೈಲಿ) ಗಳನ್ನು ಮಾನಕ ಎಂದು ಸರಕಾರವು ಆಜ್ಞೆ ಹೊರಡಿಸಿತು. ಎಲ್ಲ ಪತ್ರಿಕೆಗಳೂ ಈ ಸಾಧನೆಯನ್ನು ಕಗಪದ ಸಾಧನೆ ಎಂದೇ ಬರೆಯುತ್ತಿದ್ದಾರೆ.
ಈ ಸಮಿತಿಯ ವರದಿಯನ್ನು ತಂತ್ರಾಂಶ ತಯಾರಕರು ಅಳವಡಿಸಿದ್ದಾರೆಯೇ ಎಂದು ಪರೀಕ್ಷಿಸಲು ಕಗಪವು ಒಂದು ಪರೀಕ್ಷಕ ತಂತ್ರಾಂಶವನ್ನು ತಯಾರಿಸಿತು. ಸರಕಾರವು ಈ ತಂತ್ರಾಂಶದ ಉಪಯೋಗವನ್ನು ಗಮನಿಸಿ ಇದನ್ನು ಒಂದು ಪೂರ್ಣಪ್ರಮಾಣದ ತಂತ್ರಾಂಶವನ್ನಾಗಿ ಪರಿವರ್ತಿಸಿಕೊಡಲು ಕಗಪವನ್ನೇ ಕೇಳಿಕೊಂಡಿತು. ಇಂತಹ ಒಂದು ತಂತ್ರಾಂಶವನ್ನು ಉಚಿತವಾಗಿ ಹಂಚಿದರೆ ಈಗ ಪ್ರಚಲಿತವಿರುವ ಎಲ್ಲ ತಂತ್ರಾಂಶ ಕಂಪೆನಿಗಳು ಬಾಗಿಲು ಮುಚ್ಚಬೇಕಾಗಿ ಬರುವುದು. ಆಗ ಉಂಟಾಗುವ ನಿರ್ವಾತವನ್ನು ಕಗಪ ತುಂಬಿಕೊಡಬೇಕಾಗಿ ಬರುವುದು ಎಂದು ಸರಕಾರಕ್ಕೆ ಆಗಲೇ ಮನವರಿಕೆಯಾಗಿತ್ತು. ಭವಿಷ್ಯದ ಈ ತೊಂದರೆಯನ್ನು ನಿವಾರಿಸಲು ಉತ್ತಮ ಗುಣಮಟ್ಟದ, ವೃತ್ತಿನಿರತ ಕಂಪೆನಿಗಳು ಈಗಾಗಲೆ ಮಾರುತ್ತಿರುವ ಉತ್ತಮ ಗುಣಮಟ್ಟದ ಫಾಂಟ್‌ಗಳಿಗೆ ಯಾವುದೆ ರೀತಿಯಲ್ಲಿ ಕಡಿಮೆಯಲ್ಲದ, ಫಾಂಟ್‌ಗಳನ್ನು ತಯಾರಿಸಿ ಕೊಡುವ ಹೊಣೆಯನ್ನೂ ಸರಕಾರವು ಕಗಪಕ್ಕೆ ವಹಿಸಿತು.
ಸರಾಕರದ ಇಚ್ಛೆಯಂತೆ “ನುಡಿ” ಎಂಬ ಪೂರ್ಣಪ್ರಮಾಣದ ತಂತ್ರಾಂಶ ಬಿಡುಗಡೆಯಾಯಿತು. ಆದರೆ ಕಗಪವು ಸರಕಾರ ಹೇಳಿದ ಕೆಲವು ಅಂಶಗಳನ್ನು ಮರೆತೇ ಬಿಟ್ಟಿತ್ತು. ಉತ್ತಮ ಗುಣಮಟ್ಟದ ಫಾಂಟ್‌ಗಳನ್ನು ಕೊಡಲು ಅದಕ್ಕೆ ಸಾಧ್ಯವಾಗಲಿಲ್ಲ. ಕಗಪದಲ್ಲಿ ಹಲವು ವರ್ಷಗಳಿಂದ ಫಾಂಟ್ ತಯಾರಿಸಿ ಅನುಭವವಿರುವ ಪರಿಣತರಿಲ್ಲ. ಸರಕಾರದಿಂದ ಶಹಬಾಸ್ ಗಿಟ್ಟಿಸುವ ಆತುರದಲ್ಲಿ ಕಗಪವು ಒಂದೊಂದು ಫಾಂಟಿಗೂ ಅತಿ ಕಡಿಮೆ ಹಣ ಕೇಳಿತ್ತು. ಕಗಪವು ಏನೇನೂ ಅನುಭವವಿಲ್ಲದ ಕೆಲವು ವಿದ್ಯಾರ್ಥಿಗಳಿಗೆ ಫಾಂಟ್ ಮಾಡಲು ನೇಮಿಸಿತು. ಇದರಿಂದ ಕನ್ನಡ ಭಾಷೆಯಲ್ಲಿ ಅತಿ ಕೆಟ್ಟ ಫಾಂಟ್‌ಗಳು ತುಂಬುವಂತಾಯಿತು. ವೃತ್ತಿನಿರತ ಕಂಪೆನಿಗಳವರು ಈಗಾಗಲೆ ಫಾಂಟ್ ತಯಾರಿಸಿ ಮಾರುವುದನ್ನು ನಿಲ್ಲಿಸಿದ್ದಾರೆ. ಕನ್ನಡಕ್ಕೆ ಉತ್ತಮ ಫಾಂಟ್‌ಗಳ ಕಾಲ ಮುಗಿದು ಹೋಯಿತು.
ಸರಕಾರವು ನೇಮಿಸಿದ ಸಮಿತಿಯು ಏಕಭಾಷೆಯ ಫಾಂಟಿಗೆ ಮಾತ್ರ ಸಂಕೇತಗಳನ್ನು ರೂಪಿಸಿತ್ತು. ದ್ವಿಭಾಷೆಯ ಸಂಕೇತಗಳ ಬಗ್ಗೆ ಮಾತು ಬಂದಾಗ ದ್ವಿಭಾಷೆಯ ಬದಲು ಯುನಿಕೋಡಿನ ಆವೃತ್ತಿ ತರುವುದೇ ಸೂಕ್ತ ಎಂಬ ನಿರ್ಣಯಕ್ಕೂ ಬರಲಾಗಿತ್ತು. ಆದರೆ ಕಗಪ ಮತ್ತು ಸರಕಾರ ಒಟ್ಟು ಸೇರಿ ಹೊರತಂದಿರುವ “ನುಡಿ”ಯ ಮೂರನೇ ಆವೃತ್ತಿಯಲ್ಲಿ ಸರಕಾರದಿಂದ ಆಜ್ಞೆ ಆಗದೆ ಇದ್ದ (ಶಿಷ್ಟತೆಗೆ ಬದ್ಧವಾಗದಿರುವ) ದ್ವಿಭಾಷೆಯ ಫಾಂಟನ್ನು ಅಳವಡಿಸಲಾಗಿದೆ. ಈ ಫಾಂಟ್‌ನಲ್ಲಿ ತಯಾರಿಸಿ ಶೇಖರಿಸಿದ ಮಾಹಿತಿಗಳು ಏನಾಗಬೇಕು? ಕನ್ನಡದಲ್ಲಿ ಹಲವು ತಂತ್ರಾಂಶ ಮತ್ತು ಫಾಂಟ್‌ಗಳಿವೆ. ಇವುಗಳಲ್ಲಿ ತಯಾರಿಸಿ ಶೇಖರಿಸಿದ ಮಾಹಿತಿಗಳಿಗೆ ಮುಂದೆ ಭವಿಷ್ಯವಿಲ್ಲ ಎಂದು ಸಾರಿ ತನ್ನದೇ ಶಿಷ್ಟ ತಂತ್ರಾಂಶ ತಯಾರಿಸಿದ ಕಗಪ ಇದರ ಬಗ್ಗೆ ಏನು ಹೇಳುತ್ತದೆ? ಯಾಕೆ ಯುನಿಕೋಡ್ ಆವೃತ್ತಿಯ “ನುಡಿ” ಬಗ್ಗೆ ಮೌನವಾಗಿದೆ?
ಕಗಪವು ತಯಾರಿಸಿದ “ನುಡಿ” ತಂತ್ರಾಂಶದ ಮೂರನೆ ಆವೃತ್ತಿಯಲ್ಲಿ ಹಲವು ಬಗ್‌ಗಳಿವೆ (ದೋಷ). ಒಂದು ಉದಾಹರಣೆ ನೀಡುವುದಾದರೆ, ನುಡಿಯನ್ನು ಪ್ರಾರಂಭಿಸುವಾಗ ISCIIಯಲ್ಲಿ ಮಾಹಿತಿ ಸಂಗ್ರಹಿಸುವ ಆಯ್ಕೆ ಮಾಡಿ ಒಮ್ಮೆ ಬೆರಳಚ್ಚು ಮಾಡಿದುದನ್ನು ಉಳಿಸಿದ (save ಮಾಡಿ) ನಂತರ ಇನ್ನೊಮ್ಮೆ ಯಾವುದೇ ಕೀಲಿಗಳು ಕೆಲಸ ಮಾಡುವುದಿಲ್ಲ. “ನುಡಿ” ತಂತ್ರಾಂಶದ ತೊಂದರೆಗಳ ಬಗ್ಗೆ ಹಿಮ್ಮಾಹಿತಿ (feedback), ತಾಂತ್ರಿಕ ಸಹಾಯ (technical support), ಆಗಿಂದಾಗ್ಗೆ ಹೊಸ ಆವೃತ್ತಿಗಳ ಬಿಡುಗಡೆಯ ವಿವರ, ಇತ್ಯಾದಿಗಳನ್ನು ನೀಡಲು ಒಂದು ಅಂತರಜಾಲ ತಾಣ ಮತ್ತು ವಿ-ಅಂಚೆಯ ಸೌಕರ್ಯ (mailing list) ಇಲ್ಲ. ಒಬ್ಬ ಏಕ ವ್ಯಕ್ತಿಯಿಂದ ತಯಾರಾದ “ಬರಹ” ತಂತ್ರಾಂಶಕ್ಕೆ ಈ ಎಲ್ಲ ಸೌಕರ್ಯಗಳಿರಬೇಕಾದರೆ ಒಂದು ಪರಿಷತ್ತಿಗೇಕೆ ಇವು ಸಾಧ್ಯವಾಗಿಲ್ಲ?
ಪ್ರಪಂಚಾದ್ಯಂತ ಹಲವು ಜನರು ಮುಕ್ತ ತಂತ್ರಾಂಶಗಳನ್ನು (opensource software) ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಲಿನಕ್ಸ್ ಇದಕ್ಕೆ ಉತ್ತಮ ಉದಾಹರಣೆ. ಮುಕ್ತ ತಂತ್ರಾಂಶ ಎಂದರೆ ತಂತ್ರಾಂಶ ತಯಾರಿಸಲು ಬಳಸಿದ ಮೂಲ ಆಕರ ಕ್ರಮವಿಧಿ (source code) ಎಲ್ಲರಿಗೆ ಲಭ್ಯ. ಆಕರ ಕ್ರಮವಿಧಿಯನ್ನು ಬಳಸಿ ನೀವು ತಂತ್ರಾಂಶವನ್ನು ಸುಧಾರಿಸಬಹುದು, ಹಾಗೆ ಸುಧಾರಿಸಿದುದನ್ನು ಜನತೆಗೆ ಹಂಚಬಹುದು. ನುಡಿ ಈ ಮಾದರಿಯಲ್ಲಿಲ್ಲ. ಲಿನಕ್ಸ್ ಪರಿಣತ ಉತ್ಸಾಹಿ ಕನ್ನಡ ಪ್ರೇಮಿಗಳು ಎರಡು ವರ್ಷಗಳಿಂದ ನುಡಿ ತಂತ್ರಾಂಶದ ಆಕರ ಕ್ರಮವಿಧಿಯನ್ನು ಕೇಳುತ್ತಿದ್ದಾರೆ. ಗಣಕ ಪರಿಷತ್ ಇನ್ನೂ ಆಕರ ಕ್ರಮವಿಧಿಯನ್ನು ಮುಕ್ತವಾಗಿಸಿಲ್ಲ. ನುಡಿ ತಂತ್ರಾಂಶ ಸರಕಾರದಿಂದ ಅನುದಾನ ಪಡೆದು ತಯಾರಾದುದು. ಅಂದರೆ ಅದರ ಆಕರ ಕ್ರಮವಿಧಿ ಮೇಲೆ ಜನತೆಗೆ ಹಕ್ಕು ಇದೆ. ಹೀಗಿದ್ದೂ ಕಗಪದವರು ಅದನ್ನು ಮುಕ್ತವಾಗಿಸಿಲ್ಲ.
ಸರಕಾರವೇ ಕನ್ನಡದ ಫಾಂಟ್ ಮತ್ತು ಕೀಲಿಮಣೆ ತಂತ್ರಾಂಶ ಮಾಡಿ ಉಚಿತವಾಗಿ ಹಂಚಿದರೆ ನಾವೇನು ಮಾಡಬೇಕು ಎಂದು ಕನ್ನಡ ತಂತ್ರಾಂಶ ತಯಾರಕರು ಸರಕಾರವನ್ನು ಪ್ರಶ್ನಿಸಲು ತೊಡಗಿದರು. ಅದಕ್ಕೆ ಸರಕಾರ ಮತ್ತು ಕಗಪದವರು “ನೀವು ಇನ್ನು ಮುಂದೆ ನುಡಿಯನ್ನು ಬಳಸಿ ಆನ್ವಯಿಕ ತಂತ್ರಾಂಶ (ಅಪ್ಲಿಕೇಶನ್ ಸಾಫ್ಟ್‌ವೇರ್) ತಯಾರಿಸಿರಿ” ಎಂದುತ್ತರಿಸಿದರು. ಆನ್ವಯಿಕ ತಂತ್ರಾಂಶ ಎಂದರೆ ಅಂತರಜಾಲ ತಾಣಗಳ ನಿರ್ಮಾಣ, ವೇತನ ಪಟ್ಟಿ ತಯಾರಿಕೆ, ಗ್ರಂಥಾಲಯ, ಸಾರಿಗೆ, ಸಿ.ಡಿ.ಗಳ ತಯಾರಿಕೆ, ಇತ್ಯಾದಿ. ಆದರೆ ತಂತ್ರಾಂಶ ತಯಾರಕರಿಗೆ ಬೇಗನೆ ಭ್ರಮನಿರಸನ ಕಾದಿತ್ತು. ಸರಕಾರವು ತನ್ನ ಕನ್ನಡದ ಎಲ್ಲ ತಂತ್ರಾಂಶ ಅಗತ್ಯಗಳಿಗೆ ಕಗಪವನ್ನೇ ಅವಲಂಬಿಸತೊಡಗಿತು. ಕಗಪವೂ ತನ್ನ ಮೂಲ ಉದ್ದೇಶವನ್ನು ಹಿನ್ನೆಲೆಗೆ ಸರಿಸಿ ಪಂಪಭಾರತದ ಸಿ.ಡಿ., ವೇತನ ತಂತ್ರಾಂಶ, ಕಚೇರಿ ತಂತ್ರಾಂಶ, ಇತ್ಯಾದಿಗಳ ತಯಾರಿಕೆಗೆ ತೊಡಗಿತು.
ಭಾರತೀಯ ಭಾಷೆಗಳ ತಂತ್ರಾಂಶಳಿಗೆ ದೊಡ್ಡ ಗಿರಾಕಿ ಸರಕಾರ ಮತ್ತು ಅರೆ-ಸರಕಾರಿ ಸಂಸ್ಥೆಗಳು. ಉಳಿದಂತೆ ಜನಸಾಮಾನ್ಯರಿಗೆ ಕನ್ನಡದ ಆನ್ವಯಿಕ ತಂತ್ರಾಂಶಗಳು ಬೇಡ. ಸರಕಾರ ಮತ್ತು ಸರೆ-ಸರಕಾರಿ ಸಂಸ್ಥೆಗಳು ತಮ್ಮೆಲ್ಲ ಆವಶ್ಯಕತೆಗಳಿಗೆ ಒಂದೇ ಸಂಸ್ಥೆಯನ್ನು ನಂಬಿದರೆ ಕನ್ನಡದಲ್ಲಿ ತಂತ್ರಾಂಶ ಉದ್ಯಮ ಬೆಳೆಯಲಾರದು. ೫ ಕೋಟಿ ಕನ್ನಡಿಗರಿಗೆ ಬೇಕಾದ ಎಲ್ಲ ತಂತ್ರಾಂಶ ತಯಾರಿಸಿ ಕೊಡುವುದು ಮತ್ತು ಅದಕ್ಕೆ ತಯಾರಿಕೆಯ ನಂತರದ ಅಗತ್ಯ ಸಹಾಯ ಒದಗಿಸುವುದು ಕಗಪಕ್ಕೆ ಮೀರಿದ ಸಂಗತಿ. ಕಗಪವು ಆನ್ವಯಿಕ ತಂತ್ರಾಂಶ ತಯಾರಿಸುವುದು ತನ್ನ ಹೊಣೆಯಲ್ಲ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ಶಿಷ್ಟತೆಗಳ ಬಗ್ಗೆ ಶ್ವೇತಪತ್ರಗಳ ತಯಾರಿ, ಶಿಷ್ಟತೆಗೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡದ ಪ್ರಾತಿನಿಧ್ಯ, ಗಣಕಗಳಲ್ಲಿ ಕನ್ನಡದ ಅಳವಡಿಕೆಗೆ ಬೇಕಾದ ಮೂಲಭೂತ ಸವಲತ್ತುಗಳ ತಯಾರಿ (ಉದಾ: ಯುನಿಕೋಡ್ ನುಡಿ), ಇತ್ಯಾದಿಗಳನ್ನು ಮಾತ್ರ ತನ್ನ ಹೊಣೆಯಾಗಿಸಿಕೊಳ್ಳಬೇಕಿತ್ತು. ಆದರೆ ಕಗಪ ಇದನ್ನೆಲ್ಲ ಗಾಳಿಗೆ ತೂರಿದೆ. ಸರಕಾರವೇ ಕಗಪಕಕ್ಕೆ ವಹಿಸಿದ ೧೪ ಕಾರ್ಯಯೋಜನೆಗಳಲ್ಲಿ ಇತರ ಕನ್ನಡ ತಂತ್ರಾಂಶಗಳಿಂದ ನುಡಿಗೆ ಪರಿವರ್ತಕ ತಂತ್ರಾಂಶ, ಕನ್ನಡ ಲೋಗೋ, ಲಿನಕ್ಸ್‌ನಲ್ಲಿ ಕನ್ನಡ, ಸ್ಟಾರ್ ಆಫೀಸಿನ ಕನ್ನಡ ಆವೃತ್ತಿ, ಇತ್ಯಾದಿ ಯಾವುವೂ ಬಿಡುಗಡೆಯಾಗಿಲ್ಲ.
– ಡಾ. ಯು. ಬಿ. ಪವನಜ
( ೧೦-೧೦-೨೦೦೩ ದಿನಾಂಕದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಲೇಖನ “ಒಂದು ಸೊನ್ನೆ” ಅಂಕಣದದಲ್ಲಿ ಪ್ರಕಟವಾಗಬೇಕಿತ್ತು. ಆದರೆ ಸಂಪಾದಕರು ಇದನ್ನು ಪ್ರಕಟಿಸಲು ಅನರ್ಹ ಎಂದು ತೀರ್ಮಾನಿಸಿದ ಕಾರಣ ಇದು ಪ್ರಕಟವಾಗಲಿಲ್ಲ.)
ನೋಡಿ:
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೧
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೨
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೩
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೪
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ – ಭಾಗ -೫