ತಂತ್ರಾಂಶ ಚೌರ್ಯ -ಅಸಲು, ನಷ್ಟ ಯಾರಿಗೆ?

[ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ “ಒಂದು ಸೊನ್ನೆ” ಹೆಸರಿನ ಅಂಕಣದಲ್ಲಿ ಪ್ರಕಟವಾದ ಲೇಖನ]

[ಒಂದು ಸೊನ್ನೆ – ೧ (೦೬-೦೬-೨೦೦೩)]

ಧ್ವನಿಸುರುಳಿಗಳಲ್ಲಿ ಹೇಗೋ ಹಾಗೆ ತಂತ್ರಾಂಶಗಳಲ್ಲೂ ಪೈರೆಸಿ ಅರ್ಥಾತ್ ಚೌರ್ಯದ (software piracy) ಪಿಡುಗು ಒಂದು ದೊಡ್ಡ ಸುದ್ದಿಯಾಗಿದೆ. ಇತ್ತೀಚಿಗೆ ಅಮೇರಿಕಾದ ಐ.ಡಿ.ಸಿ. (ಮಾರುಕಟ್ಟೆ ಸಂಶೋಧನಾ ಸಂಸ್ಥೆ) ಯವರು ಒಂದು ಸಂಶೋಧನೆ ನಡೆಸಿ ಅದರ ವಿವರಗಳ ಲೇಖನ ಪ್ರಕಟಿಸಿದ್ದಾರೆ. ಮಾಹಿತಿ ತಂತ್ರeನದ ಆಗುಹೋಗುಗಳನ್ನು ತಿಳಿಸುವ ಮತ್ತು ವಿಶ್ಲೇಷಿಸುವ ಹಲವು ಅಂತರಜಾಲ ತಾಣಗಳಲ್ಲಿ ಈ ಲೇಖನ ಪ್ರಕಟವಾಯಿತು. ಕನ್ನಡದ ಒಂದು ಪತ್ರಿಕೆಯೂ ಸೇರಿದಂತೆ ಕೆಲವು ಪತ್ರಿಕೆಗಳಲ್ಲೂ ಇದು ಪ್ರಕಟವಾಯಿತು.

ಈ ವರದಿಯ ಪ್ರಕಾರ ತಂತ್ರಾಂಶ ಚೌರ್ಯದಲ್ಲಿ ಹತ್ತು ಅಂಕಗಳಷ್ಟು ಕಡಿಮೆಯಾದರೂ ಪ್ರಪಂಚಕ್ಕೆ ಎಷ್ಟು ಒಳಿತಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ತಂತ್ರಾಂಶ ಚೌರ್ಯವನ್ನು ಅಳೆಯಲು ಅವರು ಒಂದು ಮಾಪನವನ್ನು ಹುಟ್ಟುಹಾಕಿದ್ದಾರೆ. ಇದು ಕಾನೂನುಬದ್ಧವಾಗಿ ಹಣ ಕೊಟ್ಟು ಕೊಂಡ ತಂತ್ರಾಂಶ ಮತ್ತು ಹಣ ಕೊಡದೆ ಇತರರಿಂದ ಪ್ರತಿಮಾಡಿಕೊಂಡ ತಂತ್ರಾಂಶಗಳಿಗಿರುವ ಅನುಪಾತವನ್ನು ತಿಳಿಸುತ್ತದೆ. ಈ ಮಾಪನದಂತೆ ಹತ್ತು ಅಂಕಗಳಷ್ಟು ತಂತ್ರಾಂಶ ಚೌರ್ಯ ಕಡಿಮೆಯಾದಲ್ಲಿ ಪ್ರಪಂಚದಲ್ಲಿ ವರ್ಷಕ್ಕೆ ೧೫ ಲಕ್ಷಗಳಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿ ೨೦೦೬ನೆಯ ಇಸವಿಯ ಹೊತ್ತಿಗೆ ಸುಮಾರು ೧.೪ ಕೋಟಿಯಷ್ಟು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವುವು. ಸದ್ಯ ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ತಂತ್ರಾಂಶಗಳಲ್ಲಿ ಶೇಕಡ ೪೦ ರಷ್ಟು ಕಾನೂನುಬದ್ಧವಲ್ಲ. ಇವುಗಳ ಪ್ರಮಾಣವನ್ನು ಶೇಕಡ ೩೦ಕ್ಕೆ ಇಳಿಸಿದರೂ ತಂತ್ರಾಂಶ ಉದ್ದಿಮೆ ೪೦೦ ಬಿಲಿಯನ್ (ಶತಕೋಟಿ) ಅಮೆರಿಕನ್ ಡಾಲರ್ ಮೊತ್ತದಷ್ಟು ಹೆಚ್ಚಿಗೆ ವ್ಯವಹಾರ ಮಾಡಬಲ್ಲುದು ಮತ್ತು ಸರಕಾರಕ್ಕೆ ೬೪ ಬಿಲಿಯನ್ ಡಾಲರ್ ಹೆಚ್ಚಿಗೆ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗುವುದು. ಈ ಹಣದಿಂದ ಸರಕಾರವು ಎಷ್ಟು ಹೆಚ್ಚು ಶಾಲೆಗಳಿಗೆ ಗಣಕಗಳನ್ನು ಹಂಚಬಹುದು ಎಂಬುದನ್ನೂ ಇದೇ ವರದಿಯಲ್ಲಿ ತಿಳಿಸಲಾಗಿದೆ. ಎಲ್ಲ ವಿಷಯಗಳು ಸರಿಯಾಗಿಯೇ ಇವೆ. ಆದರೆ ಇದು ನೀವು ಯಾವ (ಯಾರ) ದೃಷ್ಟಿಕೋನದಿಂದ ನೋಡುತ್ತಿದ್ದೀರಿ ಎಂಬುದನ್ನು ಅವಲಂಬಿಸಿದೆ.

ತಂತ್ರಾಂಶ ಚೌರ್ಯ ಎಂದರೇನು? ಒಂದು ಕಂಪೆನಿ ತಂತ್ರಾಂಶವೊಂದನ್ನು ತಯಾರಿಸಿ ಮಾರುತ್ತಿದೆ ಎಂದಿಟ್ಟುಕೊಳ್ಳಿ. ಇದನ್ನು ಒಬ್ಬಾತ ಕೊಂಡುಕೊಳ್ಳುತ್ತಾನೆ. ಈ ತಂತ್ರಾಂಶಗಳು ಹೆಚ್ಚಾಗಿ ಸಿ.ಡಿ.ಯಲ್ಲಿರುತ್ತವೆ. ಒಂದು ಖಾಲಿ ಸಿ.ಡಿ. ೧೫ ರೂಪಾಯಿಗಳಿಗೆ ಸಿಗುತ್ತದೆ. ಈ ತಂತ್ರಾಂಶವನ್ನು ಖಾಲಿ ಸಿ.ಡಿ.ಯಲ್ಲಿ ಪ್ರತಿಮಾಡಿ ಅದನ್ನು ಹಂಚಿದರೆ ಅದು ಚೌರ್ಯವಾಗುತ್ತದೆ. ಭಾರತದಲ್ಲಿ ಬಳಕೆಯಲ್ಲಿರುವ ಬಹುಪಾಲು ತಂತ್ರಾಂಶಗಳು ಚೌರ್ಯದವೇ. ತಂತ್ರಾಂಶಗಳಲ್ಲಿ ಎರಡು ವಿಧ -ಉತ್ಪನ್ನ ಮತ್ತು ಸೇವೆ ಅಥವಾ ಗ್ರಾಹಕರ ಅಗತ್ಯಕ್ಕನುಗುಣವಾಗಿ ತಯಾರಿಸಿದ ತಂತ್ರಾಂಶ. ಚೌರ್ಯಕ್ಕೊಳಗಾಗುವುದು ತಂತ್ರಾಂಶ ಉತ್ಪನ್ನಗಳು. ಮೈಕ್ರೋಸಾಫ್ಟ್ ವಿಂಡೋಸ್, ಆಫೀಸ್, ಅಡೋಬ್ ಫೋಟೋಶಾಪ್, ಪೇಜ್‌ಮೇಕರ್, ಕೋರೆಲ್‌ಡ್ರಾ ಇತ್ಯಾದಿಗಳು ಉತ್ಪನ್ನಗಳಿಗೆ ಉದಾಹರಣೆಗಳು. ಬ್ಯಾಂಕಿಂಗ್, ರೈಲ್ವೆ, ಅಂತರಜಾಲ ತಾಣ ನಿರ್ಮಾಣ, ವೇತನ, ಕಚೇರಿ ನಿರ್ವಹಣೆ, ಇತ್ಯಾದಿ ಆಯಾ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ತಂತ್ರಾಂಶ ತಯಾರಿಸಿದರೆ ಅದು ಸೇವೆ ಎಂದೆನಿಸಿಕೊಳ್ಳುತ್ತದೆ.

ಭಾರತದಲ್ಲಿ ಅತಿ ಹೆಚ್ಚು ಚೌರ್ಯಕ್ಕೊಳಪಡುತ್ತಿರುವುದು ತಂತ್ರಾಂಶ ಉತ್ಪನ್ನಗಳು. ಗಣಕ ಕೊಂಡಾಗ ನಿಮಗೆ ಗಣಕ ಮಾರಿದ ವ್ಯಾಪಾರಿ ಹಲವಾರು ತಂತ್ರಾಂಶಗಳನ್ನು ತುಂಬಿಸಿ ಕೊಟ್ಟಿರುತ್ತಾನೆ. ಆದರೆ ಇದು ಕಾನೂನು ಬಾಹಿರ. ಈ ಎಲ್ಲ ತಂತ್ರಾಂಶಗಳನ್ನು ನೀವು ಕಾನೂನುಬದ್ಧವಾಗಿ ಹಣ ಕೊಟ್ಟು ಕೊಂಡರೆ ಅವುಗಳ ಒಟ್ಟು ಬೆಲೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ತಲುಪಬಹುದು. ಈ ಬೆಲೆ ಬಹುಪಾಲು ಭಾರತೀಯರಿಗೆ ದುಬಾರಿಯೇ. ಅಂತೆಯೇ ಭಾರತದಲ್ಲಿ ತಂತ್ರಾಂಶ ಚೌರ್ಯ ಅತಿ ಹೆಚ್ಚು.

ಒಂದು ಕಂಪೆನಿ ತಂತ್ರಾಂಶದ ಉತ್ಪನ್ನವನ್ನು ತಯಾರಿಸಿ ಮಾರುತ್ತಿದೆ ಎಂದಿಟ್ಟುಕೊಳ್ಳಿ. ಅದು ತಂತ್ರಾಂಶದ ತಯಾರಿಗೆ ಹಲವು ಉದ್ಯೋಗಿಗಳಿಗೆ ವರ್ಷಗಳ ಕಾಲ ಸಂಬಳ ಕೊಟ್ಟಿರುತ್ತದೆ. ಅಮೇರಿಕದಲ್ಲಿರುವ ಮೈಕ್ರೋಸಾಫ್ಟ್ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ಸುಮಾರು ೫೦,೦೦೦ ಉದ್ಯೋಗಿಗಳಿದ್ದಾರೆ. ಅವರೆಲ್ಲರ ಒಟ್ಟು ಸಂಬಳ ಎಷ್ಟಿರಬಹುದೆಂದು ಊಹಿಸಿ. ಅದು ತಯಾರಿಸಿ ಮಾರುತ್ತಿರುವ ತಂತ್ರಾಂಶವನ್ನು ಹಣ ಕೊಟ್ಟು ಕೊಂಡುಕೊಳ್ಳದೆ ಚೌರ್ಯ ಮಾಡಿದರೆ ಸಹಜವಾಗಿಯೇ ಅದಕ್ಕೆ ನಷ್ಟವಾಗುತ್ತದೆ. ತಂತ್ರಾಂಶ ಚೌರ್ಯದ ಪಿಡುಗಿನಿಂದಾಗಿಯೇ ಹಲವು ಕಂಪೆನಿಗಳು ಬಾಗಿಲು ಮುಚ್ಚಬೇಕಾಗಿ ಬಂದಿವೆ.

ಈ ತಂತ್ರಾಂಶ ಉತ್ಪನ್ನಗಳನ್ನು ಯಾರು ತಯಾರಿಸುತ್ತಾರೆ? ಬಹುತೇಕ ಅಮೇರಿಕನ್ ಕಂಪೆನಿಗಳು. ಕೆಲವೇ ಕೆಲವು ಯುರೋಪಿಯನ್ ಮತ್ತು ಇನ್ನು ಕೆಲವು ಕೆನಡಾ ದೇಶದವುಗಳು. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ತಂತ್ರಾಂಶ ಉತ್ಪನ್ನ ಯಾವುದೂ ಇಲ್ಲ. ಭಾರತ ದೇಶವು ತಂತ್ರಾಂಶ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ. ಆದರೆ ಇವೆಲ್ಲ ಕೇವಲ ತಂತ್ರಾಂಶ ಸೇವೆಗೆ ಮೀಸಲಾಗಿವೆ.

ಅಮೇರಿಕದಲ್ಲಿರುವ ಬಹುಪಾಲು ತಂತ್ರಾಂಶ ತಯಾರಿಯ ಕಂಪೆನಿಗಳಲ್ಲಿ ಸುಮಾರು ಶೇಕಡ ೩೦ ರಷ್ಟು ಮಂದಿ ಭಾರತ ಸಂಜಾತರಿದ್ದಾರೆ. ಇವರೆಲ್ಲ ನಮ್ಮ ದುಡ್ಡಿನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಐ.ಐ.ಟಿ., ಐ.ಐ.ಎಸ್‌ಸಿ., ಇತ್ಯಾದಿ ಖ್ಯಾತ ಸಂಸ್ಥೆಗಳಿಂದ ಉತ್ತಮ ಶಿಕ್ಷಣ ಪಡೆದು ಹೋದವರು. ಇವರನ್ನು ತಯಾರಿಸಲು ಅಮೇರಿಕದ ಯಾವ ಕಂಪೆನಿಯೂ ದುಡ್ಡು ಖರ್ಚು ಮಾಡಿರುವುದಿಲ್ಲ. ಖರ್ಚಾದುದೇನಿದ್ದರೂ ನಮ್ಮ ನಿಮ್ಮ ತೆರಿಗೆಯ ಹಣ. ಇವರು ದುಡಿದು ತಯಾರಿಸಿದ ತಂತ್ರಾಂಶವನ್ನು ನಾವು ದುಬಾರಿ ಡಾಲರ್ ಬೆಲೆಯಲ್ಲಿ ಕೊಳ್ಳಬೇಕಾಗಿದೆ.

ವಿದೇಶದಲ್ಲಿ ಸಿದ್ಧವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಪುಸ್ತಕಗಳನ್ನು ಭಾರತದಲ್ಲಿ ಮೂಲ ಡಾಲರ್ ಬೆಲೆಯಲ್ಲಿ ಮಾರುತ್ತಿಲ್ಲ. ಪುಸ್ತಕಗಳ ಭಾರತೀಯ ಆವೃತ್ತಿಯನ್ನು ಭಾರತದಲ್ಲೇ ಮುದ್ರಿಸಿ ಕಡಿಮೆ ಬೆಲೆಗೆ ಮಾರಲಾಗುತ್ತಿದೆ. ಉದಾಹರಣೆಗೆ ಒಂದು ಪುಸ್ತಕದ ಅಮೇರಿಕನ್ ಆವೃತ್ತಿಗೆ ೬೦ ಡಾಲರ್ ಬೆಲೆ ಇರುವುದಾದರೆ ಅದರ ಭಾರತೀಯ ಆವೃತ್ತಿ ಸುಮಾರು ೫೦೦ ರೂಪಾಯಿಗಳಿಗೆ ಲಭ್ಯ. ಇದೇ ಸೂತ್ರವನ್ನು ತಂತ್ರಾಂಶಗಳಿಗೆ ಯಾವ ಕಂಪೆನಿಯೂ ಅನ್ವಯಿಸುತ್ತಿಲ್ಲ.

ತಂತ್ರಾಂಶ ತಯಾರಿಯ ಕಂಪೆನಿಗಳು ಭಾರತದಲ್ಲಿ ತಂತ್ರಾಂಶವನ್ನು ಮಾರುವಾಗ ತಂತ್ರಾಂಶದ ಮೂಲ ಬೆಲೆ ಡಾಲರ್‌ನಲ್ಲಿದ್ದರೆ ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಮಾರುತ್ತವೆ. ಕೇವಲ ಡಾಲರ್‌ನಿಂದ ರೂಪಾಯಿಗೆ ಪರಿವರ್ತಿಸುವುದು ಮಾತ್ರವಲ್ಲ, ಅದರ ಮೇಲೆ ಆಮದು ಸುಂಕ, ಮಾರಾಟ ತೆರಿಗೆ, ಇಲ್ಲಿಯ ಡೀಲರ್ ಸೇರಿಸುವ ತನ್ನ ಲಾಭ, ಇತ್ಯಾದಿಗಳು ಸೇರಲ್ಪಟ್ಟು ತಂತ್ರಾಂಶ ಬಡ ಭಾರತೀಯನ ಕೈಗೆಟುಲಾಗದಷ್ಟು ದುಬಾರಿಯಾಗುತ್ತದೆ. ೨೫೦ ಡಾಲರ್ ಮೂಲಬೆಲೆಯ ತಂತ್ರಾಂಶ ಭಾರತದಲ್ಲಿ ಸುಮಾರು ೨೩,೦೦೦ ರೂಪಾಯಿಗಳಿಗೆ ಮಾರಾಟವಾಗುತ್ತಿರುತ್ತದೆ.

ತಂತ್ರಾಂಶ ಚೌರ್ಯದಿಂದಾಗಿ ನಷ್ಟಕ್ಕೊಳಗಾಗುತ್ತಿರುವವರು ತಂತ್ರಾಂಶ ಉತ್ಪನ್ನಗಳನ್ನು ತಯಾರಿಸುವ ಅಮೇರಿಕನ್ ಕಂಪೆನಿಗಳೇ ವಿನಾ ತಂತ್ರಾಂಶ ಸೇವೆಯನ್ನಷ್ಟೇ ನೀಡುತ್ತಿರುವ ಭಾರತೀಯ ಕಂಪೆನಿಗಳಲ್ಲ. ಚೌರ್ಯ ಕಡಿಮೆಯಾದರೆ ಸರಕಾರದ ಬೊಕ್ಕಸಕ್ಕೆ ಆಮದು ಸುಂಕ ಮತ್ತು ತೆರಿಗೆ ರೂಪದಲ್ಲಿ ಸ್ವಲ್ಪ ಹಣ ಸಂಗ್ರಹವಾಗಬಹುದೆಂಬುದೇನೋ ನಿಜವೇ. ಆದರೆ ಈ ಹಣ ಅಂತಹ ದೊಡ್ಡ ಮಟ್ಟದ್ದೇನೂ ಅಲ್ಲ. ಯಾಕೆಂದರೆ ತಂತ್ರಾಂಶ ಉತ್ಪನ್ನಗಳಿಗೆ ಬಹುದೊಡ್ಡ ಗ್ರಾಹಕ ಸರಕಾರವೇ. ಇನ್ನೊಂದು ದೊಡ್ಡ ಗ್ರಾಹಕ ಎಂದರೆ ತಂತ್ರಾಂಶ ಕ್ಷೇತ್ರದ ಕಂಪೆನಿಗಳು. ಇವುಗಳಲ್ಲಿ ಬೆರಳೆಣಿಕೆಯ ಭಾರತೀಯ ಕಂಪೆನಿಗಳನ್ನು ಹೊರತುಪಡಿಸಿದರೆ ಉಳಿದವು ವಿದೇಶಿ ಮೂಲದವೇ. ಅಂದರೆ ಚೌರ್ಯ ಕಡಿಮೆಯಾದರೆ ಲಾಭ ಹೆಚ್ಚಾಗುವುದೆಂದು ಐ.ಡಿ.ಸಿ. ಹೇಳಿರುವುದು ಅಮೇರಿಕಾಕ್ಕೆ ಅನ್ವಯಿಸುವುದೇ ವಿನಾ ಭಾರತಕ್ಕಲ್ಲ.

ಭಾರತದಲ್ಲಿ ತಂತ್ರಾಂಶ ಚೌರ್ಯವನ್ನು ಕಡಿಮೆ ಮಾಡಬೇಕಾದರೆ ಅಮೇರಿಕನ್ ಮೂಲದ ಕಂಪೆನಿಗಳು ಮಾಡ ಬೇಕಾದುದೇನೆಂದರೆ ತಮ್ಮ ತಂತ್ರಾಂಶವನ್ನು ಭಾರತೀಯರ ಕೈಗೆಟುಕುವ ಬೆಲೆಯಲ್ಲಿ ಮಾರುವುದು. ನಮ್ಮ ದೇಶದಿಂದ ಪ್ರತಿಭಾವಂತರನ್ನು ಅನಾಯಾಸವಾಗಿ ಪಡೆದಿರುವ ಈ ಕಂಪೆನಿಗಳು ಭಾರತ ದೇಶದ ಋಣವನ್ನು ಈ ರೀತಿಯಲ್ಲಾದರೂ ತೀರಿಸಬಹುದು.

ಕರ್ನಾಟಕ ಸರಕಾರವು ಶೂನ್ಯ ಚೌರ್ಯದ (Zero Piracy) ರಾಜ್ಯ ಎಂದು ಘೋಷಿಸಿಕೊಂಡಿದೆ. ಸರಕಾರದ ಯಾವ ಕಚೇರಿಯಲ್ಲೂ ಕಾನೂನುಬದ್ಧವಲ್ಲದ ತಂತ್ರಾಂಶ ಇರಕೂಡದು ಎಂದು ಸುತ್ತೋಲೆ ಜಾರಿ ಮಾಡಲಾಗಿದೆ. ಈ ಬಗ್ಗೆ ಒಂದು ಪತ್ರಿಕಾಗೋಷ್ಠಿಯನ್ನೂ ಕರೆಯಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯವರಿಗೆ ತಂತ್ರಾಂಶ ಚೌರ್ಯದ ಸುತ್ತ ಇರುವ ಈ ಸೂಕ್ಷ್ಮಗಳನ್ನೆಲ್ಲ ವಿವರಿಸಿಲಾಯಿತು. ವಿದೇಶಿ ಕಂಪೆನಿಗಳು ತಮ್ಮ ತಂತ್ರಾಂಶಗಳಿಗೆ ಭಾರತದಲ್ಲಿ ಮಾರಲು ಪ್ರತ್ಯೇಕ (ಕಡಿಮೆ) ಬೆಲೆ ಇಡುವಂತೆ ಸರಕಾರವು ಕೇಳಿಕೊಳ್ಳಬೇಕು ಎಂದು ಕಾರ್ಯದರ್ಶಿಯವರಿಗೆ ವಿಶೇಷ ಮನವಿ ಮಾಡಲಾಯಿತು. ಆದರೆ ಇದರಿಂದ ಏನೇನೂ ಪ್ರಯೋಜನವಾದಂತೆ ಕಂಡುಬಂದಿಲ್ಲ. ಭಾರತೀಯರ ಕೈಗೆಟುಕುವಂತೆ ತಂತ್ರಾಂಶದ ಬೆಲೆ ನಿಗದಿಪಡಿಸಿ ಎಂದು ಸರಕಾರವು ಯಾವುದೇ ಅಮೇರಿಕನ್ ಕಂಪೆನಿಗೆ ಹೇಳಿರುವುದು ವರದಿಯಾಗಿಲ್ಲ.

(ಇತ್ತೀಚೆಗೆ ಮೈಕ್ರೋಸಾಫ್ಟ್ ಕಂಪೆನಿ ವಿಂಡೋಸ್‌ನ ಪ್ರಾರಂಭಿಕ ಆವೃತ್ತಿಯನ್ನು ಕಡಿಮೆ ಬೆಲೆಗೆ ಭಾರತದಲ್ಲಿ ನೀಡಲು ಪ್ರಾರಂಬಭಿಸಿದೆ (೧೭-೧೧-೨೦೦೫))

ಡಾ. ಯು. ಬಿ. ಪವನಜ

Leave a Reply