-ಡಾ| ಯು.ಬಿ. ಪವನಜ
ಕೆಲವು ಉದಾಹರಣೆಗಳನ್ನು ಗಮನಿಸಿ:
೧. ಮುಂಬಯಿಯಿಂದ ಬೆಂಗಳೂರಿಗೆ ಹೋಗುತ್ತಿರುವ ವಿಮಾನ. ಚಿಕ್ಕಪ್ರಾಯದ ದಂಪತಿಗಳು ಸುಮಾರು ೩ ವರ್ಷ ಪ್ರಾಯದ ಮಗುವಿನ ಜೊತೆ ಕೂತಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಗಂಡ ಓದುತ್ತಿದ್ದುದು ಇಂಡಿಯಾ ಟುಡೇ ಪತ್ರಿಕೆ. ದಂಪತಿಗಳು ತಮ್ಮ ನಡುವೆ ಮತ್ತು ಮಗುವಿನೊಡನೆ ಮಾತನಾಡಲು ಉಪಯೋಗಿಸುತ್ತಿದ್ದ ಭಾಷೆ ಇಂಗ್ಲಿಷ್. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಿದ್ದಂತೆ ದಂಪತಿಗಳು ತಮ್ಮೊಡನೆ ಹಾಗೂ ಮಗುವಿನೊಡನೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಹೊರಬಂದು ರಿಕ್ಷಾ ಅಥವಾ ಟ್ಯಾಕ್ಸಿ ಡೆವರ್ ಜೊತೆ ಅಪ್ಪಟ ಕನ್ನಡದಲ್ಲಿ ವಾಗ್ವಾದಕ್ಕಿಳಿಯುತ್ತಾರೆ. ದಂಪತಿಗಳು ಕನ್ನಡಿಗರೆ. ವಿಮಾನ ಪ್ರಯಾಣ ಮಾಡುತ್ತಿರುವಾಗ ಎಲ್ಲರ ಮುಂದೆ (ತಮ್ಮ ಮಧ್ಯೆ) ಕನ್ನಡ ಭಾಷೆ ಉಪಯೋಗಿಸಲು ಕೀಳರಿಮೆ.
೨. ಮುಂಬಯಿಯಿಂದ ಬೆಂಗಳೂರಿಗೆ ಬರುತ್ತಿರುವ ರೈಲಿನ ಹವಾನಿಯಂತ್ರಿತ ಬೋಗಿಯಲ್ಲೂ ನೀವು ಇಂತಹದೇ ದ್ಯಶ್ಯವನ್ನು ಕಾಣುತ್ತೀರಿ. ರೈಲಿನೊಳಗಡೆ ತಮ್ಮ ಮಧ್ಯೆ ಕೂಡಾ ಇಂಗ್ಲಿಷ್ ಭಾಷೆ ಪ್ರಯೋಗ. ರೈಲಿನಿಂದಿಳಿಯುತ್ತಿದ್ದಂತೆ ಕನ್ನಡ ಭಾಷೆ. ಈ ಚಾಳಿ ಕಾಣಸಿಗುವುದು ಹವಾನಿಯಂತ್ರಿತ ಬೋಗಿಯಲ್ಲಿ ಮಾತ್ರ. ಜನಸಾಮಾನ್ಯರು ಪಯಣಿಸುವ ದ್ವೀತಿಯ ದರ್ಜೆಯ ಬೋಗಿಯಲ್ಲಿ ಈ ಪಿಡುಗು ಕಾಣಸಿಗುವುದಿಲ್ಲ.
೩. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಮರ್ಶಿಯಲ್ ಸ್ಟ್ರೀಟ್ ಇತ್ಯಾದಿ ಜಾಗಗಳಲ್ಲಿರುವ ದೊಡ್ಡ ದೊಡ್ಡ ಅಂಗಡಿಗಳಿಗೆ ಭೇಟಿ ನೀಡಿ. ಅಲ್ಲಿ ನಿಮ್ಮನ್ನು ಇಂಗ್ಲಿಷಿನಲ್ಲಿ ಸ್ವಾಗತಿಸುತ್ತಾರೆ. ನೀವೇನೊ ಬಾಯಿ ತಪ್ಪಿ ಕನ್ನಡದಲ್ಲೇ ಮಾತನಾಡಿ ನೋಡಿ. ಈ ಆಸಾಮಿಯಲ್ಲಿ ತನ್ನ ಅಂಗಡಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕೊಳ್ಳಲು ತಕ್ಕಷ್ಟು ಹಣವಿಲ್ಲ ಎಂಬಂತೆ ಅಂಗಡಿಯಾತನ ಮಾತನಾಡುವ ಧೋರಣೆ ಬದಲಾಗುತ್ತದೆ. ಅದಕ್ಕೆ ಸರಿಹೊಂದುವಂತೆ ನಮ್ಮ ಕನ್ನಡಿಗರೂ ಅಂತಹ ಅಂಗಡಿ ಹೊಕ್ಕಡನೆ ಇಂಗ್ಲಿಷಿನಲ್ಲೇ ವ್ಯವಹರಿಸುತ್ತಾರೆ.
೪. ಇತ್ತೀಚಿಗೆ ನಾನು ಠೀಕಾಗಿ ಉಡುಪು ಧರಿಸಿ, ಸೊಂಟಕ್ಕೊಂದು ಮೊಬೈಲ್ ಫೋನು ತೂಗಾಡಿಸಿಕೊಂಡು ಜಯನಗರದ ಅಂಗಡಿಯೊಂದಕ್ಕೆ ಟಿವಿ ಕೊಳ್ಳಲು ಹೊಕ್ಕಿದ್ದೆ. ನಾನು ಕನ್ನಡದಲ್ಲಿ ಮಾತನಾಡಿಸಿದರೂ ಅಂಗಡಿಯಾತ ಉತ್ತರಿಸುತ್ತಿದ್ದ ಭಾಷೆ ಇಂಗ್ಲಿಷ್. ನಾನು ಕೇಳಿದೆ ``ನಿಮಗೆ ಕನ್ನಡ ಬರೋಲ್ಲವೇ?". ಆತ ಉತ್ತರಿಸಿದ -``ನಿಮ್ಮನ್ನು ನೋಡಿದರೆ ಇಂಗ್ಲಿಷ್ ಬಲ್ಲವರಂತೆ ಕಾಣುತ್ತೀರಿ". ಇಂಗ್ಲಿಷ್ ಬಲ್ಲವರಾದರೆ ಕನ್ನಡದಲ್ಲಿ ಮಾತನಾಡಬಾರದು ಎಂದೇನಾದರೂ ಕಾನೂನು ಇದೆಯೇ? ಇಲ್ಲೂ ಅಂಗಡಿಯಾತನ ಧೋರಣೆ ಅದೇ -ಹಣವಿರುವ ವ್ಯಕ್ತಿ ಮಾತನಾಡುವ ಭಾಷೆ ಇಂಗ್ಲಿಷ್, ಕನ್ನಡ ಅಲ್ಲ.
ಈಗ ಹೇಳಿ. ಕನ್ನಡ ಕೇವಲ ಬಡವರ ಭಾಷೆಯೇ?
(೨೦೦೨ರಲ್ಲಿ ಬರೆದದ್ದು)