ಒಂದು ಸೊನ್ನೆ - ೫ (೧೫-೮-೨೦೦೩)
ಅಕ್ಷರಗಳಿಂದ ಆರಂಭ
ಅಕ್ಷರಾಭ್ಯಾಸವಿಲ್ಲದವನು ಅವಿದ್ಯಾವಂತ ಎಂದೆನಿಸಿಕೊಳ್ಳುತ್ತಿದ್ದ ಕಾಲ ಹೋಯಿತು. ಗಣಕ ಗೊತ್ತಿಲ್ಲದವನು ಅವಿದ್ಯಾವಂತ ಎನಿಸಿಕೊಳ್ಳುವ ಕಾಲ ಬಂದಿದೆ. ಗಣಕಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ವಿವರವಾದ ಲೇಖನಮಾಲೆಯ ಮೊದಲ ಕಂತು.
ಹಾರ್ಮೋನಿಯಂ, ಪಿಟೀಲು, ಕೀಬೋರ್ಡ್, ಸಾಕ್ಸೋಫೋನ್, ಗಿಟಾರ್, ಮಾಂಡೋಲಿನ್ - ಇವುಗಳು ವಿದೇಶೀ ಮೂಲದ ಸಂಗೀತ ಉಪಕರಣಗಳು. ಆದರೆ ಇವು ಭಾರತೀಯ ಸಂಗೀತದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆ. ನಾವು ದಿನನಿತ್ಯ ಬಳಸುವ ಪೆನ್ನು ಕೂಡ ವಿದೇಶದ್ದೇ. ಆದರೆ ಅದರಲ್ಲಿ ನಾವು ಬರೆಯುವ ಭಾಷೆ ನಮ್ಮ ಕಸ್ತೂರಿ ಕನ್ನಡ. ಇದನ್ನೇ ರಾಷ್ಟ್ರಕವಿ ಗೋವಿಂದ ಪೈಯವರು "ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡ ನುಡಿಸು" ಎಂದು ಕರೆದಿದ್ದಾರೆ. ಇದೇ ತತ್ವವನ್ನು ನಾವೀಗ ಅನುಸರಿಸಲು ಹೊರಟಿರುವುದು ಇಪ್ಪತ್ತನೇ ಶತಮಾನದ ಅತ್ಯದ್ಭುತ ಆವಿಷ್ಕಾರವಾಗಿರುವ ಗಣಕದಲ್ಲಿ.
ಪದಸಂಸ್ಕರಣೆ ಮತ್ತು ಪುಟವಿನ್ಯಾಸ (ಡಿ.ಟಿ.ಪಿ.)
ಗಣಕಗಳಲ್ಲಿ ಕನ್ನಡದ ಬಳಕೆ ಸುಮಾರು ಎರಡೂವರೆ ದಶಕಗಳ ಹಿಂದೆ ಆರಂಭವಾಯಿತು. ಪ್ರಾರಂಭದಲ್ಲಿ ಕನ್ನಡದ ಬಳಕೆ ಆಗಿರುವುದು ಮುದ್ರಣ ಕ್ಷೇತ್ರದಲ್ಲಿ. ಕೈಬರೆಹದಿಂದ ಆರಂಭವಾದ ಕನ್ನಡ ಮುದ್ರಣವು ಸೈಕ್ಲೋಸ್ಟೈಲ್, ಲೆಟರ್ ಪ್ರೆಸ್‌ಗಳನ್ನು ದಾಟಿ ಈಗ ಎಲ್ಲರೂ ಬಳಸುತ್ತಿರುವ ಆಫ್‌ಸೆಟ್ ಮುದ್ರಣದ ಹಂತಕ್ಕೆ ಬಂತು. ಆಫ್‌ಸೆಟ್ ಮುದ್ರಣಕ್ಕೆ ಪುಟವಿನ್ಯಾಸ ಮಾಡಲು ಗಣಕ ಬೇಕು.
ಪದಸಂಸ್ಕರಣವು (word-processing) ಇದರಲ್ಲಿಯ ಮೊದಲ ಹಂತ. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಕ್ರಮವಿಧಿಗಳಲ್ಲಿ ಹಲವು ಸೌಕರ್ಯಗಳಿವೆ. ಒಮ್ಮೆ ಬರೆದ ಪತ್ರ ಯಾ ಲೇಖನವನ್ನು ಪುನಃ ಪುನಃ ತಿದ್ದಬಹುದು; ತಿದ್ದಿ ಮುದ್ರಿಸಬಹುದು; ಇಡೀ ವಾಕ್ಯ ಅಥವಾ ಪಾರಾವನ್ನು ಒಂದು ಜಾಗದಿಂದ ಎತ್ತಿ ಇನ್ನೊಂದು ಕಡೆಗೆ ಬದಲಾಯಿಸಬಹುದು; ಒಂದೇ ಪತ್ರವನ್ನು ಹಲವಾರು ವ್ಯಕ್ತಿಗಳಿಗೆ ಅವರವರ ಹೆಸರು ವಿಳಾಸ ಸೇರಿಸಿ ಕಳುಹಿಸಬಹುದು. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಪಠ್ಯದ ಜೊತೆ ಚಿತ್ರಗಳನ್ನು ಸೇರಿಸುವುದು, ಅಕ್ಷರದ ಗಾತ್ರವನ್ನು ಸಾವಿರದೊಂದು ಇಂಚಿನಷ್ಟು ನಿಯಂತ್ರಣೆ ಮಾಡುವುದು, ತಲೆಬರಹ, ಪಾರಾಗಳ ನುಡುವಿನ ಗಾತ್ರ ಮತ್ತು ಅಂತರ, ಹೀಗೆ ಹಲವು ಸೌಕರ್ಯಗಳು ಇಲ್ಲಿವೆ. ಈಗ ಎಲ್ಲ ಪುಸ್ತಕಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.
ಕೆ.ಪಿ. ರಾವ್ ಅವರ ಸೇಡಿಯಾಪು
ತಂತ್ರಾಂಶ ಪರಿಣತ ಕೆ.ಪಿ ರಾವ್ ಅವರು ಮಾರುಕಟ್ಟೆಯಲ್ಲಿರುವ ಹಲವು ತಂತ್ರಾಂಶಗಳಲ್ಲಿ ಬಳಸುತ್ತಿದ್ದ ಕನ್ನಡದ ವಿವಿಧ ಕೀಲಿಮಣೆ ವಿನ್ಯಾಸಗಳಿಗೆ ಏಕರೂಪತೆ ತರಲು ಪ್ರಯತ್ನಿಸಿದರು. ಇಂಗ್ಲೀಷ್ ಭಾಷೆಯ ೨೬ ಅಕ್ಷರಗಳನ್ನು ಮಾತ್ರವೇ ಬಳಸಿ ಕನ್ನಡದ ಎಲ್ಲ ಅಕ್ಷರಗಳನ್ನು ಊಡಿಸುವಂತೆ ಅವರು ತಮ್ಮ ವಿನ್ಯಾಸ ರೂಪಿಸಿದರು. ಇದರ ಸುಧಾರಿತ ರೂಪವೇ ಈಗ "ನುಡಿ" ತಂತ್ರಾಂಶದಲ್ಲಿ ಅಳವಡಿಸಲಾಗಿರುವ ಕೀಲಿಮಣೆಯ ವಿನ್ಯಾಸ. ಅವರು "ಸೇಡಿಯಾಪು" ಹೆಸರಿನ ಡಾಸ್‌ನಲ್ಲಿ ಕೆಲಸ ಮಾಡುವ ತಂತ್ರಾಂಶವನ್ನೂ ತಯಾರಿಸಿ ಉಚಿತವಾಗಿ ಹಂಚಿದ್ದರು.
ಕನ್ನಡದ ಅಕ್ಷರಗಳು
ಗಣಕದಲ್ಲಿ ಕನ್ನಡದ ಬಳಕೆಗೆ ಕನ್ನಡದ ಅಕ್ಷರಶೈಲಿಗಳು ಬೇಕು. ಇದನ್ನು ಗಣಕದ ಪರಿಭಾಷೆಯಲ್ಲಿ ಫಾಂಟ್ ಎನ್ನುತ್ತಾರೆ. ಅಕ್ಷರಶೈಲಿಯೊಂದಿದ್ದರೆ ಆಗಲಿಲ್ಲ. ಇದಕ್ಕೊಂದು ಕೀಲಿಮಣೆಯ ತಂತ್ರಾಂಶ ಬೇಕು. ಉದಾಹರಣೆಗೆ ಇಂಗ್ಲೀಷಿನ "p" ಎಂಬ ಕೀಲಿಯನ್ನು ಒತ್ತಿದರೆ ಗಣಕಕ್ಕೆ ಕನ್ನಡದ "ಪ" ಎಂಬ ಅಕ್ಷರದ ಸಂಕೇತವನ್ನು ಈ ತಂತ್ರಾಂಶ ಕಳುಹಿಸುತ್ತದೆ. ಸುಮಾರು ಎರಡೂವರೆ ದಶಕದ ಹಿಂದೆ ಹಲವು ಅಕ್ಷರಶೈಲಿ ಮತ್ತು ಕೀಲಿಮಣೆಯ ತಂತ್ರಾಂಶಗಳು ತಯಾರಾದವು. ಕೇಂದ್ರ ಸರಕಾರದ ಸಿ-ಡಾಕ್‌ನವರು (CDAC = Centre for Development of Advanced Computing) ಮೈಕ್ರೋಸಾಫ್ಟ್ ಡಾಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಅಳವಡಿಸಿದರು. ಇದನ್ನು ಬಳಸಲು ಗಣಕದೊಳಗೆ ಒಂದು ಹಾರ್ಡ್‌ವೇರ್ ಕಾರ್ಡನ್ನು ಸೇರಿಸಬೇಕಾಗಿತ್ತು. ಹಲವು ವರ್ಷಗಳ ನಂತರ ಅವರು ಇದರ ವಿಂಡೋಸ್ ಆವೃತ್ತಿಯನ್ನು ತಯಾರಿಸಿದರು. ಇದನ್ನು ಬಳಸಲು ಹಾರ್ಡ್‌ವೇರ್ ಕಾರ್ಡಿನ ಅಗತ್ಯವಿಲ್ಲ. ಎಂಬತ್ತರ ದಶಕದಲ್ಲಿ ಶ್ರೀಲಿಪಿ, ಆಕೃತಿ, ಶಬ್ದರತ್ನ, ವಿನ್‌ಕೀ, ಇತ್ಯಾದಿ ಹಲವು ಖಾಸಗಿ ಕಂಪೆನಿಗಳು ಕನ್ನಡದ ಅಕ್ಷರಶೈಲಿ ಮತ್ತು ಕೀಲಿಮಣೆಯ ತಂತ್ರಾಂಶಗಳನ್ನು ತಯಾರಿಸಿ ಮಾರಲು ಪ್ರಾರಂಭಿಸಿದರು.
ಸಪ್ತಸಾಗರಗಳಾಚೆ
ಅಮೇರಿಕಾದಲ್ಲಿ ಕನ್ನಡ ಚಟುವಟಿಕೆಗಳನ್ನು ಹುಟ್ಟುಹಾಕಿ ಬೆಳಸಲು ಕಾರಣೀಭೂತರಾದ ಶಿಕಾರಿಪುರ ಹರಿಹರೇಶ್ವರ ಅವರು "ಅಮೆರಿಕನ್ನಡ" ಎಂಬ ಪತ್ರಿಕೆಯನ್ನು ಸೃಷ್ಟಿಸಿ ನಡೆಸಿಕೊಂಡು ಬರುತ್ತಿದ್ದರು. ಅವರು ಈ ಪತ್ರಿಕೆ ಮುದ್ರಿಸಲು ಕಸ್ತೂರಿ ರಂಗಾಚಾರ್ ಅವರು ತಯಾರಿಸಿದ "ಕಸ್ತೂರಿ" ಎಂಬ ತಂತ್ರಾಂಶವನ್ನು ಉಪಯೋಗಿಸಿದರು. ಇದು ನಡೆದುದು ೧೯೮೪-೮೫ರಲ್ಲಿ. ಸುಮಾರು ಅದೇ ಕಾಲದಲ್ಲಿ ಅಮೇರಿಕಾದಲ್ಲೇ ನೆಲೆಸಿದ್ದ ವಿಶ್ವೇಶ್ವರ ದೀಕ್ಷಿತ್ ಅವರೂ ಒಂದು ಕನ್ನಡ ತಂತ್ರಾಂಶವನ್ನು ತಯಾರಿಸಿದ್ದರು. ಲಾಸ್ ಏಂಜಲಿಸ್‌ನಲ್ಲಿರುವ ದೀಕ್ಷಿತರ ಮನೆಗೆ ಹೋದಾಗ (೧೯೯೯) ಈ ತಂತ್ರಾಂಶ ಕೆಲಸ ಮಾಡುವುದನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ. ಈ ಎರಡೂ ತಂತ್ರಾಂಶಗಳು ಮೈಕ್ರೋಸಾಫ್ಟ್ ಡಾಸ್ ಮತ್ತು ವಿಂಡೋಸ್‌ಗಳಲ್ಲಿ ಕೆಲಸ ಮಾಡುತ್ತಿದ್ದವು. ಹಲವು ವರ್ಷಗಳ ನಂತರ (೧೯೯೬-೯೭) ಜಗದೀಶ್ ಮತ್ತು ವೆಂಕಟೇಶ್ ಎಂಬ ಉತ್ಸಾಹಿಗಳು ಯುನಿಕ್ಸ್ ಮತ್ತು ಇತರ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡಬಲ್ಲ "ಕಲೆ" (KALE = KAnnada Lipi Enthusiasists) ಎಂಬ ತಂತ್ರಾಂಶವನ್ನು ತಯಾರಿಸಿದ್ದರು. ಇದು ವೈeನಿಕ ಲೇಖನ ತಯಾರಿಸಲು ಬಳಸುತ್ತಿದ್ದ ಟೆಕ್‌ನ್ನು (TeX) ಉಪಯೋಗಿಸಿ ಇಂಗ್ಲೀಷ್ ಲಿಪಿಯಲ್ಲಿ ಬರೆದುದನ್ನು ಪೋಸ್ಟ್‌ಸ್ಕ್ರಿಪ್ಟ್ ಕಡತವನ್ನಾಗಿಸಿ ಮುದ್ರಿಸಿ ಕೊಡುತ್ತಿತ್ತು. ಕೆಲವು ವಿಜ್ಞಾನದ ವಿದ್ಯಾರ್ಥಿಗಳನ್ನು ಬಿಟ್ಟರೆ ಇತರರು ಇದನ್ನು ಬಳಸಿದ್ದು ಗೊತ್ತಿಲ್ಲ. ಇತ್ತೀಚಿಗೆ ತುಂಬ ಜನಪ್ರಿಯವಾಗಿರುವ ಕನ್ನಡ ತಂತ್ರಾಂಶ "ಬರಹ". ಇದನ್ನು ತಯಾರಿಸಿದವರು ಅಮೇರಿಕ ವಾಸಿಯಾಗಿರುವ ಶೇಶಾದ್ರಿವಾಸು ಅವರು. ಬರಹ ಅತಿ ಜನಪ್ರಿಯವಾಗಲು ಹಲವು ಕಾರಣಗಳಿವೆ -ಮುದ್ದಾದ ಅಕ್ಷರಶೈಲಿಗಳಿವೆ, ವಿಂಡೋಸ್‌ನಲ್ಲಿ ಕೆಲಸ ಮಾಡುತ್ತದೆ, ಇದು ಉಚಿತ, ಇಂಗ್ಲೀಷ್ ಮೂಲಕ ಕನ್ನಡವನ್ನು ಊಡಿಸುವುದು (ಅನಿವಾಸಿಗಳಿಗೆ ಇದು ಅನುಕೂಲ), ಶಿಷ್ಟತೆಯನ್ನು ಪಾಲಿಸುತ್ತಿದೆ, ತಂತ್ರಾಂಶ ತಯಾರಕರಿಗೆ ಬೇಕಾದ ಸವಲತ್ತುಗಳೂ ಇವೆ, ಯುನಿಕೋಡ್ ಅವೃತ್ತಿ ಲಭ್ಯವಿದೆ, ಇತ್ಯಾದಿ.
ನುಡಿ
ಕರ್ನಾಟಕ ಸರಕಾರದ ಸ್ವಾಮ್ಯಕ್ಕೊಳಪಟ್ಟ "ನುಡಿ" ತಂತ್ರಾಂಶವು ಸರಕಾರವು ಅಕ್ಷರಶೈಲಿ ಮತ್ತು ಕೀಲಿಮಣೆಗೆ ನಿಗದಿಪಡಿಸಿದ ಶಿಷ್ಟತೆಗೆ ಅನುಗುಣವಾಗಿ ಕನ್ನಡ ಗಣಕ ಪರಿಷತ್ತು ತಯಾರಿಸಿರುವ ತಂತ್ರಾಂಶ. ಇದರ ಜೊತೆ ಹಲವು ಅಕ್ಷರಶೈಲಿಗಳು ಮಾತ್ರವಲ್ಲದೆ ತಂತ್ರಾಂಶ ತಯಾರಕರಿಗೆ ಬೇಕಾದ ಉಪಕರಣಗಳೂ (SDK = Software Development Kit) ಉಚಿತವಾಗಿ ಲಭ್ಯ. ಇದು ವಿಂಡೋಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದರ ಯುನಿಕೋಡ್ ಆವೃತ್ತಿ ಇನ್ನೂ ತಯಾರಾಗಿಲ್ಲ.
ಲಿನಕ್ಸ್‌ನಲ್ಲಿ ಕನ್ನಡ
ಜಗತ್ತಿನಾದ್ಯಂತ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಮುಕ್ತ ಕಾರ್ಯಾಚರಣ ವ್ಯವಸ್ಥೆ ಲಿನಕ್ಸ್. ಕೆಲವು ಉತ್ಸಾಹಿಗಳು ಇದರಲ್ಲಿ ಕನ್ನಡವನ್ನು ಅಳವಡಿಸುತ್ತಿದ್ದಾರೆ. ಇದು ಇನ್ನೂ ಪೂರ್ಣವಾಗಿ ಜನಸಾಮಾನ್ಯರ ಬಳಕೆಗೆ ದೊರೆಯುವ ಹಂತಕ್ಕೆ ಬಂದಿಲ್ಲ (೨೦೦೩ರಲ್ಲಿ ಬರೆದದ್ದು).
ಗಣಕದಲ್ಲಿ ಕನ್ನಡವನ್ನು ಬಳಸಲು ಇದ್ದ ಮುಖ್ಯ ತೊಂದರೆ ಎಂದರೆ ಅಕ್ಷರಶೈಲಿ ಮತ್ತು ಕೀಲಿಮಣೆಗಳದ್ದು. ಅವು ಸಂಪೂರ್ಣವಾಗಿ ಪರಿಹಾರವಾಗಿವೆ. ಕನ್ನಡ ಬಳಸಲು ಕೆಲವರಿಗೆ ಈಗಲೂ ಇರುವ ಕೊರತೆಯೆಂದರೆ "ಇಚ್ಛಾಶಕ್ತಿ". ತನ್ನಿಚ್ಛೆಗೂ ಬೋಳುತಲೆಗೂ ಮದ್ದಿಲ್ಲ.
- ಡಾ. ಯು. ಬಿ. ಪವನಜ
(ಕೃಪೆ: ವಿಜಯ ಕರ್ನಾಟಕ)
ನೋಡಿ:
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ - ಭಾಗ -೧
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ - ಭಾಗ -೨
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ - ಭಾಗ -೩
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ - ಭಾಗ -೪
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ - ಭಾಗ -೫