ಆರೋಗ್ಯದ ಲೇಖನಗಳು
ನಾರು-ಬೇರುಗಳು ಏನು ಈ ನಾರು-ಬೇರುಗಳು ? ಕಾರ್ಬೋಹೈಡ್ರೇಟ್ ನಲ್ಲಿ ಎರಡು ವಿಧ. ಒಂದು, ದೊರಕುವ ಕಾರ್ಬೋಹೈಡ್ರೇಟ್ (ಅವೈಲಬಲ್), ಮತ್ತೊಂದು, ದೊರಕದ ಕಾರ್ಬೋಹೈಡ್ರೇಟ್(ಅನ್ ಅವೈಲಬಲ್), ದೊರಕುವ ಕಾರ್ಬೋಹೈಡ್ರೇಟ್-ಶರ್ಕರ ಪಿಷ್ಟ, ನಾರು-ಬೇರುಗಳು ದೊರಕದ ಕಾರ್ಬೋಹೈಡ್ರೇಟ್ ಗಳು. ಸಸ್ಯಗಳಲ್ಲಿನ ಜೀವಕಣತಂತುಕ(ಸೆಲ್ಯೂಲೋಸ್), ಅರೆಜೀವಕಣತಂತುಕ(ಹೆಮಿಸೆಲ್ಯೂಲೋಸ್), ಹಣ್ಣಂಟು(ಪೆಕ್ಟಿನ್), ಸಸ್ಯಗೋಂದು(ಪ್ಲಾಂಟ್ ಗಂ)-ಇವೆಲ್ಲಾ ಸೇರಿ ನಾರು-ಬೇರುಗಳಾಗುತ್ತವೆ. ಇವುಗಳಲ್ಲಿ ಎರಡು ವಿಧ. ನೀರಿನಲ್ಲಿ ಕರಗುವ ನಾರು_ಬೇರುಗಳು, ನೀರಿನಲ್ಲಿ ಕರಗದ ನಾರು-ಬೇರುಗಳು, ಹುಳಿ ಹಣ್ಣುಗಳ ನಾರು, ಅಕ್ಕಿಯ ಮೇಲಿನ ಹೊಟ್ಟಿನ ಭಾಗ, ಸೇಬಿನ ನಾರು ಇತ್ಯಾದಿಗಳು ನೀರಿನಲ್ಲಿ ಕರಗುತ್ತವೆ. ಉಳಿದವು ನೀರಿನಲ್ಲಿ ಕರಗುವುದಿಲ್ಲ. ಶರೀರಕ್ಕೆ ಎರಡೂ ಬೇಕು. ಹೆಗ್ಗರುಳಿನ ಕ್ಯಾನ್ಸರ್(ಕೊಲೋನ್ ಕ್ಯಾನ್ಸರ್), ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಮಲಬದ್ಧತೆ, ಜಠರದ ಹುಣ್ಣು, ಅಧಿಕ ರಕ್ತದೊತ್ತಡ, ಅಪೆಂಡಿಸೈಟಿಸ್, ಅಧಿಕ ಕೊಲೆಸ್ಟ್ರಾಲ್, ಪಿತ್ತಕೋಶದಲ್ಲಿ ಕಲ್ಲು, ಬೊಜ್ಜು, ಹೃದಯಾಘಾತ – ಏನು ಇಷ್ಟೊಂದು ದೊಡ್ಡ ಕಾಯಿಗಳ ಪಟ್ಟಿ? ಏಕೆ ಈ ಪಟ್ಟಿ? – ಇವೆಲ್ಲಕ್ಕೂ ಒಂದೇ ಕಾರಣ, ರೋಗಿಯ ಆಹಾರದಲ್ಲಿ ನಾರು-ಬೇರುಗಳ ಅಂಶ ಕಡಿಮೆ. ನಾರು-ಬೇರುಗಳು, ಮೇಲಿನ ಕಾಯಿಲೆಗಳಲ್ಲಿ ಹೇಗೆ ಸಹಾಯ ಮಾಡುತ್ತವೆ? ೧) ನಾರು-ಬೇರುಗಳು ದೊಡ್ಡಕರುಳಿನಲ್ಲಿನ ನೀರನ್ನು ಹೀರಿ ಮಲವು ಉಬ್ಬುವಂತೆ ಮಾಡುತ್ತವೆ. ಅದರ ಮೇಲೆ ಏಕಾಣುಜೀವಿಗಳು(ಬ್ಯಾಕ್ಟೀರಿಯಾ) ತಮ್ಮ ಕ್ರಿಯೆಯಿಂದ ಅದನ್ನು ಹಾಲಂದೀಕರಿಸಿ(ಎಮಲ್ಸಿಪ್ಫ಼ೈಡ್) ವಾಯುವನ್ನು ಬಿಡುಗಡೆ ಮಾದಿ ಮಲವನ್ನು ಮೃದು ಮಾಡುತ್ತವೆ. ೨) ದೊಡ್ಡಕರುಳಿನ ಮಲದಲ್ಲಿ ಕೆಲವು ಕ್ಯಾನ್ಸರ್ ಕಾರಕ ವಸ್ತುಗಳು ಕಂಡುಬಂದವು. ಅದಕ್ಕೆ ಕಾರಣ ದೊಡ್ಡಕರುಳಿನ ಕಡಿಮೆ ಆಮ್ಲೀಯತೆ. ಆಮ್ಲೀಯತೆ ಹೆಚ್ಚಾದಲ್ಲಿ ಈ ಕ್ಯಾನ್ಸರ್ ಕಾರಕಗಳು ಕಡಿಮೆಯಾದವು. ನಾರು-ಬೇರುಗಳ ಮೇಲಿನ ಏಕಾಣುಜೀವಿಗಳ ಕ್ರಿಯೆ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಏಕಾನುಜೀವಿಗಳು ವೃದ್ಧಿಯಾಗಲು ಸಾರಜನಕ ಬೇಕು. ಅವು ದೊಡ್ಡಕರುಳಿನಲ್ಲಿನ ಸಾರಜನಕವನ್ನು ಉಪಯೋಗಿಸಿಕೊಂಡರೆ ಅಮೋನಿಯಾ ಕಡಿಮೆಯಾಗುತ್ತದೆ. ಅಮೋನಿಯಾ ಹೆಚ್ಚಾಗಿದ್ದರೆ ಕ್ಯಾನ್ಸರ್ ಹೆಚ್ಚುತ್ತಿತ್ತು. ಹೀಗೆ ನಾರು-ಬೇರುಗಳು ಆಮ್ಲೀಯತೆಯನ್ನು ಹೆಚ್ಚಿಸಿ, ಅಮೋನಿಯಾವನ್ನು ತಗ್ಗಿಸಿ ಹೆಗ್ಗರುಳಿನ ಕ್ಯಾನ್ಸರನ್ನು ತಡೆಗಟ್ಟುತ್ತವೆ. ೩) ಹೆಗ್ಗರುಳಿನ ಸುತ್ತುಸರಿಕ ಕ್ರಿಯೆಗೆ(ಪೆರಿಸ್ಟಾಲ್ಟಿಕ್ ಮೋಷನ್) ನಾರು-ಬೇರುಗಳು ಸಹಾಯಮಾಡುತ್ತವೆ. ಇದು ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ೪) ನಾರು-ಬೇರುಗಳು ಸಣ್ಣಕರುಳಿನಲ್ಲಿ ಮೇದಸ್ಸನ್ನು ತಳ್ಳಿಕೊಂಡು ಹೋಗಿಬಿಡುತ್ತವೆ. ಆದ್ದರಿಂದ ರಕ್ತಕ್ಕೆ ಸೇರುವ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ, ಹೃದಯಾಘಾತ, ಮುಂತಾದವು ಕಡಿಮೆಯಾಗುತ್ತವೆ. ೫) ಸಕ್ಕರೆಯು ರಕ್ತಕ್ಕೆ ಸೇರುವ ವೇಗವನ್ನು ನಾರು-ಬೇರುಗಳು ಕಡಿಮೆಮಾಡುತ್ತವೆ. ಅಲ್ಲದೆ, ಕೆಲವು ನಾರು-ಬೇರುಗಳು ಆಹಾರದ ಜಿಗುಟುತನವನ್ನು(ವಿಸ್ಕೋಸಿಟಿ) ಹೆಚ್ಚಿಸುತ್ತವೆ. ಈ ಜಿಗುಟಿನಿಂದ ಕೂಡಿದ ಆಹಾರಕ್ಕೆ ಕಡಿಮೆ ಇನ್ಸುಲಿನ್ ಸಾಕಾಗುತ್ತದೆ. ಹಣ್ಣಂಟು ಮತ್ತು ಸಸ್ಯಗೋಂದು ರಕ್ತದಲ್ಲಿನ ಗ್ಲೂಕೋಸನ್ನು ಕಡಿಮೆ ಮಾಡುತ್ತವೆ. ರಾಗಿಯಲ್ಲಿನ ಪಿಷ್ಟ, ಅಕ್ಕಿಯಲ್ಲಿನ ಪಿಷ್ಟಕ್ಕಿಂತ ನಿಧಾನವಾಗಿ ಗ್ಲೂಕೋಸ್ ಆಗುತ್ತದೆ. ಕಾರಣ ಅದರಲ್ಲಿನ ಹೊಟ್ಟು. ಅದಕ್ಕಾಗಿಯೇ ಸಕ್ಕರೆ ರೋಗಿಗಳಿಗೆ ಅಕ್ಕಿಗಿಂತ ರಾಗಿ ಉತ್ತಮವೆನಿಸುವುದು. ಈ ಕಾರಣಗಳಿಂದ ಸಕ್ಕರೆ ರೋಗದಲ್ಲಿ ನಾರು-ಬೇರುಗಳು ಸಹಾಯಮಾಡುತ್ತವೆ. ಜೀವಕಣತಂತುಕ (ಸೆಲ್ಯೂಲೋಸ್) : ಇದು ಹಣ್ಣು, ತರಕಾರಿಗಳು, ಹೊಟ್ಟು, ಕಾಯಿಗಳಲ್ಲಿದೆ. ಇದು ನೀರಿನಲ್ಲಿ ಕರಗದ ನಾರು-ಬೇರು. ಇದು ನೀರನ್ನು ತಡೆಹಿಡಿದಿಟ್ಟುಕೊಂಡು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಏಕಾಣುಜೀವಿಯಿಂದ ಇದೇ ಮೃದುವಾಗುವುದು. ಇದು ಕರುಳಿನ ಕ್ಯಾನ್ಸರ್ ಉಂಟುಮಾಡುವ ವಿಷ ವಸ್ತುವನ್ನು ಹೊರದೂಡುತ್ತದೆ. ತೂಕವನ್ನು ಇಳಿಸುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಹಣ್ಣಂಟು (ಪೆಕ್ಟಿನ್) : ಈ ಜಾತಿಯ ನಾರು-ಬೇರು ರಕ್ತದ ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹೆಗ್ಗರುಳಿನ ಏಡಿಗಂತಿ(ಕ್ಯಾನ್ಸರ್) ಮತ್ತು ಪಿತ್ತಕಲ್ಲು(ಗಾಲ್ ಸ್ಟೋನ್) ಆಗುವುದನ್ನು ತಡೆಯುತ್ತದೆ. ಇದು ಮಲ ಮೃದುವಾಗುವುದರಲ್ಲಿ ಸಹಾಯಮಾಡುವುದಿಲ್ಲ. ಆದ್ದರಿಂದ ಮಲಬದ್ಧತೆಯಲ್ಲಿ ಇದರ ಕಾರ್ಯ ಕಡಿಮೆ. ಇದು ಸೇಬು, ದ್ರಾಕ್ಷಿ, ಹುಳಿಹಣ್ಣುಗಳು, ಪಪಾಯಿ, ಸೀಬೆ, ಬಾಳೆ, ಹೊಟ್ಟು ಇವುಗಲ್ಲಿದೆ. ಗೋಂದು ಮತ್ತು ಅಂಟು
: ಡಯಾಬಿಟಿಸ್ ನಲ್ಲಿ ಸಹಾಯ ಮಾಡುತ್ತವೆ. ಹುರುಳಿ, ಓಟ್ಸ್, ತವುಡು ಇವುಗಳಲ್ಲಿವೆ. ಲೆಗ್ನಿನ್ : ಏಕದಳ, ದ್ವಿದಳ ಧಾನ್ಯಗಳ ಹೊಟ್ಟು, ಕೋಸು, ಟೊಮೇಟೋ, ಇವುಗಳಲ್ಲಿದೆ. ಇದು ಪಿತ್ತರಸವನ್ನು ಕರುಳಿನಿಂದ ಹೊರದುಡಲು ಸಹಕರಿಸುತ್ತದೆ. ನಾರಿರುವ ಆಹಾರಗಳು : ಕುಸುಬೆಬೀಜ, ನುಗ್ಗೇಕಾಯಿ, ಬಟಾಣಿ, ಸೋಯಾಬೀನ್, ಕಡ್ಲೇಕಾಳು, ಕರಿಬೇವು, ಮೆಂತೆಕಾಳು, ಹುಣಿಸೆ ಎಲೆ, ನೆಲ್ಲೀಕಾಯಿ, ಬೇಲದ ಹಣ್ಣು, ಅನಾನಸ್, ಸೀತಾಫಲ, ಸೀಬೆ, ದ್ರಾಕ್ಷಿ, ಕೊತ್ತಂಬರಿ, ಜೀರಿಗೆ, ಏಲಕ್ಕಿ, ಬಾರ್ಲಿ, ಜೋಳ, ರಾಗಿ, ಗೋಧಿ, ಉದ್ದಿನಕಾಳು, ತೊಗರೀಬೇಳೆ, ಹುಣಿಸೇಹಣ್ಣು, ಮೂಲಂಗಿ, ಆಲೂಗೆಡ್ಡೆ, ಗೆಣಸು, ಮಾವು, ಸೊಪ್ಪುಗಳು, ತರಕಾರಿಗಳು-ಕ್ಯಾರಟ್, ಬೀಟ್ ರೂಟ್, ಹುರುಳೀಕಾಯಿ, ಜವಳೆಕಾಯಿ ಇತ್ಯಾದಿ. ಪೂರ್ಣವಾಗಿ ನಾರಿಲ್ಲದ ಆಹಾರಗಳು : ಮಾಂಸ, ಮೀನು, ಮೊಟ್ಟೆ, ಹಾಲು, ಬೆಣ್ಣೆ, ಸಕ್ಕರೆಗಳು ಮಾತ್ರ. ೧೦೦ ಗ್ರಾಂ ಹೊಟ್ಟಿನಲ್ಲಿ ೧೦.೫ ರಿಂದ ೧೩.೫ ನಾರು-ಬೇರಿದೆ. ಏಕದಳ ಧಾನ್ಯದ ಹೊಟ್ಟಿನಂಶ ೧.೦೦ ರಿಂದ ೨.೦೦ ದ್ವಿದಳ ಧಾನ್ಯದ ಹೊಟ್ಟಿನಂಶ ೧.೫೦ ರಿಂದ ೧.೭೦ ಕಾಯಿಗಳಲ್ಲಿ ೨.೦೦ ರಿಂದ ೫.೦೦ ತರಕಾರಿಗಳಲ್ಲಿ ೦.೫೦ ರಿಂದ ೧.೫೦ ಹಣ್ಣುಗಳಲ್ಲಿ ೦.೫೦ ರಿಂದ ೧.೫೦ ಒಣಗಿದ ಹಣ್ಣುಗಳಲ್ಲಿ ೧.೦೦ ರಿಂದ ೩.೦೦ ಒಬ್ಬರಿಗೆ ಎಷ್ಟು ನಾರು-ಬೇರು ? ಈ ಬಗ್ಗೆ ಇನ್ನೂ ಪ್ರಯೋಗಗಳು ನಡೆಯುತ್ತದಿ. ಆಫ್ರಿಕಾದ ಜನರು ದಿನಕ್ಕೆ ೧೫೦ ಗ್ರಾಂ ಗಳವರೆವಿಗೂ ತೆಗೆದುಕೊಳ್ಳುತ್ತಾರೆ. ಅವರಿಗೆ ಹೆಗ್ಗರುಳಿನ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಲ್ಲ. ಅದೇ ಯೂರೋಪಿನ ಜನರು ದಿನಕ್ಕೆ ೨೦ ಗ್ರಾಂ ನಾರನ್ನು ಸೇವಿಸುತ್ತಾರೆ. ಇವರಲ್ಲಿ ಮೇಲಿನ ಕಾಯಿಲೆಗಳು ಹೆಚ್ಚು. ತುಂಬಾ ಹೆಚ್ಚು ನಾರಿನಂಶವನ್ನು ಸೇವಿಸಿದರೂ ತೊಂದರೆಯುಂಟಾಗುತ್ತದೆ. ಇದು ಶರೀರಕ್ಕೆ ತುಂಬಾ ಉಪಯುಕ್ತವಾದ ಖನಿಜಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಪೊಟಾಷಿಯಂ ಗಳನ್ನು ಶ್ರೀರದಿಂದ ಹೊರಕ್ಕೆ ಹಾಕಿಬಿಡುತ್ತದೆ. ಅತಿ ಹೆಚ್ಚಾದ ನಾರಿನೀಮ್ದ ಟ್ಯಾನಿನ್, ಆಕ್ಸಲೇಟ್, ಪೈಟೇಟ್ ಎಂಬ ಅಂಶಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿ ಮಾಡುತ್ತವೆ. ಹೊಟ್ಟೆಯ ಹುಣ್ಣು, ಇರ್ರ್ಟಬಲ್ ಬೋವಲ್ ಸಿಂಡ್ರೋಮ್, ಅರ್ಥವಾಗುವ ಭಾಷೆಯಲ್ಲಿ ಹೇಳುವುದಾದರೆ, ಗ್ಯಾಸ್ ಟ್ರಬಲ್ ಇರುವವರು ಹೆಚ್ಚು ನಾರು-ಬೇರುಗಳನ್ನು ಸೇವಿಸಿದರೆ ಹೆಚ್ಚು ಗ್ಯಾಸ್ ಉತ್ಪತ್ತಿಯಾಗಿ ಹೊಟ್ಟೆಯನೋವು ಜಾಸ್ತಿಯಾಗುತ್ತದೆ. ಡಾ. ಎಚ್.ಕ್ಯುಮಿಂಗ್, ಇಂಗ್ಲೇಂಡ್ ನ ನಾರು-ಬೇರುಗಳ ತಜ್ನರ ಪ್ರಕಾರ ಆರೋಗ್ಯಕ್ಕೆ ದಿನ ಒಂದಕ್ಕೆ ೩೦ ಗ್ರಾಂ ನಾರು-ಬೇರುಗಳ ಅವಶ್ಯಕತೆ ಇದೆ. ಬರೆದವರು : ಜಿ.ವಿ.ವಿ.ಶಾಸ್ತ್ರಿ – ತುಮಕೂರು (ಮನುಜಾ! ಏನು ನಿನ್ನ ಆಹಾರ ಪುಸ್ತಕ ಬರೆದವರು) ಸಂಗ್ರಹಿಸಿದವರು : ೧) ಸತ್ಯಪ್ರಕಾಶ್.ಹೆಚ್.ಕೆ. ೯೮೮೬೩ ೩೪೬೬೭ ೨) ಅರುಣ್. ಎಲ್. ೯೮೮೬೪ ೧೭೨೫೨
ಭತ್ತ/ಕೆಂಪಕ್ಕಿ
ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ, ಆಹಾರಕ್ಕೆ ಪರ್‍ಯಾಯ ಪದವೇ ಅನ್ನ. ದಕ್ಷಿಣ ಭಾರತದಲ್ಲಿ ನಾವು ಹೆಚ್ಚು ಉಪಯೋಗಿಸುವ ಆಹಾರವೇ ಅನ್ನ. ಹಿಂದೆ ಒಬ್ಬನ ಶಕ್ತಿಯನ್ನು ಅಳೆಯುತ್ತಿದ್ದುದೇ ಅವನು ತಿನ್ನುವ ಅನ್ನದ ಅಳತೆಯಿಂದ. "ಪಾವಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ, ಸೇರಕ್ಕಿ ತಿಂದು ಅರಗಿಸಿಕೊಳ್ಳುತ್ತಾನೆ." ನಾವು ಮಾಡುತ್ತಿದ್ದ ಹಾಗೂ ಮಾಡುತ್ತಿರುವ ತಪ್ಪು ಇದೇ. ಅವಶ್ಯಕತೆಗಿಂತ ಹೆಚ್ಚು ಅನ್ನವನ್ನು ತಿನ್ನಬಾರದು. ಬಹುಶಃ ಭತ್ತವನ್ನು ಬೆಳೆಯುವ ಕಲೆಯನ್ನು ಕಲಿತ ಮೇಲೆ ದಿನನಿತ್ಯದ ಆಹಾರ ಹುಡುಕಬೇಕಾದ ಕಷ್ಟ ತಪ್ಪಿ ಮನುಷ್ಯ ನಿರಾಳನಾದನೆಂದು ಕಾಣುತ್ತದೆ. ಅದರಿಂದ, ಅನ್ನ ಅವನ ಎಲ್ಲಾ ಆಹಾರಪದಾರ್ಥಗಳಲ್ಲಿ ಮೊದಲ ಸ್ಥಾನ ಪಡೆಯಿತು. ಈಗ ಉಪಯೋಗಿಸುತ್ತಿರುವ ಬಿಳಿಯ ಅಕ್ಕಿ ಯಾವ ಅಳತೆಗೋಲಿನಿಂದಲೂ ಸರಿಯಾದ ಆಹಾರಪದಾರ್ಥವಲ್ಲ. ತೌಡಿನಲ್ಲಿ ಎಲ್ಲಾ ಸತ್ವಗಳು ಹೊರಟುಹೋಗಿರುತ್ತವೆ. ನಾವು ಅಕ್ಕಿ ಎಂದು ಹೇಳಿದರೆ ಅದು ಕೆಂಪಕ್ಕಿಯೇ. ಹಿಂದೆ ಇದರಲ್ಲಿ ಅನೇಕ ತಳಿಗಳಿದ್ದವು. ಈಗ ‘ದೇವಮಲ್ಲಿಗೆ’ ಎಂಬ ಒಂದೇ ರೀತಿಯ ತಳಿ ಉಳಿದಿದೆ. ಅದನ್ನೂ ಸಹ ಹೆಚ್ಚು ಪಾಲೀಶ್ ಮಾಡಿರುತ್ತಾರೆ. ಹಾಗೆ ಮಾಡದಂತೆ ವಿನಂತಿಸಿಕೊಳ್ಳಬೇಕು. ಅಕ್ಕಿಯನ್ನು ತಿಕ್ಕಿ ತಿಕ್ಕಿ ಅನೇಕ ಸಲ ತೊಳೆಯಬಾರದು. ಧೂಳು ಹೋಗುವಂತೆ ಒಮ್ಮೆ ತೊಳೆದರೆ ಸಾಕು. ಇಲ್ಲದಿದ್ದರೆ ಜೀವಸತ್ವಗಳು ನಷ್ಟವಾಗುತ್ತವೆ. ಗಂಜಿಯನ್ನು ಬಸಿದು ಗಟಾರಕ್ಕೆ ಚೆಲ್ಲಬಾರದು. ಗಂಜಿಯನ್ನು ಇಂಗಿಸಿ ಅನ್ನ ಮಾಡಬೇಕು. ಇಲ್ಲದಿದ್ದರೆ ರೈಸ್ ಕುಕ್ಕರ್‍ನಲ್ಲಿ ಅನ್ನ ಮಾಡಬೇಕು. ಅಕ್ಕಿಯಲ್ಲಿನ ಆಹಾರ ಸತ್ವಗಳು = ೧೦೦ ಗ್ರಾಂ ನಲ್ಲಿ : ನೀರು ೧೩.೩%, ಸಸಾರಜನಕ ೭.೫%, ಖನಿಜಗಳು ೦.೯%, ಕ್ಯಾಲ್ಸಿಯಂ ೧೦ ಮಿ.ಗ್ರಾಂ, ನಾರು ೦.೬%, ಪಿಷ್ಟ ೭೬.೭%, ಕ್ಯಾಲೋರಿ ೩೪೬, ರಂಜಕ ಅ೯೦ ಮಿ.ಗ್ರಾಂ, ಕಬ್ಬಿಣ ೩.೨ ಮಿ.ಗ್ರಾಂ,