ಗ್ಯಾಜೆಟ್ ಲೋಕ – ೦೦೭ (ಪೆಬ್ರವರಿ ೧೬, ೨೦೧೨)

ಜನಸಾಮಾನ್ಯರ ಕ್ಯಾಮರ – ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್

 

ಕೈಗೆಟುಕುವ ಬೆಲೆಯಲ್ಲಿ ನೀಡುವ ಹಣಕ್ಕೆ ಮೋಸವಿಲ್ಲದ ಒಂದು ಕ್ಯಾಮರಾ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್. ಕಾಂಪಾಕ್ಟ್ ಎಂದರೆ ಎಸ್‌ಎಲ್‌ಆರ್ ಅಲ್ಲದ ಕ್ಯಾಮರಾಗಳಲ್ಲಿ ೮೦೦೦ರೂ. ಒಳಗೆ ದೊರೆಯುವ ಕ್ಯಾಮರಾಗಳಲ್ಲಿ ಒಂದು ಉತ್ತಮ ಕ್ಯಾಮರ ಎನ್ನಬಹುದು. ವೃತ್ತಿನಿರತಲ್ಲದವರಿಗೆ ತೃಪ್ತಿನೀಡಬಲ್ಲ ಕ್ಯಾಮರ.

 

ಕ್ಯಾಮರಾಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸುಮ್ಮನೆ ನೋಡಿ ಫೊಟೋ ತೆಗೆಯುವಂತಹದು (ಏಮ್ ಆಂಡ್ ಶೂಟ್) ಮತ್ತು ಎಸ್‌ಎಲ್‌ಆರ್‌ಗಳು. ಈ ಬಗ್ಗೆ ನಾವು ಈಗಾಗಲೇ ವಿವರವಾಗಿ ನೋಡಿ ಆಗಿದೆ (ಗ್ಯಾಜೆಟ್ ಲೋಕ ೧೯-೧-೨೦೧೨, http://bit.ly/gadgetloka3). ಕ್ಯಾಮರಾಗಳ ಬಗ್ಗೆ ತಿಳಿದುಕೊಳ್ಳುವ ಮಾಲಿಕೆಯಲ್ಲಿ ಈ ಸಲ ಒಂದು ಸರಳ ಹಾಗೂ ಕೈಗೆಟುಕಬಲ್ಲ ಏಮ್ ಆಂಡ್ ಶೂಟ್ ಕ್ಯಾಮರಾ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬನೂ ವೃತ್ತಿನಿರತ ಛಾಯಾಗ್ರಾಹಕನಲ್ಲ ಹಾಗೂ ಹಾಗೆ ಆಗಬೇಕಾಗಿಯೂ ಇಲ್ಲ. ಇಂತಹ ಜನಸಾಮಾನ್ಯರಿಗೆಂದೇ ಹಲವು ಸರಳ ಏಮ್ ಆಂಡ್ ಶೂಟ್ ಮಾದರಿಯ ಕ್ಯಾಮರಾಗಳು ಮಾರುಕಟ್ಟೆಯಲ್ಲಿವೆ. ಇವುಗಳ ಮುಖ್ಯ ಗುಣವೈಶಿಷ್ಟ್ಯವೆಂದರೆ ಇವುಗಳನ್ನು ಬಳಸಲು ಎಲ್ಲ ತಾಂತ್ರಿಕ ಆಯ್ಕೆಗಳನ್ನು ತಿಳಿದಿರುವ ಅಗತ್ಯ ಇಲ್ಲದಿರುವುದು. ಕ್ಯಾಮರ ಜಾಲತಾಣಗಳಿಗೆ ಭೇಟಿ ನೀಡಿದರೆ ಈ ಮಾದರಿಯ ಕ್ಯಾಮರಾಗಳ ದೊಡ್ಡ ಆಯ್ಕೆ ಕಣ್ಣಿಗೆ ಬೀಳುತ್ತದೆ. ಈ ಸಾಲಿನಲ್ಲಿ ನಾವೀಗ ನೋಡಹೊರಟಿರುವುದು ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್ ಕ್ಯಾಮರ.

 

ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್ ಕ್ಯಾಮರಾದ ಗುಣವೈಶಿಷ್ಟ್ಯಗಳು: ೧೬ ಮೆಗಾಪಿಕ್ಸೆಲ್, 5x ಒಪ್ಟಿಕಲ್ ಝೂಮ್, ೩೨ ಶೂಟಿಂಗ್ ವಿಧಾನಗಳು, ಆಟೋಫೋಕಸ್, ಸಿಸಿಡಿ ಸೆನ್ಸರ್, 4x ಡಿಜಿಟಲ್ ಝೂಮ್, ೩ ಇಂಚಿನ ಗಾತ್ರದ ಎಲ್‌ಸಿಡಿ ಪರದೆ, 1280 x 720 ವೀಡಿಯೋ, ಹೈಡೆಫಿನಿಶನ್ ವೀಡಿಯೋ ಶೂಟಿಂಗ್, ಇತ್ಯಾದಿ. ಇದರ ಲೆನ್ಸ್‌ನ ನಾಭಿದೂರ (focal length) ೨೮ ಮಿಮಿ ಯಿಂದ ೧೪೦ ಮಿಮಿ ಗೆ ಸಮಾನವಾಗಿರುತ್ತದೆ. ಇದರ ಹೆಸರಿನ ಮುಂದೆ ಜೋಡಿಕೊಂಡಿರುವ ಐಎಸ್ ಎಂದರೆ image stabilization ಎಂದು. ಅಂದರೆ ಕ್ಯಾಮರ ಅಲ್ಪಸ್ವಲ್ಪ ಅಲ್ಲಾಡಿದರೂ ಫೋಟೋ ಸ್ಪಷ್ಟವಾಗಿರುತ್ತದೆ.

 

ಸುಮಾರು ೭೭೦೦ರೂ. ಬೆಲೆಬಾಳುವ ಈ ಕ್ಯಾಮರ ಕೊಟ್ಟ ಹಣಕ್ಕೆ ಮೋಸವಿಲ್ಲ ಎನ್ನಬಹುದು. ಉನ್ನತ ಗುಣಮಟ್ಟದ ಕ್ಯಾಮರ ಇದಲ್ಲ. ಆದರೆ ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳು ಇದರಲ್ಲಿವೆ. ೨೮ಮಿಮಿ ಯಿಂದ ೧೪೦ ಮಿಮಿ ತನಕ ನಾಭಿದೂರ ಇದೆ. ೨೮ಮಿಮಿ ವೈಡ್ ಆಂಗಲ್ ಎನ್ನಿಸಿಕೊಳ್ಳುತ್ತದೆ ಮತ್ತು ೧೪೦ ಮಿಮಿ ಟೆಲಿ ಎನ್ನಿಸಿಕೊಳ್ಳುತ್ತದೆ. ಈ ಪಾರಿಭಾಷಿಕ ಪದಗಳ ತಲೆ ಬುಡ ಅರ್ಥವಾಗುವಿದಿಲ್ಲ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ೨೮ಮಿಮಿ ಎಂದರೆ ವೈಡ್ ಆಂಗಲ್. ಅಂದರೆ ಈ ಆಯ್ಕೆಯಲ್ಲಿ ಹತ್ತಿರದಿಂದಲೆ ತುಂಬ ಅಗಲದ ವಸ್ತುವಿನ ಚಿತ್ರ ತೆಗೆಯಬಹುದು. ಒಂದು ಮದುವೆಯ ಆರತಕ್ಷತೆಯಲ್ಲಿ ಸುಮಾರು ೨೫ ಜನ ಸಾಲಾಗಿ ನಿಂತರೆ ತುಂಬ ಹಿಂದೆ ಹೋಗದೆ ಸುಮಾರು ೨೦ ಅಡಿ ದೂರದಿಂದಲೇ ಈ ಎಲ್ಲ ಜನರೂ ಬರುವಂತೆ ಫೋಟೋ ತೆಗೆಯಬಹದು. ಅಂತೆಯೇ ೧೪೦ ಮಿಮಿ ಆಯ್ಕೆಯಲ್ಲಿ ದೂರದಲ್ಲಿರುವ ಒಂದು ಅಳಿಲಿನ ಫೊಟೋ ತೆಗೆಯಬಹುದು.

ಹೂವು, ಚಿಟ್ಟೆ, ಇತ್ಯಾದಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯಲು ಇದರಲ್ಲಿ ಮ್ಯಾಕ್ರೋ ವಿಧಾನ ಇದೆ. ಈ ವಿದಾನದಲ್ಲಿ ೩ ಸೆಂಟಿಮೀಟರಿನಷ್ಟು ಹತ್ತಿರದಿಂದಲೂ ಫೋಟೋ ತೆಗೆಯಬಹುದು. ಬೇರೆ ಬೇರೆ ನಮೂನೆಯ ಫೋಟೋ ತೆಗೆಯಲು ಇದರಲ್ಲಿ ಹಲವು ಪೂರ್ವನಿರ್ಧಾರಿತ ವಿಧಾನಗಳಿವೆ. ಅವುಗಳು – ವ್ಯಕ್ತಿ, ಆಟ, ಮ್ಯಾಕ್ರೊ, ಸೀನರಿ, ಮಕ್ಕಳು, ಸಮುದ್ರಕಿನಾರೆ, ಪಟಾಕಿ, ಇತ್ಯಾದಿ. ನಮ್ಮ ಫೋಟೋ ನಾವೇ ತೆಗೆದುಕೊಳ್ಳಲು ಸೆಲ್ಫ್ ಟೈಮರ್ ಇದೆ. ಅತಿ ವೇಗದಲ್ಲಿ ನಡೆಯುತ್ತಿರುವ ಆಟದಿಂದ ಹಿಡಿದು ಅತಿ ಕಡಿಮೆ ಬೆಳಕಿನಲ್ಲಿ ಕೂಡ ಫೊಟೋ ತೆಗೆಯಲು ಅನುವು ಮಾಡಿಕೊಡುವಂತೆ ಐಎಸ್‌ಓ ಆಯ್ಕೆಗಳು ೮೦ರಿಂದ ೧೬೦೦ರ ತನಕ ಇವೆ. “ಯಾವ ಆಯ್ಕೆಗಳನ್ನು ಕೂಡ ಮಾಡಿಕೊಳ್ಳುವುದೇ ಬೇಡ, ನನಗೆ ಸುಮ್ಮನೆ ಕ್ಲಿಕ್ ಮಾಡಬೇಕು, ಅದರಿಂದಾಗಿ ಫೋಟೋ ಮೂಡಿ ಬರಬೇಕು” ಎನ್ನುವವರಿಗಾಗಿ ಸಂಪೂರ್ಣ ಆಟೋ ವಿಧಾನ ಇದೆ.

 

ಇದರ ಎಲ್‌ಸಿಡಿ ಪರದೆ ೩ ಇಂಚು ಗಾತ್ರದ್ದಾಗಿದೆ. ಆದರೆ ವ್ಯೂಫೈಂಡರ್ ಇಲ್ಲ ಎನ್ನುವುದು ಒಂದು ಪ್ರಮುಖ ಕೊರತೆ. ಎಲ್‌ಸಿಡಿ ಪರದೆ ನೋಡಿಯೇ ಫೋಟೋ ತೆಗೆಯಬೇಕು. ಇದರ ಒಂದು ಪ್ರಮುಖ ದೋಷವೆಂದರೆ -ವೈಡ್ ಆಂಗಲ್‌ನ ಕೊನೆಯಲ್ಲಿ ಮತ್ತು ಅದೇ ರೀತಿ ಟೆಲಿಯ ಕೊನೆಯಲ್ಲಿ ಫೊಟೋ ತೆಗೆದಾಗ ಫೋಟೋದ ಮೂಲೆಗಳಲ್ಲಿ ಸ್ವಲ್ಪ ಅಸ್ಪಷ್ಟವಾಗಿ ಮೂಡಿಬರುತ್ತದೆ ಎಂದು ಹಲವರು ದೂರಿದ್ದಾರೆ. ಇದರಲ್ಲಿ ೧೬ ಮೆಗಾಪಿಕ್ಸೆಲ್ ತನಕ ಫೋಟೋ ತೆಗೆಯಬಹುದು. ಇದರಿಂದಾಗಿ ಫೋಟೋದ ಫೈಲ್ ತುಂಬ ದೊಡ್ಡ ಗಾತ್ರದ್ದಾಗಿರುತ್ತದೆ. ಇಷ್ಟು ದೊಡ್ಡ ಗಾತ್ರದ ಫೈಲನ್ನು ಕ್ಯಾಮರಾದ ಮೆಮೊರಿ ಕಾರ್ಡ್‌ಗೆ ಬರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದುದರಿಂದ ಒಂದು ಫೋಟೋ ತೆಗೆದು ಇನ್ನೊಂದು ಫೋಟೋ ತೆಗೆಯಲು ಮೂರರಿಂದ ಐದು ಸೆಕೆಂಡುಗಳಷ್ಟು ಕಾಲ ಕಾಯಬೇಕಾಗುತ್ತದೆ. ಅಂದರೆ ಯಾವುದಾದರೂ ಸಂದರ್ಭದಲ್ಲಿ ಅತಿ ವೇಗೆವಾಗಿ ಒಂದರ ನಂತರ ಇನ್ನೊಂದು ಫೋಟೋ ತೆಗೆಯಬೇಕಾಗಿ ಬಂದಾಗ ೧೬ ಮೆಗಾಪಿಕ್ಸೆಲ್‌ನ ಬದಲಿಗೆ ಕಡಿಮೆ ರೆಸೊಲೂಶನ್ ಆಯ್ಕೆ ಮಾಡಿಕೊಳ್ಳಬೇಕು.

 

ಒಟ್ಟಿನಲ್ಲಿ ಹೇಳುವುದಾದರೆ ದೊಡ್ಡ ಕಿಸೆಯೊಳಗೆ ಹಾಕಿಕೊಳ್ಳಬಹುದಾದ, ಕೈಯಲ್ಲಿ ಹಿಡಿದುಕೊಳ್ಳಲು ಸುಲಭವಾದ, ನೀಡುವ ಹಣಕ್ಕೆ ಮೋಸವಿಲ್ಲದ, ಕೈಗೆಟುಕಬಲ್ಲ ಒಂದು ಕ್ಯಾಮೆರ ಕಾನನ್ ಪವರ್‌ಶಾಟ್ ಎ ೩೩೦೦ ಐಎಸ್.

 

ಇಮೇಜ್ ಸ್ಟೆಬಿಲೈಸೇಶನ್ (image stabilization) – ಫೋಟೋ ತೆಗೆಯುವಾಗ ಕ್ಯಾಮರ ಅಲ್ಲಾಡಿದರೂ ಅಥವಾ ತಾನಿರುವ ಜಾಗವನ್ನು ಸ್ವಲ್ಪ ಬದಲಾಯಿಸಿದರೂ ಮೂಡಿಬರುವ ಫೋಟೋ ಸ್ಪಷ್ಟವಾಗಿರುವಂತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನ ಅಳವಡಿಸಿರುವ ಲೆನ್ಸ್‌ನ ಒಳಗೆ ಕ್ಯಾಮರಾ ಚಲನೆಯನ್ನು ಅರಿತುಕೊಂಡು ಅದನ್ನು ಋಣಾತ್ಮಗೊಳಿಸಲು ಅಗತ್ಯ ಚಲನೆಯನ್ನು ಮಾಡುವ ಇನ್ನೊಂದು ಕಿರು ಲೆನ್ಸ್ ಅಳವಡಿಸಿರುತ್ತಾರೆ. ಕಾನನ್ ಇದಕ್ಕೆ ಐಎಸ್ (IS) ಎಂದು ಹೆಸರಿಸಿದೆ. ನಿಕಾನ್ ಕಂಪೆನಿಯವರು ಇದನ್ನು ವೈಬ್ರೇಶನ್ ರೆಸಿಸ್ಟೆಂಟ್ (VR – Vibration Resistant) ಎನ್ನುತ್ತಾರೆ. ಕಾನನ್ ಕ್ಯಾಮರಾಗಳಲ್ಲಿ ಕ್ಯಾಮರ ಹೆಸರಿನ ಕೊನೆಯಲ್ಲಿ IS ಇದ್ದಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಅರ್ಥ. ಇದೇ ಮಾತು ಎಸ್‌ಎಲ್‌ಆರ್ ಲೆನ್ಸ್‌ಗಳಿಗೂ ಅನ್ವಯಿಸುತ್ತದೆ.

 

ಮ್ಯಾಕ್ರೋ ಫೋಟೋಗ್ರಾಫಿ (Macrophotography) – ಇದನ್ನು ಕ್ಲೋಸ್‌ಅಪ್ ಫೊಟೋಗ್ರಾಫಿ ಎಂದೂ ಕರೆಯುತ್ತಾರೆ. ಅತಿ ಚಿಕ್ಕ ವಸ್ತುಗಳನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವುದು. ಉದಾಹರಣೆಗೆ ನೊಣ. ಚಿಕ್ಕ ವಸ್ತುಗಳನ್ನು ಅವುಗಳ ನಿಜಗಾತ್ರಕ್ಕಿಂತಲೂ ದೊಡ್ಡದಾಗಿ ಫೋಟೋ ತೆಗೆಯುವುದೇ ಮುಖ್ಯವಾಗಿ ಮ್ಯಾಕ್ರೋ ಫೋಟೋಗ್ರಾಫಿಯ ಉದ್ದೇಶ. ಇದರಲ್ಲಿ ಚಿಕ್ಕ ವಸ್ತುಗಳ ಮೇಲ್ಮೈಯ ಚಿಕ್ಕಚಿಕ್ಕ ವಿವರಗಳನ್ನು ದೊಡ್ಡದಾಗಿ ತೋರಿಸಲಾಗುವುದು. ಅಂದರೆ ನೊಣದ ತಲೆಯಲ್ಲಿರುವ ರೋಮಗಳೆಲ್ಲ ಸ್ಪಷ್ಟವಾಗಿ ಕಾಣತಕ್ಕದ್ದು. ಮ್ಯಾಕ್ರೋ ಫೋಟೋಗ್ರಾಫಿ ಸಾಮಾನ್ಯವಾಗಿ ವೈಜ್ಞಾನಿಕ ಅಧ್ಯಯನಗಳಲ್ಲಿ ಹೆಚ್ಚಾಗಿ ಬಳೆಕಯಾಗುತ್ತದೆ. ಆದರೂ ಇತ್ತೀಚೆಗೆ ಬಹುಪಾಲು ಕ್ಯಾಮರಾಗಳಲ್ಲಿ ಈ ಸವಲತ್ತನ್ನು ನೀಡಿರುದುವರಿಂದ ಹವ್ಯಾಸಿ ಛಾಯಾಚಿತ್ರಗಾರರೂ ಮ್ಯಾಕ್ರೋ ಫೋಟೋಗ್ರಾಫಿ ಮಾಡುತ್ತಿದ್ದಾರೆ. ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಮ್ಯಾಕ್ರೋ ಫೋಟೋಗ್ರಾಫಿಗೆಂದೇ ವಿಶೇಷ ಲೆನ್ಸ್‌ಗಳಿವೆ.

 

ಗ್ಯಾಜೆಟ್ ಸಲಹೆ

 

ಸಿದ್ದೇಗೌಡರ ಪ್ರಶ್ನೆ: ಲಾವಾ ಎ೧೦ ಫೋನ್ ಜೊತೆ ಕ್ರಿಯೇಟಿವ್ ಇಪಿ೬೩೦ ಇಯರ್‌ಬಡ್ ಬಳಸಬಹುದೇ?

ಉ: ಸಾಧ್ಯ. ಅಷ್ಟೇ ಅಲ್ಲ, ಯಾವುದೇ ೩.೫ ಮಿಮಿ ಇಯರ್‌ಫೋನ್ ಕಿಂಡಿ ಇರುವ ಸಂಗೀತದ ಸಾಧನದ ಜೊತೆ ಬಳಸಬಹುದು.

 

-ಡಾ| ಯು. ಬಿ. ಪವನಜ

Leave a Reply