ಗ್ಯಾಜೆಟ್ ಲೋಕ – ೦೦೬ (ಪೆಬ್ರವರಿ ೦೯, ೨೦೧೨)

ಬಾಗುವ ಮೌಸ್

 

ಇದೊಂದು ವಿಶಿಷ್ಟ ಮಾದರಿಯ ಮೌಸ್. ಪೆಟ್ಟಿಗೆಯಿಂದ ತೆಗೆಯುವಾಗ ಇದು ನೇರ. ಕೆಲಸ ಮಾಡುವಾಗ ಇದು ವಕ್ರ. ಇದುವೇ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್. ಆಕಾರದಲ್ಲಿ ಮಾತ್ರ ವಕ್ರ. ಕೆಲಸದಲ್ಲಲ್ಲ!

ಗಣಕ ಬಳಸಲು ಬೇಕಾಗುವ ಒಂದು ಅತಿ ಮುಖ್ಯ ಸಾಧನ ಮೌಸ್. ಗಣಪನಿಗೆ ಇಲಿ ಎಷ್ಟು ಮುಖ್ಯವೋ ಹಾಗೆಯೇ ಗಣಕಕ್ಕೆ ಈ ಮೂಷಿಕ ಅತಿ ಮುಖ್ಯ. ಇದೊಂದು ಮಾಹಿತಿಯ ಊಡಿಕೆಯ (input) ಸಾಧನ. ವಿಂಡೋಸ್ ಬಳಕೆಗೆ ಬಂದ ನಂತರ ಮೌಸ್ ಇಲ್ಲದೆ ಕೆಲಸ ಮಾಡುವುದೇ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನೂರಾರು ಮಾದರಿಯ ಮೌಸ್‌ಗಳ ಪಟ್ಟಿಗೆ ಇತ್ತೀಚಿನ ಸೇರ್ಪಡೆ – ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್.

 

ಬೇರೆಲ್ಲ ಮೌಸ್‌ಗಳಿಗಿಂತ ಇದು ವಿಭಿನ್ನವಾಗಿದೆ. ಇದು ಪೆಟ್ಟಿಗೆಯೊಳಗೆ ಇರುವಾಗ ನೇರವಾಗಿರುತ್ತದೆ. ಬಳಸಬೇಕಾದರೆ ಅದನ್ನು ಬಾಗಿಸಬೇಕಾಗುತ್ತದೆ (ಚಿತ್ರ ನೋಡಿ).  ಅಂದರೆ ಅದನ್ನು ವಕ್ರವಾಗಿಸಬೇಕು. ಇದರ ಅಡಿಯಲ್ಲೊಂದು ನೀಲಿ ದೀಪವಿದೆ. ನೇರವಾಗಿದ್ದಾಗ ಅದು ಉರಿಯುತ್ತಿರುವುದಿಲ್ಲ. ವಕ್ರವಾಗಿಸಿದೊಡನೆ ಅದು ಉರಿಯುತ್ತದೆ. ಈ ನೀಲಿ ದೀಪ ಮೌಸ್ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ವಕ್ರವಾಗಿಸಿದೊಡನೆ ಅದು ನಮ್ಮ ಅರ್ಧ ಮಡಚಿದ ಅಂಗೈಯ ಆಕಾರಕ್ಕೆ ಸರಿಹೊಂದುತ್ತದೆ. ಮುಂದೆ ಎರಡು ಗುಂಡಿಗಳಿವೆ (ಬಟನ್). ಅವುಗಳ ಕೆಲಸ ಎಲ್ಲ ಮೌಸ್‌ಗಳ ಗುಂಡಿಗಳಂತೆಯೇ. ಎಡ ಮತ್ತು ಬಲ ಬಟನ್‌ಗಳು.

ಬಹುಪಾಲು ಮೌಸ್‌ಗಳಲ್ಲಿ ಎರಡು ಗುಂಡಿಗಳಿರುತ್ತವೆ. ನಡುವೆ ಒಂದು ತಿರುಗುವ ಚಕ್ರವಿರುತ್ತದೆ. ಇದನ್ನು ಸ್ಕ್ರೋಲ್ ವ್ಹೀಲ್ ಎನ್ನುತ್ತಾರೆ. ಈ ತಿರುಗುವ ಚಕ್ರವನ್ನು ಮುಂದಕ್ಕೆ ಅಥವಾ ಹಿಂದಕ್ಕೆ ತಿರುಗಿಸಿ ಓದುತ್ತಿರುವ ಪುಟಗಳನ್ನು ಮೇಲಕ್ಕೆ ಅಥವಾ ಕೆಳಕ್ಕೆ ಸರಿಸಬಹುದು. Ctrl ಕೀಲಿಯನ್ನು ಒತ್ತಿ ಹಿಡಿದು ಈ ಚಕ್ರ ತಿರುಗಿಸಿದರೆ ಕೆಲವು ಬ್ರೌಸರ್‌ಗಳಲ್ಲಿ ಅಕ್ಷರಗಳು ದೊಡ್ಡ ಅಥವಾ ಸಣ್ಣಗಾಗುತ್ತವೆ. ಈ ಆರ್ಕ್ ಟಚ್ ಮೌಸ್‌ನಲ್ಲಿ ಸ್ಕ್ರೋಲ್ ವ್ಹೀಲ್ ಇಲ್ಲ. ಅದರ ಬದಲಿಗೆ ಸ್ಕ್ರೋಲ್ ಪ್ಯಾಡ್ ಇದೆ. ಬಹುತೇಕ ಲ್ಯಾಪ್‌ಟಾಪ್‌ಗಳಲ್ಲಿರುವ ಟಚ್‌ಪ್ಯಾಡ್‌ನಂತೆಯೇ ಇದು ಕೆಲಸ ಮಾಡುತ್ತದೆ. ಚಕ್ರ ತಿರುಗಿಸುವುದರ ಬದಲು ಈ ಪ್ಯಾಡ್‌ನ ಮೇಲೆ ಬೆರಳನ್ನು ಹಿಂದೆ ಅಥವಾ ಮುಂದೆ ಸರಿಸಬೇಕು. ಆಗ ಇದು ಸ್ಕ್ರೋಲ್ ವ್ಹೀಲ್‌ನ ಕೆಲಸ ಮಾಡುತ್ತದೆ. ಕುಟ್ ಕುಟ್ ಎಂದು ಧ್ವನಿ ಕೂಡ ಹೊರಡಿಸಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತದೆ! ಈ ಪ್ಯಾಡ್ ಅನ್ನು ವೇಗವಾಗಿ ಎರಡು ಸಲ ಕುಟ್ಟಿದರೆ ಅದು ಸ್ಕ್ರೋಲ್ ವ್ಹೀಲ್ ಅನ್ನು ಕ್ಲಿಕ್ ಮಾಡಿದರೆ ಮಾಡುವ ಕೆಲಸವನ್ನು ಮಾಡುತ್ತದೆ. ಕುಟ್ ಕುಟ್ ಎಂದು ಧ್ವನಿ ಕೂಡ ಹೊರಡಿಸಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತದೆ! ಪ್ಯಾಡ್‌ನ ಮುಂಭಾಗದಲ್ಲಿ ಕುಟ್ಟಿದರೆ PgUp ಮತ್ತು ಹಿಂಭಾಗದಲ್ಲಿ ಕುಟ್ಟಿದರೆ PgDn ಗುಂಡಿಗಳ ಕೆಲಸ ಮಾಡುತ್ತದೆ.

ಈ ಮೌಸ್ ನಿಸ್ತಂತು ಸಂವಹನ ಮೂಲಕ ಕೆಲಸ ಮಾಡುತ್ತದೆ. ಅಂದರೆ ಮೌಸ್ ಅನ್ನು ಗಣಕಕ್ಕೆ ಜೋಡಿಸಲು ವಯರ್ ಇಲ್ಲ. ಮೌಸ್‌ನ ಜೊತೆ ಒಂದು ಚಿಕ್ಕ ಯುಎಸ್‌ಬಿ ಸಾಧನ ದೊರೆಯುತ್ತದೆ. ಅದನ್ನು ಗಣಕದ ಯುಎಸ್‌ಬಿ ಕಿಂಡಿಗೆ ಜೋಡಿಸತಕ್ಕದ್ದು. ಅದು ಎಷ್ಟು ಚಿಕ್ಕದಾಗಿದೆಯೆಂದರೆ ಕಳೆದು ಹೋಗುವ ಸಾಧ್ಯತೆ ಅಧಿಕ. ಸಾಮಾನ್ಯವಾಗಿ ಅದನ್ನು ಒಮ್ಮೆ ಗಣಕಕ್ಕೆ ಜೋಡಿಸಿಟ್ಟರೆ ತೆಗೆಯುವ ಪ್ರಶ್ನೆಯೇ ಬರುವುದಿಲ್ಲ. ಅದು ಎಷ್ಟು ಚಿಕ್ಕದಿದೆಯೆಂದರೆ ಅದನ್ನು ಜೋಡಿಸಿದ ಲ್ಯಾಪ್‌ಟಾಪ್ ಅನ್ನು ಚೀಲಕ್ಕೆ ತುರುಕಿಸುವಾಗ ಯಾವ ಅಡಚಣೆಯೂ ಆಗುವುದಿಲ್ಲ. ಹಾಗಿದ್ದೂ ಅದನ್ನು ಗಣಕದಿಂದ ತೆಗೆಯಲೇಬೇಕೆಂದಿದ್ದರೆ ಅದನ್ನು ತೆಗೆದು ಮೌಸ್ ಅನ್ನು ನೇರವಾಗಿಸಿ ಅದರ ಅಡಿಯಲ್ಲಿ ಇಟ್ಟರೆ ಸಾಕು. ಅಯಸ್ಕಾಂತವನ್ನು ಅಳವಡಿಸಿರುವ ಮೌಸ್‌ನ ಕೆಳಭಾಗದಲ್ಲಿ ಅದು ಸುಲಭವಾಗಿ ಅಂಟಿಕೊಂಡು ಕುಳಿತುಕೊಳ್ಳುತ್ತದೆ.

 

ಮೌಸ್ (mouse) -ಗಣಕಕ್ಕೆ ಮಾಹಿತಿಯನ್ನು ಊಡಿಸುವ ಸಾಧನ. ಇಲ್ಲಿ ಊಡಿಸುವ ಮಾಹಿತಿ ಅಕ್ಷರ ರೂಪದಲ್ಲಿಲ್ಲ. ಬದಲಿಗೆ ಮೌಸ್ ತಾನು ಇರುವ ಸ್ಥಳದ ನಿರ್ದೇಶನಾಂಕ (coordinates) ವನ್ನು ಗಣಕ್ಕೆ ರವಾನಿಸುತ್ತದೆ. ಈ ಮಾಹಿತಿಯ ಮೂಲಕ ಗಣಕವು ಪರದೆಯ ಮೇಲಿರುವ ಸೂಚಕವನ್ನು (cursor) ಅತ್ತಿತ್ತ ಚಲಿಸುತ್ತದೆ. ಈ ಸೂಚಕವು ಯಾವುದಾದರೊಂದು ತಂತ್ರಾಂಶದ ಲಾಂಛನ ಯಾ ಚಿಹ್ನೆ (icon) ಯ ಮೇಲಿದ್ದಾಗ ಮೌಸ್‌ನ್ನು ಕ್ಲಿಕ್ ಮಾಡಿದರೆ ಆ ತಂತ್ರಾಂಶವು ಚಾಲನೆಗೊಳ್ಳುತ್ತದೆ. ಮೌಸ್‌ನ್ನು ಇನ್ನೂ ಹಲವು ಕಾರ್ಯಗಳಿಗೆ ಬಳಸಲಾಗುತ್ತದೆ. ತಿರುಗುವ ಚಕ್ರವಿರುವ ಮೌಸ್ ಹಲವು ವರ್ಷಗಳಿಂದ ಬಳಕೆಯಲ್ಲಿದೆ. ಇದರ ತೊಂದರೆಯೆಂದರೆ ಚಕ್ರಗಳಲ್ಲಿ ಕಸ ಧೂಳು ಸಿಕ್ಕಿಕೊಂಡು ಕೆಲಸಕ್ಕೆ ಅಡಚಣೆಯಾಗುವುದು. ಒಪ್ಟಿಕಲ್ (ದ್ಯುತಿ) ಮೌಸ್‌ನಲ್ಲಿ ಈ ತೊಂದರೆಯಿಲ್ಲ.

ಮೌಸ್‌ಗಳು ಪ್ರಾರಂಭದ ದಿನಗಳಲ್ಲಿ ಒಂದು ಗೋಲವನ್ನು ಹೊಂದಿದ್ದವು. ನಂತರದ ದಿನಗಳಲ್ಲಿ ಈ ಗೋಲದ ಬದಲಿಗೆ ಬೆಳಕನ್ನು ಬಳಸಲು ಪ್ರಾರಂಭಿಸಿದರು. ಈ ಬೆಳಕಿನಲ್ಲೂ ಎರಡು ಬಗೆ. ಅವಕೆಂಪು (infrared) ಮತ್ತು ಕಣ್ಣಿಗೆ ಕಾಣದ ಲೇಸರ್. ಸಾಮಾನ್ಯ ದ್ಯುತಿ ಮೌಸ್‌ಗಳಲ್ಲಿ ಅವಕೆಂಪು ಬಣ್ಣದ ಬೆಳಕನ್ನು ಬಳಸುತ್ತಾರೆ. ಇದು ಮೌಸ್‌ನಿಂದ ಹೊರಟು ತಾನು ಇರುವ ಜಾಗದಿಂದ (ಉದಾ – ಮೇಜು) ಪ್ರತಿಫಲಿತಗೊಂಡು ವಾಪಾಸು ಬರುತ್ತದೆ. ಮೌಸ್ ಚಲಿಸಿದಾಗ ಬೆಳಕು ಹೋಗಿ ಬರುವ ಸಮಯದಲ್ಲಾದ ಬದಲಾವಣೆಯಿಂದ ಈ ಚಲನೆಯನ್ನು ಅರ್ಥ ಮಾಡಿಕೊಂಡು ಸ್ಥಾನ ಬದಲಾದುದನ್ನು ಗಣಕಕ್ಕೆ ತಿಳಿಸುತ್ತದೆ. ಅವಕೆಂಪು ಬಣ್ಣದ ಬೆಳಕಿನ ತೊಂದರೆಯೆಂದರೆ ಗಾಜಿನ ಮೇಲ್ಮೈಯಲ್ಲಿ (ಗಾಜನ್ನು ಹೊದಿಸಿದ ಮೇಜು) ಈ ಮೌಸ್‌ಗಳು ಕೆಲಸ ಮಾಡುವುದಿಲ್ಲ. ಲೇಸರ್ ಮೌಸ್‌ಗಳಲ್ಲಿ ಈ ತೊಂದರೆ ಇಲ್ಲ. ನಾವಿಲ್ಲಿ ಚರ್ಚಿಸುತ್ತಿರುವ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್‌ನಲ್ಲಿ ಕಣ್ಣಿಗೆ ಕಾಣದ ಲೇಸರ್ ಬೆಳಕನ್ನು ಬಳಸುತ್ತಿರುವುದರಿಂದ ಇದು ಗಾಜಿನ ಮೇಲ್ಮೈ ಮೇಲೆ ಕೂಡ ಕೆಲಸ ಮಾಡುತ್ತದೆ.

 

ಒಟ್ಟಿನಲ್ಲಿ ಹೇಳುವುದಾದರೆ ಮೈಕ್ರೋಸಾಫ್ಟ್ ಆರ್ಕ್ ಟಚ್ ಮೌಸ್ ಲ್ಯಾಪ್‌ಟಾಪ್ ಜೊತೆ ತುಂಬ ಪ್ರಯಾಣ ಮಾಡುವವರಿಗೆ ತುಂಬ ಉಪಯುಕ್ತ ಮೌಸ್. ಇದನ್ನು ಬಳಸಲು ಪ್ರಾರಂಭಿಸಿದಾಗ ಸ್ವಲ್ಪ ವಿಚಿತ್ರ ಅನ್ನಿಸಬಹುದಾದರೂ ಇದಕ್ಕೆ ಹೊಂದಿಕೊಂಡ ನಂತರ ಬಳಕೆಯ ಅನುಭವ ಚೆನ್ನಾಗಿದೆ ಅನ್ನಿಸುವುದು. ಭಾರತೀಯರಿಗೆ ಇದರ ನಿಗದಿತ ಬೆಲೆ ರೂ.3425 ಸ್ವಲ್ಪ ಅಧಿಕವೇ (ನೋಡಿ www.microsoftstore.co.in).

 

ಗ್ಯಾಜೆಟ್ ಸಲಹೆ

 

ಪ್ರ: ದಯವಿಟ್ಟು ನನಗೆ ರೂ.5000 ಆಸುಪಾಸಿನಲ್ಲಿ ಉತ್ತಮ ಮೊಬೈಲ್ ಫೋನ್ ತಿಳಿಸಿರಿ.

ಉ: ನೋಕಿಯಾ 5130.

Leave a Reply