ಗ್ಯಾಜೆಟ್ ಲೋಕ – ೦೦೫ (ಪೆಬ್ರವರಿ ೦೨, ೨೦೧೨)

ದೊಡ್ಡ ಕಿಸೆಯುಳ್ಳವರಿಗಾಗಿ ದೊಡ್ಡ ಫೋನು

 

ಇಂಗ್ಲಿಶಿನಲ್ಲಿ peerson with deep pocket ಎಂಬ ಮಾತು ಚಾಲ್ತಿಯಲ್ಲಿದೆ. ಅದನ್ನು ಕನ್ನಡೀಕರಿಸಿದಾಗ ದೊಡ್ಡ ಕಿಸೆಯುಳ್ಳವರು ಎಂದಾಗುತ್ತದೆ. ಅಂದರೆ ತುಂಬ ಹಣವಿರುವವರು. ಇಲ್ಲಿ ನಾವು ಆ ಮಾತಿನ ಇನ್ನೂ ಒಂದು ಅರ್ಥ ಎಂದರೆ ಗಾತ್ರದಲ್ಲಿ ದೊಡ್ಡ ಕಿಸೆ ಎಂಬುದನ್ನೂ ತೆಗೆದುಕೊಳ್ಳೋಣ. ಗಾತ್ರದಲ್ಲಿ ದೊಡ್ಡ ಕಿಸೆ ಮತ್ತು ತುಂಬ ಹಣವಿರುವವರಿಗಾಗಯೇ ಬಂದಿರುವ ದೊಡ್ಡ ಫೋನು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್.

 

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಂಬುದು ಒಂದು ಫೋನು ಎಂದು ಅವರು ಹೇಳಿಕೊಳ್ಳುತ್ತಾರೆ. ೫.೮ ಇಂಚು ಉದ್ದ ಹಾಗೂ ೩.೩ ಇಂಚು ಅಗಲದ ಇದನ್ನು ಫೋನು ಎಂದೇ ನಾವೂ ಕರೆಯೋಣ. ಆದರೆ ಅದರ ಗಾತ್ರವು ಈ ಮಾತನ್ನು ಪೂರ್ತಿಯಾಗಿ ಪುಷ್ಟೀಕರಿಸುವುದಿಲ್ಲ. ಇದನ್ನು ದೊಡ್ಡ ಫೋನು ಅಥವಾ ಚಿಕ್ಕ ಟ್ಯಾಬ್ಲೆಟ್ ಎನ್ನಬಹುದು. ಇದನ್ನು ಕೊಂಡುಕೊಳ್ಳಲು ದೊಡ್ಡ ಕಿಸೆಯೇ ಬೇಕು. ಯಾಕೆಂದರೆ ಇದರ ಬೆಲೆ ಸುಮಾರು ೩೩ ಸಾವಿರ ರೂ. ಇಟ್ಟುಕೊಳ್ಳಲಂತೂ ದೊಡ್ಡ ಕಿಸೆ ಖಂಡಿತ ಬೇಕು. ಹಿಡಿದುಕೊಳ್ಳಲು ದೊಡ್ಡ ಕೈಯೂ ಇದ್ದರೆ ಒಳ್ಳೆಯದು.

 

ಅದೆಲ್ಲ ಸರಿ. ಈ ಫೋನಿನ ಗುಣವೈಶಿಷ್ಟ್ಯಗಳ ಬಗ್ಗೆ ಸ್ವಲ್ಪ ಹೇಳಿ ಮೊದಲು ಎನ್ನುತ್ತಿದ್ದೀರಾ? ಸರಿ. ಇದು ೧.೪ ಗಿಗಾಹರ್ಟ್ಝ್‌ನ ಡ್ಯುಯಲ್ ಕೋರ್ ಪ್ರೋಸೆಸರ್ ಹೊಂದಿದೆ. ಇದು ಬಹುಮಟ್ಟಿಗೆ ಶಕ್ತಿಶಾಲಿಯಾದ ಲ್ಯಾಫ್‌ಟಾಪ್‌ನಂತೆಯೇ. ೧ ಗಿಗಾಬೈಟ್ ಪ್ರಾಥಮಿಕ ಮೆಮೊರಿ. ೧೬ ಗಿಗಾಬೈಟ್ ಅಧಿಕ ಮೆಮೊರಿ ಇದೆ. ಅಂದರೆ ಸುಮಾರು ೨೦ ಪೂರ್ಣಪ್ರಮಾಣದ ಸಿನಿಮಾಗಳನ್ನು ಇದರಲ್ಲಿ ಸಂಗ್ರಹಿಸಿಡಬಹುದು. ಸ್ಪರ್ಶಸಂವೇದಿ ಪರದೆಯನ್ನು ಒಳಗೊಂಡಿದೆ. ಈ ಪರದೆಯೂ ವಿಶೇಷ ಗುಣಮಟ್ಟದ್ದು. ಅದಕ್ಕೆ ಗೀರುಗಳು ಆಗುವುದಿಲ್ಲ. ಇದರ ಪರದೆ 1280×800 ಪಿಕ್ಸೆಲ್ ರೆಸೊಲೂಶನ್ ಒಳಗೊಂಡಿದೆ. ಕೆಲವೇ ವರ್ಷಗಳ ಹಿಂದೆ ನಾವು ಬಳಸುತ್ತಿದ್ದ ಗಣಕಗಳ ಪರದೆಯ ರೆಸೊಲೂಶನ್ 800×600 ಇತ್ತು ಎಂಬುದನ್ನು ನೆನಪಿಸಿಕೊಂಡರೆ ಈ ರೆಸೊಲೂಶನ್‌ನ ಮಹತ್ವ ಅರಿವಾಗುವುದು. ಹೈಡೆಫಿನಿಶನ್ ಸಿನಿಮಾಗಳನ್ನು ಕೂಡ ಇದರಲ್ಲಿ ನೋಡಬಹುದು. ಸೂಕ್ತ ಕೇಬಲ್ ಕೊಂಡುಕೊಂಡರೆ ಈ ಫೋನನ್ನು ಟಿವಿಗೆ ಸಂಪರ್ಕಿಸಿ ಹೈಡೆಫಿನಿಶನ್ ಸಿನಿಮಾವನ್ನು ಟಿವಿ ಪರದೆಯಲ್ಲಿ ವೀಕ್ಷಿಸಬಹುದು.

 

೩ಜಿ ಸಂಪರ್ಕ ಇದೆ. ಹಿಂದೆ ೮ ಮೆಗಾಪಿಕ್ಸೆಲ್ ಕ್ಯಾಮರ ಮತ್ತು ಮುಂದೆ ೨ ಮೆಗಾ ಪಿಕ್ಸೆಲ್ ಕ್ಯಾಮರಾಗಳಿವೆ. ಜೊತೆಗೆ ಫ್ಲಾಶ್ ಕೂಡ ಇದೆ. ಉತ್ತಮ ಗುಣಮಟ್ಟದ ಫೋಟೋ ಮಾತ್ರವಲ್ಲ ವೀಡಿಯೋಗಳನ್ನೂ ತೆಗೆಯಬಹುದು. ವೀಡಿಯೋ ಚಾಟ್ ಮಾಡಬಹುದು. ಇದರಲ್ಲಿ ಅಡಕವಾಗಿರುವ ಎಂಪಿ೩ ಮತ್ತು ಇತರೆ ಸಂಗೀತ ಫೈಲುಗಳ ಪ್ಲೇಯರ್ ಕೂಡ ಉತ್ತಮ ಮಟ್ಟದ್ದಾಗಿದೆ. ಆದರೆ ಇದರ ಜೊತೆ ನೀಡಿರುವ ಇಯರ್‌ಫೋನ್ (ಇಯರ್‌ಬಡ್) ಮೇಲ್ಮಟ್ಟದ್ದಲ್ಲ. ೩೩ ಸಾವಿರ ರೂ ಬೆಲೆ ಬಾಳುವ ಗ್ಯಾಜೆಟ್ ಜೊತೆ ಕನಿಷ್ಠ ಸಾವಿರ ರೂ ಬೆಲೆಯ ಇಯರ್‌ಫೋನ್ ನೀಡುತ್ತಾರೆ ಎಂದು ಆಶಿಸುವುದು ತಪ್ಪಲ್ಲ. ನಾನಂತೂ ಗ್ಯಾಲಕ್ಸಿ ನೋಟ್ ಜೊತೆ ನನ್ನ ಕ್ರಿಯೇಟಿವ್ ಇಪಿ೬೩೦ ಇಯರ್‌ಬಡ್ ಬಳಸುತ್ತೇನೆ.

 

ಕೆಪಾಸಿಟಿವ್ ಮತ್ತು ರೆಸಿಸ್ಟಿವ್ ಸ್ಪರ್ಶಸಂವೇದಿ ಪರದೆಗಳು (capacitive and resistive) – ಸಾಮಾನ್ಯವಾಗಿ ಬಳಕೆಯಲ್ಲಿರುವ ಸ್ಪರ್ಶಸಂವೇದಿ ಪರದೆಗಳಲ್ಲಿ ಎರಡು ಬಗೆ. ಕೆಪಾಸಿಟಿವ್ ಮತ್ತು ರೆಸಿಸ್ಟಿವ್. ರೆಸಿಸ್ಟಿವ್ ಪರದೆಗಳನ್ನು ಬಳಸಲು ಒಂದು ಪ್ಲಾಸ್ಟಿಕ್ ಕಡ್ಡಿಯನ್ನು ಬಳಸಬೇಕಾಗುತ್ತದೆ. ಇದನ್ನು ಸ್ಟೈಲಸ್ ಎನ್ನುತ್ತಾರೆ. ಈಗ ಈ ಪರದೆಗಳು ಹಳತಾಗುತ್ತಿವೆ. ಕೆಪಾಸಿಟಿವ್ ಪರದೆಗಳನ್ನು ಬೆರಳಿನಲ್ಲಿ ಒತ್ತಿ ಕೆಲಸ ಮಾಡಬಹದು. ಬ್ಯಾಂಕ್ ಎಟಿಎಂಗಳಲ್ಲಿ ಈ ನಮೂನೆಯ ಪರದೆಗಳನ್ನು ನೀವೆಲ್ಲ ಬಳಸಿಯೇ ಇರುತ್ತೀರಾ.

ಇದರ ಸ್ಪರ್ಶಸಂವೇದಿ ಪರದೆ ಕೆಪಾಸಿಟಿವ್ ಆಗಿದೆ. ಅಂದರೆ ಬೆರಳಿನಲ್ಲೆ ಬೇಕಾದ ಜಾಗದಲ್ಲಿ  ಒತ್ತಿ ಕೆಲಸ ಮಾಡಬಹುದು. ಹಾಗಿದ್ದೂ ಇದರ ಜೊತೆ ಒಂದು ವಿಶಿಷ್ಟ ಪ್ಲಾಸ್ಟಿಕ್ ಕಡ್ಡಿ (ಸ್ಟೈಲಸ್) ನೀಡಿದ್ದಾರೆ. ಅವರು ಅದನ್ನು S-pen ಎನ್ನುತ್ತಾರೆ. ಈ ಕಡ್ಡಿಯ ಒಂದು ಬದಿಯಲ್ಲಿ ಒಂದು ಚಿಕ್ಕ ಗುಂಡಿ (ಬಟನ್) ಇದೆ. ಅದನ್ನು ಒತ್ತಿ ಕೆಲವು ವಿಶಿಷ್ಟ ಕೆಲಸಗಳನ್ನು ಮಾಡಬಹುದು. ಒಂದು ಉದಾಹರಣೆಯನ್ನು ಗಮನಿಸೋಣ: ಹಂಪಿಗೆ ಹೋಗಿದ್ದೀರಿ. ಅಲ್ಲಿಯ ಮೆಟ್ಟಿಲು ಮೆಟ್ಟಿಲುಗಳುಳ್ಳ ಕೆರೆಯ ಫೋಟೋ ತೆಗೆದಿದ್ದೀರಿ. ಆ ಫೋಟೋದಲ್ಲಿ ನೀರು ಬಂದು ಬೀಳುವ ಜಾಗಕ್ಕೆ ಗುರುತು ಮಾಡಿ ಅದನ್ನು ಗೆಳೆಯರಿಗೆ ಕಳುಹಿಸಬೇಕಾಗಿದೆ. ಈ ಎಲ್ಲ ಕೆಲಸಗಳನ್ನು ಗ್ಯಾಲಕ್ಸಿ ನೋಟ್ ಬಳಸಿ ಸುಲಭವಾಗಿ ಮಾಡಬಹುದು. ಮೊದಲು ಫೋಟೋ ತೆಗೆಯಬೇಕು. ನಂತರ ಫೋಟೋವನ್ನು ವೀಕ್ಷಿಸುತ್ತ ಅದರ ಮೇಲೆ ಸ್ಟೈಲಸ್ (S-pen) ಬಳಸಿ ಬಾಣ ಗುರುತು ಮಾಡಿ ಇಮೈಲ್ ಮೂಲಕ ಕಳುಹಿಸಬಹುದು. ಜೊತೆಗೆ ನೀಡಿದ ಚಿತ್ರದಲ್ಲಿ ಇದನ್ನೇ ಮಾಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ನ ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ ೨.೩ (ಜಿಂಜರ್‌ಬ್ರೆಡ್). ಸದ್ಯದಲ್ಲೇ ಇದನ್ನು ಆವೃತ್ತಿ ೪ಕ್ಕೆ (ಐಸ್‌ಕ್ರೀಂ) ನವೀಕರಿಸುವುದಾಗಿ ಸ್ಯಾಮ್‌ಸಂಗ್ ಹೇಳಿಕೊಂಡಿದೆ. ಆಂಡ್ರೋಯಿಡ್ ಫೋನ್‌ಗಳ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ. ಆಂಡ್ರೋಯಿಡ್ ಮಾರುಕಟ್ಟೆಯಿಂದ (market.android.com) ನಿಮಗಿಷ್ಟವಾದ ತಂತ್ರಾಂಶಗಳನ್ನು (app) ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ಕೊಂಡುಕೊಳ್ಳಬಹುದು. ಸ್ಯಾಮ್‌ಸಂಗ್‌ನವರು ಒಂದು ಒಳ್ಳೆ ಕೆಲಸ ಮಾಡಿದ್ದಾರೆ. ಅದುವೇ ಭಾರತೀಯ ಭಾಷೆಗಳ ಅಳವಡಿಕೆ. ಕಾರ್ಯಾಚರಣೆಯ ವ್ಯವಸ್ಥೆಯ ಮಟ್ಟದಲ್ಲೇ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳನ್ನು ಯುನಿಕೋಡ್ ಮೂಲಕ ಅಳವಡಿಸಿದ್ದಾರೆ. ಕನ್ನಡದಲ್ಲಿ ಇಮೈಲ್, ಎಸ್‌ಎಂಎಸ್, ಚಾಟಿಂಗ್ ಎಲ್ಲ ಮಾಡಬಹುದು. ಕನ್ನಡದ ಜಾಲತಾಣಗಳನ್ನು ವೀಕ್ಷಿಸಬಹುದು. ಕನ್ನಡದ ಕಡತಗಳನ್ನು ಓದಬಹುದು ಹಾಗೂ ಸಂಪಾದಿಸಬಹದು. ಬಹುಮಟ್ಟಿಗೆ ಒಂದು ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಮಾಡಬಹುದಾದ ಜನಸಾಮಾನ್ಯರಿಗೆ ದಿನನಿತ್ಯ ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡಬಹುದು. ಕನ್ನಡದಲ್ಲಿ ಬೆರಳಚ್ಚು ಮಾಡಲು ಮಾತ್ರ ಸ್ಯಾಮ್‌ಸಂಗ್‌ನವರು ಯಾವುದೇ ಕೀಲಿಮಣೆಯ ತಂತ್ರಾಂಶ ನೀಡಿಲ್ಲ. ಆದರೆ ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ದೊರೆಯುವ anysoftkeyboard ಮತ್ತು kannada for anysoftkeyboard (ಇವೆರಡೂ ಉಚಿತ) ಬಳಸಿ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಚಿತ್ರ ನೋಡಿ.

ಇತರೆ ಗುಣವೈಶಿಷ್ಟ್ಯಗಳು: ಸ್ಟೀರಿಯೋ ಎಫ್‌ಎಂ ರೇಡಿಯೋ; ೨ಜಿ, ೩ಜಿ, ೪ಜಿ ಸಂಪರ್ಕ; ಬಹುಸ್ಪರ್ಶ (ಮಲ್ಟಿಟಚ್) ಕೆಪಾಸಿಟಿವ್ ಪರದೆ, ಎಂಪಿ೩ ಮತ್ತು ಇತರೆ ಧ್ವನಿ ಹಾಗೂ ವೀಡಿಯೋ ಪ್ಲೇಯರ್, ೩೨ ಗಿಗಾಬೈಟ್ ತನಕ ಮೆಮೊರಿ ಹೆಚ್ಚಿಸಲು ಮೈಕ್ರೋ ಎಸ್‌ಡಿ ಕಾರ್ಡ್‌ಗೆ ಜಾಗ, ವೈಫೈ, ಬ್ರಾಡ್‌ಬ್ಯಾಂಡ್ ಅಂತರಜಾಲ ಸಂಪರ್ಕ, ಸ್ಟೀರಿಯೋ ಬ್ಲೂಟೂತ್, ಅಕ್ಸೆಲೆರೋಮೀಟರ್, ಮ್ಯಾಗ್ನೆಟೋಮೀಟರ್, ಜಿಪಿಎಸ್, ಇತ್ಯಾದಿ.

 

ಹೊಸ ಜಾಗಕ್ಕೆ ಹೋದಾಗ ಪ್ರಾರ್ಥನೆ ಮಾಡಲು ಪೂರ್ವ (ಅಥವಾ ಪಶ್ಚಿಮ) ದಿಕ್ಕು ಯಾವುದು ಎಂದು ತಿಳಿಯಲು ಇದರಲ್ಲಿರುವ ಮ್ಯಾಗ್ನೆಟೋಮೀಟರ್ ಬಳಸಬಹುದು. ನಕ್ಷತ್ರ ವೀಕ್ಷಣೆ ಮಾಡಲು ಗೂಗಲ್ ಸ್ಕೈಮ್ಯಾಪ್ ಬಳಸಬಹುದು. ನಾನು ಬೆಂಗಳೂರಿನಿಂದ ಹಂಪಿಗೆ ಕಾರು ಚಲಾಯಿಸಲು ರಸ್ತೆ ತಿಳಿಯಲು ಇದರ ಗೂಗಲ್ ಮ್ಯಾಪನ್ನು ಮಾತ್ರ ಬಳಸಿದ್ದೆ, ರಸ್ತೆ ಬದಿಯಲ್ಲಿ ಯಾರಲ್ಲೂ ದಾರಿ ವಿಚಾರಿಸಲಿಲ್ಲ.

 

ಒಟ್ಟಿನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ದುಡ್ಡಿದ್ದವರಿಗೆ ಒಂದು ಅತ್ಯುತ್ತಮ ಗ್ಯಾಜೆಟ್.

 

ಗ್ಯಾಜೆಟ್ ಸಲಹೆ

 

ನಾಗರಾಜ್ ಅವರ ಪ್ರಶ್ನೆ: ನನಗೆ ೩೦ ಸಾವಿರ ರೂಪಾಯಿಯ ಒಳಗೆ ಒಂದು ಉತ್ತಮ ಡಿಎಸ್‌ಎಲ್‌ಆರ್ ಕ್ಯಾಮರಾ ತೆಗೆದುಕೊಳ್ಳಬೇಕಾಗಿದೆ. ಯಾವುದನ್ನು ಕೊಳ್ಳಬಹುದು?

ಉ: ಕ್ಯಾನನ್ 1100D ಅಥವಾ ನಿಕೋನ್ D3100

2 Responses to ಗ್ಯಾಜೆಟ್ ಲೋಕ – ೦೦೫ (ಪೆಬ್ರವರಿ ೦೨, ೨೦೧೨)

  1. En ta Hegde

    ಮಾಹಿತಿ ತುಂಬ ಉಪಯುಕ್ತ.

  2. vikram

    sir, please let me know if s-pen requires any power? if not how & why one button click on s pen has different functionalityw

Leave a Reply