ಗ್ಯಾಜೆಟ್ ಲೋಕ – ೦೨೭ (ಜುಲೈ ೦೫, ೨೦೧೨)
ನಿಕಾನ್ ೧ ಜೆ1 – ಹೊಸ ನಮೂನೆಯ ಕ್ಯಾಮರ
ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲೂ ಲೆನ್ಸ್ ಬದಲಾಯಿಸುವ ಸವಲತ್ತಿನ ಹೊಸ ಮಾದರಿಯ ಕ್ಯಾಮರಾವನ್ನು ನಿಕಾನ್ ತಯಾರಿಸಿದೆ. ಅಂತಹ ಕ್ಯಾಮರಾದ ಬಗ್ಗೆ ಈ ಸಲ ತಿಳಿದುಕೊಳ್ಳೋಣ.
ಮೈಕ್ರೋ ಫೋರ್ ಥರ್ಡ್
ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಲೆನ್ಸ್ ಬದಲಾಯಿಸಲು ಆಗುವುದಿಲ್ಲ. ಅದು ಏನಿದ್ದರೂ ಎಸ್‌ಎಲ್‌ಆರ್ ಕ್ಯಾಮರಾಗಳ ಸವಲತ್ತು. ಆದರೆ ಎಂದೆಂದಿಗೂ ಹಾಗೆಯೇ ಆಗಬೇಕಾಗಿಲ್ಲ. ಕೆಲವು ಕ್ಯಾಮರಾ ತಯಾರಕರು ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲೂ ಲೆನ್ಸ್ ಬದಲಾಯಿಸುವ ಸವಲತ್ತನ್ನು ನೀಡಲು ತೊಡಗಿದ್ದಾರೆ. ಇಂತಹ ಕ್ಯಾಮರಾಗಳಿಗೆ ಮೈಕ್ರೋ ಫೋರ್ ಥರ್ಡ್ (Micro Four Thirds system) ಎಂಬ ಹೆಸರಿದೆ. ಇದನ್ನು ಒಲಿಂಪಸ್ ಮತ್ತು ಪಾನಾಸೋನಿಕ್ ಕಂಪೆನಿಗಳವರು ಜೊತೆ ಸೇರಿ ಪ್ರಾರಂಭಿಸಿದರು. ಇದನ್ನು ಜಾಗತಿಕ ಶಿಷ್ಟತೆ ಎಂದು ಎಲ್ಲರೂ ಬಳಸುವಂತಾಗಲಿ ಎಂಬುದು ಅವರ ಆಶೆಯಾಗಿತ್ತು. ಆದರೆ ಹಾಗಾಗಲಿಲ್ಲ. ಏನಿದು ಮೈಕ್ರೋ ಫೋರ್ ಥರ್ಡ್ ಎಂದರೆ?
ಫೋರ್ ಥರ್ಡ್ ಅಂದರೆ 4:3 ರ ಅನುಪಾತ ಎಂದು. 35ಮಿಮಿ ಫಿಲ್ಮಿನಲ್ಲಿ ಫಿಲ್ಮಿನ ಅಗಲ ಮತ್ತು ಎತ್ತರದ ಅನುಪಾತ 3:2 ಇತ್ತು ಡಿಎಸ್‌ಎಲ್‌ಆರ್ ಕ್ಯಾಮರಾಗಳಿಗೆ ಬಂದಾಗ ಅದು 4:3 ಆಯಿತು ಅದನ್ನೇ ಫೋರ್ ಥರ್ಡ್ ಎಂದು ಕರೆದರು. ಈ ನಮೂನೆಯ ಕ್ಯಾಮರಾಗಳಲ್ಲಿ ಕನ್ನಡಿ, ಪೆಂಟಾಪ್ರಿಸಂ ಎಲ್ಲ ಇರುತ್ತವೆ. ಆದುದರಿಂದ ಇವುಗಳ ಗಾತ್ರ ದೊಡ್ಡದಾಗಿರುತ್ತದೆ. ಇವುಗಳ ಬಗ್ಗೆ ಈ ಹಿಂದೆಯೇ ನಾವು ಗಮನಿಸಿದ್ದೇವೆ (ಗ್ಯಾಜೆಟ್‌ಲೋಕದ ಹಳೆಯ ಸಂಚಿಕೆಗಳನ್ನು vishvakannada.com/gadgetloka ಜಾಲತಾಣದಲ್ಲಿ ಓದಬಹುದು). ಮೈಕ್ರೋ ಫೋರ್ ಥರ್ಡ್‌ಗಳಲ್ಲಿ ಬೆಳಕನ್ನು ಮೇಲಕ್ಕೆ ಕಳುಹಿಸಿ ಅಲ್ಲಿಂದ ಪೆಂಟಾಪ್ರಿಸಂ ಮೂಲಕ ಐಪೀಸ್‌ನಲ್ಲಿ ನೋಡುವ ವ್ಯವಸ್ಥೆ ಇರುವುದಿಲ್ಲ. ಬೆಳಕು ನೇರವಾಗಿ ಸಂವೇದಕ (ಸೆನ್ಸರ್) ಮೇಲೆ ಬೀಳುತ್ತದೆ. ಎಸ್‌ಎಲ್‌ಆರ್‌ಗಳಂತೆ ಇಲ್ಲೂ ಲೆನ್ಸ್ ಬದಲಾಯಿಸಬಹುದು. ಫೋರ್ ಥರ್ಡ್ ಕ್ಯಾಮರಾಗಳಲ್ಲಿ 4:3ರ ಅನುಪಾತ ಇರುತ್ತದೆ. ಆದರೆ ಮೈಕ್ರೋ ಫೋರ್ ಥರ್ಡ್ ಕ್ಯಾಮರಾಗಳಲ್ಲಿ ಈ ಅನುಪಾತವಲ್ಲದೆ ಹೈಡೆಫಿನಿಶನ್ ಅಂದರೆ 16:9ರ ಅನುಪಾತವೂ ಇರುತ್ತದೆ. ಆದುದರಿಂದಲೇ ಈ ಮೈಕ್ರೋ ಎಂಬ ಹೆಚ್ಚಿಗೆ ಪದ ಜೋಡಿಕೊಂಡಿದೆ. ಇವುಗಳಲ್ಲೂ ಲೆನ್ಸ್ ಬದಲಾಯಿಸಬಹುದು. ಸರಿಯಾದ ಅಡಾಪ್ಟರ್ ಇದ್ದಲ್ಲಿ ಯಾವ ಲೆನ್ಸ್ ಬೇಕಿದ್ದರೂ ಬಳಸಬಹುದು. ಹೀಗಿದ್ದರೂ ಇದು ಜಾಗತಿಕ ಶಿಷ್ಟತೆಯಾಗಿಲ್ಲ.
ಈ ಮಾದರಿಯ ಕ್ಯಾಮರಾಗಳಲ್ಲಿ ಸಂವೇದಕದ ಗಾತ್ರ ಡಿಎಸ್‌ಎಲ್‌ಆರ್ ಕ್ಯಾಮರಾಗಳ ಸಂವೇದಕಕ್ಕಿಂತ ಕಡಿಮೆ ಇರುತ್ತದೆ. ಅಂತೆಯೇ ಲೆನ್ಸ್‌ನ ವ್ಯಾಸವೂ ಕಡಿಮೆ ಇರುತ್ತದೆ. ಹೆಚ್ಚು ಮೆಗಾಪಿಕ್ಸೆಲ್ ಎಂದು ಬರೆದಿದ್ದರೂ ಸಂವೇದಕದ ಒಟ್ಟು ಗಾತ್ರವೇ ಕಡಿಮೆ ಇರುವುದಿರಿಂದ ಹಾಗೂ ಲೆನ್ಸ್‌ನ ವ್ಯಾಸ ಕಡಿಮೆ ಇರುವುದರಿಂದ ಇವು ಡಿಎಸ್‌ಎಲ್‌ಆರ್ ಕ್ಯಾಮರಾಗಳ ಗುಣಮಟ್ಟವನ್ನು ತಲುಪುವುದಿಲ್ಲ. ಆದರೆ ಕನ್ನಡಿ, ಪೆಂಟಾಪ್ರಿಸಂ ಇಲ್ಲದಿರುವುದರಿಂದ ಕ್ಯಾಮರಾದ ಗಾತ್ರ ಕಡಿಮೆಯಾಗಿರುತ್ತದೆ. ಏಮ್ ಆಂಡ್ ಶೂಟ್ ಕ್ಯಾಮರಾ ಆಗಿದ್ದೂ ಲೆನ್ಸ್ ಬದಲಾಯಿಸಬಲ್ಲ ಸವಲತ್ತು ಈ ಕ್ಯಾಮರಾಗಳಿಗಿವೆ.
ಈಗ ಇದೇ ಮಾದರಿಯ ಎರಡು ಕ್ಯಾಮರಾಗಳನ್ನು ನಿಕಾನ್ ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳೇ ನಿಕಾನ್ 1 J1 ಮತ್ತು V1. ಇಲ್ಲಿ ನಿಕಾನ್ 1 ಎಂಬುದು ಈ ಹೊಸ ಮಾದರಿಯ ಶ್ರೇಣಿ ಆಗಿದೆ. ಅಂದರೆ ಇನ್ನು ಮುಂದೆ ನಿಕಾನ್ 1 ಎಂಬ ಹೆಸರಿನ ಹಲವಾರು ಕ್ಯಾಮಾರಾಗಳು ಮಾರುಕಟ್ಟೆಗೆ ಬರಲಿವೆ. ಈಗ ನಿಕಾನ್ ೧ ಜೆ೧ ಕ್ಯಾಮರಾ ಬಗ್ಗೆ ಸ್ವಲ್ಪ ತಿಳಿಯಲು ಪ್ರಯತ್ನಿಸೋಣ.
ನಿಕಾನ್ 1 J1
ಈಗಾಗಲೇ ತಿಳಿಸಿದಂತೆ ಇದು ಬಹುಮಟ್ಟಿಗೆ ಏಮ್ ಆಂಡ್ ಶೂಟ್ ಕ್ಯಾಮರಾ. ಆದರೆ ಲೆನ್ಸ್ ಬದಲಾಯಿಸಬಹುದು. ನನಗೆ ಬಂದ ಕ್ಯಾಮರಾದಲ್ಲಿ 10-30ಮಿಮಿ ಲೆನ್ಸ್ ಇತ್ತು. ಕಂಪೆನಿಯ ಕ್ಯಾಟಲಾಗ್‌ನಲ್ಲಿ ಇನ್ನೂ ಹಲವಾರು ಲೆನ್ಸ್‌ಗಳಿವೆ. ಆದರೆ ನನಗೆ ಬರಲಿಲ್ಲ. ಕೇಳಿದಾಗ ಅವು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂಬ ಉತ್ತರ ಬಂತು. ಆದುರಿಂದ ಎಲ್ಲ ಪರೀಕ್ಷೆಗಳೂ, ಫಲಿತಾಂಶಗಳೂ, ನನ್ನ ಅಭಿಪ್ರಾಯಗಳೂ ಈ ಕಿಟ್ ಲೆನ್ಸ್ ಆಧರಿಸಿ ಆಗಿವೆ. ಸಾಮಾನ್ಯವಾಗಿ ಡಿಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಕಿಟ್ ಲೆನ್ಸ್ ಅಷ್ಟೇನೂ ಚೆನ್ನಾಗಿರುವುದಿಲ್ಲ. ಇಲ್ಲೂ ಹಾಗೆಯೇ ಇರಬಹುದು ಅಂದುಕೊಂಡಿದ್ದೇನೆ. ಯಾಕೆಂದರೆ ಕಿಟ್ ಲೆನ್ಸ್ ಫಲಿತಾಂಶ ನನಗೇನೂ ಅತಿದೊಡ್ಡ ತೃಪ್ತಿ ನೀಡಿಲ್ಲ.
ಮೊದಲಿಗೆ ಕ್ಯಾಮರಾದ ಗುಣವೈಶಿಷ್ಟ್ಯಗಳ ಕಡೆ ಗಮನ ಹರಿಸೋಣ. 10 ಮೆಗಾಪಿಕ್ಸೆಲ್, 13.2 x 8.8 mm CMOS sensor, JPEG ಮತ್ತು RAW ಫೈಲ್ ವಿಧಾನಗಳು, ಹಲವು ನಮೂನೆಗಳಲ್ಲಿ ಫೋಟೋ ತೆಗೆಯುವುದು, 3:2 ಸ್ಥಿರ ಚಿತ್ರ, 16:9 ವೀಡಿಯೋ, ಹೈಡೆಫಿನಿಶನ್ ವೀಡಿಯೋ, 1/16,000-30 ಷಟರ್ ವೇಗ. ಷಟರ್ ಪ್ರಯಾರಿಟಿ, ಅಪೆರ್ಚರ್ ಪ್ರಯಾರಿಟಿ, ಸಂಪೂರ್ಣ ಮ್ಯಾನ್ಯುವಲ್ ವಿಧಾನಗಳು, 100 ರಿಂದ 6400 ತನಕ ಐಎಸ್‌ಓ ಆಯ್ಕೆಗಳು, ಕೈ ಅಲ್ಲಾಡಿದಿರೂ ಚಿತ್ರ ಚೆನ್ನಾಗಿ ಬರಲು ವೈಬ್ರೇಶನ್ ರಿಡಕ್ಷನ್, ತಮ್ಮದೇ ಫೋಟೋ ತೆಗೆಯಲು ಸೆಲ್ಫ್ ಟೈಮರ್, ಫ್ಲಾಶ್ ಇದೆ (ವಿ1 ಮಾದರಿಯಲ್ಲಿ ಫ್ಲಾಶ್ ಇಲ್ಲ). ಹಲವು ವಿಧಾನಗಳ ಆಟೋಫೋಕಸ್, ಸಂಪೂರ್ಣ ಮ್ಯಾನ್ಯುವಲ್ ಫೋಕಸ್, ಯುಎಸ್‌ಬಿ ಮತ್ತು ಎಚ್‌ಡಿಎಂಐ ಸಂಪರ್ಕ ಕಿಂಡಿಗಳು, ಇತ್ಯಾದಿ. ಒಂದು ಪರಿಣತರ ಕ್ಯಾಮರಾದಲ್ಲಿರಬೇಕಾದ ಎಲ್ಲ ಸವಲತ್ಯುಗಳೂ ಇವೆ.
ಇದರ ಬೆಲೆ ಸುಮಾರು 29 ಸಾವಿರ ರೂ. ಇದೇ ಬೆಲೆಗೆ ಡಿಎಸ್‌ಎಲ್‌ಆರ್ ಕ್ಯಾಮರ ಕೂಡ ದೊರೆಯುತ್ತದೆ ಎಂಬುದನ್ನು ಮನಸ್ಸಿಲ್ಲಿಟ್ಟುಕೊಳ್ಳಬೇಕು. ಡಿಎಸ್‌ಎಲ್‌ಆರ್ ಉತ್ತಮ ಗುಣಮಟ್ಟದ ಚಿತ್ರಗಳನ್ನೇನೋ ನೀಡುತ್ತದೆ ಆದರೆ ಗಾತ್ರದಲ್ಲಿ ದೊಡ್ಡದಾಗಿದೆ. ಸರಿಸುಮಾರು ಡಿಎಸ್‌ಎಲ್‌ಆರ್‌ನ ಎಲ್ಲ ಗುಣವೈಶಿಷ್ಟ್ಯಗಳನ್ನು ಹೊಂದಿ ಆದರೆ ಗಾತ್ರದಲ್ಲಿ ಚಿಕ್ಕದಾಗಿರುವ ಕ್ಯಾಮರಾ ನಿಕಾನ್ 1 ಜೆ1 (ಮತ್ತು ವಿ1). ಲೆನ್ಸ್ ಚಿಕ್ಕದಾಗಿದೆ. ಚಿಕ್ಕ ಕೈಚೀಲದಲ್ಲಿ ಅಥವಾ ಹೆಂಗಸರ ಜಂಬದ ಚೀಲದಲ್ಲಿ ಕ್ಯಾಮರಾ ಇಟ್ಟುಕೊಳ್ಳಬಹುದು. ಲೆನ್ಸ್‌ನಲ್ಲಿ ಒಂದು ಗುಂಡಿ (ಬಟನ್) ಇದೆ. ಅದನ್ನು ಬಳಸಿ ಲೆನ್ಸ್ ಅನ್ನು ಅತಿ ಚಿಕ್ಕದಾಗಿ ಮಾಡಬಹುದು. ಚೀಲದೊಳಗೆ ಇಡಲು ಇದು ಉತ್ತಮ ಸೌಲಭ್ಯ.
ಕ್ಯಾಮರಾ ಪರವಾಗಿಲ್ಲ. ಏಮ್ ಆಂಡ್ ಶೂಟ್ ಕ್ಯಾಮರಾದ ಗಾತ್ರದಲ್ಲಿ ಡಿಎಸ್‌ಎಲ್‌ಆರ್ ಕ್ಯಾಮರಾದ ಎಲ್ಲ ಗುಣವೈಶಿಷ್ಟ್ಯಗಳನ್ನು ನೀಡಿದ್ದಾರೆ. ನಾನು ತೆಗೆದ ಫೋಟೋಗಳು ಪರವಾಗಿಲ್ಲ. ನೀವೇ ನೋಡಿ ತೀರ್ಮಾನಿಸಿ. ವೀಡಿಯೋ ಚೆನ್ನಾಗಿ ಏನೋ ಬರುತ್ತದೆ. ಆದರೆ ಕೈ ಸ್ವಲ್ಪವೂ ಅಲ್ಲಾಡಬಾರದು. ವೀಡಿಯೋ ತೆಗೆಯುವಾಗ ಕ್ಯಾಮರಾ ಸ್ಟ್ಯಾಂಡ್ ಬಳಸಿದರೆ ಒಳ್ಳೆಯದು.
ಗ್ಯಾಜೆಟ್ ಸಲಹೆ
ಪ್ರಭುರಾಜ ಸ್ವಾಮಿ ಅವರ ಪ್ರಶ್ನೆ: ನನಗೆ ಮೊಬೈಲ್ ಸಿಮ್ ಕಾರ್ಡ್ ಬಳಸುವಂತಹ ಡಾಟಾ ಕಾರ್ಡ್ ಕೊಳ್ಳಬೇಕು. ಅಂತಹವುಗಳು ಮಾರುಕಟ್ಟೆಯಲ್ಲಿ ಇವೆಯೇ?
ಉ: ಖಂಡಿತ ಇವೆ. ಬೀಟೆಲ್, ಹುವೇ, ಟೆರ್ರಾಕಾಂ ಇತ್ಯಾದಿ ಕಂಪೆನಿಗಳ ಡಾಟಾ ಕಾರ್ಡ್‌ಗಳು ಇವೆ. ನಾನು ಹುವೇಯವರದನ್ನು ಕಳೆದ ಮೂರು ವರ್ಷಗಳಿಂದ ಬಳಸುತ್ತಿದ್ದೇನೆ.
ನಿಕಾನ್ ಜ೧ ಕ್ಯಾಮರಾದಲ್ಲಿ ತೆಗೆದ ಕೆಲವು ಫೋಟೋಗಳು:
ಸಕಲೇಶಪುರದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ರೈಲು ಮಾರ್ಗದಲ್ಲಿ ಕಂಡುಬರುವ ಪಶ್ಚಿಮ ಘಟ್ಟದ ಅದ್ಭುತ ದೃಶ್ಯಗಳನ್ನು ನಿಕಾನ್ ಜೆ೧ ಕ್ಯಾಮರಾದಲ್ಲಿ ಸೆರೆಹಿಡಿದ ಚಿತ್ರಗಳು ಇಲ್ಲಿವೆ.
-ಡಾ| ಯು. ಬಿ. ಪವನಜ
February 26th, 2013 at 6:03 pm
information was very interesting & more helpfull for new camera buyers