ಗ್ಯಾಜೆಟ್ ಲೋಕ – ೦೨೬ (ಜೂನ್ ೨೮, ೨೦೧೨)

ಇನ್ನೊಂದಿಷ್ಟು ಕಿರುತಂತ್ರಾಂಶಗಳು

 

ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಂತ ಜನಪಿಯವಾಗಿರುವ ಆಂಡ್ರೋಯಿಡ್ ಫೋನ್‌ಗಳಿಗೆ ಇರುವ ಲಕ್ಷಗಟ್ಟಲೆ ತಂತ್ರಾಂಶಗಳಲ್ಲಿ ಇನ್ನೊಂದಿಷ್ಟು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ.

 

ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಡ್ರೋಯಿಡ್ ಸ್ಮಾರ್ಟ್‌ಫೋನ್‌ಗಳಿಗೆ ಹಲವು ಕಿರುತಂತ್ರಾಂಶಗಳು ಲಭ್ಯವಿವೆ. ಇವುಗಳಿಗೆ ಆಪ್ (app) ಎನ್ನುತ್ತಾರೆ. ಇಂತಹ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು ಮೇ ೧೭ರ ಸಂಚಿಕೆಯಲ್ಲಿ ಗಮನಿಸಿದ್ದೆವು. ಇವುಗಳನ್ನು play.google.com ಜಾಲತಾಣದಿಂದ ಅಥವಾ ಗೂಗ್ಲ್ ಪ್ಲೇ ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಸುಮಾರು ಆರು ಲಕ್ಷ ಚಿಲ್ಲರೆ ಇರುವ ಇಂತಹ ಕಿರುತಂತ್ರಾಂಶಗಳಲ್ಲಿ ಉಪಯುಕ್ತವಾದ ಇನ್ನೊಂದಿಷ್ಟನ್ನು ಈಗ ನೋಡೋಣ.

 

ಅವಸ್ತ್ ಸುರಕ್ಷೆ (avast! Mobile Security)

 

ನಿಮ್ಮ ಮೊಬೈಲ್ ಫೋನಿಗೆ ಸುರಕ್ಷ ಕವಚವಾಗಿ ಈ ಕಿರುತಂತ್ರಾಶ ಕೆಲಸ ಮಾಡುತ್ತದೆ. ಮೊಬೈಲ್ ಕಳೆದು ಹೋದರೆ, ಕದ್ದವರು ಅದರ ಸಿಮ್ ಕಾರ್ಡ್ ಬದಲಿಸಿದಾಗ ಇದು ನೀವು ಮೊದಲೇ ದಾಖಲಿಸಿದ ಒಂದು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುತ್ತದೆ. ಮಾತ್ರವಲ್ಲ, ಆ ಮೊಬೈಲ್‌ನಿಂದ ಸಂದೇಶ ಕಳುಹಿಸಿ ಕಳೆದು ಹೋದ ಮೊಬೈಲ್ ಫೋನನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಜಿಪಿಎಸ್ ಚಾಲನೆಗೊಳಿಸಿ ಮೊಬೈಲ್ ಫೋನ್ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯಬಹುದು. ಫೋನಿನಲ್ಲಿರುವ ಎಲ್ಲ ಮಾಹಿತಿಯನ್ನು ಅಳಿಸಿಹಾಕಬಹುದು. ಇದರಲ್ಲಿ ವೈರಸ್ ನಿರೋಧಕ ತಂತ್ರಾಂಶವೂ ಇದೆ. ಗೊತ್ತಿಲ್ಲದ ಸಂಖ್ಯೆಯಿಂದ ಎಸ್‌ಎಂಎಸ್ ಬರದಂತೆಯೂ ಮಾಡಬಹುದು.

 

ಗೂಗ್ಲ್ ಅಂತರಿಕ್ಷ ನಕ್ಷೆ (Sky Map)

 

ಗೂಗ್ಲ್‌ನವರು ಮುಕ್ತ ತಂತ್ರಾಂಶ ವಿಧಾನದಲ್ಲಿ ಇದ್ದ ತಂತ್ರಾಂಶವನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ಅಂತರಿಕ್ಷಕ್ಕೆ ಒಂದು ಕಿಟಿಕಿಯಾಗಿ ಕೆಲಸ ಮಾಡುತ್ತದೆ. ಒಂದು ಸ್ಥಳದಲ್ಲಿ ನಿಂತುಕೊಂಡು ಆಕಾಶವನ್ನು ಒಂದು ದಿಕ್ಕಿನಲ್ಲಿ ವೀಕ್ಷಿಸಿದರೆ ಯಾವ ಯಾವ ನಕ್ಷತ್ರ, ಗ್ರಹಗಳು ಕಾಣಸಿಗುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಹವ್ಯಾಸಿ ಖಗೋಳಶಾಸ್ತ್ರಜ್ಞರುಗಳಿಗೆ ತುಂಬ ಉಪಯುಕ್ತ ತಂತ್ರಾಂಶ. ತಲೆ ಎತ್ತಿ ಆಕಾಶ ವೀಕ್ಷಣೆ ಮಾಡಿದರೆ ಹೊಳೆಯುವ ಆಕಾಶಕಾಯ ಯಾವುದು ಎಂದು ತಿಳಿಯಬೇಕಾದರೆ ಈ ತಂತ್ರಾಂಶವನ್ನು ಚಾಲೂಗೊಳಿಸಿ ಆ ಆಕಾಶಕಾಯದ ಕಡೆಗೆ ತಿರುಗಿಸಿದರೆ ಸಾಕು. ಅದರ ಹೆಸರು ಮೂಡಿಬರುತ್ತದೆ. ಇದು ಕೆಲಸ ಮಾಡಬೇಕಾದರೆ ಫೋನಿನಲ್ಲಿ ಅಕ್ಸಲೆರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಇರತಕ್ಕದ್ದು.

 

ಮಾತನಾಡುವ ಬೆಕ್ಕು (Talking Tom Cat Free)

 

ನಿಮ್ಮ ಮಾತನ್ನು ಅಣಕಿಸಿ ಅದನ್ನೇ ಸ್ವಲ್ಪ ಶ್ರುತಿ ಬದಲಿಸಿ ಹೇಳಿದರೆ ಹೇಗಿರುತ್ತದೆ? ಈ ಕಿರುತಂತ್ರಾಂಶ ಅದನ್ನೇ ಮಾಡುತ್ತದೆ. ಇದಕ್ಕೆ ಒಂದು ಬೆಕ್ಕಿನ ರೂಪ ನೀಡಲಾಗಿದೆ. ಸುಮಾರು ಮುವತ್ತು ಸೆಕೆಂಡು ಆಲಿಸಿ ನಂತರ ಅದನ್ನೇ ಸ್ವರ ಬದಲಿಸಿ ಪುನರುತ್ಪತ್ತಿ ಮಾಡುತ್ತದೆ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಉತ್ತಮ ಮನನರಂಜನೆ ನೀಡುವ ಕಿರುತಂತ್ರಾಂಶ. ಹಾಡನ್ನು ಧ್ವನಿ ಮುದ್ರಿಸಿಕೊಳ್ಳುವ ಸವಲತ್ತೂ ಇದೆ. ಜನಪ್ರಿಯ ಹಾಡುಗಳನ್ನು ಈ ಮಾದರಿಯಲ್ಲಿ ಸ್ವರ ಬದಲಿಸಿ ಧ್ವನಿಮುದ್ರಿಸಿದ ಹಾಡುಗಳು ಅಂತರಜಾಲದಲ್ಲಿ ಲಭ್ಯವಿವೆ. ಇನ್ನು ತಡವೇಕೆ? ಬಣ್ಣದ ತಗಡಿನ ತುತ್ತೂರಿಯನ್ನು ಹಾಡಿ!

 

ತಂಬೂರಿ (Tanpura Droid)

 

ಸಂಗೀತಗಾರರಿಗೆ ತಂಬೂರಿ ಅತೀ ಅಗತ್ಯ. ಇತ್ತೀಚೆಗಂತು ಬಹುಪಾಲು ಸಂಗೀತಗಾರರು ನಿಜವಾದ ತಂಬೂರಿ ಬದಲಿಗೆ ಇಲೆಕ್ಟ್ರಾನಿಕ್ ತಂಬೂರಿ ಬಳಸುತ್ತಿದ್ದಾರೆ. ಈಗ ಅದನ್ನೇ ಕಿರುತಂತ್ರಾಂಶವಾಗಿ ನೀಡಲಾಗಿದೆ. ಇದನ್ನು ನಿಮ್ಮ ಮೊಬೈಲ್ ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಿಮಗೊಂದು ತಂಬೂರಿ ಸಿದ್ಧ. ಸಂಗೀತದ ಶ್ರುತಿ, ಸ್ವರ ಎಲ್ಲ ನಿಮಗೆ ಬೇಕಾದಂತೆ ಆಯ್ಕೆ ಮಾಡಿಕೊಳ್ಳಬಹುದು. ಸಂಗೀತಕ್ಕೇ ಆಗಬೇಕಾಗಿಲ್ಲ, ಧ್ಯಾನಕ್ಕೂ ಹಿನ್ನೆಲೆ ಸಂಗೀತವಾಗಿಯೂ ಬಳಸಬಹುದು.

 

ಖರ್ಚುವೆಚ್ಚ ಲೆಕ್ಕ (Expense Manager)

 

ಈ ಕಿರುತಂತ್ರಾಂಶ ದಿನನಿತ್ಯದ ಆಯವ್ಯಯಗಳನ್ನು ದಾಖಲಿಸಲು ಸಹಾಯ ಮಾಡುತ್ತದೆ. ಬೇರೆಬೇರೆ ಖಾತೆಗಳನ್ನು ತೆರೆದು ಆಯಾ ಖಾತೆಗಳಲ್ಲಿ ಆದ ಖರ್ಚುಗಳನ್ನು ದಾಖಲಿಸಬಹುದು. ತಿಂಗಳ ಕೊನೆಗೆ ಆದ ಎಲ್ಲ ಖರ್ಚನ್ನು ಕೋಷ್ಟಕ ಮಾದರಿಯಲ್ಲಿ ನೀಡುತ್ತದೆ. ಕಂಪೆನಿ ಪರವಾಗಿ ಪ್ರವಾಸ ಹೋದಾಗ ಆದ ಖರ್ಚುಗಳನ್ನು ಅಲ್ಲಲ್ಲೇ ದಾಖಲಿಸಿ ಕೊನೆಗೆ ಕೋಷ್ಟಕ ಮಾದರಿಯಲ್ಲಿ ಪಡೆಯಬಹುದು. ತುಂಬ ಉಪಯುಕ್ತ ತಂತ್ರಾಂಶ.

 

ವಿದೇಶಿ ವಿನಿಮಯ (XE Currency)

 

ನಮ್ಮ ದೇಶದ ಹಣ ಪ್ರಪಂಚದ ಇತರೆ ದುಡ್ಡುಗಳ ಜೊತೆ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಯಬೇಕೆ? ಹೌದಾದಲ್ಲಿ ನಿಮಗೆ ಈ ಕಿರುತಂತ್ರಾಂಶ ಬೇಕು. ಆಯಾ ಸಮಯದಲ್ಲಿ ರುಪಾಯಿಯ ಬೆಲೆಯನ್ನು ಪ್ರಪಂಚದ ಇತರೆ ಹಣಗಳ ಜೊತೆ ಹೋಲಿಸಿ ತೋರಿಸುತ್ತದೆ. ಒಂಡು ಡಾಲರಿಗೆ ಎಷ್ಟು ರುಪಾಯಿ, ಒಂದು ಯೂರೋಗೆ ಎಷ್ಟು ರುಪಾಯಿ ಎಂದೆಲ್ಲ ತಿಳಿಯಬಹುದು. ವಿವಿಧ ದೇಶಗಳ ಕರೆನ್ಸಿಗಳ ನಡುವೆ ಪರಿವರ್ತಿಸುವ ಕ್ಯಾಲ್ಕುಲೇಟರ್ ಕೂಡ ಇದೆ. ಯಾವುದೋ ಒಂದು ಜಾಲತಾಣದಲ್ಲಿ ಯಾವುದೋ ಒಂದು ಪದಾರ್ಥದ ಬೆಲೆಯನ್ನು ಡಾಲರಿನಲ್ಲಿ ನಮೂದಿಸಿದ್ದರೆ ಅದನ್ನೂ ಈ ಕಿರುತಂತ್ರಾಂಶ ಬಳಸಿ ರುಪಾಯಿಗೆ ಬದಲಾಯಿಸಿ ಇಲ್ಲಿಯ ಬೆಲೆಯನ್ನು ತಿಳಿದುಕೊಳ್ಳಬಹುದು.

 

ಕ್ಯೂಆರ್ ಬಾರ್‌ಕೋಡ್ ಸ್ಕ್ಯಾನರ್ (Qr Barcode Scanner)

 

ಹಲವು ಪದಾರ್ಥಗಳಿಗೆ ಅದರ ವಿವರಗಳನ್ನು ಬಾರ್‌ಕೋಡ್ ಮೂಲಕ ದಾಖಲಿಸಿರುವುದನ್ನು ಗಮನಿಸಿರುತ್ತೀರಾ. ಸೂಪರ್‌ಮಾರ್ಕೆಟ್‌ಗಳಲ್ಲಿ ಪದಾರ್ಥಗಳ ಬಾರ್‌ಕೋಡನ್ನು ಸ್ಕ್ಯಾನರ್ ಮುಂದೆ ಹಿಡಿದರೆ ಸಾಕು ಅದರ ಬೆಲೆ ರಶೀದಿಯಲ್ಲಿ ಸೇರಿಕೊಳ್ಳುತ್ತದೆ. ನೀವೊಂದು ಸೂಪರ್ ಮಾರ್ಕೆಟಿಗೆ ಹೋಗಿದ್ದೀರಾ. ಅಲ್ಲೊಂದು ಕ್ಯಾಮರಾದ ಪೆಟ್ಟಿಗೆಯಲ್ಲಿ ಬಾರ್‌ಕೋಡ್ ಗಮನಿಸಿದ್ದೀರಾ. ನಿಮಗೆ ಅದರ ಬೆಲೆ ರುಪಾಯಿಯಲ್ಲಿ ಪ್ರತ್ಯೇಕ ಬರೆದಿರುವುದೂ ಕಣ್ಣಿಗೆ ಬಿದ್ದಿದೆ. ಆದರೆ ಆ ಕ್ಯಾಮರಾದ ಮೂಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಷ್ಟು ಎಂದು ತಿಳಿಯಬೇಕೇ? ಹಾಗಿದ್ದಲ್ಲಿ ನೀವು ಈ ಕಿರುತಂತ್ರಾಂಶವನ್ನು ಬಳಸಬಹುದು. ಅದು ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿ ಆ ಪದಾರ್ಥ ಏನು ಎಂದು ತಿಳಿಸುತ್ತದೆ. ಹಾಗೆಯೇ ಅಂತರಜಾಲದ ಮೂಲಕ ಅದರ ಬೆಲೆಯನ್ನೂ ತಿಳಿಯಲು ಸಹಾಯ ಮಾಡುತ್ತದೆ. ಅಂತರಜಾಲತಾಣಗಳಲ್ಲಿ ಜಾಲತಾಣದ ವಿಳಾಸವನ್ನು ಮೊಬೈಲ್ ಫೋನ್ ಆವೃತ್ತಿಯನ್ನು ಕ್ಯೂಆರ್ ಕೋಡ್ ಮೂಲಕ ದಾಖಲಿಸಿರುತ್ತಾರೆ. ಈ ಕಿರುತಂತ್ರಾಂಶವನ್ನು ಬಳಸಿ ಜಾಲತಾಣಗಳ ಮೊಬೈಲ್ ಆವೃತ್ತಿಯನ್ನು ತಿಳಿದುಕೊಳ್ಳಬಹುದು.

 

ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ಆರು ಲಕ್ಷಕ್ಕಿಂತ ಅಧಿಕ ಕಿರುತಂತ್ರಾಂಶಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನೀಡಲಾಗಿದೆ. ಅಂದ ಮಾತ್ರಕ್ಕೆ ಉಳಿದವು ಚೆನ್ನಾಗಿಲ್ಲ ಎಂದಾಗಲಿ ಇವೇ ಸರ್ವಶ್ರೇಷ್ಠ ಎಂದಾಗಲಿ ತೀರ್ಮಾನಿಸಬಾರದು. ಈ ಕಿರುತಂತ್ರಾಂಶಗಳನ್ನು ಆಂಡ್ರೋಯಿಡ್ ಆಧಾರಿತ ಟ್ಯಾಬ್ಲೆಟ್‌ಗಳಲ್ಲೂ ಬಳಸಬಹುದು.

 

ಗ್ಯಾಜೆಟ್ ಸಲಹೆ

 

ರಾಣಿಬೆನ್ನೂರಿನ ಶಶಿ ಅವರ ಪ್ರಶ್ನೆ: ಯಾವ 3ಜಿ ಡಾಟಾ ಕಾರ್ಡ್ ಚೆನ್ನಾಗಿದೆ?

ಉ: ನಾನು ಹುವೇಯವರ ಡಾಟಾ ಕಾರ್ಡ್ ಬಳಸುತ್ತಿದ್ದೇನೆ. ಚೆನ್ನಾಗಿದೆ. ಇತರೆ ಮಾದರಿಗಳ ಬಗ್ಗೆ ಅಷ್ಟು ಮಾಹಿತಿ ಇಲ್ಲ.

 

-ಡಾ| ಯು. ಬಿ. ಪವನಜ

1 Response to ಗ್ಯಾಜೆಟ್ ಲೋಕ – ೦೨೬ (ಜೂನ್ ೨೮, ೨೦೧೨)

  1. Praveen.T

    Namaste sir, nimma prakara nokia xl hagu moto g iveradau phone galalli best yavudu sir?

Leave a Reply