ಗ್ಯಾಜೆಟ್ ಲೋಕ – ೦೨೨ (ಮೇ ೩೧, ೨೦೧೨)

ಡಿಎಸ್‌ಎಲ್‌ಆರ್ ಕ್ಯಾಮರ ಕೊಳ್ಳುವುದು ಹೇಗೆ?

 

ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮರಾಗಳು ಕೈಗೆಟುಕುವ ಬೆಲೆಯಲ್ಲಿ ದೊರೆಯತೊಡಗಿವೆ. ಜನಸಾಮಾನ್ಯರೂ ಈ ಕ್ಯಾಮರಾಗಳನ್ನು ಕೊಳ್ಳುವಂತೆ ಮಾಡಿವೆ. ಆದರೆ ಅವುಗಳನ್ನು ಕೊಳ್ಳುವ ಮುನ್ನ ಏನೇನು ಚಿಂತನೆ ಮಾಡಬೇಕು? ಯಾವುದರ ಕಡೆ ಸ್ವಲ್ಪ ಗಮನ ಹರಿಸಬೇಕು?

 

ಕ್ಯಾಮರಾದಲ್ಲಿ ಚಿತ್ರ ತೆಗೆಯುವ ವಸ್ತುವನ್ನು ನೋಡಲು ಮತ್ತು ಚಿತ್ರೀಕರಣ ಮಾಡಲು ಒಂದೇ ಮಸೂರ (ಲೆನ್ಸ್) ಬಳಸುವ ಕ್ಯಾಮರಾಗಳನ್ನು ಎಸ್‌ಎಲ್‌ಆರ್ ಕ್ಯಾಮರಾ ಎನ್ನುತ್ತಾರೆ. ಅವುಗಳ ಡಿಜಿಟಲ್ ಅವತಾರಗಳೇ ಡಿಎಸ್‌ಎಲ್‌ಆರ್ ಕ್ಯಾಮರಾಗಳು. ಇವುಗಳ ಬೆಲೆ ಅತಿ ಕಡಿಮೆ ಎಂದರೆ ಸುಮಾರು ೨೨ ಸಾವಿರ ರೂ. ಇದೆ. ಡಿಎಸ್‌ಎಲ್‌ಆರ್ ಎಂದರೆ ಏನು ಎಂದು ನಾವು ಈ ಹಿಂದೆಯೇ ಗಮನಿಸಿದ್ದೇವೆ (ನೋಡಿ: bit.ly/gadgetloka3). ಸರಳವಾಗಿ ಹೇಳುವುದಾದರೆ ಇಂತಹ ಕ್ಯಾಮರಾಗಳಲ್ಲಿ ದೇಹ ಮತ್ತು ಲೆನ್ಸ್ ಪ್ರತ್ಯೇಕ ವಾಗಿ ದೊರೆಯುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ಕ್ಯಾಮರಾ ಜೊತೆ ಕನಿಷ್ಠ ಒಂದು ಲೆನ್ಸ್ ದೊರೆಯುತ್ತದೆ. ಡಿಎಸ್‌ಎಲ್‌ಆರ್ ಕೊಳ್ಳುವಾಗ ಕ್ಯಾಮರ ಮತ್ತು ಲೆನ್ಸ್ ಇವುಗಳ ಗುಣವೈಶಿಷ್ಟ್ಯಗಳನ್ನು ಪ್ರತ್ಯೇಕವಾಗಿ ಗಮನಿಸಬೇಕು. ಅದರಲ್ಲೂ ಮುಖ್ಯವಾಗಿ ಕ್ಯಾಮರ ಕಡೆ ಗಮನ ಹರಿಸಬೇಕು. ಯಾಕೆಂದರೆ ಕ್ಯಾಮರ ಕೊಂಡ ನಂತರ ಇಷ್ಟ ಬಂದ ಲೆನ್ಸ್‌ಗಳನ್ನು ಕೊಳ್ಳಬಹುದು, ಕೊಳ್ಳಬೇಕು. ಲೆನ್ಸ್‌ಗಳ ಬಗ್ಗೆ ಪ್ರತ್ಯೇಕ ಲೇಖನ ಬರೆಯಬೇಕು. ಇವತ್ತಿನ ಸಂಚಿಕೆಯಲ್ಲಿ ದೇಹದ (dSLR camera body) ಕಡೆ ಗಮನ ಹರಿಸೋಣ.

 

ಮೊದಲನೆಯದಾಗಿ ಮೆಗಾಪಿಕ್ಸೆಲ್ ಎಂಬ ಮಾಯೆ: ಈ ಬಗ್ಗೆ ಈ ಹಿಂದೆಯೇ ಒಂದು ಪ್ರತ್ಯೇಕ ಲೇಖನ ಬರೆಯಲಾಗಿತ್ತು (bit.ly/gadgetloka17). ಆದುದರಿಂದ ಅದನ್ನು ಇಲ್ಲಿ ಮತ್ತೆ ವಿವರಿಸಲಾಗುವುದಿಲ್ಲ. ಮುಖ್ಯವಾಗಿ ನೆನಪಿಡಬೇಕಾದುದು, ಈ ಮೆಗಾಪಿಕ್ಸೆಲ್ ಎಂಬುದು ಕ್ಯಾಮರ ಕೊಳ್ಳುವಾಗ ಅತಿ ನಿರ್ಣಾಯಕ ಪಾತ್ರ ವಹಿಸಬೇಕಾಗಿಲ್ಲ ಎಂದು. ಅದರಲ್ಲೂ ಡಿಎಸ್‌ಎಲ್‌ಆರ್ ಕೊಳ್ಳುವಾಗ ಅದನ್ನು ಮರೆತೇ ಬಿಡಬಹುದು. ಈಗ ಮಾರುಕಟ್ಟೆಯಲ್ಲಿ ಹೇಗಿದ್ದರೂ ಕನಿಷ್ಠ ೧೦ ಮೆಗಾಪಿಕ್ಸೆಲ್‌ಗಿಂತ ಕಡಿಮೆಯ ಡಿಎಸ್‌ಎಲ್‌ಆರ್ ಕ್ಯಾಮರ ದೊರೆಯುವುದೇ ಕಷ್ಟ. ಹಾಗಿರುವಾಗ ಅದರ ಬಗ್ಗೆ ಹೆಚ್ಚಿನ ಗಮನ ಬೇಕಾಗಿಲ್ಲ.

 

ಸಂವೇದಕ (ಸೆನ್ಸರ್) ಗಾತ್ರ: ಇದು ಬಹಳ ಮುಖ್ಯವಾದುದು. ಇದು ದೊಡ್ಡದಿದ್ದಷ್ಟೂ ಒಳ್ಳೆಯದು. ಕ್ಯಾಮರಾದ ಗುಣವೈಶಿಷ್ಟ್ಯಗಳ ಪಟ್ಟಿಯಲ್ಲಿ ಇದನ್ನು ನೀಡಿರುತ್ತಾರೆ. ಅದನ್ನು ಹುಡುಕಿ ನೋಡಿ. ಸಾಮಾನ್ಯವಾಗಿ ಇದು ಸಿಗಬೇಕಾದರೆ ಕ್ಯಾಮರಾದ ಪುಸ್ತಕವನ್ನು ಪೆಟ್ಟಿಗೆಯಿಂದ ಹೊರತೆಗೆಯಬೇಕು. ಅದಕ್ಕೆ ಅವಕಾಶವಿಲ್ಲದಿದ್ದಲ್ಲಿ ಅಂತರಜಾಲದಲ್ಲಿ ಹುಡುಕಬೇಕು. ಸಂವೇದಕಗಳಲ್ಲಿ ಪ್ರಮುಖವಾಗಿ ಎರಡು ವಿಧ. ಸಿಸಿಡಿ (CCD) ಮತ್ತು ಸಿಮೋಸ್ (CMOS). ಎರಡರ ಪರ ಹಾಗು ವಿರೋಧವಾಗಿ ಅಂತರಜಾಲ ತುಂಬೆಲ್ಲ ಲೇಖನ ವಿಮರ್ಶೆಗಳಿವೆ. ಈಗಿನ ಪರಿಸ್ಥಿತಿಯೆಂದರೆ ಎರಡರಲ್ಲಿ ಯಾವುದಾದರೂ ಅಡ್ಡಿಯಿಲ್ಲ. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕೆಲವು ಕ್ಯಾಮರಾಗಳು ಸೆನ್ಸರ್ ಕ್ಲೀನಿಂಗ್ ಎಂಬ ಸವಲತ್ತು ನೀಡಿರುತ್ತಾರೆ. ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಲೆನ್ಸ್ ಬದಲಿಸಬಹುದಾದರಿಂದ ಹಾಗೆ ಮಾಡುವಾಗ ಕ್ಯಾಮರಾದ ಸೆನ್ಸರ್ ಮೇಲೆ ಧೂಳು ಕುಳಿತುಕೊಳ್ಳುತ್ತದೆ. ಸೆನ್ಸರ್ ಕ್ಲೀನಿಂಗ್ ವ್ಯವಸ್ಥೆ ಇದ್ದರೆ ಸಂವೇದಕವನ್ನು ಸ್ವಚ್ಛಮಾಡಬಹುದು. ಆದುದರಿಂದ ಇಂತಹ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ.

 

ಶೂಟಿಂಗ್ ಆಯ್ಕೆಗಳು: ಹೆಚ್ಚಿನ ಕ್ಯಾಮರಾಗಳು ಹಲವು ನಮೂನೆಯ ಶೂಟಿಂಗ್ ಆಯ್ಕೆಗಳನ್ನು ನೀಡುತ್ತವೆ. ಉದಾ -ವ್ಯಕ್ತಿ, ಸೀನರಿ, ರಾತ್ರಿ, ಕ್ಲೋಸಪ್ (ಹೂವು), ಇತ್ಯಾದಿ. ಇವೆಲ್ಲದರ ಹೊರತಾಗಿ ಎಲ್ಲ ಡಿಎಸ್‌ಎಲ್‌ಆರ್‌ಗಳು ಷಟರ್ ಆಯ್ಕೆ, ಅಪೆರ್ಚರ್ ಆಯ್ಕೆ ಅಥವಾ ಸಂಪೂರ್ಣ ಮಾನ್ಯುವಲ್ ಆಯ್ಕೆಗಳ ಸ್ವಾತಂತ್ರ್ಯ ನೀಡುತ್ತವೆ. ಷಟರ್ ವೇಗ ಅಧಿಕ ಎಂದರೆ ಸಾಮಾನ್ಯವಾಗಿ ೪೦೦೦ ತನಕವೂ ಇರತ್ತವೆ. ಇದರರ್ಥ ಒಂದು ಸೆಕೆಂಡಿನ ೪೦೦೦ನೆ ಒಂದು ಭಾಗದಷ್ಟು ಕಡಿಮೆ ಸಮಯದಲ್ಲಿ ಷಟರ್ ತೆರೆದು ಮುಚ್ಚುತ್ತದೆ ಎಂದು. ಈ ವೇಗದಲ್ಲಿ ಅತಿ ವೇಗವಾಗಿ ರೆಕ್ಕೆ ಬಡಿಯುವ ಜೇನು ನೊಣದ ರೆಕ್ಕೆಗಳ ಚಿತ್ರವೂ ಸ್ಪಷ್ಟವಾಗಿ ಮೂಡಿಬರುವುದು. ಷಟರ್‌ನ ವೇಗ ಅತಿ ಕಡಿಮೆ ಅಂದರೆ ೩೦ ಸೆಕೆಂಡು ಇರುತ್ತದೆ. ಈ ವೇಗದಲ್ಲಿ ಫೋಟೋ ತೆಗೆಯಬೇಕಾದರೆ ಕ್ಯಾಮರಾವನ್ನು ಸ್ಟ್ಯಾಂಡ್ ಮೇಲೆ ಭದ್ರಪಡಿಸಿರಬೇಕು. ಇದರ ಜೊತೆ “ಬಲ್ಬ್” ಎಂಬ ಆಯ್ಕೆಯೂ ಇರುತ್ತದೆ. ಇದರಲ್ಲಿ ಕ್ಲಿಕ್ ಮಾಡುವ ಬಟನ್ ಒತ್ತಿ ಹಿಡಿದಷ್ಟು ಸಮಯ ಷಟರ್ ತೆರೆದೇ ಇರುತ್ತದೆ. ಕೆಲವು ಕ್ಯಾಮರಾಗಳಲ್ಲಿ ಕಂಟಿನ್ಯೂಯಸ್ ಶೂಟಿಂಗ್ ಎಂಬ ಆಯ್ಕೆ ಇರುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ ಕ್ಲಿಕ್ ಮಾಡುವ ಬಟನ್ ಒತ್ತಿ ಹಿಡಿದರೆ ನಿರಂತರವಾಗಿ ಒಂದರ ನಂತರ ಒಂದರಂತೆ ಫೋಟೋ ತೆಗೆಯಬಹುದು. ನಾಟ್ಯ, ವನ್ಯಜೀವಿ, ಆಟ, ಇತ್ಯಾದಿ ಸಂದರ್ಭಗಳಲ್ಲಿ ಈ ಸವಲತ್ತು ಉಪಯುಕ್ತ. ಕಪ್ಪೆಯನ್ನು ನುಂಗುತ್ತಿರುವ ಹಾವಿನ ಚಿತ್ರವನ್ನು ವಿವಿಧ ಹಂತಗಳಲ್ಲಿ ಈ ಸವಲತ್ತು ಬಳಸಿ ತೆಗೆಯಬಹುದು.

 

ಬಹುಪಾಲು ಡಿಎಸ್‌ಎಲ್‌ಆರ್‌ಗಳಲ್ಲಿ ಫ್ಲ್ಯಾಶ್ ಇರುತ್ತದೆ. ಇದು ನಿಜಕ್ಕೂ ಉಪಯುಕ್ತ. ಇದು ಎಷ್ಟು ದೂರದ ತನಕ ಬೆಳಕು ನೀಡಬಲ್ಲುದು ಎಂಬುದನ್ನು ಗಮನಿಸಬೇಕು. ಈ ದೂರ ಹೆಚ್ಚಿದ್ದಷ್ಟೂ ಒಳ್ಳೆಯದು. ಕೆಲವು ಕ್ಯಾಮರಗಳು ಈ ಫ್ಲ್ಯಾಶ್‌ನ ತೀಕ್ಷ್ಣತೆಯನ್ನು ನಿಯಂತ್ರಿಸುವ ಸವಲತ್ತು ನೀಡಿರುತ್ತಾರೆ. ಇಂತಹ ಸವಲತ್ತು ಇದ್ದರೆ ಒಳ್ಳೆಯದು. ಕ್ಯಾಮರಾದಲ್ಲೇ ಇರುವ ಫ್ಲ್ಯಾಶ್ ಜೊತೆ ಹೊರಗಡೆಯಿಂದ ಇನ್ನೊಂದು ಫ್ಲ್ಯಾಶ್ ಜೋಡಿಸುವ ಸವಲತ್ತು (ಇದಕ್ಕೆ hot-shoe ಎಂಬ ಹೆಸರಿದೆ) ಇದ್ದರೆ ಒಳ್ಳೆಯದು. ಆಗ ಬೌನ್ಸ್ ಫ್ಲ್ಯಾಶ್ ಜೋಡಿಸಬಹುದು. ಫ್ಲ್ಯಾಶ್‌ನ ಬೆಳಕು ನೇರವಾಗಿ ಮುಖದ ಮೇಲೆ ಬೀಳದಂತೆ, ಗೋಡೆಯಿಂದ ಪ್ರತಿಫಲಿಸಿ ಬರುವಂತೆ ಮಾಡಿದರೆ, ಉತ್ತಮ ಚಿತ್ರ ಮೂಡಿಬರುತ್ತದೆ. ಫ್ಲ್ಯಾಶ್ ಎಷ್ಟು ವೇಗದ ಷಟರ್ ಜೊತೆ ಹೊಂದಿಕೊಳ್ಳುತ್ತದೆ ಅಥವಾ ಫ್ಲ್ಯಾಶ್ ಬಳಸುವಾಗ ಅತಿ ಹೆಚ್ಚು ಅಂದರೆ ಎಷ್ಟು ಷಟರ್ ವೇಗ ಆಯ್ಕೆ ಮಾಡಿಕೊಳ್ಳಬಹುದು ಎಂಬದು ಒಂದು ಪ್ರಮುಖ ಗುಣವೈಶಿಷ್ಟ್ಯವಾಗಿರುತ್ತದೆ. ಅತಿ ವೇಗದಲ್ಲಿ ನಾಟ್ಯ ಮಾಡುತ್ತಿರುವ ನರ್ತಕಿಯ ಚಿತ್ರಗಳನ್ನು ಅತಿ ವೇಗವಾಗಿ ಫ್ಲ್ಯಾಶ್ ಬಳಸಿ ತೆಗೆಯಬೇಕು. ಆದರೆ ಫೋಟೋ ಸ್ಪಷ್ಟವಾಗಿರಬೇಕು. ಇಂತಹ ಸಂದರ್ಭಕ್ಕೆ ಅತಿ ವೇಗದಲ್ಲಿ ಫ್ಲ್ಯಾಶ್ ಹೊಂದಿಕೊಳ್ಳುವ ವೇಗ (ಫ್ಲ್ಯಾಶ್ ಸಿಂಕ್ರೊನೈಸೇಶನ್ ಸ್ಪೀಡ್) ಅಗತ್ಯ.

 

ಕೆಲವು ಎಸ್‌ಎಲ್‌ಆರ್ ಕ್ಯಾಮರಗಳು ವೀಡಿಯೋ ತೆಗೆಯುವ ಸವಲತ್ತು ನೀಡಿರುತ್ತಾರೆ. ಈ ಸವಲತ್ತು ಬೇಕೇ ಬೇಡವೇ ಎನ್ನುವುದು ವೈಯಕ್ತಿಕ ಆಯ್ಕೆ, ಕೆಲವರಿಗೆ ಇದು ಇಷ್ಟವಾಗಬಹದು, ಕೆಲವರಿಗೆ ಇಷ್ಟವಾಗದಿರಬಹುದು. ಆದರೆ ಈ ಸವಲತ್ತು ಇರುವ ಕ್ಯಾಮರ ಇದು ಇಲ್ಲದಿರುವ ಕ್ಯಾಮರಕ್ಕಿಂತ ತುಂಬ ಜಾಸ್ತಿ ಬೆಲೆಬಾಳುವಂತಿದ್ದಲ್ಲಿ ಈ ಸವಲತ್ತು ಇಲ್ಲದಿರುವ ಕ್ಯಾಮರ ಕೊಳ್ಳುವುದೇ ಒಳ್ಳೆಯದು. ಎಂದಿಗೂ ಸ್ಟಿಲ್ ಕ್ಯಾಮರ ವೀಡಿಯೋ ಕ್ಯಾಮರದ ಸ್ಥಾನವನ್ನು ಆಕ್ರಮಿಸಲಾರದು.

 

ಕ್ಯಾಮರಾದಲ್ಲಿ ಫೋಟೋ ಯಾವ ವಿಧಾನದಲ್ಲಿ ಸಂಗ್ರಹಗೊಳ್ಳುತ್ತದೆ ಎಂಬುದರ ಕಡೆಗೆ ಸ್ವಲ್ಪ ಗಮನ ಹರಿಸಬೇಕು. ಸಾಮಾನ್ಯವಾಗಿ ಎಲ್ಲ ಕ್ಯಾಮರಾಗಳೂ JPEG ವಿಧಾನವನ್ನು ನೀಡುತ್ತವೆ. ಆದರೆ ಜೊತೆಗೆ RAW ವಿಧಾನ (ಕಚ್ಚಾ) ಇದ್ದರೆ ಒಳ್ಳೆಯದು. ಇದು ಪರಿಣತರಿಗೆ ಮೂಲ ಫೋಟೋವನ್ನು ಫೋಟೋಶಾಪ್‌ನಲ್ಲಿ ತಿದ್ದಲು ಸಹಾಯಮಾಡುತ್ತದೆ. ಯಾವ ಮೆಮೊರಿ ಕಾರ್ಡ್ ಎಂಬುದೂ ಮುಖ್ಯವಾಗುತ್ತದೆ. ಕೆಲವು ಕ್ಯಾಮರಾಗಳು ಮೆಮೊರಿ ಸ್ಟಿಕ್ ಬಳಸುತ್ತವೆ. ಇವನ್ನು ಬೇರೆ ಯವ ಕ್ಯಾಮರಾದಲ್ಲೂ ಬಳಸುವಂತಿಲ್ಲ. ಎಸ್‌ಡಿ ಕಾರ್ಡ್ ಆದರೆ ಒಳ್ಳೆಯದು. ಒಂದು ಹೆಚ್ಚಿಗೆ ಮೆಮೊರಿ ಕಾರ್ಡ್ ಇಟ್ಟುಕೊಂಡರೆ ತಪ್ಪೇನಿಲ್ಲ. ತುರ್ತು ಸಂದರ್ಭಗಳಲ್ಲಿ ಇದು ಸಹಾಯಕ್ಕೆ ಬರುತ್ತದೆ.

 

ಕ್ಯಾಮರಾದಲ್ಲಿ ಯಾವ ಬ್ಯಾಟರಿ ಬಳಸುತ್ತಿದ್ದಾರೆ ಮತ್ತು ಒಮ್ಮೆ ಪೂರ್ತಿ ಚಾರ್ಜ್ ಆದರೆ ಎಷ್ಟು ಫೋಟೋ ತೆಗೆಯಬಹುದು ಎಂಬುದರ ಕಡೆಗೂ ಗಮನ ಹರಿಸಬೇಕು. ಕ್ಯಾನನ್ 1000D ಕ್ಯಾಮರದಲ್ಲಿ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು ೧೫೦೦ ದಿಂದ ೨೦೦೦ ಫೋಟೋ ತೆಗೆಯಬಹುದು. ಈ ಸಂಖ್ಯೆ ಫ್ಲ್ಯಾಶ್ ಬಳಸಿದರೆ ಕಡಿಮೆಯಾಗುತ್ತದೆ.

 

ಕ್ಯಾಮರಾದ ಎಲ್‌ಸಿಡಿ ಪರದೆ ಚೆನ್ನಾಗಿರಬೇಕು ಮತ್ತು ದೊಡ್ಡದಾಗಿರಬೇಕು. ಉತ್ತಮ ಬಣ್ಣದಲ್ಲಿ ಚಿತ್ರ ಮೂಡಿಸುತ್ತಿರಬೇಕು. ಕೆಲವು ಕ್ಯಾಮರಾಗಳಲ್ಲಿ ಈ ಪರದೆಯನ್ನು ತಿರುಗಿಸಬಹುದು. ಇದು ಒಳ್ಳೆಯ ಸೌಕರ್ಯ. ಕ್ಯಾಮರಾವನ್ನು ಜನಜಂಗುಳಿಯ ಮಧ್ಯದಲ್ಲಿ ಎತ್ತಿ ಹಿಡಿದು, ಎಲ್‌ಸಿಡಿ ಪರದೆ ಮೂಲಕ ನೋಡಿ ಕ್ಲಿಕ್ ಮಾಡಬಹುದು. ಹಾಗೆ ಮಾಡಲು ಇನ್ನೂ ಒಂದು ಸೌಕರ್ಯ ಅಗತ್ಯ. ಅದುವೇ ಲೈವ್ ವ್ಯೂ. ಅಂದರೆ ವ್ಯೂ ಫೈಂಡರ್ ಜೊತೆ ಎಲ್‌ಸಿಡಿ ಪರದೆಯಲ್ಲೂ (ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಇರುವಂತೆ) ಚಿತ್ರ ಜೀವಂತವಾಗಿ ಮೂಡಿಬರುವುದು. ಕೆಲವು ಎಸ್‌ಎಲ್‌ಆರ್ ಕ್ಯಾಮರಾಗಳು ಮಾತ್ರ ಈ ಸವಲತ್ತು ನೀಡಿವೆ.

 

ಗ್ಯಾಜೆಟ್ ಸಲಹೆ

 

ಅಕ್ಷಯ ಅವರ ಪ್ರಶ್ನೆ: ನನ್ನ ಗಣಕದಲ್ಲಿ ವೈರಸ್‌ಗಳಿವೆ. ನನ್ನ ಫೋನನ್ನು ಅದಕ್ಕೆ ಜೋಡಿಸಿದರೆ ಅದರಿಂದ ವೈರಸ್ ಫೋನಿಗೆ ಬರುವ ಸಾಧ್ಯತೆಗಳಿವೆಯೇ?

ಉ: ಬಹುಶಃ ಇಲ್ಲ. ಯಾಕೆಂದರೆ ಗಣಕದ ವೈರಸ್ ಮತ್ತು ಫೋನಿಗೆ ಬರುವ ವೈರಸ್ ಬೇರೆ ಬೇರೆ.

1 Response to ಗ್ಯಾಜೆಟ್ ಲೋಕ – ೦೨೨ (ಮೇ ೩೧, ೨೦೧೨)

  1. kiran

    I’m a news reporter and some times camera will help to coverage the news. So please suggest me an DSLR camera which help me in journalism field.

Leave a Reply