ಗ್ಯಾಜೆಟ್ ಲೋಕ – ೦೨೦ (ಮೇ ೧೭, ೨೦೧೨)

ಕಿರುತಂತ್ರಾಂಶಗಳ ಹಿರಿಯಲೋಕದಲ್ಲಿ

 

ಸ್ಮಾರ್ಟ್‌ಫೋನ್‌ಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಂಡ್ರೋಯಿಡ್ ಫೋನ್‌ಗಳು. ಅವುಗಳಿಗೆ ಸುಮಾರು ಆರು ಲಕ್ಷ ತಂತ್ರಾಂಶಗಳು ಲಭ್ಯವಿವೆ. ಅವುಗಳಲ್ಲಿ ಕೆಲವು ಉಪಯುಕ್ತವಾದವುಗಳ ಕಡೆ ಗಮನ ಹರಿಸೋಣ.

 

ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ಗಣಕದಂತೆಯೇ. ಅವುಗಳಿಗೂ ಒಂದು ಕಾರ್ಯಾಚರಣ ವ್ಯವಸ್ಥೆ (operating system) ಇರುತ್ತದೆ. ಇವುಗಳಲ್ಲಿ ಪ್ರಮುಖವಾದವು ಆಪಲ್‌ನವರ ಐಓಎಸ್, ಆಂಡ್ರೋಯಿಡ್ ಮತ್ತು ಮೈಕ್ರೋಸಾಫ್ಟ್‌ನವರ ವಿಂಡೋಸ್ ಫೋನ್. ಇವುಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಆಂಡ್ರೋಯಿಡ್. ಸ್ಮಾರ್ಟ್‌ಫೋನ್‌ಗಳು ಗಣಕದಂತೆಯೇ ಎಂದು ಹೇಳಿದೆನಲ್ಲ? ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವ ತಂತ್ರಾಂಶಗಳು ಲಭ್ಯವಿವೆ. ಇವುಗಳಿಗೆ ಆಪ್ (app) ಎನ್ನುತ್ತಾರೆ. ಇವುಗಳು ಗಣಕಗಳ ತಂತ್ರಾಂಶಗಳಂತೆ ತುಂಬ ದೊಡ್ಡದಾಗಿರುವುದಿಲ್ಲ. ಆದುದರಿಂದ ನಾವು ಅವುಗಳನ್ನು ಕಿರುತಂತ್ರಾಂಶ ಎಂದು ನಾಮಕರಣ ಮಾಡಿ ಕರೆಯೋಣ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನರು ಬಳಸುವ ಸ್ಮಾರ್ಟ್‌ಫೋನ್‌ಗಳು ಆಂಡ್ರೋಯಿಡ್ ಆಧಾರಿತ. ಆದುದರಿಂದ ಅವುಗಳಿಗಾಗಿರುವ ಕೆಲವು ಉಪಯುಕ್ತ ಕಿರುತಂತ್ರಾಂಶಗಳ ಕಡೆ ಗಮನ ಹರಿಸೋಣ. ಇವುಗಳನ್ನು play.google.com ಜಾಲತಾಣದಿಂದ ಅಥವಾ ಗೂಗ್ಲ್ ಪ್ಲೇ ಆಪ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಈ ಕಿರುತಂತ್ರಾಂಶಗಳಲ್ಲಿ ವಾಣಿಜ್ಯಕ, ಜಾಹೀರಾತು ಬೆಂಬಲಿತ, ಪ್ರಾಯೋಗಿಕ ಮತ್ತು ಸಂಪೂರ್ಣ ಉಚಿತ ಎಂಬ ನಮೂನೆಗಳಿವೆ. ನಾವಿಲ್ಲಿ ಉಚಿತ ತಂತ್ರಾಂಶಗಳನ್ನು ನೋಡೋಣ.

 

ಕೋಪಿಷ್ಠ ಹಕ್ಕಿಗಳು (Angry Birds)

 

ತುಂಬ ಜನಪ್ರಿಯವಾದ ಆಟ Angry Birds. ಇದು ಈಗ ಮೊಬೈಲ್ ತಂತ್ರಾಂಶ ಮಾರುಕಟ್ಟೆಯಲ್ಲಿ ಮಾರಾಟದ ದಾಖಲೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಅದನ್ನು ಮಾರುಕಟ್ಟೆಯಿಂದ ಕೊಂಡುಕೊಳ್ಳಬಹುದು ಅಥವಾ ಉಚಿತ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಬರಿಯ ಆಟವಲ್ಲ. ಇದರಲ್ಲಿ ಸ್ವಲ್ಪ ವಿಜ್ಞಾನವೂ ಇದೆ. ಒಂದು ಕವಣೆಯನ್ನು ಬಳಸಿ ಅದರ ವೇಗ, ಕೋನ ಬದಲಿಸಿ, ಹಕ್ಕಿಗಳನ್ನು ಎಸೆದು ಹಂದಿಗಳನ್ನು ಕೊಲ್ಲಬೇಕು. ಮಾರ್ಚ್ ತಿಂಗಳಲ್ಲಿ ಇದರ ಹೊಸ ಆವೃತ್ತಿ ಆಂಗ್ರಿ ಬರ್ಡ್ಸ್ ಸ್ಪೇಸ್ ಬಂದಿದೆ. ಇದು ಡೌನ್‌ಲೋಡ್‌ಗೆ ಲಭ್ಯವಾಗಿ ೨೪ ಗಂಟೆಗಳಲ್ಲಿ ೫೦ ಲಕ್ಷ ಮಂದಿ ಇದನ್ನು ಡೌನ್‌ಲೋಡ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರ ಇಷ್ಟವಿರುವವರಿಗೆಲ್ಲ ಈ ಆಟ ತುಂಬ ಪ್ರಿಯವಾಗಲೇ ಬೇಕು. ಯಾಕೆಂದರೆ ಈ ಆಟ ನಡೆಯುವುದು ಶೂನ್ಯ ಗುರುತ್ವಾಕರ್ಷಣೆಯ ಅಂತರಿಕ್ಷದಲ್ಲಿ. ಕವಣೆಯಿಂದ ಎಸೆದರೆ ಭೂಮಿಯ ಮೇಲೆ ಗುರುತ್ವಾಕರ್ಷಣೆಯಿಂದಾಗಿ ಅದು ಬಾಗಿದ ಪಥದಲ್ಲಿ ಸಾಗುತ್ತದೆ. ಅಂತರಿಕ್ಷದಲ್ಲಿ ಅದರ ಪಥ ಅದು ಯಾವ ವಸ್ತುವಿನ ಗುರುತ್ವಾಕರ್ಷಣೆಯಗೆ ಒಳಪಟ್ಟಿದೆಯೋ ಇಲ್ಲವೋ ಎನ್ನುವುದನ್ನು ಅವಲಂಬಿಸಿದೆ. ಇದನ್ನು ಈ ಆಟದಲ್ಲಿ ತೋರಿಸಲಾಗಿದೆ. ಅದ್ಭುತ ಆಟ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ space.angrybirds.com.  ಎಚ್ಚರಿಕೆ, ಇದು ನಿಮ್ಮನ್ನು ಒಂದು ಚಟವಾಗಿ ಅಂಟಿಕೊಂಡುಬಿಡಬಹುದು.

 

ಅಂಗೈಯಲ್ಲಿ ವೈದ್ಯ (WebMD)

 

ರಾತ್ರಿಯಿರಲಿ ಹಗಲಿರಲಿ, ಎಲ್ಲೇ ಇರಲಿ, ವೈದ್ಯಕೀಯ ಮಾಹಿತಿ ನಿಮ್ಮ ಅಂಗೈಯಲ್ಲೇ ಬೇಕೇ? ಹೌದಾದಲ್ಲಿ ನೀವು ಕಿರುತಂತ್ರಾಂಶವನ್ನು ಹಾಕಿಕೊಳ್ಳಬೇಕು. ಇದರಲ್ಲಿ ಖಾಯಿಲೆಯ ಲಕ್ಷಣಗಳು, ಪ್ರಥಮ ಚಿಕಿತ್ಸೆ ಮಾಹಿತಿ, ಔಷಧಗಳ ವಿವರ ಎಲ್ಲ ಇವೆ. ಪ್ರಥಮ ಚಿಕಿತ್ಸೆ ಮಾಹಿತಿಯಂತೂ ನೀವು ಅಂತರಜಾಲ ಸಂಪರ್ಕದಲ್ಲಿ ಇಲ್ಲದಿದ್ದರೂ ಲಭ್ಯ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಅತೀ ಅಗತ್ಯ ಚಿಕಿತ್ಸೆ ನೀಡುವಲ್ಲಿ ಇದು ಸಹಕಾರಿಯಾಗುತ್ತದೆ. ಅತಿದೊಡ್ಡ ಗಾತ್ರದ ಔಷಧ ಮಾಹಿತಿ ಕೋಶ ಇದರಲ್ಲಿದೆ. ಯಾವ ಔಷಧ ಯಾವ ಖಾಯಿಲೆಗೆ, ಔಷಧಗಳ ಅಡ್ಡ ಪರಿಣಾಮ ಏನು ಎಂಬೆಲ್ಲ ಮಾಹಿತಿ ಇವೆ. ಅಮೆರಿಕದ ವೈದ್ಯರುಗಳ ಪಟ್ಟಿಯೂ ಇದೆ. ಇದು ಮಾತ್ರ ನಮಗೆ ಉಪಯೋಗವಿಲ್ಲ.

 

ಸುದ್ದಿಹುಡುಕಿ (NewsHunt)

 

ಭಾರತದ ಸುದ್ದಿ ಆಗಿಂದಾಗ್ಗೆ ನೋಡಬೇಕು ಎಂದು ಆಶಿಸುವವರಿಗೆ ಇದು ಉಪಯುಕ್ತ. ಇದರಲ್ಲಿ ಭಾರತದ ಪ್ರಮುಖ ಪತ್ರಿಕೆಗಳ ಮತ್ತು ಸುದ್ದಿಜಾಲತಾಣಗಳ ಪಟ್ಟಿ ಇದೆ. ನಮಗೆ ಬೇಕಾದುದನ್ನು ಆಯ್ಕೆ ಮಾಡಿಟ್ಟುಕೊಳ್ಳಬೇಕು. ಆಗಿಂದಾಗ ಸುದ್ದಿಯನ್ನು ಈ ಆಯ್ಕೆ ಮೂಲಕ ಓದಬಹುದು. ಕನ್ನಡದ ಸುದ್ದಿಪತ್ರಿಕೆಗಳೂ ಜಾಲತಾಣಗಳೂ ಈ ಪಟ್ಟಿಯಲ್ಲಿವೆ. ನಿಮ್ಮ ಆಂಡ್ರೋಯಿಡ್ ಫೋನ್ ಕನ್ನಡವನ್ನು ಬೆಂಬಲಿಸುತ್ತದಾದರೆ ಕನ್ನಡ ಸುದ್ದಿಯನ್ನು ಓದಬಹುದು. ಸುದ್ದಿಗಳನ್ನು ಭಾಷಾವಾರು, ಪತ್ರಿಕೆ, ವಿಷಯ -ಹೀಗೆ ಹಲವು ರೀತಿಯಲ್ಲಿ ವಿಭಜಿಸಲಾಗಿದೆ. ಕ್ರಿಕೆಟ್ ಬಗ್ಗೆ ಆಸಕ್ತಿ ಇರುವವರು ನೇರವಾಗಿ ಕ್ರಿಕೆಟ್ ಎಂದು ಆಯ್ಕೆ ಮಾಡಿಕೊಂಡು ಅದರ ಬಗೆಗಿನ ಮಾಹಿತಿ ತಿಳಿದುಕೊಳ್ಳಬಹುದು.

 

ಉಚಿತ ಎಸ್‌ಎಂಎಸ್ (Free SMS India)

 

ದೇಶದ ಯಾವ ಮೂಲೆಗಾದರೂ ಉಚಿತವಾಗಿ ಎಸ್‌ಎಂಎಸ್ ಕಳುಹಿಸಬೇಕೇ? ಹೌದಾದಲ್ಲಿ ನಿಮಗೆ ಈ ಕಿರುತಂತ್ರಾಂಶ ಬೇಕು. ಉಚಿತ ಎಸ್‌ಎಂಎಸ್ ಕಳುಹಿಸುವ ಜಾಲತಾಣಗಳು ಹಲವಾರಿವೆ. ಎಲ್ಲ ಜಾಲತಾಣಗಳನ್ನು ನೆನಪಿಟ್ಟುಕೊಳ್ಳುವ ಕಷ್ಟ ಯಾಕೆ? ಈ ಕಿರುತಂತ್ರಾಂಶ ಅವುಗಳನ್ನೆಲ್ಲ ಬಳಸುತ್ತದೆ. ನಿಮ್ಮ ಮೊಬೈಲ್‌ಗೆ ಅಂತರಜಾಲ ಸಂಪರ್ಕ ಇರಬೇಕು ಅಷ್ಟೆ. ದಿನಕ್ಕೆ ಇಷ್ಟು, ತಿಂಗಳಿಗೆ ಇಷ್ಟು, ಎಂಬಿತ್ಯಾದಿ ಎಸ್‌ಎಂಎಸ್ ಪ್ಯಾಕ್‌ಗಳನ್ನು ಕೊಳ್ಳುವುದೇಕೆ? ಈ ಕಿರುತಂತ್ರಾಂಶ ಒಂದೇ ಸಾಕು!

 

ಫೇಸ್‌ಬುಕ್ (Facebook for Android)

 

ಫೇಸ್‌ಬುಕ್ ಯಾರಿಗೆ ಗೊತ್ತಿಲ್ಲ? ಜಗತ್ತಿನ ನಂ.೧ ಸಾಮಾಜಿಕ ಜಾಲತಾಣ ಇದು. ಇದನ್ನು ನಿಮ್ಮ ಆಂಡ್ರೋಯಿಡ್ ಫೋನ್‌ನಿಂದ ಬಳಸಬೇಕಾದರೆ ನಿಮಗೆ ಈ ಅಧಿಕೃತ ಕಿರುತಂತ್ರಾಂಶ ಬೇಕು. ಇತ್ತೀಚೆಗಿನ ಸ್ಟಾಟಸ್ ಅಪ್‌ಡೇಟ್‌ಗಳು, ಸ್ನೇಹದ ಕೋರಿಕೆಗಳು, ಫೋಟೋ ಸೇರಿಸುವುದು, ಪೋಸ್ಟಿಂಗ್ ಮಾಡುವುದು ಎಲ್ಲ ಮಾಡಬಹುದು.

 

ಟ್ವೀಟ್‌ಕಾಸ್ಟರ್ (TweetCaster for Twitter)

 

ಆಂಡ್ರೋಯಿಡ್ ಫೋನ್‌ನಲ್ಲಿ ಟ್ವಿಟ್ಟರ್ ಬಳಸಲು ಹಲವಾರು ಕಿರುತಂತ್ರಾಂಶಗಳು ಲಭ್ಯವಿವೆ. ಅವುಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಟ್ವೀಟ್‌ಕಾಸ್ಟರ್. ನಾನೂ ಇದನ್ನೇ ಬಳಸುವುದು. ಇದು ತುಂಬ ಚೆನ್ನಾಗಿದೆ. ಟ್ವೀಟ್ ಮಾಡಲು, ಉತ್ತರಿಸಲು, ನೇರಸಂದೇಶ ಕಳುಹಿಸಲು, ಪಟ್ಟಿಗಳನ್ನು ನೋಡಲು, ಬಳಕೆದಾರರ ವಿವರ ತಿಳಿಯಲು -ಹೀಗೆ ಮುಖ್ಯವಾಗಿ ಬೇಕಾದ ಎಲ್ಲ ಸವಲತ್ತುಗಳಿವೆ. ಒಂದಕ್ಕಿಂತ ಹೆಚ್ಚು ಟ್ವಿಟ್ಟರ್ ಖಾತೆಗಳನ್ನು ಇದು ಬೆಂಬಲಿಸುತ್ತದೆ.

 

ಇಂಗ್ಲಿಶ್-ಕನ್ನಡ ನಿಘಂಟು (English to Kannada Dictionary)

 

ಇದರಲ್ಲಿ ಸುಮಾರು ೨೫,೦೦೦ ಪದಗಳಿವೆ. ಇಂಗ್ಲಿಶ್‌ನಲ್ಲಿ ಪದವನ್ನು ಆಯ್ಕೆ ಮಾಡಿದರೆ ಕನ್ನಡದಲ್ಲಿ ಅದರ ಅರ್ಥ ತಿಳಿಸುತ್ತದೆ. ನಮಗೆ ಬೇಕಾದ ಪದವನ್ನು ಹುಡುಕುವ ಸವಲತ್ತೂ ಇದೆ. ನಿಮ್ಮ ಫೋನಿನಲ್ಲಿ ಕನ್ನಡದ ಬೆಂಬಲ ಇಲ್ಲದಿದ್ದರೂ ಈ ಕಿರುತಂತ್ರಾಂಶ ಕೆಲಸ ಮಾಡುತ್ತದೆ.

 

ಕನ್ನಡದ ಕೀಲಿಮಣೆ (AnySoftKeyboard)

 

ಆಂಡ್ರೋಯಿಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಇಂಗ್ಲಿಶ್ ಬಿಟ್ಟು ಇತರೆ ಭಾಷೆಗಳನ್ನು ಬೆರಳಚ್ಚು ಮಾಡಬೇಕಾದರೆ ಆಯಾ ಭಾಷೆಯ ಕೀಲಿಮಣೆ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದಕ್ಕೆಂದೇ ತಯಾರಾಗಿರುವ ಒಂದು ಕಿರು ತಂತ್ರಾಂಶ AnySoftKeyboard. ಮೊದಲು ಇದನ್ನು ಇನ್‌ಸ್ಟಾಲ್ ಮಾಡಿಕೊಂಡು ನಂತರ ನಿಮಗೆ ಬೇಕಾದ ಭಾಷೆಯ ಕೀಲಿಮಣೆಯ ವಿನ್ಯಾಸವನ್ನು ಇದರ ಮೇಲೆ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಕನ್ನಡ ಬೇಕಿದ್ದಲ್ಲಿ Kannada for AnySoftKeyBoard ಕಿರುತಂತ್ರಾಂಶವನ್ನು ಮಾರುಕಟ್ಟೆಯಲ್ಲಿ ಹುಡುಕಿ ಹಾಕಿಕೊಳ್ಳಬೇಕು. ನೆನಪಿಡಿ, ಮೊದಲು AnySoftKeyBoard ಹಾಕಿಕೊಳ್ಳಬೇಕು. ನಂತರ ಅದರ ಮೇಲೆ ಕನ್ನಡ ಹಾಕಿಕೊಳ್ಳಬೇಕು.

 

ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ಆರು ಲಕ್ಷಕ್ಕಿಂತ ಅಧಿಕ ಕಿರುತಂತ್ರಾಂಶಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ನೀಡಲಾಗಿದೆ. ಅಂದ ಮಾತ್ರಕ್ಕೆ ಉಳಿದವು ಚೆನ್ನಾಗಿಲ್ಲ ಎಂದಾಗಲಿ ಇವೇ ಸರ್ವಶ್ರೇಷ್ಠ ಎಂದಾಗಲಿ ತೀರ್ಮಾನಿಸಬಾರದು. ಈ ಕಿರುತಂತ್ರಾಂಶಗಳನ್ನು ಆಂಡ್ರೋಯಿಡ್ ಆಧಾರಿತ ಟ್ಯಾಬ್ಲೆಟ್‌ಗಳಲ್ಲೂ ಬಳಸಬಹುದು.

1 Response to ಗ್ಯಾಜೆಟ್ ಲೋಕ – ೦೨೦ (ಮೇ ೧೭, ೨೦೧೨)

  1. srikanth

    Sir
    I want to buy laptop with good futures my range is between 15 to 20 which one is buy

Leave a Reply