ಗ್ಯಾಜೆಟ್ ಲೋಕ – ೦೧೬ (ಎಪ್ರಿಲ್ ೧೯, ೨೦೧೨)

ಎರಡು ಫೋನ್‌ಗಳು

 

ಈ ಸಲ ಒಂದು ಆಂಡ್ರೋಯಿಡ್ ಮತ್ತು ಒಂದು ವಿಂಡೋಸ್ ಫೋನ್ ಕಡೆ ಗಮನ ಹರಿಸೋಣ

 

ಎಲ್‌ಜಿ ಒಪ್ಟಿಮಸ್ ಸೋಲ್

 

LG Optimus Sol E730 ಒಂದು ಆಂಡ್ರೋಯಿಡ್ ತಂತ್ರಾಂಶಾಧಾರಿತ ಫೋನ್. ಅಂದ ಮೇಲೆ ಆಂಡ್ರೋಯಿಡ್ ಫೋನಿನ ಎಲ್ಲ ವೈಶಿಷ್ಟ್ಯಗಳೂ ಇವೆ. ಮೊದಲು ಇದರ ಯಂತ್ರಾಂಶಗಳ ಅರ್ಥಾತ್ ಗುಣವೈಶಿಷ್ಟ್ಯಗಳ ಕಡೆ ಗಮನ ಹರಿಸೋಣ.

 

ಗುಣವೈಶಿಷ್ಟ್ಯಗಳು: 1 ಗಿಗಾಹರ್ಟ್ಸ್ ಕ್ವಾಲ್‌ಕಂ ಪ್ರೋಸೆಸರ್, 512 ಮೆಗಾಬೈಟ್ ಪ್ರಾಥಮಿಕ ಮೆಮೊರಿ (RAM), 1 ಗಿಗಾಬೈಟ್ ROM, 32 ಗಿಗಾಬೈಟ್ ತನಕ ಹೆಚ್ಚುವರಿ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ಹಾಕಿಕೊಳ್ಳಬಹುದು, 9.7 ಸೆಮಿ ಗಾತ್ರದ ಅಲ್ಟ್ರ ಅಮೋಲೆಡ್ (Ultra AMOLED) ಪರದೆ, 5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರ ಮತ್ತು ವಿಜಿಎ ಫ್ರಂಟ್ ಕ್ಯಾಮರ, ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆ, 3 ಜಿ ಅಂತರಜಾಲ ಸಂಪರ್ಕ, ಸ್ಟೀರಿಯೋ ಎಫ್‌ಎಂ ರೇಡಿಯೋ ಮತ್ತು ಎಂಪಿ೩ ಪ್ಲೇಯರ್, ವೈಫೈ ಮತ್ತು ಬ್ಲೂಟೂತ್ ನಿಸ್ತಂತು ಸಂಪರ್ಕ ಸೌಲಭ್ಯ, ಜಿಪಿಎಸ್ ಸೌಲಭ್ಯ, ಇತ್ಯಾದಿ. ಅಂದರೆ ಮೇಲ್ಮಟ್ಟದ ಫೋನಿನಲ್ಲಿರುವ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ. ಇದರ ಬೆಲೆ ಸುಮಾರು 17 ಸಾವಿರ ರೂ.

 

ಇದರ ಬೆಲೆಗೆ ಹೋಲಿಸಿದರೆ ಇದರ ಗುಣವೈಶಿಷ್ಟ್ಯಗಳು ಮತ್ತು  ನಿಜವಾದ ಮೌಲ್ಯಗಳ ಹೋಲಿಕೆ ಚೆನ್ನಾಗಿಯೇ ಇವೆ. ಅಂದರೆ ಕೊಡುವ ಹಣಕ್ಕೆ ಮೋಸವಿಲ್ಲ. ಇದರಲ್ಲಿ ಆಂಡ್ರೋಯಿಡ್ ಆವೃತ್ತಿ 2.3 ಇದೆ. ಪರದೆಯ ರೆಸೊಲೂಶನ್ ಚೆನ್ನಾಗಿದೆ. ಬಣ್ಣಗಳ ಗುಣಮಟ್ಟವೂ ಚೆನ್ನಾಗಿದೆ. ಪರದೆಯ ಸಂವೇದನೆ ಚೆನ್ನಾಗಿದೆ. ಅಂದರೆ ಯಾವುದೇ ಕೆಲಸಕ್ಕೂ ಪರದೆಯನ್ನು ಅತಿಯಾಗಿ ಒತ್ತಬೇಕಾಗಿಲ್ಲ. ಎಲ್ಲ ಬಹಳ ಮೃದು. ಪರದೆಯ ಬೆಳಕು ಉತ್ತಮವಾಗಿದೆ. ಹೊರಗಿನ ಬೆಳಕಿನಿಂದ ಕೋಣೆಯ ಒಳಗೆ ಬಂದಾಗ ಅಂದರೆ ಬೆಳಕು ಹೆಚ್ಚು ಕಡಿಮೆಯಾದಾಗ ಪರದೆಯ ಬೆಳಕಿನ ತೀಕ್ಷ್ಣತೆಯನ್ನು ತನ್ನಿಂದತಾನೆ ಅದು ಹೆಚ್ಚು ಕಡಿಮೆ ಮಾಡಿಕೊಳ್ಳುವುದಿಲ್ಲ. ಇದು ಒಂದು ದೊಡ್ಡ ಕೊರತೆಯೇ. ಫೋನು ಕೈಯಲ್ಲಿ ಹಿಡಿದುಕೊಂಡಾಗ ಅತಿ ತೂಕ ಅನ್ನಿಸುವುದಿಲ್ಲ. ರೇಡಿಯೋ ಮತ್ತು ಸಂಗೀತ ಗುಣಮಟ್ಟ ಉತ್ತಮವಾಗಿದೆ. ಆದರೆ ಇದರ ಜೊತೆ ನೀಡಿರುವ ಇಯರ್‌ಫೋನ್ ಅಷ್ಟಕ್ಕಷ್ಟೆ. ಉತ್ತಮ ಇಯರ್‌ಫೋನ್ ಜೋಡಿಸಿದರೆ ಉತ್ತಮ ಸಂಗೀತ ಆಲಿಸಬಹುದು. ಗ್ರಾಫಿಕಲ್ ಪ್ರೋಸೆಸರ್ ಇದೆ. ಈ ಗ್ರಾಫಿಕಲ್ ಪ್ರೋಸೆಸರ್ ಆಂಡ್ರೋಯಿಡ್ ಫೋನ್‌ಗಳಿಗೆ ಅತಿ ಮುಖ್ಯ. ಇದು ಇದ್ದರೆ ಮ್ಯಾಪ್, ಫೋಟೋ ಮತ್ತು ವೀಡಿಯೋ ವೀಕ್ಷಣೆ, ಗ್ರಾಫಿಕ್ಸ್, ಇತ್ಯಾದಿಗಳು ವೇಗವಾಗಿ ಕೆಲಸ ಮಾಡುತ್ತವೆ. ಇಲ್ಲವಾದಲ್ಲಿ ಎತ್ತಿನಗಾಡಿಯಂತೆ ಚಲಿಸುತ್ತವೆ.

 

ಈ ಫೋನಿನ ಕರೆಗಳ ಗುಣಮಟ್ಟ ಚೆನ್ನಾಗಿವೆ. ಸಂಗೀತವೂ ಚೆನ್ನಾಗಿವೆ. ಆದರೆ ಕ್ಯಾಮರದ ಗುಣಮಟ್ಟ ಚೆನ್ನಾಗಿಲ್ಲ. ಕ್ಯಾಮರಾಕ್ಕೆ ಫ್ಲಾಶ್ ಇಲ್ಲ. ಹೈಡೆಫಿನಿಶನ್ ವೀಡಿಯೋ ಚಿತ್ರೀಕರಣವೂ ಅಷ್ಟಕ್ಕಷ್ಟೆ. ಬ್ಯಾಟರಿ ಪರವಾಗಿಲ್ಲ (1500 mAH).

 

ಕನ್ನಡಿಗರು ಚಿಂತಿಸಬೇಕಾದ ಒಂದು ಪ್ರಮುಖ ಕೊರತೆ ಕನ್ನಡ ಭಾಷೆಯ ಸೌಕರ್ಯ ನೀಡಿಲ್ಲ ಎಂಬುದು. ಭಾರತೀಯ ಭಾಷೆಗಳನ್ನೇ ನೀಡಿಲ್ಲ ಎಂದಾಗಿದ್ದರೆ ಸುಮ್ಮನಿರಬಹುದಿತ್ತೇನೋ? ಆದರೆ ಇದರಲ್ಲಿ ಹಿಂದಿ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿ ಭಾಷೆಗಳನ್ನು ನೀಡಲಾಗಿದೆ. ಕನ್ನಡವನ್ನೇಕೆ ಮರೆತರು ಎಂಬುದು ಯಕ್ಷಪ್ರಶ್ನೆ.

 

ಎಚ್‌ಟಿಸಿ ರಾಡಾರ್

 

HTC Radar ಒಂದು ವಿಂಡೋಸ್ ಫೋನ್. ಅಂದರೆ ವಿಂಡೋಸ್ ಫೋನಿನ ಎಲ್ಲ ಗುಣವೈಶಿಷ್ಟ್ಯಗಳೂ ಜೊತೆಗೇ ಕೆಲವು ಚಿಕ್ಕಪುಟ್ಟ ಕಿರಿಕಿರಿಗಳೂ ಇದರಲ್ಲಿ ಅಡಕವಾಗಿವೆ.

 

ಗುಣವೈಶಿಷ್ಟ್ಯಗಳು:  1 ಗಿಗಾಹರ್ಟ್ಸ್ ಪ್ರೋಸೆಸರ್, ಗ್ರಾಫಿಕಲ್ ಪ್ರೋಸೆಸರ್, 9.5 ಸೆಮಿ ಕೆಪಾಸಿಟಿವ್ ಸ್ಪರ್ಶಸಂವೇದಿ ಪರದೆ, 800 x 480 ಪಿಕ್ಸೆಲ್ ರೆಸೊಲೂಶನ್, 512MB RAM, 512MB ROM, 8 ಗಿಗಾಬೈಟ್ ಮೆಮೊರಿ, 5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರ ಮತ್ತು ವಿಜಿಎ ಫ್ರಂಟ್ ಕ್ಯಾಮರ, 3ಜಿ ಅಂತರಜಾಲ ಸಂಪರ್ಕ, ಸ್ಟೀರಿಯೋ ಎಫ್‌ಎಂ ರೇಡಿಯೋ ಮತ್ತು ಎಂಪಿ3 ಪ್ಲೇಯರ್, ವೈಫೈ ಮತ್ತು ಬ್ಲೂಟೂತ್ ನಿಸ್ತಂತು ಸಂಪರ್ಕ ಸೌಲಭ್ಯ, ಜಿಪಿಎಸ್ ಸೌಲಭ್ಯ, ಇತ್ಯಾದಿ. ಬೆಲೆ ಸುಮಾರು 19 ಸಾವಿರ ರೂ.

 

ಈಗಾಗಲೇ ತಿಳಿಸಿದಂತೆ ಇದೊಂದು ವಿಂಡೋಸ್ ಫೋನ್ ಆಗಿದೆ. ಆದುದರಿಂದ ಇದರ ಬಳಕೆಯ ಅನುಭವ ಉತ್ತಮವಾಗಿದೆ. ಪರದೆಯ ಮೇಲೆ ಐಕಾನ್‌ಗಳನ್ನು ಅಥವಾ ಚಿತ್ರಿಕೆಗಳನ್ನು ಜಾರಿಸಿ ಬಳಸುವ ಅನುಭವವನ್ನು ಬಳಸಿಯೇ ನೋಡಬೇಕು. ಹಲವು ರೀತಿಯಲ್ಲಿ ಇದರ ಅನುಭವ ನೋಕಿಯ ಲುಮಿಯ ಫೋನನ್ನು ಹೋಲುತ್ತದೆ.  ಇದರಲ್ಲಿ ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆಯ ಆವೃತ್ತಿ 7.5 ಅಳವಡಿಸಲಾಗಿದೆ. ಕೈಯಲ್ಲಿ ಹಿಡಿಯಲು ಗಾತ್ರವೂ ಚೆನ್ನಾಗಿದೆ. ಆದರೂ ಇದರ ಬಳಕೆಯ ಅನುಭವ ನೋಕಿಯ ಲುಮಿಯದಷ್ಟು ಅದ್ಭುತವಾಗಿಲ್ಲ. ಹಾಗೆಂದು ತೆಗೆದುಹಾಕುವಂತೆಯೂ ಇಲ್ಲ.

 

ಇದರ ಧ್ವನಿ ಗುಣಮಟ್ಟ ಚೆನ್ನಾಗಿದೆ. ಇದು ಕೇವಲ ಕರೆಗಳಿಗೆ ಮಾತ್ರವಲ್ಲ, ಎಫ್‌ಎಂ ರೇಡಿಯೋ ಮತ್ತು ಎಂಪಿ3 ಪ್ಲೇಯರ್‌ಗಳಿಗೂ ಅನ್ವಯಿಸುತ್ತದೆ. 3.5 ಮಿಮಿ ಆಡಿಯೋ ಜ್ಯಾಕ್ ಇರುವುದರಿಂದ ನಿಮಗಿಷ್ಟವಾದ ಇಯರ್‌ಫೋನ್ ಬಳಸಬಹುದು. ಇದರ ಜೊತೆ ಸಿಗುವ ಇಯರ್‌ಫೋನ್ ಅಷ್ಟಕ್ಕಷ್ಟೆ. ಆದರೆ ಹಲವು ಆಡಿಯೋ ಸೆಟ್ಟಿಂಗ್‌ಗಳ ಆಯ್ಕೆ ನೀಡಿರುವುದರಿಂದ ಮತ್ತು ಇಕ್ವಲೈಸರ್ ಇರುವುರಿಂದ ಸಂಗೀತ ಆಲಿಸಲು ಪರವಾಗಿಲ್ಲ.

 

ಇದರ ಕ್ಯಾಮರ ಹೆಸರಿಗೆ 5 ಮೆಗಾಪಿಕ್ಸೆಲ್ ಇದ್ದರೂ ಗುಣಮಟ್ಟ ಮಾತ್ರ ಸಾಲದು. ಇದು ಸ್ಥಿರಚಿತ್ರ ಮತ್ತು ವೀಡಿಯೋ ಎರಡಕ್ಕೂ ಅನ್ವಯಿಸುತ್ತದೆ.

 

ಇದು ವಿಂಡೋಸ್ ಫೋನ್ ಆಗಿರುವುದರಿಂದ ಔಟ್‌ಲುಕ್ ಜೊತೆ ತುಂಬ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಸಿಂಕಿಂಗ್ ಬಹಳ ಚೆನ್ನಾಗಿ ಯಾವುದೇ ತಾಪತ್ರಯವಿಲ್ಲದೆ ಆಗುತ್ತದೆ. ಆಫೀಸ್ 365, ಸ್ಕೈಡ್ರೈವ್, ಲಿಂಕ್‌ಡ್‌ಇನ್, ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿ ಬಳಸಲು ಪ್ರತ್ಯೇಕ ಸವಲತ್ತುಗಳಿವೆ. ಇಮೈಲ್ ಬಳಸುವುದೂ ಬಹು ಸರಳ. ಮೈಕ್ರೋಸಾಫ್ಟ್ ಆಫೀಸ್ ಕಡತಗಳನ್ನು ತೆರೆಯಬಹುದು.

 

ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆಯ ಕಿರಿಕಿರಿಗಳು ಇದರಲ್ಲೂ ಇವೆ. ಇದಕ್ಕೆ ಮೆಮೊರಿ ಕಾರ್ಡ್ ಸೇರಿಸಲು ಆಗುವುದಿಲ್ಲ. ಬ್ಲೂಟೂತ್ ಮೂಲಕ ಫೈಲ್ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಯುಎಸ್‌ಬಿ ಡ್ರೈವ್ ಆಗಿ ಬಳಸುವುದೂ ಅಸಾಧ್ಯ. ಗಣಕ ಮತ್ತು ಫೋನ್ ಮಧ್ಯೆ ಫೈಲುಗಳ ವರ್ಗಾವಣೆ ಝೂನ್ ತಂತ್ರಾಂಶ ಮೂಲಕ ಮಾತ್ರ ಸಾಧ್ಯ. ಈ ಎಲ್ಲ ಕಿರಿಕಿರಿ ಗುಣವೈಶಿಷ್ಟ್ಯಗಳನ್ನು ಮೈಕ್ರೋಸಾಫ್ಟ್‌ನವರು ಆಪಲ್ ಐಫೋನ್‌ನಿಂದ ನಕಲು ಮಾಡಿದ್ದಾರೆ. ನಕಲು ಮಾಡುವಾಗ ಒಳ್ಳೆಯ ಗುಣಗಳನ್ನು ನಕಲು ಮಾಡುವುದು ಲೋಕರೀತಿ. ಆದರೆ ಮೈಕ್ರೋಸಾಫ್ಟ್‌ನವರು ಇದಕ್ಕೆ ಅಪವಾದವಾಗಿದ್ದಾರೆ.

 

ಇನ್ನೊಂದು ಬಹುದೊಡ್ಡ ಕೊರತೆಯೆಂದರೆ ಭಾರತೀಯ ಭಾಷೆಗಳ ಬೆಂಬಲ ನೀಡಿಲ್ಲ ಎನ್ನುವುದು.

 

ಗ್ಯಾಜೆಟ್ ಸಲಹೆ

 

ಸಂಜಯ ಬಾಬು ಅವರ ಪ್ರಶ್ನೆ: ನಾನು ಲ್ಯಾಪ್‌ಟಾಪ್ ಕೊಂಡುಕೊಳ್ಳಲೇ ಅಥವಾ ವಿಂಡೋಸ್ ೮ ಟ್ಯಾಬ್ಲೆಟ್ ಕೊಂಡುಕೊಳ್ಳಲೇ?

ಉ: ಗಣಕ ಅಥವಾ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳ ಉಪಯೋಗ ಒಂದೇ ಕೆಲಸಗಳಿಗೆ ಅಲ್ಲ. ಗಣಕ ಮಾಡಬಲ್ಲ ಹಲವು ಕಾರ್ಯಗಳನ್ನು, ಉದಾಹರಣೆಗೆ ಪ್ರೋಗ್ರಾಮ್ಮಿಂಗ್, ಗ್ರಾಫಿಕ್ಸ್, ವಿಡಿಯೋ ಎಡಿಟಿಂಗ್, ಇತ್ಯಾದಿ, ಟ್ಯಾಬ್ಲೆಟ್‌ಗಳಲ್ಲಿ ಮಾಡಲು ಸಾಧ್ಯವಿಲ್ಲ. ಗಣಕ ಬೇಕೇ ಬೇಕಿದ್ದವರು ಟ್ಯಾಬ್ಲೆಟ್ ಕೊಳ್ಳಬೇಡಿ. ಗಣಕ ಕೊಂಡ ನಂತರವೂ ಬೇಕಾದಷ್ಟು ಹಣವಿದ್ದಲ್ಲಿ ಟ್ಯಾಬ್ಲೆಟ್ ಕೊಳ್ಳಬಹುದು 🙂

 

-ಡಾ| ಯು. ಬಿ. ಪವನಜ

 

— *** —

 

 

Leave a Reply