ಗ್ಯಾಜೆಟ್ ಲೋಕ – ೦೧೪ (ಎಪ್ರಿಲ್ ೦೫, ೨೦೧೨)

ಎಸ್‌ಎಲ್‌ಆರ್ ಫೋಟೋಗ್ರಾಫಿಗೆ ಪ್ರವೇಶ

 

ಫೋಟೋಗ್ರಾಫಿ ಎಂದರೆ ಎಸ್‌ಎಲ್‌ಆರ್ ಕ್ಯಾಮರ ಬಳಸಿ ಫೊಟೋ ತೆಗೆಯುವುದು. ಏಮ್ ಆಂಡ್ ಶೂಟ್ ಕ್ಯಾಮರ ಬಳಸಿ ತೆಗೆಯುವುದು ಏನಿದ್ದರೂ ಮಕ್ಕಳಾಟ, ವೃತ್ತಿನಿರತರಿಗೆ ಎಸ್‌ಎಲ್‌ಆರ್ ಕ್ಯಾಮರವೇ ಎಂದು ಯಾವುದೇ ವೃತ್ತಿನಿರತ ಛಾಯಾಗ್ರಾಹಕ ಹೇಳುತ್ತಾರೆ. ಈ ಲೋಕಕ್ಕೆ ಪ್ರವೇಶಿಸಬಯಸುವವರಿಗೆ ಒಂದು ಎಂಟ್ರಿ ಲೆವೆಲ್ ಎಸ್‌ಎಲ್‌ಆರ್ ಕ್ಯಾಮರ.

 

ಕೆಲವೇ ವರ್ಷಗಳ ಹಿಂದೆ ಎಸ್‌ಎಲ್‌ಆರ್ ಕ್ಯಾಮರಗಳ ಬೆಲೆ ಅತಿ ಕನಿಷ್ಠ ಎಂದರೂ ರೂ.80 ಸಾವಿರದಿಂದ ಒಂದು ಲಕ್ಷದ ತನಕ ಇರುತಿದ್ದವು. ಆ ಸಂದರ್ಭದಲ್ಲಿ ಕ್ಯಾನನ್ ಕಂಪೆನಿ ಒಂದು ಕ್ರಾಂತಿಯನ್ನೆ ಮಾಡಿತು. ತನ್ನ ಎಸ್‌ಎಲ್‌ಆರ್ ಕ್ಯಾಮರಗಳ ಬೆಲೆಯನ್ನು ಕಡಿಮೆ ಮಾಡತೊಡಗಿತು. ಕೊನೆಗೆ ಅದು ಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ಇಳಿಯಿತು. ಈ ಸಲ ಅಂತಹ ಒಂದು ಕ್ಯಾಮರದ ಪರಿಚಯ ಮಾಡುಕೊಳ್ಳೋಣ. ಅದುವೇ ಕ್ಯಾನನ್ ಕಂಪೆನಿಯ 1000D ಡಿಜಿಟಲ್ ಎಸ್‌ಎಲ್‌ಆರ್ ಕ್ಯಾಮರ. ಈಗ ಅದರ ಮುಖಬೆಲೆ ಸುಮಾರು ರೂ.25 ಸಾವಿರ. ಆದರೆ ಹಲವು ಜಾಲತಾಣಗಳಲ್ಲಿ ಹಾಗೂ ಅಂಗಡಿಗಳಲ್ಲಿ ಸುಮಾರು ರೂ.22 ಸಾವಿರಕ್ಕೆ ಅದು ದೊರೆಯುತ್ತದೆ.

 

ಈಗಾಗಲೆ ತಿಳಿಸಿದಂತೆ ಕ್ಯಾನನ್ 1000D ಒಂದು ಎಂಟ್ರಿ ಲೆವೆಲ್ ಎಸ್‌ಎಲ್‌ಆರ್ ಕ್ಯಾಮರ. ಅಂದರೆ ಎಸ್‌ಎಲ್‌ಆರ್ ಫೋಟೋಗ್ರಫಿ ಮಾಡುತ್ತೇನೆ ಅಂತ ಹೊರಡುವವರಿಗೆ ಪ್ರಾರಂಭದ ಹಂತಕ್ಕೆ ಒಳ್ಳೆಯ ಕ್ಯಾಮರ. ಬೆಲೆ ಕಡಿಮೆ ಎಂದು ಗುಣಮಟ್ಟದಲ್ಲಿ ವಿಶೇಷ ರಾಜಿ ಮಾಡಿಕೊಂಡಿಲ್ಲ. ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿರುವ ಮತ್ತು ಇರಬೇಕಾದ ಬಹುತೇಕ ಸವಲತ್ತುಗಳು ಇದರಲ್ಲಿವೆ. ತೆಗೆದ ಫೋಟೋಗಳ ಗುಣಮಟ್ಟವೂ ಚೆನ್ನಾಗಿಯೇ ಇವೆ. ಇದು ಕ್ಯಾಮರಾ ಬಾಡಿ ಮತ್ತು 18ಮಿಮಿ ಯಿಂದ 55ಮಿಮಿ ತನಕ ಫೋಕಲ್ ಲೆಂತ್ ಹೆಚ್ಚು ಕಡಿಮೆ ಮಾಡಬಹುದಾದ ಝೂಮ್ ಲೆನ್ಸ್ ಜೊತೆ ಸಿಗುತ್ತದೆ. ಉತ್ತಮ ಛಾಯಾಚಿತ್ರ ಬೇಕು ಎನ್ನುವವರಿಗೆ ಈ ಲೆನ್ಸ್ ಅಷ್ಟಕ್ಕಷ್ಟೆ. ಬೇರೆ ಲೆನ್ಸ್ ಕೊಂಡುಕೊಂಡರೆ ಒಳ್ಳೆಯದು.

 

ಮೊದಲು ಕ್ಯಾಮರದ ಗುಣವೈಶಿಷ್ಟ್ಯಗಳ (specifications) ಕಡೆ ಗಮನ ಹರಿಸೋಣ:  10.1 ಮೆಗಾಪಿಕ್ಸೆಲ್, ಐಎಸ್‌ಒ 100 ರಿಂದ 1600, ಅತ್ಯಧಿಕ ರೆಸೊಲೂಶನ್ 3888 x 2592, ಶಟ್ಟರ್ ಸ್ಪೀಡ್ 30 ಸೆಕೆಂಡಿನಿಂದ  1/4000 ಸೆಕೆಂಡ್ ಮತ್ತು Bulb, 12 ಶೂಟಿಂಗ್ ವಿಧಾನಗಳು, ಲೈವ್ ವ್ಯೂ, ಸೆಲ್ಫ್ ಟೈಮರ್, ಇತ್ಯಾದಿ.

 

ಎಸ್‌ಎಲ್‌ಆರ್‌ಗಳಲ್ಲಿ ಇದರ ಮೆಗಾಫಿಕ್ಸೆಲ್ ಸ್ವಲ್ಪ ಕಡಿಮೆಯೇ ಅನ್ನಬಹುದೇನೋ? ಆದರೆ ಚಿತ್ರದ ಗುಣಮಟ್ಟ ನೋಡಿದ ಮೇಲೆ ಇದೊಂದು ಕೊರತೆ ಎಂದು ಅನ್ನಿಸುವುದೇ ಇಲ್ಲ. ಬೆಳಕು ಬೇಕಾದಷ್ಟಿದ್ದಾಗ ಐಎಸ್‌ಒ 100 ಅಥವಾ 200 ಇಟ್ಟುಕೊಂಡು ಸೂಕ್ತ ಶಟ್ಟರ್ ಸ್ಪೀಡ್ ಆಯ್ಕೆ ಮಾಡಿಕೊಂಡು ಫೋಟೋ ತೆಗೆಯಬಹುದು. ಅತಿ ಕಡಿಮೆ ಬೆಳಕಿದ್ದಾಗ ಫ್ಲಾಶ್ ಬಳಸದೆ ಫೋಟೋ ತೆಗೆಯಬೇಕೆನ್ನುವವರು ಐಎಸ್‌ಒ 800 ಅಥವಾ 1600 ಬಳಸಬಹುದು. ಐಎಸ್‌ಒ 1600 ಆಯ್ಕೆ ಮಾಡಿಕೊಂಡರೆ ಚಿತ್ರ ಸ್ವಲ್ಪ ಕಾಳು ಕಾಳಾಗಿ (grainy) ಮೂಡಿಬರುತ್ತದೆ ಎಂದು ಕೆಲವರು ದೂರುತ್ತಾರೆ. ಇದು ಈ ಕ್ಯಾಮರಾ ಬಗ್ಗೆ ಮಾತ್ರವಲ್ಲ. ಯಾವುದೇ ಕ್ಯಾಮರಾದಲ್ಲೂ ಅದರಲ್ಲಿ ನೀಡಿರುವ ಐಎಸ್‌ಒ ಆಯ್ಕೆಯಲ್ಲಿ ಕೊನೆಯ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡರೆ ಹೀಗೆ ಆಗುವ ಸಾಧ್ಯತೆ ಹೆಚ್ಚು. ನಾನೂ ಹಲವು ಬಾರಿ ಕಡಿಮೆ ಬೆಳಕಿನಲ್ಲಿ ಐಎಸ್‌ಒ 800 ಇಟ್ಟುಕೊಂಡು ಫೋಟೋ ತೆಗೆದಿದ್ದೇನೆ. ಫೋಟೋ ಚೆನ್ನಾಗಿಯೇ ಬಂದಿದೆ.

 

ಶಟ್ಟರ್ ಸ್ಪೀಡ್ 30 ಸೆಕೆಂಡಿನಿಂದ ಹಿಡಿದು ಸೆಕೆಂಡಿನ 4000ನೆಯ ಒಂದು ಭಾಗದಷ್ಟರ ತನಕ ಇದೆ. ಅಂದ ಮೇಲೆ ಅತ್ಯಾಧುನಿಕ ವೃತ್ತಿನಿರತ ಛಾಯಾಗ್ರಾಹಕರು ಬಳಸುವ ಕ್ಯಾಮರಕ್ಕೆ ಏನೂ ಕಡಿಮೆಯಿಲ್ಲ ಅನ್ನಬಹುದು. ನಿಮ್ಮ ಕೈ ಅಷ್ಟು ಸ್ಥಿರವಲ್ಲ ಎಂದಾದಲ್ಲಿ ಶಟ್ಟರ್ ಸ್ಪೀಡ್ 30ಕ್ಕಿಂತ ಕೆಳಗಿನ ವೇಗದಲ್ಲಿ ಫೋಟೋ ತೆಗೆಯುವಾಗ ಕ್ಯಾಮರ ಸ್ಟ್ಯಾಂಡ್ ಬಳಸುವುದು ಒಳ್ಳೆಯದು. ಹಾರುವ ಹಕ್ಕಿಯ ಫೋಟೋ ತೆಗೆಯಬೇಕಿದ್ದಲ್ಲಿ ಶಟ್ಟರ್ ಸ್ಪೀಡ್ 250ಕ್ಕಿಂತ ಹೆಚ್ಚು ಇಟ್ಟುಕೊಂಡಲ್ಲಿ ಒಳ್ಳೆಯದು.

 

ಅಪೆರ್ಚರ್ ಸಂಖ್ಯೆ ಎಷ್ಟಿದೆಯೆಂಬುದು ಲೆನ್ಸ್ ಅನ್ನು ಹೊಂದಿಕೊಂಡಿರುತ್ತದೆ. ಕ್ಯಾಮರಾ ಜೊತೆ ಬರುವ ಕಿಟ್ ಲೆನ್ಸ್ ಈಗಾಗಲೆ ತಿಳಿಸಿದಂತೆ 18-55ಮಿಮಿ ಝೂಮ್ ಆಗಿದೆ. ಅದರ ಅಪೆರ್ಚರ್ ಸಂಖ್ಯೆ F/4.5 ರಿಂದ F/29 ರ ತನಕ ಇದೆ. ಲೆನ್ಸ್‌ನ F ಸಂಖ್ಯೆ 3.5 ರಿಂದ 5.6 ತನಕ ಇದೆ. ಇದು ಕ್ಯಾನನ್ ತುಂಬ ಖ್ಯಾತವಾಗಿರುವ ಐಎಸ್ (IS = Image Stabilisation) ಲೆನ್ಸ್ ಕೂಡ ಅಲ್ಲ. ಅಂದರೆ ಇದು ಅತ್ಯುತ್ತಮ ಲೆನ್ಸ್ ಏನಲ್ಲ.

ಇದರ ಆಟೋಫೋಕಸ್ ವ್ಯವಸ್ಥೆಯನ್ನು ಏಳು ಬಿಂದುಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ ಫೋಟೋ ತೆಗೆಯಬೇಕಾದ ವಸ್ತು ಫ್ರೇಮಿನ ಕೇಂದ್ರದ ಬದಲಿಗೆ ಒಂದು ಪಕ್ಕದಲ್ಲಿದೆ ಎಂದಾದಲ್ಲಿ ಫೋಕಸ್ ಬಿಂದುವನ್ನು ಪಕ್ಕಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ಮಾಡಿಕೊಳ್ಳುವುದರಿಂದ ವಸ್ತುವನ್ನು ಸ್ಪಷ್ಟವಾಗಿ ಫೋಕಸ್ ಮಾಡಿಕೊಳ್ಳಬಹುದುದು ಮಾತ್ರವಲ್ಲ, ಅದರ ಮೇಲೆ ಇರುವ ಬೆಳಕಿಗನುಗುಣವಾಗಿ ಶಟ್ಟರ್ ಸ್ಪೀಡ್ ಮತ್ತು ಅಪೆರ್ಚರ್ ಅಳವಡಿಸಕೊಳ್ಳಬಹುದು.

 

12 ಶೂಟಿಂಗ್ ವಿಧಾನಗಳಿವೆ. ಅವುಗಳೆಂದರೆ ಪೋರ್ಟ್ರೈಟ್, ಸೀನರಿ, ಮ್ಯಾಕ್ರೊ, ಶಟ್ಟರ್ ಪ್ರಯಾರಿಟಿ, ಅಪೆರ್ಚ್‌ರ್ ಪ್ರಯಾರಿಟಿ, ಪೂರ್ತಿ ಮ್ಯಾನ್ಯುವಲ್, ಪೂರ್ತಿ ಆಟೋಮ್ಯಾಟಿಕ್, ಇತ್ಯಾದಿ. ರಂಗನತಿಟ್ಟಿಗೆ ಹೋಗಿದ್ದೀರೆಂದಿಟ್ಟುಕೊಳ್ಳಿ. ಹಕ್ಕಿಗಳು ಹಾರಾಡುತ್ತಿರುತ್ತವೆ. ಅವುಗಳ ಫೋಟೋ ತೆಗೆಯಬೇಕಾದರೆ ಶಟ್ಟರ್ ಸ್ಪೀಡ್ 250ಕ್ಕಿಂತ ಅಧಿಕ ಇಟ್ಟುಕೊಳ್ಳಬೇಕು. ಆಗ ಬಳಸುವುದು ಶಟ್ಟರ್ ಪ್ರಯಾರಿಟಿ. ಈ ವಿಧಾನದಲ್ಲಿ ನಾವು ಆಯ್ಕೆ ಮಾಡಿಕೊಂಡ ಶಟ್ಟರ್ ಸ್ಪೀಡಿನಲ್ಲಿ ಸರಿಯಾಗಿ ಫೊಟೋ ತೆಗೆಯಬೇಕಾದರೆ ಲಭ್ಯಬೆಳಕಿನಲ್ಲಿ ಎಷ್ಟು ಅಪೆರ್ಚರ್ ಬೇಕೋ ಅದನ್ನು ಕ್ಯಾಮರಾವೇ ಆಯ್ಕೆ ಮಾಡಿಕೊಳ್ಳುತ್ತದೆ. ಅದೇ ರೀತಿ ಅಪೆರ್ಚರ್ ಪ್ರಯಾರಿಟಿಯಲ್ಲಿ ನಾವು ಆಯ್ಕೆ ಮಾಡಿಕೊಂಡ ಅಪೆರ್ಚರ್‌ಗೆ (ಲೆನ್ಸ್ ತೆರೆಯುವಿಕೆ) ಎಷ್ಟು ಬೇಕೋ ಅಷ್ಟು ಶಟ್ಟರ್ ಸ್ಪೀಡನ್ನು ಕ್ಯಾಮರಾವೇ ಆಯ್ಕೆ ಮಾಡಿಕೊಳ್ಳುತ್ತದೆ.  ಪೂರ್ತಿ ಮ್ಯಾನುವಲ್ ವಿಧಾನದಲ್ಲಿ ಶಟ್ಟರ್ ಸ್ಪೀಡ್ ಮತ್ತು ಅಪೆರ್ಚರ್ ಎರಡನ್ನೂ ನಾವೇ ಆಯ್ಕೆ ಮಾಡಿಕೊಳ್ಳಬಹುದು. ವೃತ್ತಿನಿರತರು ಬಳಸುವುದು ಈ ವಿಧಾನವನ್ನು.  ಹೆಚ್ಚಿನ ವಿವರಗಳನ್ನು www.canon.co.in ಜಾಲತಾಣದಲ್ಲಿ ನೋಡಬಹುದು.

 

ಈ ಕ್ಯಾಮರಾದ ಬೆಲೆಗೆ ಇನ್ನೂ 4 ಸಾವಿರ ಸೇರಿಸಿದರೆ ಅಂದರೆ ರೂ.29 ಸಾವಿರಕ್ಕೆ ಕ್ಯಾನನ್ 1100D ಸಿಗುತ್ತದೆ. ಇದು ಕೆಲವು ವಿಷಯಗಳಲ್ಲಿ 1000D ಗಿಂತ ಉತ್ತಮ – ಕಿಟ್ ಲೆನ್ಸ್ ಐಎಸ್ ಆಗಿದೆ, ಐಎಸ್‌ಒ 6400 ತನಕ ಹೋಗಬಹುದು, 12 ಮೆಗಾಪಿಕ್ಸೆಲ್ ಇದೆ, ಇತ್ಯಾದಿ.

 

ಐಎಸ್‌ಒ (ISO) ಫಿಲ್ಮ್ ಸ್ಪೀಡ್ – ಫೋಟೋಗ್ರಫಿಯಲ್ಲಿ ಬಲಸುವ ಫಿಲ್ಮಿನ ವೇಗವನ್ನು ಅಳೆಯುವ ಮಾನಕ. ಈಗ ಡಿಜಿಟಲ್ ಯುಗದಲ್ಲಿ ಫಿಲ್ಮ್ ಇಲ್ಲ. ಆದರೂ ಈ ಮಾನಕ ಉಳಿದುಕೊಂಡಿದೆ. ಐಎಸ್‌ಒ ಜಾಸ್ತಿಯಿದ್ದಷ್ಟು ಅದು ಅತಿ ಕಡಿಮೆ ಬೆಳಕಿನಲ್ಲೂ ಕೆಲಸ ಮಾಡುತ್ತದೆ ಎಂದು ತಿಳಿಯತಕ್ಕದ್ದು. ಸಾಮಾನ್ಯವಾಗಿ ಇದರ ಸಂಖ್ಯೆ 100ರಿಂದ ಪ್ರಾರಂಭವಾಗುತ್ತದೆ. ಕೊನೆಯ ಸಂಖ್ಯೆ ಹೆಚ್ಚಿದ್ದಷ್ಟು ಕ್ಯಾಮರ ಉತ್ತಮವಾದುದು ಎಂದು ತಿಳಿಯಬಹುದು.

 

ಗ್ಯಾಜೆಟ್ ಸಲಹೆ

 

ಶಿವಮೊಗ್ಗದ ಎಸ್. ಅಶೋಕ ಅವರ ಪ್ರಶ್ನೆ:  ನನಗೆ, ಮೊಬೈಲ್‌ನ ಪವರ್ ಪಾಯಿಂಟ್‌ನಲ್ಲಿ ಕನ್ನಡ ಉಪಯೋಗಿಸಿ ಸ್ಲೈಡ್ ತಯಾರಿಸಬಹುದೇ? ಇದ್ದರೆ ದಯವಿಟ್ಟು ಯಾವ ಕಂಪನಿಯ ಮೊಬೈಲ್ ತೆಗೆದುಕೊಳ್ಳಬೇಕು ತಿಳಿಸಿ.

ಉ: ನನಗೆ ತಿಳಿದಂತೆ ಸದ್ಯಕ್ಕೆ ಯಾವ ಮೊಬೈಲ್‌ನಲ್ಲೂ ಇದು ಸಾಧ್ಯವಿಲ್ಲ.

 

-ಡಾ| ಯು. ಬಿ. ಪವನಜ

 

1 Response to ಗ್ಯಾಜೆಟ್ ಲೋಕ – ೦೧೪ (ಎಪ್ರಿಲ್ ೦೫, ೨೦೧೨)

  1. shankargouda

    tumba upukta mahiti kottiri. vandanegalu.

Leave a Reply