ಗ್ಯಾಜೆಟ್ ಲೋಕ – ೦೧೨ (ಮಾರ್ಚ್ ೨೨, ೨೦೧೨)
ಮೊಬೈಲ್ ತಂತ್ರಾಂಶ
ಹಿಂದಿನ ಸಂಚಿಕೆಯಲ್ಲಿ ನಾವು ಮೊಬೈಲ್ ಯಂತ್ರಾಂಶವನ್ನು ಮತ್ತು ಅದರ ಅಂಗಾಂಗಳನ್ನು ನೋಡಿದೆವು. ಈ ಸಲ ಮೊಬೈಲ್ ಫೋನುಗಳಲ್ಲಿ ಬಳಕೆಯಾಗುವ ಹಲವು ವಿಧದ ತಂತ್ರಾಂಶಗಳನ್ನು ಮತ್ತು ಅವುಗಳ ಗುಣವೈಶಿಷ್ಟ್ಯಗಳನ್ನು ತಿಳಿಯೋಣ.
ಮೊಬೈಲ್ ಒಂದು ಕಿಸೆಗಣಕವೇ ಸರಿ. ಅಂತೆಯೇ ಅದರಲ್ಲೂ ಕಾರ್ಯಾಚರಣೆಯ ವ್ಯವಸ್ಥೆ ಇರುತ್ತದೆ. ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆಗಳು ಹಲವಿವೆ. ಅವು ಆಪಲ್‌ನ ಐಓಎಸ್, ಆಂಡ್ರೋಯಿಡ್, ಬ್ಲ್ಯಾಕ್‌ಬೆರ್ರಿ ಮತ್ತು ವಿಂಡೋಸ್ ಫೋನ್. ಐಓಎಸ್ ಆಪಲ್ ಫೋನ್‌ಗಳಲ್ಲಿ ಮಾತ್ರ ಬಳಕೆಯಾಗುತ್ತವೆ. ಅಂದರೆ ಐಫೋನ್ ಕೊಳ್ಳುವಾಗ ಯಾವ ಕಾರ್ಯಾಚರಣ ವ್ಯವಸ್ಥೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೂ ಯಾವ ಆವೃತ್ತಿ ಎಂಬುದರ ಕಡೆಗೆ ಗಮನ ಕೊಡಬೇಕು. ಈಗ ಆವೃತ್ತಿ 4 ಚಾಲ್ತಿಯಲ್ಲಿದೆ. ಕೊಳ್ಳುವ ಮೊದಲು ಅಂತರಜಾಲದಲ್ಲಿ ಸ್ವಲ್ಪ ಹುಡುಕಾಡಿ ಯಾವುದು ಇತ್ತೀಚೆಗಿನ ಆವೃತ್ತಿ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಇದೇ ಮಾತು ಇತರೆ ಕಾರ್ಯಾಚರಣ ವ್ಯವಸ್ಥೆಗಳಿಗೂ ಅನ್ವಯಿಸುತ್ತದೆ. ಹಾಗೆಯೇ ಬ್ಲ್ಯಾಕ್‌ಬೆರ್ರಿ ಕೂಡ. ಆಂಡ್ರೋಯಿಡ್ ಮಾತ್ರ ಹಾಗಲ್ಲ. ಆಂಡ್ರೋಯಿಡ್ ಕಾರ್ಯಾಚರಣ ವ್ಯವಸ್ಥೆಯನ್ನೊ ಒಳಗೊಂಡ ಫೋನ್‌ಗಳು ಹಲವಾರಿವೆ. ಹಲವು ಕಂಪೆನಿಗಳು ಈ ಫೋನ್‌ಗಳನ್ನು ತಯಾರಿಸುತ್ತಿವೆ. ಒಂದೊಂದೂ ಬೇರೆ ಬೇರೆ ಆವೃತ್ತಿಯನ್ನು ಒಳಗೊಂಡಿವೆ.
ಆಪಲ್ ಐಓಎಸ್
ಇವು ಆಪಲ್ ಕಂಪೆನಿಯ ಐಫೋನ್‌ಗಳಲ್ಲಿ ಮಾತ್ರ ಬಳಕೆಯಾಗುತ್ತವೆ. ಇವು ಸಂಪೂರ್ಣ ಮುಚ್ಚಿದ ಅರ್ಥಾತ್ ಏಕಸ್ವಾಮ್ಯಕ್ಕೊಳಪಟ್ಟ ತಂತ್ರಾಂಶ. ಐಫೋನ್ ಕೂಡ ಇದೇ ಜಾತಿಯದು. ಅದಕ್ಕೆ ಏನನ್ನು ಸೇರಿಸಬೇಕಾದರೂ ಆಪಲ್ ಕಂಪೆನಿಯದೇ ಆದ ಐಟ್ಯೂನ್ ಎಂಬ ಕಿರಿಕಿರಿ ತಂತ್ರಾಂಶದ ಮೂಲಕವೇ ಸೇರಿಸಬೇಕು. ಫೋನಿನಲ್ಲಿ ಏನನ್ನು ಬೇಕಾದರೂ ತುಂಬಿಸಲು ಅದು ಬಿಡುವುದಿಲ್ಲ. ನಿಮ್ಮ ಸ್ನೇಹಿತರ ಫೋನಿನಿಂದ ನಿಮ್ಮ ಫೋನಿಗೆ ಸಂಗೀತ, ಚಿತ್ರ, ಅಥವಾ ಯಾವುದೇ ಫೈಲುಗಳನ್ನು ಅದು ಪರಸ್ಪರ ವರ್ಗಾವಣೆ ಮಾಡಿಕೊಳ್ಳಲು ಬಿಡುವುದಿಲ್ಲ. ಎಲ್ಲವೂ ಐಟ್ಯೂನ್ ಮುಖಾಂತರವೇ ನಡೆಯಬೇಕು. ಐಫೋನ್ ಬರುವ ಮೊದಲೂ ಸ್ಮಾರ್ಟ್‌ಫೋನ್‌ಗಳಿದ್ದವು. ಆದರೆ ಐಫೋನ್ ಬಳಕೆಯ ಅನುಭವದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಮಾಡಿತು. ಎಲ್ಲ ಸ್ಮಾರ್ಟ್‌ಫೋನ್‌ಗಳಂತೆ ಇವು ಕೂಡ ಸ್ಪರ್ಶ ಪರದೆಯನ್ನು ಹೊಂದಿವೆ. ಇವುಗಳನ್ನು ಬಳಸಲು ಪ್ಲಾಸ್ಟಿಕ್ ಕಡ್ಡಿ ಬೇಕಾಗಿಲ್ಲ. ಬೆರಳು ಸಾಕು. ಎರಡು ಬೆರಳುಗಳನ್ನು ಬಳಸಿ ಚಿತ್ರವನ್ನು ಹಾಗೂ ಪಠ್ಯವನ್ನು ಹಿಗ್ಗಿಸುವ ಕುಗ್ಗಿಸುವ ಸವಲತ್ತನ್ನು ಬಹುಶಃ ಮೊದಲ ಬಾರಿಗೆ ನೀಡಿದ್ದು ಐಫೋನ್. ಉತ್ತಮ ಮಟ್ಟದ ಪರದೆ, ಗ್ರಾಫಿಕ್ಸ್, ಸ್ಪರ್ಶದ ಮೂಲಕವೇ ಬಳಸುವ ಕೀಲಿಮಣೆ, ಜಿಪಿಎಸ್ ತಂತ್ರಜ್ಞಾನದ ಮೂಲಕ ತಾನಿರುವ ಸ್ಥಳದ ಪತ್ತೆ, ಕಡತಗಳನ್ನು ತೆರೆಯುವ ಸವಲತ್ತು, ಸಾವಿರಾರು ತಂತ್ರಾಂಶಗಳ ಲಭ್ಯತೆ, ಕ್ಯಾಮರಾ, ಸಂಗೀತ ಮತ್ತು ಚಲನಚಿತ್ರ ವೀಕ್ಷಣೆ, ಅಂತರಜಾಲ ಸಂಪರ್ಕ, ಜಾಲತಾಣ ವೀಕ್ಷಣೆ, ಇಮೈಲ್ -ಇನ್ನೂ ಹಲವಾರು ಸವಲತ್ತುಗಳು ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿರುವಂತೆ ಐಫೋನ್‌ನಲ್ಲೂ ಇವೆ. ಐಫೋನ್‌ಗೆ ಯಾವುದೇ ತಂತ್ರಾಂಶ ಹಾಕಬೇಕಿದ್ದರೂ ಅವರದೇ ಜಾಲತಾಣದಿಂದ ಹಣಕೊಟ್ಟು ಡೌನ್‌ಲೋಡ್ ಮಾಡಿ ಅವರದೇ ಐಟ್ಯೂನ್ ಎಂಬ ತಂತ್ರಾಂಶದ ಮೂಲಕ ಮಾತ್ರ ತಂತ್ರಾಂಶ ಸೇರಿಸಲು ಸಾಧ್ಯ. ಉಚಿತ ತಂತ್ರಾಂಶವಾದರೂ ಇದೇ ವಿಧಾನವನ್ನು ಬಳಸಬೇಕು. ಅತಿ ದುಬಾರಿ ಐಫೋನ್‌ಗಳಲ್ಲಿ ಬಳಕೆಯಾಗುವ ಐಓಎಸ್ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಕನ್ನಡದ ಬೆಂಬಲ ಇದೆ.
ಆಂಡ್ರೋಯಿಡ್
ಸದ್ಯ ಸ್ಮಾರ್ಟ್‌ಫೋನ್ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ನಂ.1 ಸ್ಥಾನದಲ್ಲಿ ಆಂಡ್ರೋಯಿಡ್ ಇದೆ. ಆಂಡ್ರೋಯಿಡ್ ಬಹುಮಟ್ಟಿಗೆ ತೆರೆದ ವಿನ್ಯಾಸ. ಇದು ಮುಕ್ತ ತಂತ್ರಾಂಶಗಳನ್ನು ಆಧರಿಸಿವೆ. ಮೂಲಭೂತವಾಗಿ ಇದು ಲೈನಕ್ಸ್ ಮೇಲೆ ಕಟ್ಟಲ್ಪಟ್ಟಿದೆ. ಹಲವು ಕಡೆ ಜಾವಾ ಬಳಸಲಾಗಿದೆ. ಫೋನ್ ತಯಾರಕರು ತಮಗಿಷ್ಟಬಂದಂತೆ ಅಲ್ಲಲ್ಲಿ ಬದಲಾವಣೆಗಳನ್ನು ಮಾಡಿ ತಮ್ಮ ಫೋನ್‌ಗಳಲ್ಲಿ ಅಳವಡಿಸಿರುತ್ತಾರೆ. ಆಂಡ್ರೋಯಿಡ್ ಫೋನ್‌ಗಳನ್ನು ಯಾವುದೇ ಒಂದು ಕಂಪೆನಿ ಮಾತ್ರ ತಯಾರಿಸುತ್ತಿಲ್ಲ. ಸ್ಯಾಮ್‌ಸಂಗ್, ಎಚ್‌ಟಿಸಿ, ಎಲ್‌ಜಿ, ಮೋಟೊರೋಲ ಮತ್ತು ಇನ್ನೂ ಹಲವಾರು ಕಂಪೆನಿಗಳು ಆಂಡ್ರೋಯಿಡ್ ಫೋನ್ ತಯಾರಿಸುತ್ತಿವೆ. ಆಂಡ್ರೋಯಿಡ್ ಆವೃತ್ತಿಗಳಿಗೆ ವಿಚಿತ್ರವಾಗಿ ತಿಂಡಿಗಳ ಹೆಸರಿಟ್ಟಿದ್ದಾರೆ. ಉದಾಹರಣೆಗೆ – ಮೊಸರು (Forozen Yoghurt), ಬ್ರೆಡ್, ಐಸ್‌ಕ್ರೀಂ, ಇತ್ಯಾದಿ.
ಆಂಡ್ರೋಯಿಡ್‌ಗೆ ಆನ್ವಯಿಕ ತಂತ್ರಾಂಶಗಳು ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಲಭ್ಯವಿವೆ. ಇವುಗಳು ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ (market.android.com) ದೊರೆಯುತ್ತವೆ. ಆಂಡ್ರೋಯಿಡ್ ಜನಪ್ರಿಯತೆಗೆ ಕೆಲವು ಮುಖ್ಯ ಕಾರಣಗಳು – ಅತಿ ದುಬಾರಿಯಲ್ಲ, ಅತಿ ಹೆಚ್ಚು ಶಕ್ತಿಶಾಲಿಯಾದ ಮತ್ತು ಕಡಿಮೆ ಶಕ್ತಿಶಾಲಿಯಾದ ಆದರೆ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲೂ ಲಭ್ಯ ಮಾದರಿಗಳು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ತಂತ್ರಾಂಶಗಳು ದೊರೆಯುತ್ತಿವೆ, ಯಾರು ಬೇಕಾದರೂ ಸುಲಭವಾಗಿ ತಂತ್ರಾಂಶ ತಯಾರಿಸಿ ಇತರರಿಗೆ ಹಂಚಬಹುದು, ಇತ್ಯಾದಿ.
ಆದರೂ ಒಂದು ಪ್ರಮುಖ ವಿಷಯವನ್ನು ಆಂಡ್ರೋಯಿಡ್ ಫೋನ್ ಕೊಳ್ಳುವವರು ಗಮನಿಸಲೇಬೇಕು. ಆಂಡ್ರೋಯಿಡ್ ಇರುವ ಫೋನ್ ವೇಗವಾಗಿ ಕೆಲಸ ಮಾಡಬೇಕಾದರೆ ಕನಿಷ್ಠ ಒಂದು ಗಿಗಾಹರ್ಟ್ಝ್ ವೇಗದ ಪ್ರೋಸೆಸರ್ ಅಗತ್ಯ. ಎರಡು ಹೃದಯದ ಪ್ರೋಸೆಸರ್ (dual core) ಇದ್ದರೆ ಇನ್ನೂ ಒಳ್ಳೆಯದು.
ಆಂಡ್ರೋಯಿಡ್‌ನಲ್ಲಿ ಕನ್ನಡದ ಬೆಂಬಲ ಇನ್ನೂ ಪೂರ್ತಿಯಾಗಿ ನೀಡಿಲ್ಲ. ಆದರೂ ಕೆಲವು ಫೋನ್ ತಯಾರಕರು ತಮ್ಮ ಆಂಡ್ರೋಯಿಡ್ ಫೋನ್‌ಗಳಲ್ಲಿ ಕನ್ನಡದ ಬೆಂಬಲ ನೀಡಿದ್ದಾರೆ. ಉದಾಹರಣೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳು.
ಬ್ಲ್ಯಾಕ್‌ಬೆರ್ರಿ
ಆಪಲ್‌ನಂತೆಯೇ ಇದು ಕೂಡ ಸಂಪೂರ್ಣ ಏಕಸ್ವಾಮ್ಯದ ಫೋನ್ ಮತ್ತು ತನ್ನದೇ ತಂತ್ರಾಂಶ ವ್ಯವಸ್ಥೆಯನ್ನು ಹೊಂದಿದೆ. ಪ್ರಾರಂಭದಲ್ಲಿ ತಯಾರಾಗುತ್ತಿದ್ದ ಬ್ಲ್ಯಾಕ್‌ಬೆರ್ರಿ ಫೋನ್‌ಗಳಿಗೆ ಸಂಪೂರ್ಣ ಕೀಲಿಮಣೆ ಇರುತ್ತಿತ್ತು. ಈಗೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬ್ಲ್ಯಾಕ್‌ಬೆರ್ರಿ ಫೋನ್‌ಗಳಲ್ಲಿ ಸ್ಪರ್ಶಪರದೆ ಅಳವಡಿಸಲಾಗಿದೆ.
ಬ್ಲ್ಯಾಕ್‌ಬೆರ್ರಿ ಫೋನ್‌ಗಳು ತಮ್ಮದೇ ಆದ ಸರ್ವರ್ ಹೊಂದಿದ್ದು ಎಲ್ಲ ಇಮೈಲ್‌ಗಳು ಅದರ ಮೂಲಕವೇ ಬರುತ್ತವೆ. ಅಂದರೆ ಬ್ಲ್ಯಾಕ್‌ಬೆರ್ರಿ ಫೋನಿಗೆ ಹಣಕೊಟ್ಟು ಕೊಳ್ಳುವುದರ ಜೊತೆ ಈ ಸರ್ವರ್‌ಗೆ ಚಂದಾದಾರಗಬೇಕು. ಇಮೈಲ್ ಬಂದೊಡನೆ ಅದು ಇಮೈಲನ್ನು ಗ್ರಾಹಕರ ಫೋನಿಗೆ ತಳ್ಳುತ್ತದೆ. ಇದಕ್ಕೆ ಪುಶ್ ಟೆಟ್ಕ್ನಾಲಜಿ ಎಂಬ ಹೆಸರಿದೆ. ಬ್ಲ್ಯಾಕ್‌ಬೆರ್ರಿ ಮೆಸ್ಸೆಂಜರ್ ಸರ್ವಿಸ್ ಎಂಬ ಒಂದು ಸಂದೇಶ ಸೇವೆಯೂ ಬ್ಲ್ಯಾಕ್‌ಬೆರ್ರಿಗೆ ಮಾತ್ರ ಲಭ್ಯವಿರುವ ವಿಶಿಷ್ಟ ಸೇವೆಯಾಗಿದೆ.
ಈ ಫೋನ್‌ಗಳ ಗುಣ ವೈಶಿಷ್ಟ್ಯಗಳ ಕಡೆ ಗಮನ ಕೊಟ್ಟರೆ ಇತರೆ ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಹುಪಾಲು ಗುಣಗಳನ್ನು ಇವುಗಳಲ್ಲಿ ಕಾಣಬಹುದು. ಆದರೆ ಐಫೋನ್ ಅಥವಾ ಆಂಡ್ರೋಯಿಡ್ ಫೋನ್‌ಗಳಿರುವಷ್ಟು ತಂತ್ರಾಂಶಗಳು ಇವುಗಳಿಗೆ ಲಭ್ಯವಿಲ್ಲ. ತಮ್ಮ ತಂತ್ರಾಂಶ, ಮಾರುಕಟ್ಟೆ, ತಂತ್ರಜ್ಞಾನ ಎಲ್ಲವನ್ನು ಬಿಗಿಯಾಗಿ ತಮ್ಮ ಮುಷ್ಟಿಯಲ್ಲಿಟ್ಟುಕೊಂಡಿದ್ದು ಇದರ ಹಿನ್ನಡೆಗೆ ಒಂದು ಕಾರಣವಾಗಿರಬಹುದು. ಜೊತೆಗೆ ಐಫೋನ್ ಮತ್ತು ಆಂಡ್ರೋಯಿಡ್ ಹೊಡೆತ.
ವಿಂಡೋಸ್ ಫೋನ್
ಮೈಕ್ರೋಸಾಫ್ಟ್ ಕಂಪೆನಿ ಮೊಬೈಲ್ ಫೋನ್‌ಗಳಿಗೋಸ್ಕರ ವಿಂಡೋಸ್ ಫೋನ್ ಎಂಬ ಕಾರ್ಯಾಚರಣೆಯ ವ್ಯವಸ್ಥೆಯನ್ನು ತಯಾರಿಸಿದೆ. ಸ್ಯಾಮ್‌ಸಂಗ್, ಎಚ್‌ಟಿಸಿ ಇತ್ಯಾದಿ ಕಂಪೆನಿಗಳು ಈ ಕಾರ್ಯಾಚರಣೆಯ ವ್ಯವಸ್ಥೆಯನ್ನು ಅಳವಡಿಸಿರುವ ಫೋನ್ ತಯಾರಿಸುತ್ತಿವೆ. ಐಫೋನ್ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಮೈಕ್ರೋಸಾಫ್ಟ್‌ನವರ ಮೊಬೈಲ್ ಫೋನ್ ತಂತ್ರಾಂಶವನ್ನು ಹೊಂದಿದ ಫೋನ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದವು. ಅವು ಅದಕ್ಕೂ ಮೊದಲು ಪಿಡಿಎ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದ ಪಾಮ್ (Palm) ಕಂಪೆನಿಯನ್ನು ಕೆಳಕ್ಕೆ ತಳ್ಳಿದ್ದವು. ಆದರೆ ಐಫೋನ್ ಎಲ್ಲವನ್ನು ತಲೆಕೆಳಗೆ ಮಾಡಿತ್ತು. ಇತ್ತೀಚೆಗೆ ಮೈಕ್ರೋಸಾಪ್ಟ್ ಪುನಃ ಈ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ವಾಪಾಸು ಪಡೆಯಲು ವಿಂಡೋಸ್ ಫೋನ್ ಎಂಬ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಇದು ತುಂಬ ಚೆನ್ನಾಗಿದೆ.
ಸಾಮಾನ್ಯ ಫೋನ್‌ಗಳಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ ನೋಕಿಯಾ ಕಂಪೆನಿ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಅಂತಹ ಹೆಸರನ್ನೇನೂ ಮಾಡಿಲ್ಲ. ಅದು ತನ್ನದೇ ಸ್ಮಾರ್ಟ್‌ಫೋನ್ ತಯಾರಿಸಿದೆ. ಆದರೆ ಅದು ಅಷ್ಟು ಮಾರಾಟವಾಗುತ್ತಿಲ್ಲ. ಇತ್ತೀಚೆಗೆ ನೋಕಿಯಾ ಕಂಪೆನಿ ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೈಕ್ರೋಸಾಫ್ಟ್ ವಿಂಡೋಸ್ ಅಳವಡಿಸಿದ ನೋಕಿಯಾ ಲುಮಿಯ ಫೋನ್ ಮಾರುಟ್ಟೆಗೆ ಬಂದಿದೆ.
ಇವು ವಿಂಡೋಸ್ ಕಾರ್ಯಾಚರಣೆಯ ವ್ಯವಸ್ಥೆ ಹೊಂದಿರುವುದರಿಂದ ವಿಂಡೋಸ್ ಇರುವ ಗಣಕಗಳ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಗಣಕದಲ್ಲಿರುವ ವಿಳಾಸ ಪುಸ್ತಕ, ಇಮೈಲ್, ಫೋಟೋ, ಸಂಗೀತ, ಇತ್ಯಾದಿಗಳನ್ನು ಫೋನ್ ಜೊತೆ ಸರಿಹೊಂದಿಸುವುದು ಬಹಳ ಸುಲಭ ಮತ್ತು ಯಾವುದೇ ತಕರಾರು ಇಲ್ಲದೆ ಆಗುತ್ತದೆ. ಹಲವು ನಮೂನೆಯ ಆಟಗಳೂ ಲಭ್ಯವಿವೆ. ಮೈಕ್ರೋಸಾಫ್ಟ್ ತಂತ್ರಾಂಶ ತಯಾರಿಯ ಸವಲತ್ತುಗಳನ್ನೇ ಬಳಸಿ ಈ ಫೋನಿಗೆ ತಂತ್ರಾಂಶಗಳನ್ನು ತಯಾರಿಸಬಹುದಾದುರಿಂದ ಇದು ಪ್ರೋಗ್ರಾಮರ್‌ಗಳಿಗೆ ಅಚ್ಚುಮೆಚ್ಚು ಆಗುತ್ತಿದೆ. ವಿಂಡೋಸ್ ಫೋನಿಗೆ ತಂತ್ರಾಂಶ ತಯಾರಿಸಿ ಮಾರಲು ಮತ್ತು ಕೊಳ್ಳಲು ಒಂದು ಮಾರುಕಟ್ಟೆ ಇದೆ. ಮೈಕ್ರೋಸಾಫ್ಟ್ ತನ್ನ ಸ್ಥಾನವನ್ನು ವಾಪಾಸು ಪಡೆದುಕೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.
May 10th, 2012 at 10:52 am
I have purchased samsung galaxy y gt s5360.But my problem is that it doesn’t support adobe flash player.Is there any alternative methods to play flv files in my galaxy y?
Pleae help me….
February 14th, 2013 at 9:36 pm
i want buy smartphone under 10000 Rs. which is best smartphone ? please help me