ಗ್ಯಾಜೆಟ್ ಲೋಕ – ೦೧೦ (ಮಾರ್ಚ್ ೦೮, ೨೦೧೨)

ಸ್ಯಾಮ್‌ಸಂಗ್ ಎಸ್‌ಬಿಎಚ್650 ಬ್ಲೂಟೂತ್ ಹೆಡ್‌ಸೆಟ್

 

ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆ. ಕುತ್ತಿಗೆಗೆ ನೇತುಹಾಕುವಂತಹವು ಒಂದು ವಿಧ. ಅಂತಹವುಗಳಲ್ಲಿ ಒಂದು ಸ್ಯಾಮ್‌ಸಂಗ್ ಎಸ್‌ಬಿಎಚ್ 650 ಹೆಡ್‌ಸೆಟ್. ಬ್ಲೂಟೂತ್ ಸ್ಟೀರಿಯೋ ಹೆಡ್‌ಸೆಟ್ ಆಗಿದೆ. ಅದರ ಬಗ್ಗೆ ಸ್ವಲ್ಪ ಗಮನ ಕೊಡೋಣ.

 

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬಸ್ಸು ರೈಲಿನಲ್ಲಿ ಪ್ರಯಾಣಿಸುವಾಗ, ಕಾರು ಚಲಾಯಿಸುವಾಗ, ಕೆಲವರಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಲೇ ಇರುವ ಅಭ್ಯಾಸವಿದೆ. ಇನ್ನು ಕೆಲವರಿಗೆ ಸಂಗೀತ ಆಲಿಸುವ ಅಭ್ಯಾಸವಿದೆ. ಆದರೆ ಕಿವಿಗೆ ಮೊಬೈಲ್ ಫೋನನ್ನು ದೀರ್ಘಕಾಲ ಅಂಟಿಸಿಕೊಂಡು ಇರುವುದು ಒಳ್ಳೆಯದಲ್ಲ. ವಾಹನ ಚಲಾಯಿಸುವಾಗ ಅಂತು ಇದು ಖಂಡಿತ ಕೂಡದು. ಮೊಬೈಲ್ ಫೋನನ್ನು ಕಿವಿಗೆ ಅಂಟಿಸಿಕೊಂಡಿರುವ ಬದಲಿಗೆ ಕಿವಿಗೆ ಇಯರ್‌ಫೋನ್ ಅಥವಾ ಹೆಡ್‌ಸೆಟ್ ಹಾಕಿಕೊಂಡು ಬಳಸಬಹುದು. ಹೀಗೆ ಬಳಸುವ ಹೆಡ್‌ಸೆಟ್‌ಗಳಲ್ಲಿ ಹಲವು ವಿಧ. ವಯರ್ ಮೂಲಕ ಸಂಪರ್ಕಗೊಳ್ಳುವವಂತಹವು ಮತ್ತು ಬ್ಲೂಟೂತ್ ನಿಸ್ತಂತು ವಿಧಾನದಲ್ಲಿ ಸಂರ್ಕಗೊಳ್ಳುವಂತಹವು. ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಹಲವು ನಮೂನೆಯವಿವೆ. ಪ್ರಮುಖವಾಗಿ ಎರಡು ಬಗೆ. ಕಿವಿಗೆ ಮಾತ್ರ ಸಿಕ್ಕಿಸಿಕೊಳ್ಳಬಲ್ಲ ಮಾತನಾಡಲು ಮಾತ್ರ ಬಳಸಬಲ್ಲ ಮೋನೋ ಮತ್ತು ಎರಡು ಕಿವಿಗೂ ಸಂಗೀತ ಒಯ್ಯಬಲ್ಲ ಸ್ಟೀರಿಯೋ.

ಸ್ಟೀರಿಯೋ ಬ್ಲೂಟೂತ್ ಹೆಡ್‌ಸೆಟ್‌ಗಳ ವಿಭಾಗಕ್ಕೆ ಸೇರುವ ಒಂದು ಮಾದರಿ ಸ್ಯಾಮ್‌ಸಂಗ್‌ನವರ ಎಸ್‌ಬಿಎಚ್ 650 ಸ್ಟೀರಿಯೋ ಬ್ಲೂಟೂತ್ ಹೆಡ್‌ಸೆಟ್. ಸ್ಟೀರಿಯೋ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಮತ್ತೆ ಹಲವು ನಮೂನೆಗಳಿವೆ. ಕುತ್ತಿಗೆಗೆ ನೇತುಹಾಕುವಂತಹವು, ಅದರಿಂದ ಕಿವಿಗೆ ಮಾಮೂಲಿ ಇಯರ್‌ಫೋನ್ ಮೂಲಕ ಸಂಪರ್ಕಗೊಳ್ಳುವಂತಹವು ಮತ್ತು ಕಿವಿಗಳ ಮೇಲೆಯೇ ಕುಳಿತುಕೊಳ್ಳುವಂತಹವು ಇನ್ನೊಂದು. ಸ್ಯಾಮ್‌ಸಂಗ್ ಎಸ್‌ಬಿಎಚ್ 650 ಮೊದಲನೆಯ ವಿಧದ್ದು. ಇದರ ಜೊತೆ ನೀವು ಇದರ ಜೊತೆ ಬರುವ ಇಯರ್‌ಫೋನ್ ಅಥವಾ ಬೇರೆ ಯಾವ ಇಯರ್‌ಫೋನ್ ಬೇಕಿದ್ದರೂ ಬಳಸಬಹುದು. ಯಾಕೆಂದರೆ ಇದರಲ್ಲಿ 3.5 ಮಿ.ಮಿ.ನ ಇಯರ್‌ಫೋನ್ ಕಿಂಡಿ ಇದೆ. ಸ್ಯಾಮ್‌ಸಂಗ್‌ನವರು ಒಂದು ಜೊತೆ ಇಯರ್‌ಫೋನ್ ನೀಡಿದ್ದಾರೆ. ಆದರೆ ಅದರ ಗುಣಮಟ್ಟ ಅಷ್ಟಕ್ಕಷ್ಟೆ. ನಾನು ಈ ಬ್ಲೂಟೂತ್ ಗ್ಯಾಜೆಟ್ ಜೊತೆ ಬಂದಿರುವ ಇಯರ್‌ಫೋನ್ ಮೂಲೆಗೆಸೆದು ನನ್ನ ಕ್ರಿಯೇಟಿವ್ ಇಪಿ630 ಇಯರ್‌ಬಡ್ ಬಳಸುತ್ತೇನೆ.

 

ಸ್ಯಾಮ್‌ಸಂಗ್ ಎಸ್‌ಬಿಎಚ್650 ಬ್ಲೂಟೂತ್ ಹೆಡ್‌ಸೆಟ್‌ಗೆ ಸುಮಾರು 3000 ರೂ. ಬೆಲೆ ಇದೆ. ಇದರಲ್ಲಿ ಎಫ್‌ಎಂ ರೇಡಿಯೋ ಇಲ್ಲವೆನ್ನುವ ಕೊರತೆಯೂ ಇದೆ. ಮೊಬೈಲ್ ಫೋನಿನಲ್ಲಿ ಎಫ್‌ಎಂ ರೇಡಿಯೋ ಇದ್ದರೂ ಅದಕ್ಕೆ ಇಯರ್‌ಫೋನ್ ಲಗತ್ತಿಸದಿದ್ದಲ್ಲಿ ಅದು ಸಾಮಾನ್ಯವಾಗಿ ಕೆಲಸ ಮಾಡುವುದಿಲ್ಲ. ಆ ಸಂದರ್ಭದಲ್ಲಿ ಎಫ್‌ಎಂ ರೇಡಿಯೋಗೆ ಆಂಟೆನಾ ಆಗಿ ಈ ಬ್ಲೂಟೂತ್ ಕೆಲಸ ಮಾಡಲು ಅಸಾದ್ಯ. ಆದುದರಿಂದ ಇದರಲ್ಲೇ ಎಫ್‌ಎಂ ರೇಡಿಯೋ ಇಲ್ಲದಿರುವುದು ಒಂದು ಕೊರತೆಯೇ.

 

ಸ್ಟೀರಿಯೋ ಬ್ಲೂಟೂತ್ ಜೊತೆ ಎಫ್‌ಎಂ ರೇಡಿಯೋ ಕೂಡ ಬೇಕು ಎನ್ನುವವರು ಇದೇ ಮಾದರಿಯ ಮೋಟೊರೋಲ ಎಸ್ 705 ಕೊಳ್ಳಬಹುದು. ಅದು ಸುಮಾರು 5000 ರೂ. ಬೆಲೆ ಬಾಳುತ್ತದೆ. ಗುಣಮಟ್ಟವೂ ಚೆನ್ನಾಗಿಯೇ ಇದೆ. ಆದರೆ ಸ್ವಲ್ಪ ದಪ್ಪ ಗಾತ್ರ. ಅದೂ ನನ್ನಲ್ಲಿ ಇದೆ. ಆದರೆ ಅದನ್ನು ನನಗೆ ಲ್ಯಾಪ್‌ಟಾಪ್ ಜೊತೆ ಸಂಪರ್ಕಿಸಲು ಸಾಧ್ಯವಾಗಲೇ ಇಲ್ಲ. ಸ್ಯಾಮ್‌ಸಂಗ್ ಎಸ್‌ಬಿಎಚ್ 650 ಆದರೆ ಲ್ಯಾಪ್‌ಟಾಪ್ ಜೊತೆ ಚೆನ್ನಾಗಿ ಕೆಲಸ ಮಾಡುತ್ತದೆ.

 

ಇದರಲ್ಲಿ ಹಲವಾರು ಬಟನ್‌ಗಳಿವೆ. ಆನ್/ಆಫ್, ವಾಲ್ಯೂಮ್ ಹೆಚ್ಚು/ಕಡಿಮೆ, ಮಾತನಾಡುವ ಸಂಪರ್ಕ ಸಾಧಿಸು/ಕತ್ತರಿಸು, ಇತ್ಯಾದಿ. ಒಂದು ಎಲ್‌ಇಡಿ ಇದೆ. ಇದು ಹಲವು ಕಾರ್ಯಗಳನ್ನು ಮಾಡುತ್ತದೆ ಮತ್ತು ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ಬಣ್ಣಗಳಲ್ಲಿ ಸಂಕೇತ ನೀಡುತ್ತದೆ. ಉದಾಹರಣೆಗೆ ಬ್ಯಾಟರಿ ಚಾರ್ಜ್ ಆಗುತ್ತಿರುವಾಗ ಕೆಂಪು ಬಣ್ಣ, ಚಾರ್ಜ್ ಪೂರ್ತಿಯಾದಾಗ ನೀಲಿ ಬಣ್ಣ. ಇದರ ಒಂದು ಸಣ್ಣ ಕೊರತೆಯೆಂದರೆ ಚಾರ್ಜ್ ಮಾಡಲು ಇದರ ಜೊತೆ ಬಂದಿರುವ ಚಾರ್ಜರ್ ಮಾತ್ರ ಬಳಕೆ ಮಾಡಬಹುದು. ಯುಎಸ್‌ಬಿ ಚಾರ್ಜಿಂಗ್ ವ್ಯವಸ್ಥೆ ನೀಡಿಲ್ಲ.

 

ಇದರ ಗಾತ್ರ ಚಿಕ್ಕದಾಗಿದೆ (5.8 x 2.8 x 0.8 ಸೆ.ಮಿ.). ಬಟನ್‌ಗಳು ನಯವಾಗಿವೆ. ಯಾವ ಬಟನ್ ಕೂಡ ಎದ್ದು ಬರುವಂತಿಲ್ಲ. ಇದು ಕೆಲವೊಮ್ಮೆ ಕಿರಿಕಿರಿಗೂ ಕಾರಣವಾಗುತ್ತವೆ. ಉದಾಹರಣೆಗೆ ಫೋನ್ ಬಂತು ಎಂದು ಕರೆಯನ್ನು ಸ್ವೀಕರಿಸುವ ಬಟನ್ ಒತ್ತಲು ಅದು ಎಲ್ಲಿದೆ ಎಂದು ಹುಡುಕಿ ಒತ್ತಬೇಕು. ಕೈಬೆರಳನ್ನು ಸರಿಸುತ್ತ ಹೋದರೆ ಗುಂಡಿ (ಬಟನ್) ಕೈಗೆ ಸಿಗುವುದಿಲ್ಲ. ಯಾಕೆಂದರೆ ಅದು ಉಬ್ಬಿಲ್ಲ. ಇದಕ್ಕೆ ಒಂದು ಕ್ಲಿಪ್ ಇದೆ. ಅದನ್ನು ಉಪಯೋಗಿಸಿ ಇದನ್ನು ಅಂಗಿಗೆ ಲಗತ್ತಿಸಿಕೊಳ್ಳಬಹುದು. ಕ್ಲೋಸ್‌ಡ್ ಕಾಲರ್ ಟೀಶರ್ಟ್ ಧರಿಸುವವರಿಗೆ ಹೀಗೆ ಕ್ಲಿಪ್ ಮೂಲಕ ಲಗತ್ತಿಸಿಕೊಳ್ಳಲು ಆಗುವುದಿಲ್ಲ. ಅಂತಹವರಿಗೆಂದೇ ಒಂದು ದಾರದ ವ್ಯವಸ್ಥೆಯೂ ಇದೆ. ಇದನ್ನು ಬಳಸಿ ಕುತ್ತಿಗೆಗೆ ಹಾರದಂತೆ ಹಾಕಿಕೊಳ್ಳಬಹುದು. ಇದರ ಗಾತ್ರ ಒಂದು ದೊಡ್ಡ ಹೆಬ್ಬೆರಳಿನಷ್ಟಿರುವುದರಿಂದ “ಕೊರಳ್‌ಗೆ ಬೆರಳ್” (ಕುವೆಂಪು ಕ್ಷಮಿಸುತ್ತಾರೆ) ಎಂದೂ ಕರೆಯಬಹುದು.

 

ಈ ಬ್ಲೂಟೂತ್ ಹೆಡ್‌ಸೆಟ್‌ನಲ್ಲಿ ಸ್ಟೀರಿಯೋ ವ್ಯವಸ್ಥೆ ಇದೆ ಅಂದೆನಲ್ಲ. ಇದು ಉತ್ತಮ ಗುಣಮಟ್ಟದ್ದಾಗಿದೆ. ಇದನ್ನು ಮೊಬೈಲ್ ಫೋನಿಗೆ ಮಾತ್ರವಲ್ಲ, ಗಣಕಕ್ಕೂ ಸಂಪರ್ಕಿಸಿ ಸಂಗೀತ ಆಲಿಸಬಹುದು. A2DP ಮತ್ತು AVRCP ಇವೆ. ಇದರ ಗುಂಡಿ ಒತ್ತಿಯೇ ಮುಂದಿನ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಟಿರಿಯೋ ಮತ್ತು ಧ್ವನಿ ಗುಣಮಟ್ಟ ಚೆನ್ನಾಗಿಯೇ ಇದೆ. ಆದರೂ ನೀವು ಇದನ್ನು ಉತ್ತಮ ಗುಣಮಟ್ಟದ ಫೋನ್ ಅಥವಾ ಲ್ಯಾಪ್‌ಟಾಪ್ ಜೊತೆ ಅಥವಾ ಗಣಕದ ಜೊತೆ ಬಳಸುತ್ತಿದ್ದಲ್ಲಿ ಇಯರ್‌ಫೋನ್‌ನ್ನ ನೇರವಾಗಿ ಸಂಪರ್ಕಿಸಿದರೆ ಇದಕ್ಕಿಂತ ಉತ್ತಮ ಗುಣಮಟ್ಟದ ಧ್ವನಿಯನ್ನು ಆಲಿಸಬಹುದು.

ನೋಡಿ:

 

ಬ್ಲೂಟೂತ್ (Bluetooth) – ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಸಂಪರ್ಕ ಸಾಧಿಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ ಹೆಡ್‌ಫೋನ್‌ಗಳನ್ನು ಮೊಬೈಲ್ ಫೋನಿಗೆ ಜೋಡಿಸಲು ಬಳಸುತ್ತಾರೆ. ಗಣಕದಿಂದ ಸಂಪರ್ಕ ಸಾಧಿಸಲೂ ಬಳಸಬಹುದು. ಇದರ ವ್ಯಾಪ್ತಿ ಮತ್ತು ಮಾಹಿತಿಯ ಸಾರಿಗೆಯ ಶಕ್ತಿ ತುಂಬ ಕಡಿಮೆ. ಒಂದು ಮೊಬೈಲ್ ಫೋನಿನಿಂದ ಇನ್ನೊಂದು ಮೊಬೈಲ್ ಫೋನಿಗೆ ಬ್ಲೂಟೂತ್ ಮೂಲಕ ಒಂದು ಛಾಯಾಚಿತ್ರ ಕಳುಹಿಸಲು ಸುಮಾರು ಎರಡರಿಂದ ಐದಾರು ನಿಮಿಷ ಹಿಡಿಯುವ ಸಾಧ್ಯತೆಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಕಾರಿನಲ್ಲಿ ಜೋಡಿಸುವ ಸಂಗೀತ ಉಪಕರಣಗಳಲ್ಲೂ ಈ ಸೌಲಭ್ಯ ದೊರಕುತ್ತಿದೆ. ಹತ್ತನೆಯ ಶತಮಾನದಲ್ಲಿ ಡೆನ್‌ಮಾರ್ಕ್ ದೇಶದಲ್ಲಿದ್ದ ಒಬ್ಬ ರಾಜನ ಹೆಸರನ್ನು ಈ ತಂತ್ರಜ್ಞಾನಕ್ಕೆ ಇಡಲಾಗಿದೆ. ಇದರಲ್ಲಿ ಹಲವು ಆವೃತ್ತಿಗಳಿವೆ. ಈಗೀಗ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲದೆ ಸ್ಪೀಕರ್‌ಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

 

ಬ್ಲೂಟೂತ್ ಸ್ಟೀರಿಯೋ ಮತ್ತು ರಿಮೋಟ್ ಕಂಟ್ರೋಲ್ – ಬ್ಲೂಟೂತ್ ಹೆಡ್‌ಸೆಟ್‌ಗಳ ಪ್ರೋಟೋಕೋಲ್‌ಗಳಲ್ಲಿ A2DP (Advanced Audio Distribution Profile) ಮತ್ತು AVRCP (Audio/Video Remote Control Profile)ಇವುಗಳು ಕ್ರಮವಾಗಿ ಸ್ಟೀರಿಯೋ ಮತ್ತು ದೂರನಿಯಂತ್ರಣವನ್ನು ಸೂಚಿಸುತ್ತವೆ. A2DP ಇಲ್ಲದಿದ್ದಲ್ಲಿ ಸ್ಟೀರಿಯೋ ಇಲ್ಲ ಎಂದು ತಿಳಿಯತಕ್ಕದ್ದು. ದೂರನಿಯಂತ್ರಣ ಪ್ರೊಟೋಕೋಲ್ ಬಳಸಿ ಸಂಗೀತ ಕೇಳುವಾಗ ಹಿಂದಿನ ಹಾಡು ಅಥವಾ ಮುಂದಿನ ಹಾಡನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಗಣಕ ಅಥವಾ ಮೊಬೈಲ್ ಫೋನಿನಲ್ಲಿ ಮುಂದಿನ ಹಾಡನ್ನು ಹುಡುಕಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿಲ್ಲ. ಬ್ಲೂಟೂತ್‌ನಲ್ಲಿರುವ ಮುಂದಿನ ಹಾಡಿನ ಬಟನ್ ಅನ್ನು ಒತ್ತಿದರೆ ಸಾಕು.

 

ಗ್ಯಾಜೆಟ್ ಸಲಹೆ

 

ನನಗೆ ಸಾಮಾನ್ಯವಾಗಿ ಬರುವ ಪ್ರಶ್ನೆಗಳ ಸ್ವರೂಪ – “ನನಗೆ ಇಂತಿಷ್ಟು ಬಜೆಟ್‌ನಲ್ಲಿ ಇಂತಿಂತಹ ಗುಣವೈಶಿಷ್ಟ್ಯಗಳಿರುವ ಫೋನ್ ಬೇಕು. ಯಾವುದು ಕೊಂಡುಕೊಳ್ಳಲಿ”. ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಸಾಧ್ಯ. ಇಂತಹವರಿಗೆ ಸಹಾಯ ಮಾಡಲೆಂದೇ ಹಲವು ಜಾಲತಾಣಗಳಿವೆ. ಉದಾಹರಣೆ – www.fonearena.com, www.gsmarena.com.

 

ಹಾಗೆಯೇ ಬಹುಮಂದಿ ಓದುಗರು ಕೇಳುವ ಇನ್ನೊಂದು ಪ್ರಶ್ನೆ “ಗ್ಯಾಜೆಟ್ ಲೋಕದ ಯಾವುದೋ ಹಳೆಯ ಸಂಚಿಕೆಯಲ್ಲಿ ನೀವು … ಇಂತಹದನ್ನು ತಿಳಿಸಿದ್ದಿರಿ, ಅದರೆ ಅದು ಈಗ ಮರೆತುಹೋಗಿದೆ, ಇನ್ನೊಮ್ಮೆ ತಿಳಿಸುತ್ತೀರಾ?”. ಗ್ಯಾಜೆಟ್‌ಲೋಕದ ಎಲ್ಲ ಹಳೆಯ ಸಂಚಿಕೆಗಳನ್ನು vishvakannada.com/gadgetloka ಜಾಲತಾಣದಲ್ಲಿ ಓದಬಹುದು.

1 Response to ಗ್ಯಾಜೆಟ್ ಲೋಕ – ೦೧೦ (ಮಾರ್ಚ್ ೦೮, ೨೦೧೨)

  1. Syed Zakir Hussain

    Microsoft Windows XP Professional Ver: 2002, Service Pack 3 Pentium 4 CPU, 2.80 Ghz, 2 GB ram Desktop Computer ಇದರಲ್ಲಿ Shareit App ಸ್ಥಾಪಿಸುವುದು ಹಾಗೂ ಬಳಸುವುದು ಹೇಗೆ? ದಯವಿಟ್ಟು ತಿಳಿಸಿರಿ. ಧನ್ಯವಾದಗಳು.

Leave a Reply