eಳೆ – ೨೧ (ಡಿಸೆಂಬರ್ ೨೨, ೨೦೦೨)
eಳೆ – ೨೧ (ಡಿಸೆಂಬರ್ ೨೨, ೨೦೦೨)
ಅಂತರಜಾಲಾಡಿ
ಅಂತರಜಾಲದಲ್ಲಿ ಕನ್ನಡ ಹಾಡು ಕೇಳಬೇಕೆ? ಅವೂ ಲಭ್ಯ. www.udbhava.com ತಾಣಕ್ಕೆ ಭೇಟಿ ನೀಡಿ. ಇಲ್ಲಿ ಚಿತ್ರಗೀತೆ, ಭಾವಗೀತೆ, ಜನಪದ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ನಾಟಕ, ಇತ್ಯಾದಿಗಳಿವೆ. ಕನ್ನಡ ಹಾಡುಗಳಿರುವ ತಾಣ ಇದೊಂದೇ ಅಲ್ಲ. www.ourkarnataka.com ಮತ್ತು www.viggy.com ತಾಣಗಳಲ್ಲೂ ಕನ್ನಡ ಹಾಡುಗಳಿವೆ.
ಡೌನ್‌ಲೋಡ್
ಸಿ.ಡಿ.ಗಳ ಬೆಲೆ ತುಂಬ ಕಡಿಮೆಯಾಗುತ್ತಿದೆ. ಸಹಜವಾಗಿಯೇ ಅವು ಅತಿ ಜನಪ್ರಿಯವೂ ಆಗುತ್ತಿವೆ. ಜೊತೆಗೇ ತೊಂದರೆಗಳೂ ಕಾಲಿಟ್ಟಿವೆ. ಸಿ.ಡಿ.ಯಲ್ಲಿ ಬರೆದಿಟ್ಟ ಮಾಹಿತಿ ಓದಲು ಕೈಕೊಡುತ್ತಿದೆಯೇ? ಇಂತಹ ಪೋಕರಿ ಸಿ.ಡಿ.ಗಳಿಂದ ಮಾಹಿತಿಯನ್ನು ಹೊರಗೆಳೆಯಲು CDRoller ಎಂಬ ತಂತ್ರಾಂಶ www.cdroller.com ತಾಣದಲ್ಲಿ ೧೪ ದಿನಗಳ ಪ್ರಯೋಗಾರ್ಥ ಲಭ್ಯ. ೧೪ ದಿನಗಳ ನಂತರ ಇದನ್ನು ಉಪಯೋಗಿಸಬೇಕಾದರೆ ಹಣ ತೆರಬೇಕು.
ಶಾರ್ಟ್‌ಕಟ್
ಯಾಹೂ, ಹಾಟ್‌ಮೈಲ್ ಇತ್ಯಾದಿ ಉಚಿತ ವಿ-ಅಂಚೆಯ ತಾಣಗಳಲ್ಲಿ ತಮ್ಮ ಹೆಸರು ನೋಂದಾಯಿಸಿ ಅದನ್ನು ಮರೆತು ಬಿಡುವವರು ನಮ್ಮಲ್ಲಿ ಕೆಲವರಿದ್ದಾರೆ. ಹಾಗೆ ಮರೆತುಬಿಡಬೇಡಿ. ಕನಿಷ್ಠ ತಿಂಗಳಿಗೊಂದು ಬಾರಿಯಾದರೂ ಲಾಗಿನ್ ಮಾಡದಿದ್ದಲ್ಲಿ ನಿಮ್ಮ ವಿ-ಅಂಚೆಯ ಪೆಟ್ಟಿಗೆಯನ್ನು ಅವರು ಮುಚ್ಚಿ ಬಿಡುತ್ತಾರೆ.
e – ಸುದ್ದಿ
ನಕ್ಷತ್ರಕ್ಕೆ ಹೆಸರಿಡಿ -ದುಡ್ಡು ಕಳಕೊಳ್ಳಿ!
ಅಂತರಜಾಲದಲ್ಲಿ ಹೊಸ ರೀತಿಯಲ್ಲಿ ಹಣ ಮಾಡುವ ಧಂದೆ ಆರಂಭವಾಗಿದೆ. ಬ್ರಹ್ಮಾಂಡದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಯಾವುದೋ ಒಂದು ನಕ್ಷತ್ರಕ್ಕೆ ನಿಮಗಿಷ್ಟ ಬಂದವರ ಹೆಸರನ್ನು ಇಡಬಹುದು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ – ೪೦ ಡಾಲರ್ ಹಣ ಕಳೆದುಕೊಳ್ಳುವುದು. ಯಾವುದೋ ಒಂದು ನಕ್ಷತ್ರಕ್ಕೆ ನೀವು ಹೇಳಿದ ಹೆಸರನ್ನು ಇಟ್ಟು ಹಾಗೆಂದು ನಿಮಗೊಂದು ಸರ್ಟಿಫಿಕೇಟ್ ಬರುತ್ತದೆ. ಈ ಪತ್ರವನ್ನು ಕಟ್ಟುಹಾಕಿಸಿ ಗೋಡೆಗೆ ತೂಗುಹಾಕಬಹುದು. ಇದರಿಂದ ಬೇರೆ ಯಾವ ಲಾಭವೂ ಇಲ್ಲ. ಈ ಸರ್ಟಿಫಿಕೇಟಿಗೆ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆ ಯಾ ಒಕ್ಕೂಟದ ಮಾನ್ಯತೆಯಿಲ್ಲ. ಹಣ ಕಳೆದುಕೊಳ್ಳಲು ತಯಾರಿದ್ದೀರಾ? ಹಾಗಿದ್ದರೆ www.buyastar.net/default.asp ತಾಣಕ್ಕೆ ಕ್ರೆಡಿಟ್ ಕಾರ್ಡ್ ಕೈಯಲ್ಲಿಟ್ಟುಕೊಂಡು ಭೇಟಿ ನೀಡಿ.
e-ಪದ
ಅಪ್ಲಿಕೇಶನ್ ಸಾಫ್ಟ್‌ವೇರ್ (application software): ಅನ್ವಯ ತಂತ್ರಾಂಶ. ನಿರ್ದಿಷ್ಟ ಆವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಿದ ತಂತ್ರಾಂಶ. ಉದಾ: ವೇತನ ನಿರ್ವಹಣೆ, ಬಸ್, ರೈಲುಗಳಲ್ಲಿ ಸ್ಥಳ ಕಾಯ್ದಿರಿಸುವಿಕೆ ಇತ್ಯಾದಿ.
ಕಂಪ್ಯೂತರ್ಲೆ
ಕೆಲವು ಖ್ಯಾತನಾಮರ ಪ್ರಸಿದ್ಧ ಮಾತುಗಳು:
“೬೪೦ ಕಿಲೋಬೈಟ್ ಮೆಮೊರಿ ಯಾರಿಗಾದರೂ ಬೇಕಷ್ಟಾಯಿತು” -ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ ಕಂಪೆನಿಯ ಮುಖ್ಯಸ್ಥ, ೧೯೮೧.
“ಭವಿಷ್ಯದ ಗಣಕಗಳು ೧.೫ ಟನ್‌ಗಿಂತ ಹೆಚ್ಚು ತೂಗಲಾರವು” -ಪಾಪ್ಯುಲರ್ ಮೆಕ್ಯಾನಿಕ್ ಪತ್ರಿಕೆ, ೧೯೪೯.
“ಬಹುಷಃ ಜಗತ್ತಿನಲ್ಲಿ ೫ ಗಣಕಗಳಿಗೆ ಮಾರುಕಟ್ಟೆಯಿದೆ” -ಥಾಮಸ್ ವಾಟ್ಸನ್, ಐ.ಬಿ.ಎಂ. ಕಂಪೆನಿಯ ಮುಖ್ಯಸ್ಥ, ೧೯೪೩.
“ಯಾರೂ ತಮ್ಮ ಸ್ವಂತಕ್ಕೆಂದು ಗಣಕವನ್ನು ಇಟ್ಟುಕೊಳ್ಳಲಾರರು” -ಕೆನ್ ಓಲ್ಸನ್, ಡಿಜಿಟಲ್ ಇಕ್ವಿಪ್‌ಮೆಂಟ್ ಕಂಪೆನಿಯ ಅಧ್ಯಕ್ಷ, ೧೯೭೭.
– ಡಾ. ಯು. ಬಿ. ಪವನಜ