eಳೆ – ೧೭ (ನವಂಬರ ೨೪, ೨೦೦೨)
eಳೆ – ೧೭ (ನವಂಬರ ೨೪, ೨೦೦೨)
ಅಂತರಜಾಲಾಡಿ
ಅಂತರಜಾಲದಿಂದ ಮೊಬೈಲ್ ಫೋನ್‌ಗಳಿಗೆ ಎಸ್.ಎಂ.ಎಸ್. ಸಂದೇಶ ಕಳುಹಿಸುವ ಹಲವು ತಾಣಗಳಿವೆ. ಹಿಂದೊಮ್ಮೆ ಅಂತಹ ತಾಣವೊಂದರ ವಿಳಾಸವನ್ನು ಇದೇ ಅಂಕಣದಲ್ಲಿ ಕೊಡಲಾಗಿತ್ತು. ಆ ತಾಣದಲ್ಲಿ ಸ್ವಲ್ಪ ತೊಂದರೆಯಿದೆ. ಅದೇನೆಂದರೆ ದಿನಕ್ಕೆ ೧೦೦೦ ಸಂದೇಶಗಳನ್ನು ಮಾತ್ರ ಅಲ್ಲಿಂದ ಕಳುಹಿಸಲು ಸಾಧ್ಯ. ಇಂತಹ ಮಿತಿ ಇಲ್ಲದ ಇನ್ನೊಂದು ತಾಣದ ವಿಳಾಸ: www.sms.ac. ಇಲ್ಲಿಂದ ಪ್ರಪಂಚದ ಬಹುಪಾಲು ದೇಶಗಳ ಮೊಬೈಲ್ ಫೋನ್‌ಗಳಿಗೆ ಸಂದೇಶ ಕಳುಹಿಸಲು ಸಾಧ್ಯ.
ಡೌನ್‌ಲೋಡ್
ಗಣಕದಲ್ಲೊಂದು ಪಿಯಾನೊ: ನೀವು ಸಂಗೀತ ಪ್ರೇಮಿ ಮಾತ್ರವಲ್ಲದೆ ಹಾರ್ಮೋನಿಯಮ್ ಅಥವಾ ಕೀಬೋರ್ಡ್ ಬಾರಿಸಲು ಕಲಿತವರಾದರೆ ನಿಮಗೊಂದು ಉಚಿತ ಮಿಥ್ಯಾ ಪಿಯಾನೊ ಲಭ್ಯವಿದೆ. ಅದರ ಹೆಸರು Virtual Piano. ಅದರ ತಾಣ ಸೂಚಿ: http://www.analogx.com/contents/download/audio/vpiano.htm.
ಶಾರ್ಟ್‌ಕಟ್
ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶವನ್ನು ಬಳಸಿ ದಸ್ತಾವೇಜು ತಯಾರಿಸಿ ಇನ್ನೊಬ್ಬರಿಗೆ ಕಳುಹಿಸುತ್ತೀರಿ ತಾನೆ? ನಿಮಗೆ ಈ ರೀತಿ ಬಂದ ಕಡತದಲ್ಲಿ ನಿಮ್ಮ ಅನಿಸಕೆ ಟಿಪ್ಪಣಿಗಳನ್ನು ಸೇರಿಸಲು ವರ್ಡ್‌ನಲ್ಲಿ ಒಂದು ಸೌಕರ್ಯವಿದೆ. ಯಾವುದಾದರೊಂದು ಪದ ಯಾ ಪದಪುಂಜವನ್ನು ಸಿಲೆಕ್ಟ್ ಮಾಡಿ. Insert ಮೆನುನಲ್ಲಿ Comment ಅನ್ನು ಆಯ್ಕೆ ಮಾಡಿ. ಈಗ ಬಂದ ಕಿಟಿಕಿಯಲ್ಲಿ ನಿಮ್ಮ ಟೀಕೆ ಟಿಪ್ಪಣಿ ಬರೆಯಿರಿ. ಬಹುಷಃ ಪಿ. ಲಂಕೇಶ್ ಬದುಕಿದ್ದಿದ್ದರೆ ಈ ಸೌಕರ್ಯವನ್ನು ನೋಡಿ ಖಂಡಿತಾ ಸಂತೋಷ ಪಡುತ್ತಿದ್ದರು!
e – ಸುದ್ದಿ
ಲಾಪ್‌ಟಾಪ್‌ಗಳಿಗೆ ಶಕ್ತಿ ಒದಗಿಸುವುದು ಒಂದು ಸಮಸ್ಯೆ. ಅವುಗಳಲ್ಲಿ ಬಳಸುವ ಬ್ಯಾಟರಿಗಳು ಒಮ್ಮೆ ಚಾರ್ಜ್ ಮಾಡಿದ ನಂತರ ಎರಡರಿಂದ ನಾಲ್ಕು ಘಂಟೆಗಳ ಕಾಲ ಮಾತ್ರ ಬಾಳುವುದು. ಬಹುಕಾಲ ಬಾಳುವ ಬ್ಯಾಟರಿಗಳಿಗಾಗಿ ಸಂಶೋಧನೆ ನಡೆದಿದೆ. ಜಲಜನಕವನ್ನು ಉಪಯೋಗಿಸಿ ಫ್ಯೂಯೆಲ್ ಸೆಲ್ ವಿಧಾನದಿಂದ ಕೆಲಸ ಮಾಡುವ ಬ್ಯಾಟರಿಗಳನ್ನು ಕೆನಡಾ ದೇಶದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಮೇರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಅಮೃತ್ ಲಾಲ್ ಅವರ ತಂಡ ಪರಮಾಣು ತಂತ್ರeನವನ್ನು ಉಪಯೋಗಿಸಿ ಸೂಕ್ಷ್ಮ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸುತ್ತಿದಾರೆ. ಪರಮಾಣು ಶಕ್ತಿ ವಿರೋಧಿಗಳು ಇದರ ವಿರುದ್ಧ ಈಗಾಗಲೇ ಗುಲ್ಲೆಬ್ಬಿಸಿದ್ದಾರೆ.
e-ಪದ
ಎಂ.ಪಿ.3 (MP3 = MPEG-1 Audio Layer-3): ಗಣಕಗಳಲ್ಲಿ ಸಂಗೀತವನ್ನು ಶೇಖರಿಸಿಡುವಾಗ ಮೂಲ ಗುಣಮಟ್ಟಕ್ಕೆ ಅತೀವ ಭಂಗ ಬಾರದ ರೀತಿಯಲ್ಲಿ ಸಂಕುಚಿತಗೊಳಿಸಿ ಇಡುವ ಒಂದು ವಿಧಾನ. ಇದರಿಂದ ಸಂಗೀತದ ಫೈಲ್‌ಗಳ ಗಾತ್ರ ಸುಮಾರು ಹನ್ನೆರಡು ಪಟ್ಟು ಕಡಿಮೆಯಾಗುತ್ತದೆ. ಗುಣಮಟ್ಟದಲ್ಲಿ ವಿಶೇಷ ರಾಜಿ ಇಲ್ಲ. MPEG ಅನ್ನುವುದು Motion Picture Experts Group ಎನ್ನುವುದರ ಸಂಕ್ಷಿಪ್ತ ರೂಪ. ಎಂ.ಪಿ.3 ಫೈಲ್‌ಗಳನ್ನು ನುಡಿಸಲು ಹಲವು ತಂತ್ರಾಂಶಗಳು ಲಭ್ಯವಿವೆ. ಇವುಗಳಲ್ಲಿ ವಿನ್‌ಆಂಪ್ (www.winamp.com) ಬಹಳ ಜನಪ್ರಿಯ. ಎಂ.ಪಿ.3 ಫೈಲ್‌ಗಳಿಂದಲೇ ತುಂಬಿದ ಸಿ.ಡಿ.ಗಳೂ ಈಗ ಮಾರುಕಟ್ಟೆಯಲ್ಲಿ ಲಭ್ಯ. ಇವುಗಳನ್ನು ನುಡಿಸಲೆಂದೇ ತಯಾರಾದ ಪ್ಲೇಯರ್‌ಗಳೂ ಲಭ್ಯ.
ಕಂಪ್ಯೂತರ್ಲೆ
ಇತ್ತೀಚೆಗಷ್ಟೆ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಬೆಂಗಳೂರಿಗೆ ಭೇಟಿ ನೀಡಿದ್ದು ಎಲ್ಲರಿಗೂ ಗೊತ್ತು ತಾನೆ? ಅವರು ಬೆಂಗಳೂರಿನಲ್ಲಿ ಒಂದು ದಿನವಿದ್ದರು. ಅವರ ಆದಾಯ ಪ್ರತಿ ಸೆಕೆಂಡಿಗೆ ೩೦೦ ಡಾಲರ್. ಒಂದು ದಿನದಲ್ಲಿ ಅವರ ಆದಾಯ ೨,೫೯,೨೦,೦೦೦ ಡಾಲರ್ ಅಂದರೆ ಸುಮಾರು ೧೨೯,೬೦,೦೦,೦೦೦ ರೂಪಾಯಿ. ಒಂದು ಗಣಕ್ಕೆ ಸುಮಾರು ೩೦,೦೦೦ ರೂಪಾಯಿ ಎಂದು ಬೆಲೆ ಹಿಡಿದರೆ ಈ ದುಡ್ಡಿನಲ್ಲಿ ೪೩,೨೦೦ ಗಣಕಗಳನ್ನು ಕೊಳ್ಳಬಹುದು. ಅವರು ಬೆಂಗಳೂರಿಗೆ ಭೇಟಿ ನೀಡದೆ ಇಷ್ಟು ಹಣವನ್ನು ನಮ್ಮ ಸರಕಾರಕ್ಕೆ ಅನುದಾನವಾಗಿ ಕೊಟ್ಟಿದ್ದರೆ ನಮ್ಮ ರಾಜ್ಯ ಎಲ್ಲ ಶಾಲೆಗಳಿಗೂ ಒಂದೊಂದು ಗಣಕವನ್ನು ಉಚಿತವಾಗಿ ನೀಡಬಹುದಿತ್ತು!
– ಡಾ. ಯು. ಬಿ. ಪವನಜ