eಳೆ – ೧೫ (ನವಂಬರ ೧೦, ೨೦೦೨)
eಳೆ – ೧೫ (ನವಂಬರ ೧೦, ೨೦೦೨)
ಅಂತರಜಾಲಾಡಿ
ಮನೆಯಲ್ಲಿ ಅಡುಗೆ ಅನಿಲ ಮುಗಿದಿದೆಯೇ? ಅಂತರಜಾಲದ ಮೂಲಕ ಗ್ಯಾಸ್ ಬುಕಿಂಗ್ ಮಾಡಿದರೆ ಹೇಗೆ? ಹಿಂದುಸ್ತಾನ್ ಪೆಟ್ರೋಲಿಯಮ್‌ನ ಅನಿಲ ಉಪಯೋಗಿಸುವವರಾದರೆ www.hindustanpetroleum.com/lpgsbu/Gasbook/login.asp ತಾಣಕ್ಕೆ ಭೇಟಿ ನೀಡಬಹದು. ಅಡುಗೆ ಅನಿಲಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳು ಇಲ್ಲಿ ಲಭ್ಯ. ಭಾರತ್ ಪೆಟ್ರೋಲಿಯಮ್‌ನ ಅನಿಲ ಬುಕಿಂಗ್ ತಾಣ: www.ebharatgas.com. ಇಂಡಿಯನ್ ಆಯಿಲ್‌ನವರು ಇನ್ನೂ ಅಂತರಜಾಲದ ಮೂಲಕ ಗ್ಯಾಸ್ ಬುಕಿಂಗ್ ಆರಂಭಿಸಿಲ್ಲ.
ಡೌನ್‌ಲೋಡ್
ಪೋಪ್ ಇ-ಮೈಲ್ (POP = Post Office Protocol) ಉಪಯೋಗಿಸುವಾಗ ನಿಮಗೆ ಬಂದ ವಿ-ಪತ್ರವನ್ನು ನಿಮ್ಮ ಗಣಕಕ್ಕೆ ಇಳಿಸಿಕೊಂಡ ನಂತರ ಮಾತ್ರ ಓದಲು ಸಾಧ್ಯ. ಅರ್ಧದಷ್ಟು ಪತ್ರಗಳು ಅನಾವಶ್ಯಕವಾಗಿದ್ದರೂ, ಕೆಲವೊಮ್ಮೆ ಅವುಗಳು ತುಂಬ ದೊಡ್ಡದಿದ್ದರೂ, ಅವುಗಳನ್ನು ಡೌನ್‌ಲೋಡ್ ಮಾಡಲೇ ಬೇಕು. ದುಬಾರಿ ಡಯಲ್‌ಅಪ್ ಸಂಪರ್ಕವಿದ್ದವರಿಗೆ ಹೊಟ್ಟೆ ಉರಿಯುವುದು ಸಹಜ. ಇದಕ್ಕೊಂದು ಪರಿಹಾರ ಇಲ್ಲಿದೆ. www.pc-tools.net ನಲ್ಲಿ ಸಿಗುವ ಉಚಿತ JBMail ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಿ. ಇದು ವಿ-ಪತ್ರಗಳ ತಲೆಬರಹ, ಯಾರಿಂದ ಬಂದಿದೆ, ಗಾತ್ರ, ಇತ್ಯಾದಿ ಮಾಹಿತಿಗಳನ್ನು ಮಾತ್ರ ಮೊದಲು ಕೊಡುತ್ತದೆ. ಅಗತ್ಯವಿಲ್ಲದವುಗಳನ್ನು ಅಲ್ಲಿಯೇ ಅಳಿಸಿಹಾಕಿ. ನಂತರ ನಿಮ್ಮ ಮಾಮೂಲು ವಿ-ಅಂಚೆಯ ಗ್ರಾಹಕ ತಂತ್ರಾಂಶಕ್ಕೆ (Eudora, Pegasus Mail, Outlook, ಇತ್ಯಾದಿ) ಉಳಿದವುಗಳನ್ನು ಪ್ರತಿಮಾಡಿಕೊಳ್ಳಿ.
ಶಾರ್ಟ್‌ಕಟ್
ಗಣಕದಲ್ಲಿ ಎಡೆಬಿಡದೆ ಕೆಲಸ ಮಾಡಿದರೆ ಕಣ್ಣುರಿ ಬರುತ್ತಿದೆಯೇ? ಒಂದು ಸಣ್ಣ ತಟ್ಟೆಯಲ್ಲಿ ಸ್ವಲ್ಪ ನೀರನ್ನು ಗಣಕದ ಪಕ್ಕದಲ್ಲಿ ಇಟ್ಟುಕೊಂಡು ಆಗಾಗ ಕಣ್ಣಿಗೆ ನೀರಿನ ಪಸೆ ಮುಟ್ಟಿಸುತ್ತಿರಿ. ಈ ರೀತಿ ಕಣ್ಣುರಿ ಬುರುವುದಕ್ಕೆ Computer Vision Syndrome ಎಂದು ಹೆಸರಿದೆ. ನಮ್ಮ ಕಣ್ಣಗುಡ್ಡೆಯಲ್ಲಿ ನೀರ ಪಸೆ ಯಾವತ್ತೂ ಇರಬೇಕು. ನಮ್ಮ ಕಣ್ಣ ರೆಪ್ಪೆ ಪ್ರತಿ ನಿಮಿಷಕ್ಕೆ ಸರಾಸರಿ ೧೭ ಬಾರಿ ಮುಚ್ಚಿ ತೆರೆದು ಮಾಡುವ ಮೂಲಕ ನೀರಿನ ಪಸೆ ಕಣ್ಣಗುಡ್ಡೆಯಲ್ಲಿ ಆರದಂತೆ ನೋಡಿಕೊಳ್ಳುತ್ತದೆ. ಗಣಕದಲ್ಲಿ ಕೆಲಸ ಮಾಡುವವರು, ಅದರಲ್ಲೂ ಮುಖ್ಯವಾಗಿ ಗ್ರಾಫಿಕ್ಸ್ ಮಾಡುವವರು ಕಣ್ಣ ರೆಪ್ಪೆ ಮುಚ್ಚದೆ ಪರದೆ ನೋಡುತ್ತಿರುತ್ತಾರೆ. ಇದರಿಂದ ಕಣ್ಣು ಒಣಗಿ ಕಣ್ಣುರಿ ಬರುತ್ತದೆ. ಆಗಾಗ ಪ್ರಯತ್ನಪೂರ್ವಕವಾಗಿ ಕಣ್ಣು ಮುಚ್ಚಿ ತೆರೆದು ಮಾಡಿದರೂ ಆಗಬಹುದು.
e-ಸ್ವಾರಸ್ಯ
೧೯೦೦ ರಲ್ಲಿ ಹರ್ಮನ್ ಹೋಲೆರಿತ್ ಎಂಬವರು ಅಮೇರಿಕದ ಜನಗಣತಿಯಲ್ಲಿ ಪ್ರಪ್ರಥಮ ಬಾರಿಗೆ ತೂತು ಮಾಡಿದ ಕಾರ್ಡ್‌ಗಳನ್ನು ಉಪಯೋಗಿಸಿದರು. ಈ ಕಾರ್ಡ್‌ಗಳನ್ನು ಯಂತ್ರದ ಮೂಲಕ ಓದಲಾಯಿತು. ಇದರಿಂದ ಜನಗಣತಿ ಬಹಳ ಬೇಗ ಆಯಿತು. ೧೯೧೧ ರಲ್ಲಿ ಹೋಲೆರಿತ್ ಅವರು ಟೇಬುಲೇಟಿಂಗ್ ಕಂಪೆನಿಯನ್ನು ಸ್ಥಾಪಿಸಿದರು. ಇದು ಕ್ಯಾಲ್ಕುಲೇಟರ್, ತೂಕ ನೋಡುವ ಯಂತ್ರ ಮತ್ತು ಗಡಿಯಾರಗಳನ್ನು ತಯಾರಿಸುತ್ತಿತ್ತು. ೧೯೨೪ ರಲ್ಲಿ ಇದು ಜಗತ್ಪ್ರಸಿದ್ಧ ಐ.ಬಿ.ಎಂ. ಕಂಪೆನಿಯಾಯಿತು.
e-ಪದ
ಡಿ.ವಿ.ಡಿ. (DVD – Digital Versatile Disk): ಸಾಂದ್ರ ತಟ್ಟೆ. ಹಾಡು, ಸಿನಿಮಾ ಮಾತ್ರವಲ್ಲದೆ ಗಣಕಕ್ಕೆ ಊಡಿಸಬಹುದಾದ ಮಾಹಿತಿಯನ್ನು ಶೇಖರಿಸಿಡಬಹುದಾದ ಪರಿಕರ. ಇದು ಕೂಡ ಅಡಕ ತಟ್ಟೆಗಳಂತೆ ಡಿಜಿಟಲ್ ವಿಧಾನದಲ್ಲಿ ಅಂದರೆ ೦ ಮತ್ತು ೧ ಅಂಕೆಗಳನ್ನು ಉಪಯೋಗಿಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಇಲ್ಲೂ ಕೂಡ ಅಡಕ ತಟ್ಟೆಗಳಂತೆ ಹಳ್ಳ ದಿಣ್ಣೆಗಳಿವೆ. ಸಾಂದ್ರ ತಟ್ಟೆಗಳಲ್ಲಿಯ ಹಳ್ಳದ ಗಾತ್ರ ಅಡಕ ತಟ್ಟೆಯ ಹಳ್ಳದ ಗಾತ್ರಕ್ಕಿಂತ ತುಂಬ ಚಿಕ್ಕದು. ಅಷ್ಟು ಮಾತ್ರವಲ್ಲ. ಸಾಂದ್ರ ತಟ್ಟೆಯಲ್ಲಿನ ಮಾಹಿತಿಯ ಟ್ರಾಕ್‌ನ ಅಗಲವೂ ಕಡಿಮೆ. ಸಾಂದ್ರ ತಟ್ಟೆಗಳಲ್ಲಿ ಒಂದಕ್ಕಿಂತ ಹೆಚ್ಚು ಪದರಗಳೂ, ಎರಡು ಬದಿಗಳಲ್ಲಿ ಮಾಹಿತಿಯನ್ನು ಶೇಖರಿಸುವ ಮಾದರಿಗಳೂ ಇವೆ. ಅಡಕ ತಟ್ಟೆಯ ಗರಿಷ್ಠ ಮಾಹಿತಿ ಸಂಗ್ರಹಣೆಯ ಶಕ್ತಿ ೭೮೩ ಮೆಗಾಬೈಟ್. ಸಾಂದ್ರ ತಟ್ಟೆಯ ಮಾಹಿತಿ ಸಂಗ್ರಹಣೆಯ ಶಕ್ತಿ ೪.೭ ಗಿಗಾಬೈಟ್‌ನಿಂದ ಹಿಡಿದು ೧೭ ಗಿಗಾಬೈಟ್ ತನಕ ಇದೆ. ಅಂದರೆ ಸುಮಾರು ೮ ಘಂಟೆಗಳ ಕಾಲದ ಚಲನಚಿತ್ರವನ್ನು ಒಂದು ಸಾಂದ್ರ ತಟ್ಟೆಯಲ್ಲಿ ಶೇಖರಿಸಿಡಬಹುದು (೧ ಗಿಗಾಬೈಟ್ = ೧೦೨೪ ಮೆಗಾಬೈಟ್).
ಕಂಪ್ಯೂತರ್ಲೆ
ಇನ್ನಷ್ಟು ತರಲೆ ಅನುವಾದಗಳು:
dot com = ಚುಕ್ಕಿ ಕಾಮ
dot net = ಚುಕ್ಕಿ ಬಲೆ
Bluetooth = ನೀಲಿ ಹಲ್ಲು
web service = ಜೇಡ ಸೇವೆ
Real Audio = ನಿಜ ಧ್ವನಿ
Microsoft Powerpoint = ಸೂಕ್ಷ್ಮಮೃದು ಶಕ್ತಿಬಿಂದು
Microsoft Outlook = ಸೂಕ್ಷ್ಮಮೃದು ಹೊರಗೆ ನೋಡು
Microsoft Frontpage = ಸೂಕ್ಷ್ಮಮೃದು ಮುಖಪುಟ
– ಡಾ. ಯು. ಬಿ. ಪವನಜ