'ಇನ್ಫೊಸಿಸ್' ಸಂಸ್ಥೆಯ ರುವಾರಿ, ನಾರಾಯಣ ಮೂರ್ತಿಗಳಿಗೆ ನ

Saturday, August 19th, 2006

 

ಕನ್ನಡ ನಾಡಿನ ಹೆಮ್ಮೆಯ ಸಂಸ್ಥೆಯ ಸಂಸ್ಥಾಪಕ ಶ್ರಿ ಎನ್.ಆರ್. ನಾರಾಯಣ ಮೂರ್ತಿಯವರು ನಾಳೆ ತಮ್ಮ ೬೦ ನೆಯ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅವರ ೫೯,೦೦೦ ಹಿಂಬಾಲಕರು ಅವರ ಶ್ರೇಯಸ್ಸಿಗೆ ನಾಳೆ ಪ್ರಪಂಚದಾದ್ಯಂತ ಶುಭಾಶಯಗಳನ್ನು ಕೋರಿ ತಮ್ಮ ನೆಚ್ಚಿನ ನಾಯಕನನ್ನು  ಹರಸುತ್ತಾರೆ !  ಆ ದಿನವೆ ಅವರ ಜೊತೆಗೆ ೨೫ ವರ್ಷಕ್ಕು ಮೇಲ್ಪಟ್ತು ದುಡಿದ ಸಹೋದ್ಯೊಗಿ, ನಂದನ್ ನಿಲೆಕೆಣಿಯವರು ಮುಂದೆ ಇನ್ಫೊಸಿಸ್  ನ ಆಡಳಿತದ ಕಾರ್ಯಭಾರವನ್ನು ವಹಿಸಿಕೊಂಡು ಮುಂದೆ ನಡೆಸಿಕೊಂಡು ಹೋಗುತ್ತಾರೆ. ನಾರಾಯಣ ಮೂರ್ತಿಯವರು ಕಂಪೆನಿಯ ಕಾರ್ಯ ಚಟುವಟಿಕೆಯನ್ನು ಮೇಲಿನ ಸ್ಥರದಲ್ಲಿ ಗಮನಿಸುತ್ತಿದ್ದು ತಮ್ಮ ಅಮೂಲ್ಯ ಸಲಹೆಗಳನ್ನು ಸಮಯ ಸಮಯದಲ್ಲಿ ಕೊಟ್ಟು ಸಹಕರಿಸುತ್ತಾರೆ ! ಇವರೆಲ್ಲರಿಗೂ ಪ್ರೇರಣೆಯನ್ನು ನೀಡಿ ಸಹಕರಿಸಿ, ಸಂಸ್ಥೆ ಯನ್ನು ಬೆಳೆಸಲು ಸಹಾಯಮಾಡಿದ ಅತ್ಯಂತ ಸಮರ್ಥ ಕಂಪ್ಯೂಟರ್ ಇಂಜಿನಿಯರ್ ಆದಾಗ್ಯೂ ತೆರೆಯಮರೆಯಲ್ಲಿಯೇ ಇದ್ದು ತಮ್ಮ ಮಹಾನ್ ಯೊಗದಾನಮಾಡಿದ ಸುಧಾ ಮೂರ್ತಿಯವರಿಗೆ ಯಶಸ್ಸಿನ ಬಹುಪಾಲು ಹೊಗಬೇಕು. ‘ಇನ್ಫೊಸಿಸ್’ ನಾರಾಯಣ ಮೂರ್ತಿ ಹಾಗು ಸುಧಾಮೂರ್ತಿಯವರ ನೆಚ್ಚಿನ ಕೂಸಾಗಿದ್ದು ,ಈಗ ಪ್ರೌಢತೆಯನ್ನು ಪಡೆದಿದೆ. ಪ್ರಪಂಚದ ಪ್ರತಿಷ್ಟಿತ ಸಾಫ್ಟ್ ವೇರ ಕಂಪೆನಿಗಳಲ್ಲಿ ಒಂದಾಗಿ ಬೆಳೆದಿದೆ. 

ಲ್ಯಾಪ್‌ಟಾಪ್‌ಗೆ ಒದ್ದು ಕೆಲಸ ಮಾಡಿಸಿಕೊಳ್ಳಿ

Monday, July 31st, 2006

ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶ (ಸಾಫ್ಟ್‌ವೇರ್) ಗಳ ವ್ಯತ್ಯಾಸವನ್ನು ವಿವರಿಸುವಾಗ ನಾನು ಸ್ವಲ್ಪ ಹಾಸ್ಯಮಯವಾಗಿ ಈ ರೀತಿ ಹೇಳುತ್ತಿದ್ದೆ -“ತಂತ್ರಾಂಶವೆಂದರೆ ಕಣ್ಣಿಗೆ ಕಾಣಿಸದ್ದು. ಯಂತ್ರಾಂಶವೆಂದರೆ ಕಣ್ಣಿಗೆ ಕಾಣಿಸುವಂತದ್ದು. ನಿಮಗೆ ನಿಮ್ಮ ಗಣಕದ ಮೇಲೆ ಕೋಪ ಬಂದರೆ, ಯಂತ್ರಾಂಶವನ್ನು ಅಂದರೆ ಕಣ್ಣಿಗೆ ಕಾಣಿಸುವ ಗಣಕದ ಭಾಗಗಳನ್ನು, ಸಿಟ್ಟಿನಿಂದ ಒದೆಯಬಹುದು”. ಈಗ ಬಂದ ಸುದ್ದಿಯಂತೆ ಇನ್ನು ಮುಂದೆ ನೀವು ಲ್ಯಾಪ್‌ಟಾಪ್‌ಗಳನ್ನು ಒದ್ದು ಕೆಲಸ ಮಾಡಿಸಿಕೊಳ್ಳಬಹುದು. ಐಬಿಎಂನವರು ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಅದರ ಪ್ರಕಾರ ಲ್ಯಾಪ್‌ಟಾಪ್‌ಗಳನ್ನು ಕುಟ್ಟುವ ಮೂಲಕ ಅದಕ್ಕೆ ಆದೇಶ ನೀಡಬಹುದು. ಧ್ವನಿ ಮೂಲಕ ಆದೇಶ ನೀಡುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಆದರೆ ಕುಟ್ಟುವ ಮೂಲಕ ಆದೇಶ ನೀಡುವುದು ಹೊಸತು. ಹಾಗೆಂದು ಯಾವುದೇ ಲ್ಯಾಪ್‌ಟಾಪ್‌ನ್ನು ಕುಟ್ಟುವ ಮೂಲಕ ಆದೇಶ ನೀಡುವ ಹಾಗಿಲ್ಲ. ಮೂರು ವರ್ಷಗಳ ಈಚೆಗೆ ತಯಾರಾಗಿರುವ ಐಬಿಎಂ (ಈಗ ಲೆನೋವಾ) ಲ್ಯಾಪ್‌ಟಾಪ್‌ಗಳಲ್ಲಿ ಅಲುಗಾಡುವಿಕೆಯನ್ನು ಅರ್ಥಮಾಡಿಕೊಳ್ಳಬಲ್ಲ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರಿಯಾಗಿ ಐಬಿಎಂನವರು ಈಗ ಹೊಸದಾಗಿ ತಯಾರಿಸಿರುವ ತಂತ್ರಾಂಶವನ್ನು ಅಳವಡಿಸಕೊಳ್ಳುವ ಮೂಲಕ “ಕುಟ್ಟುವ” ಆದೇಶ ನೀಡಬಹುದು. ಒಂದು ಸಲ ಕುಟ್ಟಿದರೆ (ಒದ್ದರೆ ಎಂದು ನಾನು ಹೇಳಿದ್ದು ಉತ್ಪ್ರೇಕ್ಷೆಗಾಗಿ ಮಾತ್ರ) ಗಣಕ ಚಾಲೂ, ಎರಡು ಸಲ ಕುಟ್ಟಿದರೆ ಬಂದ್, ಹೀಗೆ ಆದೇಶಗಳನ್ನು ನೀವು ಗ್ರಾಹಕೀಯಗೊಳಿಸಿಕೊಳ್ಳಬಹುದು. ಇನ್ನು ಮುಂದೆ “ಕಂಪ್ಯೂಟರ್‌ಗೆ ಒದೆಯೋಣ ಎನ್ನುವಷ್ಟು ಸಿಟ್ಟು ಬಂತು” ಎಂದು ಹೇಳುವಾಗ ಎಚ್ಚರವಿರಲಿ.

ಗೂಗ್ಲ್‌ನಲ್ಲಿ ಕಂಡಂತೆ ಸಂಡೂರಿನ ಗಣಿಗಾರಿಕೆ

Tuesday, July 25th, 2006

ಸಂಡೂರಿನ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಅಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾನೂನುಬದ್ಧವಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸುತ್ತಿವೆ. ಹಣದ ವ್ಯವಹಾರ, ಲಂಚದ ಸುದ್ದಿ ಕರ್ನಾಟಕದ ವಿಧಾನಸಭೆಯಲ್ಲೂ ಪ್ರತಿಧ್ವನಿಸಿವೆ. ಈ ಸಂದರ್ಭದಲ್ಲಿ ನಾನು ಸುಮ್ಮನೆ ಗೂಗ್ಲ್ ಅರ್ಥ್‌ನಲ್ಲಿ ಸಂಡೂರು ಸುತ್ತಮುತ್ತ ಹೇಗೆ ಕಾಣಿಸುತ್ತಿದೆ ಎಂದು ನೋಡಿದೆ. ಕೆಲವು ಚಿತ್ರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಭೂದೇವಿಯ ಮೇಲಿನ ಅತ್ಯಾಚಾರಕ್ಕೆ ಪ್ರತ್ಯೇಕ ಸಾಕ್ಷಿ ಬೇಕಾಗಿಲ್ಲ ತಾನೆ? ಈ ಚಿತ್ರಗಳು ಸುಮಾರು ಒಂದು ವರ್ಷದಷ್ಟು ಹಳೆಯವಿರಬೇಕು ಎಂದು ನನ್ನ ಅಂದಾಜು. ಗೂಗ್ಲ್ ಅರ್ಥ್‌ನ ಎಲ್ಲ ಚಿತ್ರಗಳು ಸುಮಾರು ಆರು ತಿಂಗಳಿನಿಂದ ಒಂದು ವರ್ಷದಷ್ಟು ಹಳೆಯವಿವೆ. ಅಂತೆಯೇ ಈ ಚಿತ್ರಗಳು ಸ್ವಲ್ಪ ಹಳೆಯವಿರಬೇಕು. ಈ ಚಿತ್ರಗಳಲ್ಲಿ ಬೇಕೆಂದೇ ಸ್ವಲ್ಪ ಕಾಡು ಕೂಡ ಬರುವಂತೆ ನಾನು ವಿನ್ಯಾಸ ಮಾಡಿದ್ದೇನೆ. ಕಾಡು ಇರುವ ಮತ್ತು ಇಲ್ಲದ ಜಾಗಗಳನ್ನು ಹೋಲಿಸಿ ನೋಡಿ. ಕಾಡು ಯಾವ ರೀತಿ ನಾಶವಾಗುತ್ತಿದೆ ಎಂಬುದು ವೇದ್ಯವಾಗುತ್ತದೆ. ಒಂದು ವರ್ಷದ ನಂತರ ಇನ್ನೊಮ್ಮೆ ಇದೇ ಜಾಗದ ಚಿತ್ರಗಳನ್ನು ತೆಗೆದರೆ ಇನ್ನೆಷ್ಟು ಪರಿಸರ ನಾಶವಾಗಿದೆ ಎಂದು ಹೋಲಿಸಿ ನೋಡಬಹುದು.

ಪುತ್ರಿಯರ ದಿನ

Monday, July 3rd, 2006

ಈಗಾಗಲೇ ಆಚರಣೆಯಲ್ಲಿರುವ ಹಲವಾರು ದಿನಾಚರಣೆಗಳಿಗೆ ಮತ್ತೊಂದು ಸೇರ್ಪಡೆ -“ಪುತ್ರಿಯರ ದಿನ”. ಇದನ್ನು ದಿವಂಗತ ಕಲ್ಪನಾ ಚಾವ್ಲರ ನೆನಪಿಗೆ ಆಚರಿಸಲಾಗುತ್ತಿದೆ (ನೋಡಿ: , ). ನನ್ನ ಮಗಳ ಶಾಲೆಯಲ್ಲಿ ನನಗೆ ಒಂದು “ಹೋಂವರ್ಕ್‌” ಕೊಟ್ಟಿದ್ದರು. ಈ ಪುತ್ರಿಯರ ದಿನದ ಅಂಗವಾಗಿ ನಾನು ಮಗಳಿಗೆ ಒಂದು ಪತ್ರ ಬರೆಯಬೇಕಿತ್ತು. ನಾನು ಬರೆದ ಪತ್ರ ಇಲ್ಲಿದೆ:-

ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?

Wednesday, June 21st, 2006

ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಗಳು ಜರುಗಿದವು. ಅದರ ಫಲಿತಾಂಶಗಳನ್ನು ನೋಡಿದಾಗ ಒಂದು ಅಂಶ ನನಗೆ ತುಂಬ ಆಶ್ಚರ್ಯ ಮತ್ತು ದುಃಖವನ್ನುಂಟು ಮಾಡಿದವು. ಅದೆಂದರೆ ಈ ಚುನಾವಣೆಯಲ್ಲಿ ಹಾಕಿದ ಮತಗಳಲ್ಲಿ ಸುಮಾರು ಶೇಕಡ ೧೦ರಷ್ಟು ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟಿದ್ದು. ಈ ಚುನಾವಣೆಗಳಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅನಕ್ಷರಸ್ಥರಂತೂ ಅಲ್ಲವೇ ಅಲ್ಲ. ಅವರೆಲ್ಲರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಹೀಗದ್ದೂ ಮತ ಚಲಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ ಎಂದರೆ ಅಶ್ಚರ್ಯ ಆಗಬೇಡವೇ? ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದರೆ ಆ ವಿದ್ಯಾರ್ಥಿಗಳ ಮಟ್ಟ ಹೇಗಿರಬೇಕು? ನಮ್ಮ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಟ್ಟ ತುಂಬ ಕುಸಿದಿದೆ ಎಂದರೆ ಅದಕ್ಕೆ ಪ್ರತ್ಯೇಕ ಕಾರಣ ಹುಡುಕಬೇಕಾಗಿಲ್ಲ ಅಲ್ಲವೇ?

ವಿಶುವಲ್ ಸ್ಟುಡಿಯೋದಲ್ಲಿ ಕನ್ನಡದ ಅಕಾರಾದಿ ವಿಂಗಡಣೆ

Saturday, June 17th, 2006

ಗಣಕದಲ್ಲಿ ಕನ್ನಡ ಎಂದರೆ ಗಣಕದಲ್ಲಿ ಕನ್ನಡವನ್ನು ಬೆರಳಚ್ಚು ಮಾಡುವುದು ಎಂದೇ ಬಹುಪಾಲು ಮಂದಿ ಇನ್ನೂ ತಿಳಿದುಕೊಂಡಿದ್ದಾರೆ. ಗಣಕದಲ್ಲಿ ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು (application software) ಸುಲಭವಾಗಿ ತಯಾರಿಸಬಹುದು. ಇಂಗ್ಲೀಶ್ ಭಾಷೆಯಲ್ಲಿ ಏನೇನು ಸಾಧ್ಯವೋ ಅವೆಲ್ಲವೂ ಕನ್ನಡದಲ್ಲೂ ಸಾಧ್ಯ. ಮುಖ್ಯವಾಗಿ ದತ್ತ ಸಂಸ್ಕರಣೆ (data processing). ಕನ್ನಡದಲ್ಲಿ ಆನ್ವಯಿಕ ತಂತ್ರಾಂಶ ತಯಾರಿಸಲು ಮುಖ್ಯ ಆವಶ್ಯಕತೆಯೆಂದರೆ ಕನ್ನಡದ ಅಕಾರಾದಿ ವಿಂಗಡಣೆ. ಮೈಕ್ರೋಸಾಫ್ಟ್‌ನವರ ಆಕ್ಸೆಸ್ ಮತ್ತು ಎಸ್‌ಕ್ಯೂಎಲ್ ಸರ್ವರ್‌ಗಳು ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಅವು ಮಾತ್ರವಲ್ಲ. ವಿಶುವಲ್ ಸ್ಟುಡಿಯೋ ಕೂಡ ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಯಾಗಿ ನಿರ್ವಹಿಸುತ್ತವೆ. ಒಂದು ಉದಾಹರಣೆಯನ್ನು ಕೆಳಗೆ ಕೊಟ್ಟಿದ್ದೇನೆ.

ರೇಡಿಯೋ ಸಿಟಿಯಲ್ಲಿ ಕನ್ನಡದ ಚೌಚೌ ಬಾತ್

Thursday, June 15th, 2006

ಬೆಂಗಳೂರಿನ ರೇಡಿಯೋ ಸಿಟಿ (91FM) ಯಲ್ಲಿ ಕನ್ನಡ ಕಾರ್ಯಕ್ರಮಗಳಿಲ್ಲ ಎಂದು ಹಲವಾರು ಕನ್ನಡ ಪ್ರೇಮಿಗಳು ಆಗಾಗ ದೂರು ನೀಡುತ್ತಿದ್ದಾರೆ. ಇತ್ತೀಚೆಗೆ ನಾನು ಒಮ್ಮೆ ಯಾಕೋ ರೇಡಿಯೋ ಸಿಟಿ ಹಾಕಿದಾಗ ಆಶ್ಚರ್ಯವಾಯಿತು. ಕನ್ನಡ ಹಾಡು ಕೇಳಿ ಬರುತ್ತಿತ್ತು. ನಂತರ ಒಂದೆರಡು ದಿನ ಗಮನಿಸಿದಾಗ ಕಂಡು ಬಂದುದೇನೆಂದರೆ ರೇಡಿಯೋ ಸಿಟಿಯಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿವೆ ಎಂದು. ಬೆಳಿಗ್ಗೆ ಏಳು ಘಂಟೆಯ ಮೊದಲು ಭಕ್ತಿ ಗೀತೆ, ಮಧ್ಯಾಹ್ನ ಒಂದರಿಂದ ಮೂರು ಘಂಟೆ ವರೆಗೆ “ಮಲ್ಲಿಗೆ ಸರ್ಕಲ್”, ಶನಿವಾರ ಬೆಳಿಗ್ಗೆ “ಬೆಂಗಳೂರು ಟಾಕೀಸ್”, ಮತ್ತು ಭಾನುವಾರ ಬೆಳಿಗ್ಗೆ ಏಳರಿಂದ ಹತ್ತರ ವರೆಗೆ “ಚೌ ಚೌ ಬಾತ್” – ಇಷ್ಟು ನಾನು ಗಮನಿಸಿರುವ ಕನ್ನಡ ಕಾರ್ಯಕ್ರಮಗಳು. ಮೊನ್ನೆ ಭಾನುವಾರ (ಜೂನ್ ೧೧ರಂದು) ಚೌಚೌ ಬಾತ್ ಕಾರ್ಯಕ್ರಮದಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ್ದೆ. ನಂದಕುಮಾರ್ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟರು -ಇದು ನಾನು ಹೇಳುತ್ತಿರುವುದಲ್ಲ, ಕಾರ್ಯಕ್ರಮ ಕೇಳಿದ ಹಲವು ಜನ ಹೇಳಿದ್ದು ಮತ್ತು ಫೋನು ಹಾಗೂ ಇ-ಮೈಲ್ ಮೂಲಕ ತಿಳಿಸಿದ್ದು.

ನಾನು ಬ್ಲಾಗಿಸುವುದು ನನಗೆಂದು

Wednesday, June 7th, 2006

ಸುಧಾ ಪತ್ರಿಕೆಯಲ್ಲಿ ಬ್ಲಾಗ್‌ ಬಗ್ಗೆ ರಘುನಾಥ ಚ ಹ ಅವರ ಲೇಖನ ಪ್ರಕಟವಾಗಿತ್ತು. ಆ ಲೇಖನದ ಜೊತೆ ನನ್ನದೊಂದು ಕಿರು ಸಂದರ್ಶನ -ಬ್ಲಾಗಿಂಗ್ ಬಗ್ಗೆ – ಪ್ರಕಟವಾಗಿತ್ತು. ಅದನ್ನು ಇಲ್ಲಿ ನೀಡುತ್ತಿದ್ದೇನೆ.

ಕನ್ನಡದಲ್ಲೇ ಪ್ರೋಗ್ರಾಮ್ಮಿಂಗ್ ಮಾಡಿ!

Monday, May 15th, 2006

ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ ಲೋಕದಲ್ಲಿ ಹಲವು ಬಿರುಗಾಳಿಗಳು ಬೀಸಿ, ಏನೇನೆಲ್ಲಾ ಆಗಿ ಹೋದವು. ಈ ತಂತ್ರಾಶವನ್ನು ಇದುತನಕ ಸರಕಾರ ಸ್ವೀಕರಿಸಿ ಶಾಲೆಗಳಿಗೆ ನೀಡಲಿಲ್ಲ. ಈಗ ನಾನು ಅದನ್ನು ಅಂತರಜಾಲದ ಮೂಲಕ ನೀಡಲು ತೀರ್ಮಾನಿಸಿದ್ದೇನೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ, ಬಳಸಿ, ನನಗೆ ನಿಮ್ಮ ಸಲಹೆ ನೀಡಿರಿ. ಹಾಗೆಯೇ ದೇಣಿಗೆಯನ್ನೂ ನೀಡಬಹುದು :-). ಹೆಚ್ಚಿನ ಮಾಹಿತಿಗಳು ಇಲ್ಲಿ ಲಭ್ಯವಿವೆ.

ಅವರೆ ಕಾಳು

Thursday, March 23rd, 2006

ಶೀರ್ಷಿಕೆ ನೋಡಿ ನಾನು ಅವರೆ ಎನ್ನುವ ತರಕಾರಿ (ಅಲ್ಲ ಬೇಳೆ) ಯ ಬಗ್ಗೆ ಬರೆಯುತ್ತಿದ್ದೇನೆ ಎಂದುಕೊಳ್ಳಬೇಡಿ. ಇದು ಬೇರೆಯೇ ವಿಷಯ. ಓದಿ ನೋಡಿ.