ಮೋಟೊರೋಲ ಎಸ್೭೦೫ ಬ್ಲೂಟೂತ್ ಇಯರ್‌ಫೋನ್

– ಡಾ. ಯು. ಬಿ. ಪವನಜ

ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.

ಈಗಾಗಲೆ ತಿಳಿಸಿದಂತೆ ಮೋಟೊರೋಲ ಎಸ್-೭೦೫ ಇಯರ್‌ಫೋನ್ ಸ್ಟೀರಿಯೋ. ಅಂದರೆ ಎರಡು ಕಿವಿಗೂ ಒಂದೊಂದು ಇಯರ್‌ಫೋನ್ ಇದೆಯೆಂದಾಯಿತು. ಇದರ ವೈಶಿಷ್ಟ್ಯವೆಂದರೆ ಇದು ಕಿವಿಯ ಮೇಲೆ ಕುಳಿತುಕೊಳ್ಳುವ ಹೆಡ್‌ಫೋನ್ ಅಲ್ಲ. ಇದು ಒಂದು ದೊಡ್ಡ ಕ್ಲಿಪ್ಪಿನ ರೂಪದಲ್ಲಿದೆ. ಇದನ್ನು ಅಂಗಿಗೆ ಸಿಕ್ಕಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಇಯರ್‌ಫೋನ್ ಜೋಡಿಸಬಹುದಾದ ೩.೫ ಮಿಮಿ ಗಾತ್ರದ ಇಯರ್‌ಫೋನ್ ಕಿಂಡಿ ಇದೆ. ಇದುವೇ ಇದರ ಹೆಚ್ಚುಗಾರಿಕೆ. ಇತರೆ ಬಹಳಷ್ಟು ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಈ ಸೌಲಭ್ಯವಿಲ್ಲ. ಬಹುಶಃ ಇವರ ಇಯರ್‌ಫೋನ್ ಅಷ್ಟು ಚೆನ್ನಾಗಿಲ್ಲ ಎಂದು ಅವರಿಗೇ ತಿಳಿದಿದ್ದರಿಂದ ಗ್ರಾಹಕರು ತಮಗಿಷ್ಟವಾದ ಇಯರ್‌ಫೋನ್ ಬಳಸಲಿ ಎಂದು ಈ ಸೌಲಭ್ಯ ನೀಡಿರಬೇಕು :-).


ಮೋಟೊರೋಲ ಎಸ್-೭೦೫ರ ವೈಶಿಷ್ಟ್ಯ ಕೇವಲ ಇಷ್ಟಕ್ಕೇ ಮುಗಿಯಲಿಲ್ಲ. ಇದರಲ್ಲಿ ಎಫ್‌ಎಂ ರೇಡಿಯೋವೂ ಇದೆ. ನಿಮ್ಮ ಮೊಬೈಲ್ ಫೋನಿನಲ್ಲಿ ಎಫ್‌ಎಂ ರೇಡಿಯೋ ಇಲ್ಲವೆಂದಾದಲ್ಲಿ ಇದು ನಿಜಕ್ಕೂ ಉತ್ತಮ ಆಯ್ಕೆ. ಫೋನಿನಲ್ಲಿ ಮಾತನಾಡುವುದು, ಮೊಬೈಲ್ ಫೋನಿನಲ್ಲಿ ಶೇಖರಿಸಿಟ್ಟ ಹಾಡುಗಳನ್ನು ಆಲಿಸುವುದು ಮತ್ತು ಎಫ್‌ಎಂ ರೇಡಿಯೋ ಆಲಿಸುವುದು -ಇವೆಲ್ಲವನ್ನು ಇದನ್ನು ಬಳಸಿ ಮಾಡಬಹುದು. ಮೊಬೈಲ್ ಫೋನಿನಿಂದ ಹಾಡು ಆಲಿಸುವಾಗ ಹಾಡುಗಳನ್ನು ನಿಲ್ಲಿಸುವುದು, ಹಿಂದಿನ ಅಥವಾ ಮುಂದಿನ ಹಾಡನ್ನು ಕೇಳುವುದು, ಹಾಡಿನ ಧ್ವನಿಮಟ್ಟವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಇವೆಲ್ಲವನ್ನು ಇದರಲ್ಲೇ ಮಾಡಬಹುದು.

ಇದು ಮೋಟೊರೋಲ ಫೋನುಗಳೊಂದಿಗೆ ಬಹಳ ಚೆನ್ನಾಗಿ ಸಂಪರ್ಕ ಸಾಧಿಸಿ ಕೆಲಸ ಮಾಡುತ್ತದೆ. ಇತರೆ ಫೋನುಗಳ ಜೊತೆ ಇವು ಕೆಲಸ ಮಾಡಬಲ್ಲವಾದರೂ ಇದನ್ನು ಬಳಸುವ ಮಂದಿ ಹಲವು ಸಮಸ್ಯೆಗಳನ್ನು ಅಂತರಜಾಲದಲ್ಲಿ ದಾಖಲಿಸಿದ್ದಾರೆ. ನಾನೂ ಕೂಡ ಇವೇ ಸಮಸ್ಯೆಗಳನ್ನು ಗಮನಿಸಿದ್ದೇನೆ. ಇವುಗಳು – ಫೋನು ಮಾಡುತ್ತಿರುವ ವ್ಯಕ್ತಿಯ ಹೆಸರು ನಮ್ಮ ವಿಳಾಸ ಪುಸ್ತಕದಲ್ಲಿದ್ದರೂ ಇದು ಅದನ್ನು ತೋರಿಸುವುದಿಲ್ಲ, ನಾವು ಮಾತನಾಡುವುದು ಕೇಳುವವರಿಗೆ ನಾವೆಲ್ಲೋ ನೀರಿನೊಳಗಿನಿಂದ ಮಾತನಾಡಿದಂತೆ ಕೇಳುವುದು, ಎಫ್‌ಎಂ ರೇಡಿಯೋ ಕೇಂದ್ರಗಳ ಕಂಪನಾಂಕವನ್ನು ಸ್ಮರಣೆಗೆ ಸೇರಿಸುವ ಸೌಲಭ್ಯ ಇಲ್ಲದಿರುವುದು, ಇದು ಅಂಗಿ ತೊಡುವ ಗಂಡಸರಿಗೇ ಮಾತ್ರವೇ ಉಪಯುಕ್ತ -ಇತ್ಯಾದಿ.

ಒಟ್ಟಿನಲ್ಲಿ ಹೇಳುವುದಾರೆ ಎಫ್‌ಎಂ ರೇಡಿಯೋ ಉಳ್ಳಂತಹ ಉತ್ತಮ ಬ್ಲೂಟೂತ್ ಸ್ಟೀರಿಯೋ ಇಯರ್‌ಫೋನ್ ಫೋನ್ ಬೇಕೆನ್ನುವವರಿಗೆ ಇದು ಉತ್ತಮ ಆಯ್ಕೆ. ನಿಮ್ಮಲ್ಲಿ ಬೇರೆ ಉತ್ತಮ ಸ್ಟೀರಿಯೋ ಹೆಡ್‌ಫೋನ್ (ಕ್ರಿಯೇಟಿವ್, ಬೋಸ್, ಇತ್ಯಾದಿ) ಮತ್ತು ಸ್ವಲ್ಪ ಹೆಚ್ಚಿನ ಹಣ (ಸುಮಾರ ೫೫೦೦ ರೂ) ಇದ್ದರೆ ಇದನ್ನು ಖಂಡಿತ ಕೊಳ್ಳಬಹುದು.

Leave a Reply