ಜಂಗಮವಾಣಿಯಲ್ಲಿ ಕನ್ನಡ
ಮೊಬೈಲ್ ಫೋನುಗಳಲ್ಲಿ ಎಸ್‌ಎಂಎಸ್ ಮಾಡುವಾಗ ಎಲ್ಲರೂ ಕಂಗ್ಲಿಶ್ ಬಳಸುವುದು ಸಹಜವಾಗಿಬಿಟ್ಟಿದೆ. ಇದರಿಂದಾಗಿ ಎಫ್‌ಎಂ ರೇಡಿಯೋ ಚಾನೆಲುಗಳಿಗೆ ಕಳುಹಿಸಿದ ಸಂದೇಶಗಳನ್ನು ಓದುವಾಗ ಅಲ್ಲಲ್ಲಿ ತಡವರಿಸುತ್ತಾರೆ. ಕೆಲವೊಮ್ಮೆ ಸಂದೇಶ ಮತ್ತು ಹೆಸರುಗಳನ್ನು ಓದುವಾಗ ತಪ್ಪುಗಳೂ ಸಂಭವಿಸುತ್ತವೆ. ಉದಾಹರಣೆಗೆ ಸಂದೇಶ ಕಳುಹಿಸಿದವರು ತಮ್ಮ ಹೆಸರನ್ನು rama ಎಂದು ಬೆರಳಚ್ಚು ಮಾಡಿದ್ದಾರೆಂದಿಟ್ಟುಕೊಳ್ಳಿ. ಇದು ರಾಮ ಅಥವಾ ರಮಾ ಇರಬಹುದು. ಕನ್ನಡದಲ್ಲೇ ಸಂದೇಶ ಕಳುಹಿಸಿದರೆ ಈ ಗಲಿಬಿಲಿ ಇರುವುದಿಲ್ಲ. ಆದರೆ ಸದ್ಯಕ್ಕೆ ಯಾವ ಮೊಬೈಲ್ ಫೋನುಗಳಲ್ಲೂ ಈ ಸೌಲಭ್ಯವಿಲ್ಲ. ಮೊಬೈಲ್ ತಂತ್ರಾಂಶಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ ಈ ಸಮಸ್ಯೆಗೆ ಪರಿಹಾರ ಇದೆ. ಬೆಂಗಳೂರಿನ ಹಸ್ತ ಸೊಲುಶನ್ಸ್ ಕಂಪೆನಿ ಮೊಬೈಲ್ ಫೋನುಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡವೂ ಈ ಪಟ್ಟಿಯಲ್ಲಿದೆ. ಕನ್ನಡ ಭಾಷೆಯನ್ನು ಅಳವಡಿಸುವುದೆಂದರೆ ಕೇವಲ ಕನ್ನಡದಲ್ಲಿ ಬೆರಳಚ್ಚು ಮಾಡುವುದಲ್ಲ. ಕನ್ನಡದ ತಂತ್ರಾಂಶಗಳು ತಯಾರಾಗಿವೆ. ಭೂಮಿ ತಂತ್ರಾಂಶಕ್ಕೆ ಬೆಳೆಗಳ ವಿವರ ಸೇರಿಸುವುದು, ಅಂಗನವಾಡಿ ಕಾರ್ಯಕರ್ತರು ತಾವು ಸಂಗ್ರಹಿಸಿದ ಮಾಹಿತಿಗಳನ್ನು ಊಡಿಸುವುದು, ಮತ್ತು ಇನ್ನೂ ಒಂದೆರಡು ಕನ್ನಡದ ಆನ್ವಯಿಕ ತಂತ್ರಾಂಶಗಳನ್ನು ಈ ಕಂಪೆನಿ ಅಭಿವೃದ್ಧಿಪಡಿಸಿದೆ. ಜಗತ್ತಿನ ತಂತ್ರಾಂಶ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ ಭಾಷೆಗಳನ್ನು ಮೊಬೈಲ್ ಫೋನುಗಳಲ್ಲಿ ಅಳವಡಿಸುವತ್ತ ಏನೂ ಕೆಲಸ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮವರದೇ ಕಂಪೆನಿ ಹಸ್ತ ಸೊಲುಶನ್ಸ್ ಕನ್ನಡವನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿದೆ. ಸರಕಾರವು ಇವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.
December 10th, 2016 at 2:53 pm
Good massage to people and socity