ಎಚ್‌ಟಿಸಿ ಟಚ್ – ಸ್ಪರ್ಷದಲ್ಲೇ ಎಲ್ಲ

– ಡಾ. ಯು. ಬಿ. ಪವನಜ

ಮೊಬೈಲ್ ಫೋನುಗಳಲ್ಲಿ ಮೇಲ್ದರ್ಜೆಯವುಗಳಲ್ಲಿ ಅಂತರಜಾಲ ಸಂಪರ್ಕ, ವಿ-ಅಂಚೆ ಇತ್ಯಾದಿ ಸೌಕರ್ಯಗಳಿರುತ್ತವೆ. ಇಂತಹ ಫೋನುಗಳಲ್ಲಿ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊಂದಿರುವ ಫೋನುಗಳು ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿವೆ. ಅಂತರಜಾಲದಲ್ಲಿ ಇಂತಹ ಫೋನುಗಳಿಗೆ ಹಲವಾರು ಉಚಿತ ತಂತ್ರಾಂಶಗಳು ಲಭ್ಯವಾಗಿರುವುದು ಮತ್ತು ತಂತ್ರಾಂಶ ಪರಿಣತರಾಗಿದ್ದಲ್ಲಿ ತಾವೇ ಈ ಫೋನುಗಳಿಗೆ ತಂತ್ರಾಂಶ ತಯಾರಿಸುವ ಸವಲತ್ತುಗಳಿರುವುದೂ ಈ ಫೋನುಗಳು ಜನಪ್ರಿಯವಾಗುತ್ತಿರುವುದಕ್ಕೆ ಕಾರಣಗಳು. ಇಂತಹ ಫೋನುಗಳು ಹಲವು ಕಂಪೆನಿಗಳ ಹೆಸರಿನಲ್ಲಿ ಲಭ್ಯವಿವೆ. ಅವುಗಳೆಂದರೆ O2, iMate, HTC ಇತ್ಯಾದಿ. ಈ ಎಲ್ಲ ಹೆಸರುಗಳಲ್ಲಿ ಅವು ಲಭ್ಯವಿದ್ದರೂ ಈ ಎಲ್ಲ ಫೋನುಗಳನ್ನು ತಯಾರಿಸುವ ಕಂಪೆನಿ ಒಂದೇ -ಅದುವೇ ಎಚ್‌ಟಿಸಿ. ಮೊದಲು ಎಚ್‌ಟಿಸಿ ಕಂಪೆನಿ ಇತರರಿಗೆ ಮಾತ್ರ ಈ ಫೋನುಗಳನ್ನು ತಯಾರಿಸುತ್ತಿತ್ತು. ಇತ್ತೀಚೆಗಷ್ಟೆ ಅದು ತನ್ನ ಹೆಸರಿನಲ್ಲೆ ಇವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಅವುಗಳಲ್ಲಿ ನಮ್ಮ ದೇಶದಲ್ಲಿ ಲಭ್ಯವಿರುವ ಮತ್ತು ತುಂಬ ಸುದ್ದಿ ಮಾಡುತ್ತಿರುವ ಫೋನು ಎಚ್‌ಟಿಸಿ ಟಚ್. ಏನಿದೆ ಇದರಲ್ಲಿ?

ಆಪಲ್ ಕಂಪೆನಿಯವರು ತಮ್ಮ ಐಫೋನಿನಲ್ಲಿ ಅಳವಡಿಸಿರುವ ಸ್ಪರ್ಷ ತಂತ್ರಜ್ಞಾನಕ್ಕೆ ಅತಿ ಸಮೀಪವಾಗಿರುವ ತಂತ್ರಜ್ಞಾನವನ್ನು ಎಚ್‌ಟಿಸಿ ಟಚ್‌ನಲ್ಲಿ ಅಳವಡಿಸಿದ್ದಾರೆ. ಫೋನಿನ ಮೇಲ್ಮೈಯನ್ನು ಸವರುವ ಮೂಲಕ ವಿವಿಧ ಆಯ್ಕೆಗಳನ್ನು ಆಯ್ಕೆ ಮಾಡಬಹುದಾಗಿದೆ. ಯಾರಿಗಾದರು ಕರೆ ಮಾಡಬೇಕಾದಲ್ಲಿ, ಎಸ್‌ಎಂಎಸ್ ಮಾಡಬೇಕಾದಲ್ಲಿ, ಸಂಗೀತ ಕೇಳಬೇಕಾದಲ್ಲಿ -ಇತ್ಯಾದಿ ಕೆಲಸಗಳಿಗೆಲ್ಲ ಈ ಫೋನಿನಲ್ಲಿ ಯಾವುದೇ ಗುಂಡಿಗಳಿಲ್ಲ (ಬಟನ್). ಆಪಲ್ ಐಫೋನಿನ ರೀತಿಯಲ್ಲೇ ಇದು ಕೆಲಸ ಮಾಡುತ್ತದೆ. ಆದರೆ ಇವುಗಳ ಸಾಮ್ಯ ಮೊದಲ ಪರದೆಯಲ್ಲೇ ಮುಗಿಯುತ್ತದೆ. ಮುಂದಿನ ಪರದೆಗಳಿಗೆ ಹೋದಾಗ ಫೋನಿನ ಜೊತೆ ನೀಡಿರುವ ಒಂದು ಚಿಕ್ಕ ಪ್ಲಾಸ್ಟಿಕ್ ಕಡ್ಡಿಯನ್ನು ಬಳಸಬೇಕಾಗುತ್ತದೆ. ಟಚ್‌ಸ್ಕ್ರೀನಿನಲ್ಲಿ ಮೂಡಿಬರುವ ಚಿಕ್ಕ ಚಿಕ್ಕ ಅಕ್ಷರಗಳನ್ನು ಕಡ್ಡಿಯಲ್ಲಿ ಒತ್ತಿ ಇಮೈಲ್, ಎಸ್‌ಎಂಎಸ್ ಮಾಡಬೇಕು. ಇದೇನು ಅತಿ ವೇಗವಾಗಿ ಮಾಡಬಹುದಾದ ಕೆಲಸವಲ್ಲ. ಒಂದೇ ಕೈ ಬಳಸಿ ಖಂಡಿತವಾಗಿಯೂ ಅಸಾಧ್ಯ.

ಎಟ್‌ಟಿಸಿ ಟಚ್ ಕೇವಲ ಫೋನಲ್ಲ. ಅದೊಂದು ಕಿಸೆಗಣಕವೇ ಸರಿ. ಒಂದು ಪುಟ್ಟ ಗಣಕ ಮಾಡಬಹುದಾದ ಎಲ್ಲ ಕೆಲಸಗಳು ಇದರಲ್ಲಿ ಸಾಧ್ಯ. ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮತ್ತು ಔಟ್‌ಲುಕ್ ತಂತ್ರಾಂಶಗಳು ಇದರಲ್ಲಿ ಅಡಕವಾಗಿವೆ. ಎಲ್ಲೇ ಇರಲಿ ಕಂಪೆನಿ ಇಮೈಲ್ ಓದಬಹುದು. ಅಂತರಜಾಲ ತಾಣ ವೀಕ್ಷಣೆ ನಡೆಸಬಹುದು. ಅಷ್ಟೇಕೆ? ಪಿಡಿಎಫ್ ಕಡತಗಳನ್ನೂ ಇದರಲ್ಲೇ ಓದಬಹುದು.

ಇದರ ಇತರೆ ಗುಣವಿಶೇಷಣಗಳು -320 x 240 ಪಿಕ್ಸೆಲ್‌ಗಳ ರೆಸೊಲೂಶನ್, 2 ಮೆಗಾಪಿಕ್ಸೆಲ್ ಕ್ಯಾಮರಾ, 1 ಗಿಗಾಬೈಟ್ ಮೆಮೊರಿ, ಇತ್ಯಾದಿ. ಎಂಪಿ-3 ಪ್ಲೇಯರ್ ಕೂಡ ಇದೆ. ಸಂಗೀತ ಆಲಿಸಬಹುದು ಮತ್ತು ಚಲನಚಿತ್ರ ನೋಡಬಹುದು. ಬ್ಲೂಟೂತ್ ಮತ್ತು ವೈಫೈ ಸವಲತ್ತುಗಳೂ ಇವೆ. ಎಫ್‌ಎಂ ರೇಡಿಯೋ ಮಾತ್ರ ಇಲ್ಲ. ಚಿಕ್ಕ ಗಾತ್ರದ ಇದು ಖಂಡಿತ ಮನಸೆಳೆಯುವುದರಲ್ಲಿ ಆಶ್ಚರ್ಯವಿಲ್ಲ.

Leave a Reply