Press "Enter" to skip to content

ಇಲಿ ಹಿಡಿಯುವುದು ಮತ್ತು ಕೊಲ್ಲುವುದು

ಮೊನ್ನೆ ನಮ್ಮ ಮನೆಯ ಒಳಗೊಂದು ಇಲಿ ಬಂದಿತ್ತು. ಬಂದ ಮೇಲೆ ಅದನ್ನು ಸುಮ್ಮನೆ ಬಿಡಲಿಕ್ಕಾಗುತ್ತದೆಯೇ? ಸರಿ. ಅದನ್ನು ಹಿಡಿಯಲೆಂದು ಒಂದು ಬೋನು ತಂದಾಯಿತು. ಬೋನಿನ ಒಳಗೆ ಬಾಳೆಹಣ್ಣು ಇಟ್ಟು ರಾತ್ರಿ ಇಟ್ಟು ಬೆಳಗ್ಗೆ ನೋಡಿದರೆ ಬೋನಿನೊಳಗೆ ಇಲಿ ಬಿದ್ದಿದೆ. ಸರಿ. ಇನ್ನು ಮುಂದಿನ ಕೆಲಸ ಆಗಬೇಕಷ್ಟೆ. ಇಲಿ ಕೊಲ್ಲುವುದು ಹೇಗೆ? ಖ್ಯಾತ ಪರಿಸರವಾದಿ ಹಾಗೂ ಆತ್ಮೀಯರೂ ಆದ ನಾಗೇಶ ಹೆಗಡೆಯವರಿಗೆ ಫೋನಾಯಿಸಿದೆ. ಅವರಿಂದ ಸರಿಯಾದ ಮಾಹಿತಿ ಸಿಗಲಿಲ್ಲ. ಇನ್ನೊಬ್ಬ ಖ್ಯಾತ ವಿಜ್ಞಾನ ಲೇಖಕರು ಮತ್ತು ಆತ್ಮೀಯ ಸ್ನೇಹಿತರೂ ಆಗಿರುವ ಹಾಲ್ದೊಡ್ಡೇರಿ ಸುಧೀಂದ್ರರಿಗೆ ಫೋನಾಯಿಸಿದೆ. ಅವರೆಂದರು "ನಿಮಗೆ ವಸುಧೇಂದ್ರ ಅವರು ಸ್ನೇಹಿತರು ತಾನೆ? ಅವರಿಗೆ ಕೇಳಿ. ಅವರು ಇಲಿ ಕೊಲ್ಲುವುದು ಹೇಗೆ ಎಂಬ ಲೇಖನ ಬರೆದಿದ್ದಾರೆ". ಸರಿ. ಅವರಿಗೇ ಫೋನಾಯಿಸಿ, ಲೇಖನ ತರಿಸಿ ವಿಶ್ವ ಕನ್ನಡದಲ್ಲಿ ಸೇರಿಸಿಯೂ ಆಯಿತು. ಆದರೆ ವಸುಧೇಂದ್ರರ ಲೇಖನದಲ್ಲಿ ಇಲಿ ಕೊಲ್ಲುವುದು ಹೇಗೆ ಎಂದು ವಿವರಿಸಿರಲಿಲ್ಲ. ಹೇಗೂ ಡಿಜಿಟಲ್ ಕ್ಯಾಮರ ಇತ್ತಲ್ಲ. ಬೋನಿನೊಳಗೆ ಇಲಿ ಸಿಕ್ಕಿಬಿದ್ದಿರುವ ಚಿತ್ರ ಹೊಡೆದಿಟ್ಟೆ. ನನಗೆ ಬೇರೆ ಕಡೆ ಹೋಗಲಿದ್ದುದರಿಂದ ಇಲಿ ಅಲ್ಲಿಗೆ ಮರೆತೆ. ಮನೆಯ ಹಿಂದುಗಡೆ ನೀರಿನ ತೊಟ್ಟಿಯ ಕಟ್ಟೆಯ ಮೇಲೆ ಬೋನು ಇತ್ತು. ರಾತ್ರಿಯೂ ಆಯಿತು. ಮರುದಿನ ಬೆಳಗ್ಗೆ ನೋಡಿದಾಗ ಬೋನು ಕೆಳಗೆ ಬಿದ್ದಿತ್ತು. ಅದರ ಬಾಯಿ ತೆರೆದುಕೊಂಡು ಇತ್ತು. ಇಲಿ ಪರಾರಿಯಾಗಿತ್ತು! ಕೊನೆಗೂ ಇಲಿ ಕೊಲ್ಲುವುದು ಹೇಗೆ ಎಂದು ತಿಳಿಯಲಿಲ್ಲ 🙂

One Comment

  1. ubaradka ubaradka December 17, 2005

    ಇಲಿ ಕೊಲ್ಲುವುದು ಬಲು ಸುಲಭ ಸ್ವಾಮಿ. ಇಲಿ ಗೂಡನ್ನು ಇಲಿ ಸಮೇತ ಒಂದು ಬಕೆಟ್ ನೀರಿನಲ್ಲಿ ಮುಳುಗಿಸಿ ಅದು ಸಾಯುವಷ್ಟು ಹೊತ್ತು ಒತ್ತಿ ಹಿಡಿಯಿರಿ. ಇಷ್ಟು ಸರಳ ಉಪಾಯ ನಿಮಗೆ ಯಾಕೆ ಹೊಳೆಯಲಿಲ್ಲ?

Leave a Reply

Your email address will not be published. Required fields are marked *