Press "Enter" to skip to content

ಅವರೆ ಕಾಳು

ಶೀರ್ಷಿಕೆ ನೋಡಿ ನಾನು ಅವರೆ ಎನ್ನುವ ತರಕಾರಿ (ಅಲ್ಲ ಬೇಳೆ) ಯ ಬಗ್ಗೆ ಬರೆಯುತ್ತಿದ್ದೇನೆ ಎಂದುಕೊಳ್ಳಬೇಡಿ. ಇದು ಬೇರೆಯೇ ವಿಷಯ. ಓದಿ ನೋಡಿ.

ನಿಮ್ಮಲ್ಲಿ ಎಷ್ಟು ಜನ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಸಭಿಕರಾಗಿ ಹೋಗಿದ್ದೀರೋ ಗೊತ್ತಿಲ್ಲ. ನಾನು ಆಗಾಗ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಈ ಸಭೆಗಳಲ್ಲಿ ಒಂದು ವಿಶೇಷ ಗಮನಿಸಿರಬಹುದು. ಅದೆಂದರೆ ವೇದಿಕೆಯಲ್ಲಿರುವ ಎಲ್ಲ ಗಣ್ಯಾತಿಗಣ್ಯ ವ್ಯಕ್ತಿಗಳನ್ನು ಅವರೆ ಮಾಡಿಬಿಡುವುದು. ಅಂದರೆ ಎಲ್ಲರನ್ನು ಅವರೆಕಾಳಾಗಿ ಮಾರ್ಪಡಿಸಿ ಬೇಯಿಸುವುದು ಎಂದು ತಿಳಿಯಬೇಡಿ. ಪ್ರತಿಯೊಬ್ಬ ಭಾಷಣಗಾರನೂ ವೇದಿಕೆಯಲ್ಲಿರುವ ಪ್ರತಿ ಗಣ್ಯ ವ್ಯಕ್ತಿಯನ್ನೂ ಹೆಸರು ಹೇಳಿ —–ಅವರೇ ಎಂದು ಸಂಬೋಧಿಸಿ ನಂತರ ತನ್ನ ಭಾಷಣ ಪ್ರಾರಂಭಿಸುವ ಪರಿಪಾಠವಿದೆ. ಸ್ವಾರಸ್ಯವೆಂದರೆ ಗಣ್ಯವ್ಯಕ್ತಿಯ ಹೆಸರು ಮಾತ್ರ ಹೇಳಿ ಅವರೆ ಎಂದು ಸೇರಿಸಿದರೆ ಭಾಷಣಕಾರರಿಗೆ ತೃಪ್ತಿಯಾಗುವುದಿಲ್ಲ. ಗಣ್ಯವ್ಯಕ್ತಿಯ ಸಂಪೂರ್ಣ ಪ್ರವರ ಹೇಳಿ ನಂತರ ಅವರೆ ಎಂದು ಸೇರಿಸುತ್ತಾರೆ. ಉದಾಹರಣೆಗೆ ಮೊನ್ನೆಯಷ್ಟೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ವೇದಿಕೆಯಲ್ಲಿ ಬರಗೂರು ರಾಮಚಂದ್ರಪ್ಪ, ಜಿ ಎಸ್ ಶಿವರುದ್ರಪ್ಪ ಎಲ್ಲ ಇದ್ದರು. ಭಾಷಣಗಾರ ಪ್ರಾರಂಭಿಸಿದ್ದು ಹೀಗೆ – “ಬಂಡಾಯ ಸಾಹಿತ್ಯದಲ್ಲಿ ದೊಡ್ಡ ಹೆಸರಾದ, ಕನ್ನಡ ಆಬಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ, ಗಿನ್ನೆಸ್ ದಾಖಲೆಯ ಚಲನಚಿತ್ರ ನಿರ್ಮಿಸಿದ, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪ್ರೊ. ಬರಗೂರು ರಾಮಚಂದ್ರಪ್ಪ ಅವರೆ”. ಇದು ಒಬ್ಬರ ಗುಣಗಾನ ಮಾತ್ರವಲ್ಲ. ವೇದಿಕೆಯಲ್ಲಿದ್ದ ಪ್ರತಿಯೊಬ್ಬರನ್ನೂ ಹೀಗೆ ಅಟೆಂಡೆನ್ಸ್ ಹಾಕಿ ಅವರೆಕಾಳು ಮಾಡಿ ನಂತರ ತನ್ನ ಭಾಷಣವನ್ನು ಪ್ರಾರಂಭಿಸಲು ಕನಿಷ್ಠ ಐದು ನಿಮಿಷ ಸಮಯ ತೆಗೆದುಕೊಂಡಿದ್ದರು. ಈ ಕ್ರಮ ಎಲ್ಲಿಂದ ಹೇಗೆ ಪ್ರಾರಂಭವಾಯಿತೋ ಗೊತ್ತಿಲ್ಲ. ವೇದಿಕೆಯಲ್ಲಿ ೮ರಿಂದ ಹೆಚ್ಚು ಮಂದಿ ಗಣ್ಯ ವ್ಯಕ್ತಿಗಳಿದ್ದಲ್ಲಿ ಈ ಎಲ್ಲರ ಪ್ರವರ ಹೇಳಿ ನಂತರ ಅವರನ್ನು ಅವರೆ ಮಾಡಲೇ ಕನಿಷ್ಠ ಮೂವತ್ತು ನಿಮಿಷಗಳ ಸಮಯ ಬೇಕಾಗುತ್ತದೆ! ನಾನಂತೂ ಯಾವುದೇ ಭಾಷಣದಲ್ಲೂ ಈ ಅವರೆಕಾಳನ್ನು ಬಳಸಿಯೇ ಇಲ್ಲ 🙂

2 Comments

  1. nimmava naanu nimmava naanu April 20, 2006

    ಪವನಜ "ಅವರೆ", 🙂

     

    ಈ ಅವರೇಕಾಳಿನ ವೃತ್ತಾಂತ ಬಹಳ ಹಿಂದಕ್ಕೇನೂ ಹೋಗಲಾರದು, ನಾನು ಹಲವಾರು ಭಾಷಣಗಳನ್ನು ಓದಿದ್ದೇನೆ (ಭಾಷಣಗಳನ್ನು ಓದುವ ನನ್ನ ಪುಣ್ಯವನ್ನು ಹಳಿದು), ನನ್ನ ಪ್ರಕಾರ ಇದು ಇತ್ತೀಚೆಗೆ ಶುರುವಾಗಿದೆ ಅನ್ನಿಸುತ್ತೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಥವಾ ಇತರ ಸಭೆಗಳಲ್ಲಿ ಸೇರಿದ ಗಣ್ಯರನ್ನು ಹೆಸರಿಸುವುದು ಗೊತ್ತು, ಆದರೆ ಅವರ ಪ್ರವರ ಪ್ರವಚನದ ಬಗ್ಗೆ ಕೇಳಿರಲಿಲ್ಲ.

     

    ನನಗನ್ನಿಸಿದ ಮಟ್ಟಿಗೆ ಇಂಥ ಭಾಷಣಕಾರರು ಹೊಗಳು ಭಟ್ಟರು ಅಥವಾ ಸ್ವ ಸಾಮರ್ಥ್ಯವಿಲ್ಲದವರು.

     

    ಇತಿ,

    ನಿಮ್ಮವ

    http://antaranga.blogspot.com/

  2. Pavanaja Pavanaja April 25, 2006

    ಪ್ರಿಯ ನಿಮ್ಮವ “ಅವರೆ”,

    ನೀವು ಭಾಷಣಗಳನ್ನು ಓದಿದ್ದೇನೆ ಎಂದು ಬರೆದಿದ್ದೀರಾ. ಓದಿದ ಭಾಷಣಗಳಲ್ಲಿ ಈ ಪ್ರಾರಂಭದ ಪ್ರವರಗಳು ಇರುವ ಸಂಭವ ತುಂಬ ಕಡಿಮೆ. ಭಾಷಣ ಕೇಳಿದ್ದೀರಾ?

    ಸಿಗೋಣ,
    ಪವನಜ

Leave a Reply

Your email address will not be published. Required fields are marked *