ಬೆಂಗಳೂರು, ನವೆಂಬರ್ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ ಸಿ ಐ ಐ – ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು. ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಆಡಳಿತದ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿ ಪಡಿಸುವುದಕ್ಕೆ, ಕೆಂಪು ಪಟ್ಟಿಯನ್ನು ತಪ್ಪಿಸುವುದಕ್ಕೆ…ಹೀಗೆ ಆಡಳಿತದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಮಸ್ಯೆಗಳಿಗೂ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಇ-ಆಡಳಿತ. ಅಥವಾ ವಿದ್ಯುನ್ಮಾನ ಆಡಳಿತ. ವಿದ್ಯುನ್ಮಾನ ಆಡಳಿತಕ್ಕೆ ಒತ್ತುಕೊಟ್ಟು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ ಭಾರತದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ರೈತನ ಭೂಮಿ ದಾಖಲೆಗಳನ್ನೆಲ್ಲಾ ಕಂಪ್ಯೂಟರೀಕರಿಸಲಾಗಿದೆ. ನಕ್ಷೆಗಳನ್ನು ಕಂಪ್ಯೂಟರೀಕರಿಸುವ ಕ್ರಿಯೆ ನಡೆಯುತ್ತಿದೆ. ಬ್ಯಾಂಕುಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿವೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಸಹೋದರ ಸಂಸ್ಥೆಗಳೆಲ್ಲವೂ ಕಂಪ್ಯೂಟರೀಕರಣಗೊಂಡಿವೆ. ನಿರ್ವಾಹಕರು ಅಂಗೈಯಲ್ಲೇ ಇರುವ ಯಂತ್ರವನ್ನು ಬಳಸಿ ಟಿಕೇಟು ಕೊಡುತ್ತಾರೆ. ಮನೆ ಮನೆಗೆ ಬಂದು ವಿದ್ಯುತ್ ಬಳಕೆಯ ಮೀಟರ್ ಓದುವವರೂ ಈಗ ತಮ್ಮಲ್ಲಿರುವ ಅಂಗೈಯಗಲದ ಯಂತ್ರದಿಂದಲೇ ಬಿಲ್ ಮುದ್ರಿಸಿ ಕೊಡುತ್ತಾರೆ. ಹಾದಿ-ಬೀದಿಗೆ ಒಂದರಂತೆ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿವೆ. ಮಧ್ಯಮ ವರ್ಗದ ಮನೆಯ ಪ್ರತೀ ಸದಸ್ಯರ ಬಳಿಯೂ ಒಂದು ಮೊಬೈಲ್ ಇದೆ. ಒಂದು ಕಾಲದಲ್ಲಿ ಟಿ.ವಿ. ಖರೀದಿಸಿದಂತೆ ಈಗ ಜನರು ಕಂಪ್ಯೂಟರ್ ಖರೀದಿಸುತ್ತಿ್ದಾರೆ. ಇದರ ಪರಿಣಾಮವಾಗಿ ಸಂವಹನ, ಸಂಪರ್ಕ, ಆಡಳಿತದ ಕ್ಷಮತೆ ಎಲ್ಲವೂ ಹೆಚ್ಚಿವೆ. ಆದರೆ ಕಡಿಮೆಯಾಗಿರುವುದು ಕನ್ನಡ ಮಾತ್ರ. ಹಿಂದಿನ ಪೂರ್ವ ಮುದ್ರಿತ ಬಸ್ ಟಿಕೇಟುಗಳಲ್ಲಿ ಕನ್ನಡ ಕಾಣಿಸುತ್ತಿತ್ತು. ಈಗಿನ ತಂತ್ರಜ್ಞಾನ ಸ್ಥಳದಲ್ಲೇ ಮುದ್ರಿಸುವ ಟಿಕೇಟಿನಲ್ಲಿ ಕನ್ನಡ ಸುಳಿವೇ ಇಲ್ಲ. ವಿದ್ಯುತ್ ಬಿಲ್‌ನಲ್ಲೂ ಅಷ್ಟೇ. ಬರೇ ರೋಮನ್ ಅಕ್ಷರಗಳು, ಇಂಗ್ಲಿಷ್ ಭಾಷೆ. ಹೆಚ್ಚಿನ ಎಟಿಎಂಗಳಲ್ಲಿ ಇಂಗ್ಲಿಷ್‌ಗಷ್ಟೇ ಮಣೆ. ಎಸ್‌ಎಂಎಸ್ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಯಾರಿಗಾದರೂ ತಿಳಿಸಬೇಕೆಂದರೆ ಅದನ್ನೂ ರೋಮನ್ ಅಕ್ಷರಗಳಲ್ಲಿ ಟೈಪಿಸಿದರಷ್ಟೇ ಎಲ್ಲರಿಗೂ ಓದಲು ಸಾಧ್ಯ ಎಂಬ ಸ್ಥಿತಿ ನಮ್ಮದು.
ಸಂಗೀತದಲ್ಲಿ ಆಸಕ್ತಿ ಇಲ್ಲದವರು ಇಲ್ಲವೇ ಇಲ್ಲ ಎನ್ನಬಹುದು. ಸಿನಿಮಾ, ಭಾವಗೀತೆ. ಶಾಸ್ತ್ರೀಯ, ವಿದೇಶೀಯ, ಹೀಗೆ ಯಾವುದಾದರೊಂದು ಬಗೆಯ ಸಂಗೀತವನ್ನು ಆಲಿಸದ ಮಂದಿಯ ಸಂಖ್ಯೆ ಅತಿ ಕಡಿಮೆ. ಹೀಗೆ ಸಂಗೀತ ಪ್ರಿಯರಿಗೆ ಸಂಗೀತ ಆಲಿಸಲು ಹಲವು ಸಲಕರಣೆಗಳು ಲಭ್ಯವಿವೆ. ಡಿಜಿಟಲ್ ಉಪಕರಣಗಳ ಆವಿಷ್ಕಾರವಾದ ಮೇಲಂತೂ ಚಿತ್ರವಿಚಿತ್ರ ಉಪಕರಣಗಳು ಮಾರುಕಟ್ಟೆಗೆ ಲಗ್ಗೆಯಿಡತೊಡಗಿವೆ. ಅವುಗಳಲ್ಲೊಂದು ಪ್ರಮುಖ ವಿಭಾಗ ಎಂಪಿ-೩ ಪ್ಲೇಯರುಗಳದು. ಗಣಕಗಳಲ್ಲಿ ಹಾಡುಗಳ ಕಡತಗಳ ಗಾತ್ರವನ್ನು ಕುಗ್ಗಿಸಿ ಶೇಖರಿಸಿಡುವ ಒಂದು ವಿಧಾನಕ್ಕೆ ಎಂಪಿ-೩ ಎಂದು ಕರೆಯುತ್ತಾರೆ. ಒಂದು ಭಾವಗೀತೆಯ ಎಂಪಿ-೩ ಹಾಡಿನ ಕಡತದ ಗಾತ್ರ ಸುಮಾರು ೫ ಮೆಗಾಬೈಟ್‌ಗಳಷ್ಟಿರುತ್ತದೆ. ೨೫೬ ಮೆಗಾಬೈಟಿನ ಒಂದು ಎಂಪಿ-೩ ಪ್ಲೇಯರಿನಲ್ಲಿ ಸುಮಾರು ೫೦ ಹಾಡುಗಳನ್ನು ಸಂಗ್ರಹಿಸಿಬಹುದು. ಅಂದರೆ ಸುಮಾರು ೬ ಗಂಟೆ ಕಾಲ ತಡೆಯಿಲ್ಲದೆ ಹಾಡು ಕೇಳಬಹುದು. ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ಹಲವಾರು ನಮೂನೆಯ ಎಂಪಿ-೩ ಪ್ಲೇಯರುಗಳು ಲಭ್ಯವಿವೆ. ಅವುಗಳಲ್ಲಿ ನಾವೀಗ ಕ್ರಿಯೇಟಿವ್ ಕಂಪೆನಿಯ ಮುವೋ ಟಿಎಕ್ಸ್ ಎಫ್‌ಎಂ ಮಾದರಿಯನ್ನು ಸ್ವಲ್ಪ ಪರಿಶೀಲಿಸೋಣ.
ಮೊಬೈಲ್ ಫೋನು ಬಳಸುವಾಗ ತುಂಬ ಹೊತ್ತು ಮಾತನಾಡಿದರೆ ಕಿವಿ ಬಿಸಿಯಾಗುವುದು ಗೊತ್ತಿದೆ ತಾನೆ? ಇದಕ್ಕೆ ಪರಿಹಾರವಾಗಿ ಹೆಚ್ಚಿನ ಮಂದಿ ಇಯರ್‌ಫೋನ್ ಬಳಸುವುದೂ ಗೊತ್ತಿರಬಹುದು. ಈ ಇಯರ್‌ಫೋನುಗಳಲ್ಲಿ ಎರಡು ವಿಧ -ತಂತಿ ಮೂಲಕ ಸಂಪರ್ಕಿಸುವಂತಹುದು ಮತ್ತು ನಿಸ್ತಂತು. ನಿಸ್ತಂತು ಇಯರ್‌ಫೋನುಗಳು ಸಾಮಾನ್ಯವಾಗಿ ಬ್ಲೂಟೂತ್ ವಿಧಾನ ಮೂಲಕ ಫೋನಿಗೆ ಸಂಪರ್ಕ ಸಾಧಿಸುತ್ತವೆ. ಬ್ಲೂಟೂತ್ ಇಯರ್‌ಫೋನುಗಳಲ್ಲಿ ಕೂಡ ಮುಖ್ಯವಾಗಿ ಎರಡು ವಿಧ -ಮೋನೋ ಮತ್ತು ಸ್ಟೀರಿಯೋ. ಮೋನೋ ಇಯರ್‌ಫೋನುಗಳನ್ನು ತುಂಬ ಮಂದಿ ಬಳಸುತ್ತಾರೆ. ಇವುಗಳನ್ನು ಸಾಮನ್ಯವಾಗಿ ಕಿವಿಗೆ ಜೋಡಿಸಿರುತ್ತಾರೆ. ಇವುಗಳನ್ನು ಮಾತನಾಡಲು ಮಾತ್ರ ಬಳಸಬಹುದು. ಸಂಗೀತ ಆಲಿಸಲು ಇವು ಉಪಯುಕ್ತವಲ್ಲ. ಸಂಗೀತ ಆಲಿಸಲು ಸ್ಟೀರಿಯೋ ಇಯರ್‌ಫೋನೇ ಉತ್ತಮ. ಸ್ಟೀರಿಯೋ ಬ್ಲೂಟೂತ್ ಇಯರ್‌ಫೋನಿಗೆ ಒಂದು ಉದಾಹರಣೆ ಮೋಟೊರೋಲ ಕಂಪೆನಿಯ ಎಸ್-೭೦೫.
ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.