ಗೋಕಾಕ ಆಯೋಗ ರಚನೆಯ ಹಿನ್ನಲೆ
ಗೋಕಾಕ ಆಯೋಗವು ರಚನೆಯಾಗುವ ಹಿಂದೆ ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುತ್ತಿದ್ದ ವಿವಿಧ ಭಾಷೆಗಳ ವಿಷಯದಲ್ಲಿ ಒಂದು ವಿವಾದವೆದ್ದಿತ್ತು. ವಿವಿಧ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ ಪ್ರಥಮ ಭಾಷೆಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯುವ ವ್ಯವಸ್ಥೆ ಇರದಿದ್ದರೂ, ಪ್ರೌಢಶಾಲೆಗಳಲ್ಲಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ತುಂಬ ಸುಲಭವಾದ ಪಾಠಗಳನ್ನು ಕಲಿತು, ಸಾಕಷ್ಟು ಹೆಚ್ಚು ಕಲಿತ ಇತರ ಭಾಷೆಗಳ ವಿದ್ಯಾರ್ಥಿಗಳಿಗಿಂತ ತುಂಬ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ. ಅಲ್ಲದೆ, ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಸಂಸ್ಕೃತ ಅಧ್ಯಾಪಕರು ತುಂಬ ಧಾರಾಳವಾಗಿ ಅಂಕಗಳನ್ನು ಕೊಡುವ ರೀತಿಯಿತ್ತು. ಈಗಲೂ ಇದೆ.

