ಸೈಬರ್ ಸಂವಾದ

– ದಿನೇಶ ನೆಟ್ಟಾರ್

ಒಬ್ರು ಬೆಂಗಳೂರಿಗೆ ಬಸ್ಸಿನಲ್ಲಿ ಹೋದ್ರು. ಬೆಳಿಗ್ಗೆ ಬಸ್ ಸ್ಟಾಂಡಿನಲ್ಲಿ ಇಳ್ದು ಅತ್ಲಾಗಿ ಇತ್ಲಾಗಿ ನೋಡುವಾಗ ಅವರ ಹಳೆ ದೋಸ್ತಿ ಸಿಕ್ಕಿದ್ರು.
`ನಮಸ್ಕಾರ’
`ನಮಸ್ಕಾರ’
`ತುಂಬಾ ದಿನ ಆಯ್ತು, ನಿಮ್ಮನ್ನು ನೋಡಿ, ಹೇಗಿದ್ದೀರಿ?’
`ಚೆನ್ನಾಗಿದ್ದೀನಪ್ಪ. ನೀವು ಹೇಗಿದ್ದೀರಾ?’
`ನಾನು ಒಳ್ಳೆಗಿದ್ದೇನೆ. ನಿಮ್ಮತ್ರ ಒಂದು ಸಂಗತಿ ಕೇಳ್ಬೇಕು. ಅಲ್ಲ ಮಾರಾಯ್ರೆ, ನಿಮಿಗೆ ಜಯನಗರ ಸಿಕ್ಸ್ ಬ್ಲಾಕು ಹೇಗೆ ಹೋಗೋದು ಗೊತ್ತುಂಟಾ?’
`ಜಯನಗರವೇ? ಸಿಕ್ಸ್ ಬ್ಲಾಕೇ? ನನ್ನ ಯಾಕೆ ಕೇಳ್ತೀರಾ, ಸುಮ್ನೆ s.c.i.k. ನಲ್ಲಿ ಓದ್ಕೊಳ್ರೀ, ಚೆನ್ನಾಗಿ ವಿವರವಾಗಿ ಹೇಳ್ಬಿಟ್ಟಿದ್ದಾರೆ.’
`s.c.i.k., ಹಾಗೆಂದರೆ ಎಂತದು ಮಾರಾಯ್ರೆ?’
`s.c.i.k. ಗೊತ್ತಿಲ್ಲವೇನ್ರಿ, ಈ ಇಂಫಾರ್‍ಮೇಶನ್ನು ಸೂಪರ್ ಹೈವೇನಲ್ಲಿ ಬರ್‍ದ್‌ಬುಡ್ತಾರಲ್ಲ, ಈ ಜಯನಗರದ ಸಿಕ್ಸ್ ಅಂದ್ರೆ ಎಲ್ಲಿ, ಕುಂಬ್ಳೆ ಮನೆ ಎಲ್ಲಿ…’
`ಕುಂಬ್ಳೆ ಕಾಸರಗೋಡು ಹತ್ರ ಅಲ್ವಾ? ಮದ್ರಾಸು ಮೈಲಿನಲ್ಲಿ ಹೋದ್ರೆ ಮುಕ್ಕಾಲು ಗಂಟೆ, ಅಷ್ಟೆ’
`ಆ ಕುಂಬ್ಳೆ ಅಲ್ಲ ಕಣ್ರೀ. ಅನಿಲ್ ಕುಂಬ್ಳೆ ಅಂತ ಕ್ರಿಕೆಟ್ಟು ಪ್ಲೇಯರ್ರು ಗೊತ್ತಿಲ್ವೆ, ನಿಮ್ಗೆ?’
`ಕ್ರಿಕೆಟ್ಟಾ, ಅವ್ನ ಹೆಸ್ರು ಕಂಬ್ಳಿ ಅಲ್ವಾ? ಎಂತದು ಮಾರಾಯ್ರೆ, ಕಂಬ್ಳಿ, ಬೆಡ್‌ಶೀಟು ಅಂತಾ ಎಲ್ಲಾ ಮಕ್ಕಳಿಗೆ ಹೆಸರು ಇಡ್ತಾರೆ ನೋಡಿ.’
`ಅವ್ನು ಬೇರೆ ಕಣ್ರಿ. ಅವನು ಕಾಂಬ್ಳಿ. ಇವನು ಕುಂಬ್ಳೆ…’
`ಮತ್ತೆ ಇನ್ನೊಬ್ಬ ಕಂಬ್ಳ, ಇನ್ನು ಕೋಣ ಓಡಿಸೋದು ಒಂದೇ ಬಾಕಿ. ಸಾರಿ, ಬಿಡಿ, ಅದೆಂಥದೋ ಸೂಪರ್ ಅಂತ ಹೇಳಿದ್ರಿ…’
`ಸೂಪರ್ ಹೈವೇ ಅಂತ. ಈವಾಗ ಅಮೇರಿಕಾದಲ್ಲಿ ಕಂಪ್ಯೂಟರಿನಲ್ಲಿ, ಅಲ್ಲ, ಕಂಪ್ಯೂಟರ್‍ಗೆ ಏನಂತಾರೆ ಗೊತ್ತೆ? ಸೂಕ್ಷ -ಮೃದು ಕವಾಟ ಅಂತ. ಅದ್ರಲ್ಲಿ ನೇಣು ಹಾಕ್ಕೊಳ್ಳೊದಂತೆ. ಆ ಇಲಿ ಇಲ್ವೆ, ಅದ್ರ ಬಾಲ ಹಿಡಿದ್ಬಿಟ್ಟು ಕುತ್ತಿಗೆಗೆ ಸುತ್ತಿಕೊಳ್ಳೊದೆ.’
`ಕಂಪ್ಯೂಟರಿನಲ್ಲಿ ಕಪಾಟು ಉಂಟ ಮಾರಾಯ್ರೆ?’
`ಕಪಾಟು ಅಲ್ರೀ, ಕವಾಟ ಅಂದ್ರೆ, ವಿಂಡೋಸು ಅಂತ, ಗವಾಕ್ಷ ಅಂದ ಹಾಗೆ.’
`ಅದ್ರ ಸರಳಿಗೆ ಹಗ್ಗ ಕಟ್ಟಿ ನೇತಾಡುದಾ?’
`ಅಲ್ಲ ಕಣ್ರೀ, ಬರೆ ತಮಾಶೆಯಾಗಿ ಹೇಳೋದು ಅಷ್ಟೆ. ಸಾಫ್ಟ್‌ವೇರು ಹಾಂಗ್‌ಅಪ್ ಆಗೋಯ್ತು ಅಂತ. ಅವ್ನು ಒಬ್ಬ ಆಸ್ಟಿನ್ ಅಂತ, ನಿಮ್ಮೂರೆ ಕಣ್ರಿ…’
`ಅವ್ನು ಹಗ್ಗ ಹಾಕ್ಕೊಂಡ್ನಾ? ಛೆ, ಛೆ, ಒಳ್ಳೆ ಜನ ಅವ.’
`ಅವ್ನು ಯಾಕೆ ಹಗ್ಗ ಹಾಕ್ಕೊಳ್ತಾನೆ, ಬಿಡ್ರಿ. ಅವ್ನು ಏನೊ ಕವಿತೆ ಗಿವಿತೆ ಬರೀತಾನೆ, ಯಾರೋ ಸಿಟ್ ಮಾಡ್ಕೊಂಡು ಫ್ಲೇಮು ಮಾಡ್ಬುಟ್ಟ.’
`ಫ್ಲೇಮಾ? ಅಂದ್ರೆ, ಅವನಿಗೆ ಬೆಂಕಿ ಹಾಕಿದ್ನಾ?’
`ಛೆ, ಛೆ, ನಿಮ್ಗೆ ಈ ಸೈಬರ್ ಸ್ಪೇಸು ಏನು ಅಂತ ಗೊತ್ತಿಲ್ಲಾಂತ ತೋರತ್ತೆ.’
`ಸಾಯ್ಬರ ಸ್ಪೇಸ್ ಗೊತ್ತುಂಟಪ್ಪ. ನಮ್ಮ ಮನೆ ಹತ್ರ ಇಲ್ವ, ಗಡ್ಡದ ಸಾಯ್ಬ, ಅವ್ನ ಮಗ, ಇರುವ ಸ್ಪೇಸ್ ಎಲ್ಲ ತೆಕ್ಕೊಂಡಿದ್ದಾನೆ. ಎಲ್ಲ ಎಂತ ದುಡ್ಡು ಗೊತ್ತುಂಟಾ ನಿಮಗೆ…’
`ನಿಲ್ಸಿ, ನಿಲ್ಸಿ. ಎಲ್ಲಿಂದ ಎಲ್ಲಿಗೆ ಬಂದು ಬಿಟ್ರಿ ನೋಡಿ. ಜಯನಗರ ಸಿಕ್ಸ್ ಬ್ಲಾಕು ಅಂದ್ರಿ, ಈಗ ಸಾಯ್ಬರ ಮಗ ಹೆಂಗ್ ದುಡ್ಡು ಮಾಡಿದ ಅಂತಿದ್ದೀರಲ್ಲ. ಬೆಳ್ಗಾತ ಕಾಫಿ ಕುಡ್ದಿಲ್ಲ ಅನ್ಸತ್ತೆ. ಬನ್ನಿ, ಹೋಗೋಣ, ಎಂ.ಟಿ.ಆರ್.ಗೆ ಹೋಗೋಣ.’
`ಎಂ.ಟಿ.ಆರ್. ಸರಿ, ಖಂಡಿತ ಹೋಗುವ. ಈಗ ಅಲ್ಲಿ ಕಾಫಿ ತಿಂಡಿ ಎಲ್ಲ ಹೇಗುಂಟು? ನಾನು ಲಾಸ್ಟ್ ಟೈಮು ಹೋದಾಗ…’
`ಅದೂ s.c.i.k. ನಲ್ಲಿ ಚರ್ಚೆನೆ.’
`ಮತ್ತೆ ಆ s.c.i.k. ಅಂತ ಹೇಳಿದ್ರಿ.’
`ಸಾಕು ನಿಲ್ಸೋಣ. ಆಟೋ…’

[೧೯೯೭]

1 Response to ಸೈಬರ್ ಸಂವಾದ

  1. kavitha g k

    Good joke!

Leave a Reply