Press "Enter" to skip to content

ಶಾಕಾಹಾರಿಯೋ ಶಾಖಾಹಾರಿಯೋ?

– ಯು. ಬಿ. ಪವನಜ

೧೯೯೫ರಲ್ಲಿ ನಾನು ತೈವಾನಿಗೆ ಉನ್ನತ ಸಂಶೋಧನೆ ಮಾಡಲು ಹೋಗಿದ್ದೆ. ಅಲ್ಲಿಗೆ ತಲುಪಿದ ದಿನ ರಾತ್ರಿ ನಮ್ಮ ಸಂಶೋಧನಾಲಯದ ಸಹೋದ್ಯೋಗಿಗಳಿಂದ ನನಗೆ ಒಂದು ಸ್ವಾಗತ ಭೋಜನಕೂಟ ಇತ್ತು. ತೈವಾನಿನಲ್ಲಿ ಊಟ ಕಷ್ಟವಾಗಬಹುದು ಎಂದು ಮೊದಲೇ ಊಹಿಸಿಕೊಂಡಿದ್ದೆ. ಈ ಸ್ವಾಗತ ಕೂಟದಲ್ಲಿ ಏನು ತಿನ್ನಿಸುತ್ತಾರೊ ಎಂದು ಭಯಪಟ್ಟುಕೊಂಡೇ ಸಹೋದ್ಯೋಗಿಗಳ ಜೊತೆ ಹೋದೆ. ಎಲ್ಲರೂ ಒಂದು ಮೇಜಿನ ಸುತ್ತ ಕೂತೆವು. ಪರಿಚಾರಕರು ಪರಿಚಾರಿಕೆಯರು ಬಂದರು. ನಾನು ಶುದ್ಧ ಶಾಕಾಹಾರಿ ಎಂದು ಘೋಷಿಸಿದೆ. ನಮ್ಮ ಸಹೋದ್ಯೋಗಿಗಳು ನಿಮ್ಮಲ್ಲಿ ಶಾಕಾಹಾರ ಏನೇನು ಇದೆ ಎಂದು ಕೇಳಿದರು. ಅವರು ಹೇಳಿದ್ದು ನನಗೆ ಏನೇನೂ ಅರ್ಥವಾಗಲಿಲ್ಲ. ರೈಸ್ (ಆನ್ನ) ಎಂಬ ಪದ ಉಚ್ಚರಿಸಿದೆ. ಅವರು ಅದು ಇದೆ ಎಂದರು. ಸರಿ ಅದನ್ನೇ ತನ್ನಿ ಎಂದೆ.

ತೈವಾನು ಬಹುಮಟ್ಟಿಗೆ ಚೈನಾದಂತೆಯೇ. ಅದೇ ಭಾಷೆ, ಊಟ, ವ್ಯವಹಾರ, ರೀತಿ ನೀತಿ ಎಲ್ಲ. ನಮಗೆ ಭಾರತದಲ್ಲಿ ಚೈನೀಸ್ ಫುಡ್ ತಿಂದು ಗೊತ್ತಿದೆ. ತೈವಾನಿನಲ್ಲೂ ಅವೇ ಸಿಗಬಹುದು ಎಂದುಕೊಂಡರೆ ಖಂಡಿತ ಮೋಸಹೋಗುತ್ತೀರಾ. ನೂಡಲ್ ಹೊರತುಪಡಿಸಿ ನಾವು ಇಲ್ಲಿ ಚೈನೀಸ್ ಎಂದು ಹೇಳಿಕೊಂಡು ತಿನ್ನುವ ಯಾವ ಆಹಾರವೂ ಅಲ್ಲಿ ಸಿಗುವುದಿಲ್ಲ. ಉದಾಹರಣೆಗೆ ಮಂಚೂರಿಯನ್ ಎಂದರೆ ಏನೆಂದು ಅಲ್ಲಿ ಯಾರಿಗೂ ಗೊತ್ತಿಲ್ಲ. ಅಲ್ಲಿ ನಾನಿದ್ದ ಒಂದು ವರ್ಷದಲ್ಲಿ ಎಲ್ಲೂ ಮಂಚೂರಿಯನ್ ತಿನ್ನಲು ಸಿಗಲಿಲ್ಲ.

ಈಗ ನಮ್ಮ ಸ್ವಾಗತಕೂಟದ ಊಟಕ್ಕೆ ವಾಪಾಸು ಬರೋಣ. ನನಗಂತೂ ಫ್ರೈಡ್ ರೈಸ್ ಬಂತು. ನನ್ನ ಅದೃಷ್ಟಕ್ಕೆ ತಿನ್ನುವಂತಿತ್ತು. ನನ್ನ ಸಹೋದ್ಯೋಗಿಗಳೆಲ್ಲ ಏನೇನೋ ತಿಂಡಿ ಆರ್ಡರ್ ಮಾಡಿದರು. ಮನುಷ್ಯನನ್ನು ಹೊರತು ಪಡಿಸಿ ಸಕಲ ಜೀವಜಾತಿಗಳೆಲ್ಲ ನಮ್ಮ ಊಟದ ಮೇಜಿನ ಮೇಲೆ ನಿರ್ಜೀವವಾಗಿ ಬಂದು ಮಲಗಿದ್ದವು. ಕೆಲವಂತೂ ಚರ್ಮ ಮಾತ್ರ ತೆಗೆದ ಇಡೀ ದೇಹವೇ ಇದ್ದಂತಿತ್ತು. ಇನ್ನು ಕೆಲವು ಕೈ, ಕಾಲು, ಮತ್ತೆ ಕೆಲವು ಲಿವರ್, ಹೀಗೆ ಪ್ರಾಣಿಶಾಸ್ತ್ರ ಕಲಿಯುವಾಗ ಎಲ್ಲೋ ಓದಿದ ಅಂಗಗಳೆಲ್ಲ ಮೇಜಿನ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಸಹೋದ್ಯೋಗಿಗಳು ಅವುಗಳನ್ನೆಲ್ಲ ಚಾಕು, ಮುಳ್ಳು ಉಪಯೋಗಿಸಿ ಕತ್ತಿರಿಸುವಾಗ ನನಗೆ ನಾನು ಪಿಯುಸಿಯಲ್ಲಿ ಬಯಾಲಜಿ ಪ್ರಯೋಗಾಲಯದಲ್ಲಿ ಕಪ್ಪೆ, ಜಿರಳೆಗಳನ್ನು ಕತ್ತರಿಸಿದ್ದು ನೆನಪಿಗೆ ಬರುತ್ತಿತ್ತು. ನನಗೆ ಮುಂಬಯಿಯಲ್ಲಿ ಗುರುದತ್ತ ಬಾಳಿಗ ಎಂಬ ಸ್ನೇಹಿತರಿದ್ದಾರೆ. ಅವರು ಪ್ರತಿದಿನ ಮಾಂಸ ತಿನ್ನುವವರು. ನಾವು ಕನ್ನಡಿಗರೆಲ್ಲ ಅವರನ್ನು ಯಾವಗಲೂ ಗೇಲಿ ಮಾಡುವ ಪರಿಪಾಠವಿತ್ತು. “ಏನು ಬಾಳಿಗರೇ ಇವತ್ತು ಊಟ? ನಡೆದಾಡುವುದೋ, ಈಜುವುದೋ, ಹಾರುವುದೋ” ಎಂದು ಕೇಳುತ್ತಿದ್ದೆವು. ಆ ಮಾತುಗಳೆಲ್ಲ ನನಗೆ ನಮ್ಮ ಊಟದ ಮೇಜನ್ನು ನೋಡಿದಾಗ ನೆನಪಿಗೆ ಬಂತು. ಅಲ್ಲಂತೂ ನಾವು ಬಯಾಲಜಿ ಪುಸ್ತಕದಲ್ಲಿ ಮಾತ್ರವೇ ಕೇಳಿದ್ದ ಕೆಲವು ಪ್ರಾಣಿಗಳು ಇದ್ದವು. ಉದಾಹರಣೆಗೆ ಅಕ್ಟೋಪಸ್. ಗಾಭರಿಯಾದಿರಾ? ಹೌದು ಸ್ವಾಮಿ. ತೈವಾನಿನ ಜನ ಮನುಷ್ಯನನ್ನು ಹೊರತು ಪಡಿಸಿ ಸಕಲ ಜೀವಜಾತಿಗಳನ್ನು ತಿನ್ನುತ್ತಾರೆ.

ನನ್ನ ಊಟ ಸರಳವಾದುದರಿಂದ ಬೇಗನೆ ಮುಗಿಯಿತು. ಆದರೆ ನನ್ನ ಸಹೋದ್ಯೋಗಿಗಳು ತುಂಬ ಹೊತ್ತು ತಿನ್ನುತ್ತಲೇ ಇದ್ದರು. ಚೀನೀಯರು ನೋಡಲು ಚಿಕ್ಕ ದೇಹದವರಾದರೂ ಅವರ ತಿನ್ನುವ ಸಾಮರ್ಥ್ಯವನ್ನು ನೋಡಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಾ. ಚೀನೀಯರ ಒಂದು ಒಳ್ಳೆಯ ಗುಣವೆಂದರೆ ರಾಶಿಗಟ್ಟಲೆ ತಿಂಡಿ ಊಟ ಆರ್ಡರ್ ಮಾಡಿ ಅರ್ಧಕ್ಕರ್ಧ ಮಾತ್ರ ತಿಂದು ಬಹುತೇಕವನ್ನು ಹಾಗೆಯೇ ಬಿಡುವ ಚಾಳಿ ಅವರಲ್ಲಿಲ್ಲ. ಅವರು ಊಟ ಮಾಡಿದ ನಂತರ ಎಲ್ಲ ತಟ್ಟೆಗಳು ಚೊಕ್ಕಟವಾಗಿರುತ್ತವೆ. ಅಂದರೆ ತಿನ್ನುವಂತಹ ಎಲ್ಲವನ್ನೂ ಅವರು ತಿಂದುಬಿಡುತ್ತಾರೆ. ಪ್ಲೇಟಿನಲ್ಲಿ ಬಿಡುವುದು ಏನಿದ್ದರೂ ತಿನ್ನಲಸಾಧ್ಯವಾದ ಮೂಳೆ, ಚಿಪ್ಪು, ಇತ್ಯಾದಿ ಮಾತ್ರ.

ಈಗ ಮಹಾಭಾರತದ ಒಂದು ಕಥೆ. ಮಹಾಭಾರತ ಯುದ್ಧ ಮುಗಿದಿದೆ. ಶ್ರೀಕೃಷ್ಣ ಗಾಂಧಾರಿ, ಕುಂತಿ, ವಿದುರ, ಮತ್ತಿತರರನ್ನು ಕುರುಕ್ಷೇತ್ರ ಯುದ್ಧ ಜರುಗಿದ ಸ್ಥಳಕ್ಕೆ ಕರೆದೊಯ್ಯುತ್ತಾನೆ. ಕೃಷ್ಣ ಗಾಂಧಾರಿಯ ಕಣ್ಣಿನ ಪಟ್ಟಿಯನ್ನು ಒತ್ತಾಯದಿಂದ ಬಿಚ್ಚಿಸಿ ರಣರಂಗವನ್ನು ತೋರಿಸುತ್ತಾನೆ. ತನ್ನ ಮಗನ ಛಲದಿಂದಾಗಿ ಉಂಟಾದ ಸ್ಥಿತಿಯನ್ನು ಆಕೆಗೆ ಮನಗಾಣಿಸುವುದು ಕೃಷ್ಣನ ಉದ್ದೇಶ. ಎಲ್ಲ ಕಡೆ ಚಲ್ಲಾಪಿಲ್ಲಿಯಾಗಿ ದೇಹದ ಭಾಗಗಳು, ಎಲುಬು, ತಲೆ ಬುರುಡೆ, ರಾಶಿ ರಾಶಿಯಾಗಿ ಬಿದ್ದಿರುವುದನ್ನು ಗಾಂಧಾರಿ ನೋಡುತ್ತಾಳೆ. ನಿನ್ನ ಕಣ್ಣ ಮುಂದೆಯೇ ನಿನ್ನ ಎಲ್ಲ ಯಾದವ ಕುಲಬಂಧುಗಳೂ ಹೊಡೆದಾಡಿ ಸಾಯಲಿ ಎಂದು ಕೃಷ್ಣನಿಗೆ ಶಾಪ ನೀಡುತ್ತಾಳೆ.

ನನ್ನ ಸಹೋದ್ಯೋಗಿಗಳು ಊಟ ಮಾಡಿದ ಮೇಜಿನ ಸ್ಥಿತಿಯೂ ಬಹುಪಾಲು ಗಾಂಧಾರಿ ನೋಡಿದ ಕುರುಕ್ಷೇತ್ರದ ಬಯಲಿನಂತೆಯೇ ಇತ್ತು. ಎಲುಬಿನ ತುಂಡು, ಸಮುದ್ರದಿಂದ ಬಂದ ಪ್ರಾಣಿಗಳ ಚಿಪ್ಪು, ಏಡಿಯ ಚಿಪ್ಪು, ಕೈಕಾಲುಗಳ ತುಂಡುಗಳು, ಇತ್ಯಾದಿಗಳೆಲ್ಲ ತುಂಬಿ ನೋಡಲು ಭೀಕರವಾಗಿತ್ತು. ಯಾವುದೇ ಸತ್ತ ಪ್ರಾಣಿಯ ಅವಶೇಷವಿಲ್ಲದ ತಟ್ಟೆಯೆಂದರೆ ನನ್ನದು ಮಾತ್ರವಾಗಿತ್ತು. ಆದರೆ ಅಲ್ಲಿ ಶಾಪ ನೀಡಲು ಕಣ್ಣಿನ ಪಟ್ಟಿ ಬಿಡಿಸಿದ ಗಾಂಧಾರಿ ಇರಲಿಲ್ಲ.

ಯಾರಾದರೂ ನನ್ನಲ್ಲಿ ನೀನು ಮಾಂಸಾಹಾರ ತೆಗೆದುಕೊಳ್ಳುವುದಿಲ್ಲವೇ ಎಂದು ಕೇಳಿದರೆ “ನನ್ನ ಹೊಟ್ಟೆ ಸತ್ತ ಪ್ರಾಣಿಗಳನ್ನು ಹೂಳುವ ಸ್ಮಶಾನವಲ್ಲ” ಎಂಬ ಹಳೆಯ ಜೋಕನ್ನೇ ಉತ್ತರವಾಗಿ ನೀಡುತ್ತೇನೆ. ತೈವಾನಿನಲ್ಲಿ ಅದು ಜೋಕ್ ಎಂದು ಯಾರಿಗೂ ತಿಳಿಯಲಿಲ್ಲ. ಒಮ್ಮೆ ನಾವೆಲ್ಲ ಒಂದು ಪ್ರವಾಸ ಹೋಗಿದ್ದೆವು. ನಮ್ಮ ತಂಡದಲ್ಲಿ ಕೆಲವು ರಷ್ಯ ದೇಶದ ವಿಜ್ಞಾನಿಗಳೂ ಇದ್ದರು. ಅವರಲ್ಲೊಬ್ಬರು ನನ್ನನ್ನು ಕೇಳಿದರು “ನೀವು ಕೋಳಿ, ಮೀನು ಕೂಡ ತಿನ್ನುವುದಿಲ್ಲವೇ?”. ಅವರ ಪ್ರಕಾರ ಕೋಳಿ ಮತ್ತು ಮೀನು ಮಾಂಸಾಹಾರವಲ್ಲ! ವಿಮಾನದಲ್ಲೂ ಅಷ್ಟೆ. ನೀವು strictly vegetarian ಎಂದು ಟಿಕೇಟಿನಲ್ಲಿ ಬರೆಸದೆ ಕೇವಲ vegetarian ಎಂದು ಮಾತ್ರ ಬರೆಸಿದರೆ ನಿಮಗೆ ಮಾಂಸ, ಮೊಟ್ಟೆ, ಕೋಳಿಗಳು ಆಹಾರವಾಗಿ ಸಿಗುತ್ತವೆ. ರಷ್ಯದ ಸ್ನೇಹಿತರಿಗೆ ನಾನೆಂದೆ “ಭಾರತದ ಜನಸಂಖ್ಯೆ ಪ್ರಪಂಚದ ಜನಸಂಖ್ಯೆಯ ಶೇಕಡ ೨೦ರಷ್ಟಿದೆ. ನಾವೆಲ್ಲ ಮಾಂಸಾಹಾರಿಗಳಾದರೆ ನಿಮಗೆ ಮಾಂಸ ಸಿಗುವುದು ಕಷ್ಟವಾಗಬಹುದು. ಅಥವಾ ಮಾಂಸಾಹಾರದ ಬೆಲೆ ಗಗನಕ್ಕೆ ಏರಬಹುದು”. ಅವರಿಗೆ ನನ್ನ ತರ್ಕ ಬಲು ಇಷ್ಟವಾಯಿತು. good logic ಎಂದು ನಕ್ಕು ಸುಮ್ಮನಾದರು.

ಇಸ್ಮಾಯಿಲ್ ಎಂಬ ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರು ನಡೆದಾಡುವುಗಳಲ್ಲಿ ಮನುಷ್ಯರನ್ನು, ನಾಲ್ಕು ಕಾಲಿರುವುಗಳಲ್ಲಿ ಮೇಜನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ತಿನ್ನುತ್ತಾರೆ. ಅವುಗಳನ್ನೆಲ್ಲ ಅವರು ತಿನ್ನುವುದನ್ನು ನಾನು ನೋಡಿಲ್ಲ. ಆದರೆ ಹಾಗೆಂದು ಅವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಆದರೆ ನಮ್ಮ ಮನೆಗೆ ಬಂದಾಗ ಅಪ್ಪಟ ಪುಳಿಚಾರು ಉಂಡಿದ್ದರು.

ಈ ವೆಜಿಟೇರಿಯನ್ ಮತ್ತು ನಾನ್-ವೆಜಿಟೇರಿಯನ್ ಪದಗಳನ್ನು ಗಮನಿಸಿ. ನಾನ್-ವೆಜಿಟೇರಿಯನ್‌ನಲ್ಲಿ ವೆಜಿಟೇರಿಯನ್ ಇದೆ. ಆದರೆ ವೆಜಿಟೇರಿಯನ್‌ನಲ್ಲಿ ನಾನ್-ವೆಜಿಟೇರಿಯನ್ ಇಲ್ಲ. ನಾನ್-ವೆಜಿಟೇರಿಯನ್ ಎಂದು ಹೇಳುವಾಗ ಅದು ಕೇಳುಗರ ಕಿವಿಗೆ ನಾನು ವೆಜಿಟೇರಿಯನ್ ಎಂದು ಕೇಳಿಸಿಕೊಂಡು ಅಪಾರ್ಥವಾಗುವ ಸಾಧ್ಯತೆ ಇದೆ. ಆದುದರಿಂದ ಶಾಕಾಹಾರಿ ಅಥವಾ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂದು ಕನ್ನಡದಲ್ಲಿ ಹೇಳುವುದೇ ಸೂಕ್ತ.

ಮುಂಬಯಿಯಲ್ಲಿದ್ದಾಗ ಊಟದ ಮೇಜಿನಲ್ಲಿ ಕುಳಿತುಕೊಂಡು ಯಾರು ಯಾರು ವೆಜಿಟೇರಿಯನ್ ಮತ್ತು ನಾನ್-ವೆಜಿಟೇರಿಯನ್ ಎಂಬ ಚರ್ಚೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬರು “ನಾನು ಎಗ್ಗಿಟೇರಿಯನ್” ಎಂದು ಹೇಳುತ್ತಿದ್ದರು. ಹಾಗೆಂದರೇನೆಂದು ಗೊತ್ತಾಗಲಿಲ್ಲವೇ? ಮೊಟ್ಟೆ ಹೊರತು ಪಡಿಸಿ ಯಾವುದೇ ಮಾಂಸಾಹಾರ ಸೇವಿಸದವರು ಸ್ವಾಮಿ. ಅವರೇ ಹೇಳುತ್ತಿದ್ದರು “ನಾನು ಮೊಟ್ಟೆ ತಿನ್ನುತ್ತೇನೆ. ಆದರೆ ಅದರ ಅಪ್ಪ ಅಮ್ಮಂದಿರನ್ನು ತಿನ್ನುವುದಿಲ್ಲ”.

ಈ ಮೊಟ್ಟೆಯ ವಿಷಯ ಬಂದಾಗ ನನಗೆ ಪಂಜೆ ಮಂಗೇಶರಾಯರ ಕನ್ನಡ ವ್ಯಾಕರಣ ಪುಸ್ತಕದಲ್ಲಿರುವ ಒಂದು ನಗೆಹನಿ ಜ್ಞಾಪಕ್ಕೆ ಬರುತ್ತದೆ. ಅದರಲ್ಲಿ ಒಬ್ಬ ಹುಡುಗ ಕೋಳಿಮೊಟ್ಟೆಯನ್ನು ಬಗ್ಗಿ ಆಸಕ್ತಿಯಿಂದ ವೀಕ್ಷಿಸುತ್ತ ಪ್ರಶ್ನೆ ಕೇಳುತ್ತಾನೆ -“ಕೋಳಿ ಮೊಟ್ಟೆಯೊಳಗೆ ಸ್ತ್ರೀಲಿಂಗವೋ ಪುಲ್ಲಿಂಗವೋ?” ಬಹುಶಃ ಪಂಜೆ ಮಂಗೇಶರಾಯರ ಕಾಲದಲ್ಲಿ ಮರಿ ಹೊರಬಾರದ ಮೊಟ್ಟೆಗಳು ಇದ್ದಿರಲಿಲ್ಲವೇನೋ? ಇದ್ದಿದ್ದರೆ ಅವರು ಆ ಕಾರ್ಟೂನು ಬರೆಸುತ್ತಿರಲಿಲ್ಲ. ಈಗಿನ ಬ್ರಾಯ್ಲರ್ ಕೋಳಿ ಮೊಟ್ಟೆಗಳು ನಿಜಕ್ಕೂ ನಪುಂಸಕ ಲಿಂಗಕ್ಕೆ ಉತ್ತಮ ಉದಾಹರಣೆ.

ಸಸ್ಯಾಹಾರಿ ಮಾಂಸಾಹಾರಿ ಎಂದು ಹೇಳಿದೆ ತಾನೆ. ನೀವು ಕರ್ನಾಟಕದಲ್ಲಿ ಹೋಟೆಲುಗಳ ಬೋರ್ಡುಗಳಲ್ಲಿ ಈ ರೀತಿ ಸರಿಯಾದ ಕನ್ನಡದಲ್ಲಿ ಬರೆದಿದ್ದು ಕಂಡಿದ್ದೀರಾ? ಕರ್ನಾಟಕ ಬಿಟ್ಟು ಹೊರಗಡೆ ಕನ್ನಡದ ಬೋರ್ಡು ಎಲ್ಲಿರುತ್ತವೆ ಸ್ವಾಮಿ ಎಂದು ತರ್ಕ ತೆಗೆಯುತ್ತಿದ್ದೀರಾ? ತೆಗೆಯಿರಿ ಸ್ವಾಮಿ. ನನ್ನದೇನೂ ಅಡ್ಡಿಯಿಲ್ಲ. ಈಗ ಹೇಳಿ. ಎಲ್ಲಿಯಾದರೂ ಶುದ್ಧವಾದ ಕನ್ನಡದಲ್ಲಿ ಬರೆದ ಬೋರ್ಡು ನೋಡಿದ್ದೀರಾ? ಕೆಲವು ಉದಾಹರಣೆಗಳನ್ನು ನೋಡೋಣ. ಒಂದು ಕಡೆ ಸಸ್ಯಹಾರಿ ಎಂದು ಬರೆದಿತ್ತು. ಅಂದರೆ ಸಸ್ಯವು ಹಾರುತ್ತಿದೆ ಎಂದಾಯಿತು. ಕೆಲವು ಹೋಟೆಲುಗಳಲ್ಲಿ ಫಲಹಾರ ಮಂದಿರ ಎಂದಿರುತ್ತದೆ. ಹಾಗೆಂದರೆ ಹಣ್ಣುಗಳ ಮಾಲೆ ಎಂದು ಅರ್ಥವಾಗುತ್ತದೆ. ಅಲ್ಲಿ ಹೋದರೆ ನಿಮಗೆ ಹಣ್ಣುಗಳ ಮಾಲೆ ಹಾಕಿ ಕಳುಹಿಸುತ್ತಾರೆ. ಎಚ್ಚರಿಕೆ. ಆಮೇಲೆ ನಿಮಗೆ ಹಕ್ಕಿಗಳ ಕಾಟ ತಪ್ಪಿದ್ದಲ್ಲ. ಇನ್ನೊಂದು ಕಡೆ ಉಪಹಾರ ಗೃಹ ಎಂದಿತ್ತು. ಉಪಹಾರ ಎಂದರೆ ಕಾಣಿಕೆ, ನೈವೇದ್ಯ ಎಂದರ್ಥ. ಅಂದ ಮೇಲೆ ನೀವು ಅಲ್ಲಿ ತಿಂಡಿ ತಿಂದು ದುಡ್ಡು ಕೊಡಬೇಕಿಲ್ಲ ಎಂದಾಯಿತು. ಹೀಗೆ ನೀವು ಅದರ ಮಾಲಿಕರ ಜೊತೆ ವಾದ ಮಾಡಬೇಡಿ ಮತ್ತೆ. ವಾದ ಮಾಡುವುದಿದ್ದರೂ ನನ್ನನ್ನು ಅಲ್ಲಿ ಸಾಕ್ಷಿಗೆ ಕರೆಯಬೇಡಿ. ಮಂಗಳೂರಿನಲ್ಲಂತೂ ಒಂದು ಹೋಟೆಲಿನ ಹೆಸರೇ “ನೈವೇದ್ಯ” ಎಂದಿದೆ. ನಾವು ನೈವೇದ್ಯ ಮಾಡುವುದು ದೇವರಿಗೆ ತಾನೆ. ದೇವರು ತಿನ್ನುವುದಿಲ್ಲ. ಅವನಿಗೆ ನೈವೇದ್ಯ ಎಂದು ಎದುರಿಗಿಟ್ಟು ನಂತರ ನಾವು ತಿನ್ನುತ್ತೇವೆ. ಹಾಗಿದ್ದರೆ “ನೈವೇದ್ಯ” ಹೋಟೆಲಿನಲ್ಲಿ ಏನು ಮಾಡುತ್ತಾರೆ? ನಮ್ಮ ಮುಂದೆ ಊಟ ಇಟ್ಟು ನಮಗೆ ತಿನ್ನಲು ಬಿಡದೆ ವಾಪಾಸು ತೆಗೆದುಕೊಂಡು ಹೋಗುತ್ತಾರೆಯೇ?


ಬೆಂಗಳೂರಿನ ಬಿಟಿಎಂ ಬಡಾವಣೆಯ ಒಂದು ಹೋಟೆಲಿನ ಬೋರ್ಡಿನಲ್ಲಿ “ಸಾಸ್ಯಹರಿ” ಎಂದಿತ್ತು. ಈ ಪದಕ್ಕೆ ಏನು ಅರ್ಥವೋ ನನಗೆ ಗೊತ್ತಿಲ್ಲ. ಸ್ವಲ್ಪ ತಲೆ ಓಡಿಸಿ (ಕೆಡಿಸಿ) ನೋಡೋಣ. ವಸುದೇವನ ಮಗ ವಾಸುದೇವ. ಅದೇ ರೀತಿ ಸಸ್ಯದ ಮಗ ಸಾಸ್ಯ. ಸಾಸ್ಯಹರಿ ಎಂದರೆ? ಇಲ್ಲಿ ಹರಿ ಎಂದರೆ ದೇವರು ಎಂಬರ್ಥದ ನಾಮಪದವನ್ನು ತೆಗೆದುಕೊಳ್ಳಬೇಕೆ ಅಥವಾ ಹರಿ ಎಂಬ ಕ್ರಿಯಾಪದವನ್ನು ತೆಗೆದುಕೊಳ್ಳಬೇಕೆ? ಕ್ರಿಯಾಪದವನ್ನೇ ತೆಗೆದುಕೊಂಡರೆ ಸಸ್ಯದ ಮಗನನ್ನು ಹರಿದು ಹಾಕುವುದು ಎಂದಾಗುತ್ತದೆ. ಅಂದರೆ ಚಿಕ್ಕ ಚಿಕ್ಕ ಗಿಡಗಳನ್ನು ಕೀಳುವುದು ಎಂದು ಅರ್ಥೈಸಬಹುದು. ನೀವು ಆ ಹೋಟೆಲಿಗೆ ಹೋದರೆ ಕಳೆಗಿಡಗಳನ್ನು ಕೀಳುವ ಕೆಲಸ ಮಾಡಬೇಕಾಗುತ್ತದೆ.

“ಶುದ್ಧಾಶುದ್ಧ ಪದಗಳ ಬಗ್ಗೆ ದೊಡ್ಡ ಕನ್ನಡ ಪಂಡಿತರಂತೆ ಭಾಷಣ ಬಿಗಿಯುತ್ತಿದ್ದೀರಲ್ಲಾ, ಹಾಗಿದ್ದರೆ ಈ ಪದಗಳನ್ನು ಬರೆಯುವ ಸರಿಯಾದ ವಿಧಾನ ಯಾವುದು” ಎಂದು ಕೇಳುತ್ತೀದ್ದೀರಾ? ಸಸ್ಯಾಹಾರ, ಫಲಾಹಾರ, ಉಪಾಹಾರ. ಈ ಎಲ್ಲ ಪದಗಳಲ್ಲಿ ಸವರ್ಣದೀರ್ಘ ಸಂಧಿ ಬಳಕೆಯಾಗಿದೆ. ಇವುಗಳ ಸಂಧಿ ವಿಂಗಡಣೆ ಈ ರೀತಿ ಇದೆ –
ಸಸ್ಯ + ಆಹಾರ = ಸಸ್ಯಾಹಾರ
ಫಲ + ಆಹಾರ = ಫಲಾಹಾರ
ಉಪ + ಆಹಾರ = ಉಪಾಹಾರ
ಈ ತಪ್ಪು ಒಪ್ಪುಗಳ ಪಟ್ಟಿಯಲ್ಲಿ ನಮ್ಮ ವಿಷಯಕ್ಕೆ ಸಂಬಂಧಿಸಿದ ಒಂದು ಪದವನ್ನು ನಾನು ಉದ್ದೇಶಪೂರ್ವಕವಾಗಿ ಬಿಟ್ಟುಬಿಟ್ಟಿದ್ದೇನೆ. ಅದೇನೆಂದು ಕೊನೆಯಲ್ಲಿ ಹೇಳುತ್ತೇನೆ.

ಈ ಕನ್ನಡ ಪಾಂಡಿತ್ಯ ಪ್ರದರ್ಶನ ಬಿಟ್ಟು ನಮ್ಮ ಮೂಲ ವಿಷಯಕ್ಕೆ ಬರೋಣ. ವಿಮಾನದಲ್ಲಿ ಕೇವಲ vegetarian ಎಂದು ಬರೆಸಿದರೆ ಏನಾಗುತ್ತದೆ ಎಂದು ಹೇಳಿದ್ದೇನೆ. ಈ ವಿಷಯ ಗೊತ್ತಿದ್ದ ನಾನು ಯಾವಾಗಲೂ strictly vegetarian ಎಂದು ಬರೆಸುತ್ತೇನೆ. ಒಮ್ಮೆ ಫ್ರಾಂಕ್‌ಫರ್ಟ್ ಮೂಲಕ ಅಮೇರಿಕಾಕ್ಕೆ ಹೋಗುವಾಗ ಇನ್ನೂ ಹೆಚ್ಚಿಗೆ ಸುರಕ್ಷಿತವಾಗಿರಲಿ ಎಂದುಕೊಂಡು strictly Indian vegetarian ಎಂದು ಬರೆಸಿದ್ದೆ. ಅದರ ಪರಿಣಾಮ ಏನು ಗೊತ್ತೆ? ನನಗೆ ಊಟವೇ ಸಿಗಲಿಲ್ಲ. ಎಲ್ಲರಿಗೆ ಊಟ ಕೊಡುವಾಗ ನನಗೆ vegetarian meal ಎಂದು ಲೇಬಲ್ ಅಂಟಿಸಿದ್ದ ಡಬ್ಬಿ ಬರುತಿತ್ತು. ಅದರೊಳಗಡೆ ಕೆಲವು ಎಲೆ ಮತ್ತು ಚಿಕ್ಕ ಗಿಡಗಳ ಕಾಂಡಗಳು ಇರುತಿದ್ದವು. ಗಿಡಗಳ ಕೊಂಬೆ ರೆಂಬೆಗಳನ್ನೇ ತಿನ್ನಬೇಕಾಯಿತು. ಸಸ್ಯಗಳ ಕೊಂಬೆ ರೆಂಬೆ ಎಲೆಗಳು ಎಂದು ಹೇಳಿದುದನ್ನು ನೆನಪಿಟ್ಟುಕೊಳ್ಳಿ. ಯಾಕೆ ಎಂದು ಕೊನೆಯಲ್ಲಿ ಹೇಳುತ್ತೇನೆ.

ನಮಗೆಲ್ಲ ಹೋಟೆಲಿಗೆ ಹೋದಾಗ ಸಲಾಡ್ ತಿಂದು ಅಭ್ಯಾಸ ಇದೆ ತಾನೆ? ನಮ್ಮ ಪ್ರಕಾರ ಸಲಾಡ್ ಎಂದರೆ ಕತ್ತರಿಸಿದ ಹಸಿ ತರಕಾರಿ. ಆದರೆ ಅಮೇರಿಕಾದಲ್ಲಿ ಸಲಾಡ್ ಎಂದರೆ ನನಗೆ ವಿಮಾನದಲ್ಲಿ ಕೊಟ್ಟಂತಹ ಊಟ. ಅದರಲ್ಲಿ ಯಾವುದೇ ತರಕಾರಿ ಇರುವುದಿಲ್ಲ. ಗಿಡಮರಗಳ ಕೊಂಬೆರೆಂಬೆ ಮತ್ತುಎಲೆಗಳು ಮಾತ್ರ ಇರುತ್ತವೆ. ಸಲಾಡ್ ತಿಂದು ಹೊಟ್ಟೆಯೇನೋ ತುಂಬಬಹುದು. ಆದರೆ ಅದರಲ್ಲಿ ನಿಮ್ಮ ದೇಹವೆಂಬ ಯಂತ್ರವನ್ನು ನಡೆಸಲು ಬೇಕಾಗುವ ಕ್ಯಾಲೊರಿ ಇರುವುದಿಲ್ಲ. ಗುಡಾಣದಂತಹ ದೇಹ ಹೊತ್ತ ಅಮೆರಿಕನರಿಗೆ ಕ್ಯಾಲೊರಿಯಿಲ್ಲದೆ ಕೇವಲ ಹೊಟ್ಟೆ ತುಂಬಿಸಲು ಮಾತ್ರ ಅವರ ಸಲಾಡ್ ಪ್ರಯೋಜನಕಾರಿ. ನಮ್ಮಂತಹ ಶಾಕಾಹಾರಿಗಳಿಗಲ್ಲ.

ನಾನು ಪ್ರಾರಂಭಿಸಿದಲ್ಲಿಗೆ ಅಂದರೆ ತೈವಾನಿಗೆ ಮತ್ತೊಮ್ಮೆ ಹೋಗೋಣ. ನಾನು ಶಾಕಾಹಾರಿ ಎಂದು ತಿಳಿದ ನನ್ನ ಸಹೋದ್ಯೋಗಿಗಳು ಒಂದು ಒಳ್ಳೆಯ ಕೆಲಸ ಮಾಡಿದರು. ನನ್ನ ಪ್ರಯೋಗಾಲಯದಲ್ಲೇ, ನನ್ನ ವಿಭಾಗದಲ್ಲೇ ಎಂಎಸ್‌ಸಿ ಮಾಡುತ್ತಿದ್ದ ಯೀ ಶಿನ್ ಲೀ ಎಂಬ ಒಬ್ಬ ಬೌದ್ಧ ಧರ್ಮದ ಹುಡುಗಿಯನ್ನು ಪರಿಚಯಿಸಿದರು. ನಮ್ಮ ವಿಶ್ವವಿದ್ಯಾಲಯದ ಸುತ್ತಮುತ್ತ ಇರುವ ಎಲ್ಲ ಶಾಕಾಹಾರಿ ಹೋಟೆಲುಗಳನ್ನು ನನಗೆ ಪರಿಚಯಿಸುವ ಕೆಲಸವನ್ನೂ ಆಕೆಗೆ ವಹಿಸಿದರು. ತೈವಾನಿನಲ್ಲಿ ಬೌದ್ಧ ಧರ್ಮೀಯರ ಹೋಟೆಲುಗಳು ತುಂಬ ಇವೆ ಎಂದು ನನಗೆ ಆಗಲೇ ಗೊತ್ತಾದುದು. ಈ ಹೋಟೆಲುಗಳಲ್ಲಿ ಅಪ್ಪಟ ಸಸ್ಯಾಹಾರಿ ಆಹಾರ ಮಾತ್ರ ಸಿಗುತ್ತದೆ. ಎಲ್ಲ ನಮೂನೆಯ ಅಕ್ಕಿ, ತರಕಾರಿ, ಸಸ್ಯಗಳ ಕೊಂಬೆ ರೆಂಬೆ ಎಲೆಗಳನ್ನೆಲ್ಲ ಬೇಯಿಸಿ (ಬೇರೆ ಬೇರೆಯಾಗಿ, ಒಟ್ಟಿಗೆ ಅಲ್ಲ) ಇಟ್ಟಿರುತ್ತಾರೆ. ನಮಗೆ ಬೇಕಾದುದನ್ನು ಬೇಕಾದಷ್ಟು ತಟ್ಟೆಯಲ್ಲಿ ಹಾಕಿಕೊಂಡು ಕೊನೆಗೆ ಕೌಂಟರ್‌ಗೆ ಹೋದಾಗ ಒಂದು ಯಂತ್ರದಲ್ಲಿ ತೂಕ ನೋಡಿ ಬಿಲ್ಲು ಮಾಡುತ್ತಾರೆ. ಎಲ್ಲ ನಮೂನೆಯ ಆಹಾರಕ್ಕೂ ತೂಕ ಪ್ರಕಾರ ಒಂದೇ ಬೆಲೆ! ಸಸ್ಯಗಳ ಕೊಂಬೆ ರೆಂಬೆ ಎಲೆಗಳು ಎಂದು ಹೇಳಿದುದನ್ನು ನೆನಪಿಟ್ಟುಕೊಳ್ಳಿ. ಯಾಕೆ ಎಂದು ಕೊನೆಯಲ್ಲಿ ಹೇಳುತ್ತೇನೆ.

ತೈವಾನಿನ ವಾಸ ಮುಗಿಯುತ್ತ ಬಂದಂತೆ ನನಗೆ ಇನ್ನೊಂದು ಭೋಜನಕೂಟದಲ್ಲಿ ಭಾಗವಹಿಸಬೇಕಾಗಿ ಬಂತು. ಪ್ರಯೋಗಾಲಯದ ಎಲ್ಲರಿಗೂ ನಮ್ಮ ಬಾಸ್ ವರ್ಷಕ್ಕೊಮ್ಮೆ ಪಾರ್ಟಿ ನೀಡುವ ಪದ್ಧತಿ. ಅದರಂತೆ ಭೋಜನಕೂಟ ಇತ್ತು. ಈ ಸಲ ಏನು ನೋಡಬೇಕಾಗುತ್ತೋ ಎಂದು ಹೆದರಿಕೊಂಡೇ ಹೋದೆ. ಸ್ವಾಗತ ಭೋಜನಕೂಟಕ್ಕಿಂತ ಇದ ಭಿನ್ನವಾಗೇನೂ ಇರಲಿಲ್ಲ. ಆದರೆ ಶಾಕಾಹಾರವೂ ಸಿಗುವಂತಹ ಹೋಟೆಲನ್ನು ಆಯ್ದುಕೊಂಡಿದ್ದರು. ಜೊತೆಗೆ ಧೈರ್ಯಕ್ಕೆ ಶುದ್ಧ ಶಾಕಾಹಾರಿಯಾದ ಯೀ ಶಿನ್ ಲೀ ಇದ್ದಳಲ್ಲ. ಆಕೆಯೇ ಒಂದೊಂದಾಗಿ ಶಾಕಾಹಾರಿ ತಿಂಡಿಗಳನ್ನು ನಮ್ಮಿಬ್ಬರಿಗೆ ಆರ್ಡರ್ ಮಾಡಿದಳು. ಅವು ಬಂದಂತೆಲ್ಲ ನಾನು ಅವುಗಳ ಬಗ್ಗೆ ವಿವರಣೆ ಕೇಳುತ್ತಿದ್ದೆ. ಆಕೆ ಹೇಳುತ್ತಿದ್ದಳು. ಮೊದಲಿಗೆ ಬಂದುದರ ಬಗ್ಗೆ ಹೇಳಿದಳು -ಇದು sea weed ಎಂದು. ಹಾಗೆಂದರೆ ಸಮುದ್ರಕಳೆ ಅಥವಾ ಸಮುದ್ರದಲ್ಲಿ ಬೆಳೆಯುವ ಪಾಚಿ, ಜೊಂಡು ಎಂದು ಮೈಸೂರು ವಿಶ್ವವಿದ್ಯಾನಿಲಯದವರು ಪ್ರಕಟಿಸಿದ ನಿಘಂಟುವಿನಲ್ಲಿ ವಿವರಣೆ ನೀಡಲಾಗಿದೆ. ತಂತರ ಬಂದುದು ಬೆತ್ತದ ತುಂಡುಗಳಂತೆ ಇದ್ದವು. ಅವು ಎಳೆ ಬಿದಿರಿನ ಜಾತಿಯ ಸಸ್ಯ ಎಂದು ತಿಳಿಯಿತು. ಹೀಗೆ ಹಲವಾರು ರೀತಿಯ ಸಸ್ಯಗಳ ಕೊಂಬೆ ರೆಂಬೆಗಳನ್ನು ತಿಂದುದಾಯಿತು. ನನ್ನ ಹೊಟ್ಟೆಯ ಜೀರ್ಣಶಕ್ತಿ ಚೆನ್ನಾಗಿಯೇ ಇತ್ತು.

ಈಗ ನಮ್ಮ ಶುದ್ಧಾಶುದ್ಧ ಕನ್ನಡದ ಚರ್ಚೆಯನ್ನು ಮುಂದುವರಿಸೋಣ. ಶಾಕಾಹಾರಿ ಎಂಬ ಪದವನ್ನು ಕೆಲವರು ತಪ್ಪಾಗಿ ಶಾಖಾಹಾರಿ ಎಂದು ಬರೆಯುತ್ತಾರೆ. ಹೋಟೆಲುಗಳ ಬೋರ್ಡುಗಳಲ್ಲೂ ಇದೇ ತಪ್ಪು ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಶಾಕ ಎಂದರೆ ತರಕಾರಿ, ಕಾಯಿಪಲ್ಯೆ ಎಂದು ಅರ್ಥವಿದೆ. ಶಾಕ + ಆಹಾರ = ಶಾಕಾಹಾರ. ಇದು ಸವರ್ಣದೀರ್ಘ ಸಂಧಿ. ಶಾಖ ಎಂದರೆ ಕೊಂಬೆ ರೆಂಬೆ ಮತ್ತು ಉಷ್ಣ ಎಂಬ ಅರ್ಥಗಳಿವೆ. ಶಾಖಾಹಾರ ಎಂದರೆ ಕೊಂಬೆ ರೆಂಬೆಗಳನ್ನು ಆಹಾರವೆಂದು ತಿನ್ನುವುದು ಎಂಬ ಅರ್ಥ ಬರುತ್ತದೆ. ಈಗ ಹೇಳಿ. ನಾನು ತೈವಾನಿನಲ್ಲಿ ಮತ್ತು ವಿಮಾನಯಾನದಲ್ಲಿ ತಿಂದದ್ದು ಶಾಕಾಹಾರವೋ ಶಾಖಾಹಾರವೋ? ಎರಡೂ ಸರಿಯೆನ್ನುತ್ತೀರಾ?

13 Comments

  1. Sridhar Sridhar March 15, 2011

    Very interesting, lively, humorous article. This is also my experience too!
    Keep up the good work!
    Please let me know, if you travel to Australia (Canberra or Sydney), we can organise a Kannadigas get together!!
    Cheers
    Sridhar

  2. Sushrutha Sushrutha April 6, 2011

    ಹೆಹೆ.. ಚನಾಗಿದೆ ದ್ವಂದ್ವ. ನೀವು ವೆಜಿಟೇರಿಯನ್ ಮೀಲ್ ನಿರೀಕ್ಷಿಸುತ್ತಿದ್ದಾಗ ರೆಂಬೆ-ಕೊಂಬೆ ಕೊಟ್ಟು shock ಕೊಟ್ಟಿದ್ದರಿಂದ, ನನ್ನ ಪ್ರಕಾರ ಅಮೆರಿಕಾ ವಿಮಾನದಲ್ಲಿ ನಿಮಗೆ ಕೊಟ್ಟುದು shock-ಆಹಾರ ಅನ್ನಬಹುದು. 😉

    ಪ್ರಬಂಧ ಇಷ್ಟವಾಯ್ತು. ಲಘು-ವಿನೋದ ಶೈಲಿ ಬಿ.ಜಿ.ಎಲ್. ಸ್ವಾಮಿಯವರ ಬರಹಗಳನ್ನು ನೆನಪಿಸಿತು.

  3. pavanaja pavanaja April 15, 2011

    @Sridhar – ನಾನು ಸದ್ಯಕ್ಕಂತೂ ಆಸ್ಟ್ರೇಲಿಯಾಕ್ಕೆ ಬರುವ ಯೋಜನೆಯಲ್ಲಿಲ್ಲ.
    @Sushrutha -ಧನ್ಯವಾದಗಳು

    -ಪವನಜ

  4. M V Bhat M V Bhat June 5, 2011

    Chennagide…

  5. ramesh hassan ramesh hassan November 27, 2011

    well narrated, encouragingly humorous, fantastic article

  6. bhagya bhagya July 17, 2012

    hai
    e kahte tumba changide nimage rembe kombe galanu uta vagi nididga
    adanthha anubava supar

    from
    bhagya

  7. rk rk April 27, 2014

    Nimma thili hasya thilisarinanate tumba swagasigittu vandanegalu

  8. Shivakumar N Shivakumar N July 31, 2014

    Super

  9. Raghavendra Raghavendra April 18, 2020

    ತುಂಬಾ ಸ್ವಾರಸ್ಯಕರವಾದ ಲೇಖನ. ಸಣ್ಣ ಸಣ್ಣ ಪದಗಳನ್ನೂ ತಪ್ಪಾಗಿ ಬಳಸುವುದನ್ನ ತಪ್ಪಿಸಲು ನಿಜವಾಗಿಯೂ ನಿಮ್ಮ ಲೇಖನ ಸಹಕಾರಿ. ಧನ್ಯವಾದಗಳು ಸರ್.

  10. Gireesh Gireesh April 18, 2020

    Very nice article sir, while traveling in Bangalore many of these false name boards I have seen, Many of these are happening because of Tamilian owner’s (I felt).
    Many of the things you asked us to remember , but there is nothing in the end. Is it going to continue?

    Regards
    Gireesh

  11. Manjunath Bhandari Manjunath Bhandari August 1, 2021

    ಫೇಸ್ಬುಕ್ಕಿನಿಂದ ಸಿಕ್ಕ ಲಿಂಕ್ ಬಳಸಿಕೊಂಡು ಬಂದು ಓದಿದೆ, ನನ್ನ ಈಗ ಸಂಪೂರ್ಣ ವೆಬ್ಸೈಟ್’ಲ್ಲಿರುವುದನ್ನು ಓದಬೇಕಿದೆ, ಈ ಬರಹ ತುಂಬಾ ಇಷ್ಟವಾಯ್ತು ಸರ್

  12. Shankara Shendre Shankara Shendre February 9, 2024

    ಒಂದು ಪದದ ಅರ್ಥ ವ್ಯಾಖ್ಯಾನದ ನೆಪದಲ್ಲಿ ತೈವಾನ್, ಮಹಾಭಾರತ, ಅಮೇರಿಕ ದೇಶಗಳನ್ನು ಸುತ್ತಿಸುತ್ತಾ ಅಲ್ಲಿನ ಆಹಾರ ಪದ್ಧತಿ, ಅಲ್ಲಿನ ಜನರು ತಮ್ಮ ಊಟವನ್ನು ಸವಿಯುವ ಕ್ಷಣಗಳನ್ನು ನೆನಪಿಸುವ ಸುಂದರ, ಹಾಸ್ಯ ಮಿಶ್ರಿತ ಲಿಲಿತ ಪ್ರಭಂಧವನ್ನು ಹೆಣೆದಿದ್ದೀರ. ಧನ್ಯವಾದಗಳು.

Leave a Reply

Your email address will not be published. Required fields are marked *