ವೈರಸ್ ಜಟಾಪಟಿ
[ಕಂಪ್ಯೂಟರ್ ವೃತ್ತಿಯಲ್ಲಿರುವ ಸಂಧ್ಯ ಪ್ರವೇಶಿಸುತ್ತಾಳೆ]
ಸಂಧ್ಯ : ಇವೊತ್ತಿನ ಈ ಮೈಲ್‌ಗಳು ಎಷ್ಟಿವೆ ಏನೇನಿವೆ ನೋಡೋಣ.
[ಲ್ಯಾಪ್‌ಟಾಪ್ ತೆರೆದು ಕೀಬೋರ್ಡ್ ಮೇಲೆ ಕುಟ್ಟುತ್ತಾಳೆ. ಮುಖ ಸೊಟ್ಟಗೆ ಮಾಡುತ್ತಾಳೆ.]
ಸಂಧ್ಯ: ಥೂ, ಈ ದರಿದ್ರ ವೈರಸ್‌ಗೆ ಈವೊತ್ತೇ ಬೇಕಿತ್ತೇ ನನ್ನ ಕಂಪ್ಯೂಟರ್‌ಗೆ ಬಂದು ಉಪದ್ರ ಮಾಡಲು?
[ವೈದ್ಯಕೀಯ ವೃತ್ತಿಯಲ್ಲಿರುವ ಸೌಮ್ಯ ಪ್ರವೇಶಿಸುತ್ತಾಳೆ]
ಸೌಮ್ಯ: ಏನೇ ಸಂಧ್ಯ? ಹ್ಯಾಗಿದ್ದೀಯಾ? ಅದ್ಯಾಕೆ ಹಾಗೆ ಹರಳೆಣ್ಣೆ ಕುಡಿದೋರ ತರಾ ಮುಖ ಸೊಟ್ಟಗೆ ಮಾಡ್ಕೊಂಡು ಕೂತಿದ್ದೀಯಾ?
ಸಂಧ್ಯ: ಈ ದರಿದ್ರ ನಿಮ್ ಬುಡ ನನ್ ಬುಡಕ್ಕೇ ಬಂದು ಕಿರಿಕಿರಿ ಮಾಡ್ತಿದೆ ಕಣೇ.
ಸೌಮ್ಯ: ಏನೇ ಅದು? ನನ್ನನ್ನ ಏಕ ವಚನ ಬಿಟ್ಟು ಬಹುವಚನದಲ್ಲಿ ಮಾತಾಡಿಸೊಕ್ಕೆ ಸುರು ಮಾಡಿಬಿಟ್ಟೆ?
ಸಂಧ್ಯ: ನಾನೆಲ್ಲೇ ನಿನ್ನ ಬಹುವಚನದಲ್ಲಿ ಮಾತಾಡಿಸಿದೆ ಈಗ?
ಸೌಮ್ಯ: ಮತ್ತೆ ಈಗಷ್ಟೆ ನಿಮ್ ಬುಡ ನನ್ ಬುಡಕ್ಕೆ ಬಂದಿದೆ ಅಂದೆ!
ಸಂಧ್ಯ: ಥೂ ನಿನ್ನ. ನಾನು ನಿಮ್ ಬುಡ ಅಂದಿದ್ದು ನಿನ್ನನ್ನು ಅಲ್ಲ ಕಣೇ. ಅದು ಒಂದು ವೈರಸ್‌ನ ಹೆಸರು. ಅದು ನನಗೆ ಕಾಟ ಕೊಡುತ್ತಿದೆ.
ಸೌಮ್ಯ: ಅದು ಯಾವ ವೈರಸ್ಸೇ? ನಾನು ಅದರ ಹೆಸರೇ ಕೇಳಿಲ್ಲ.
ಸಂಧ್ಯ: ಅದೊಂದು ಹೊಸಾ ವೈರಸ್ಸು. ಈವತ್ತು ತಾನೆ ಇಲ್ಲಿಗೆ ಬಂದಿದೆ. ನೀನು ಹೇಳೋದು ನೋಡಿದ್ರೆ ನಿಂಗೆ ತುಂಬಾ ವೈರಸ್ಸುಗಳ ಹೆಸರುಗಳು ಗೊತ್ತಿರುವ ಹಾಗಿದೆ. ನಿಂಗೆ ಎಷ್ಟು ವೈರಸ್ಸುಗಳು ಗೊತ್ತಿವೆ ಹೇಳು ನೋಡುವಾ?
ಸೌಮ್ಯ: ಏನು ನಂಗೆ ವೈರಸ್ಸುಗಳ ಬಗ್ಗೆ ಏನೂ ಗೊತ್ತಿಲ್ಲ ಅಂದ್ಕೊಂಡುಬಿಟ್ಟಿಯಾ? ನಂಗೆ, ಎಚ್‌ಐವಿ, ಫ್ಲೂ, ಹೆಪಟೈಟಿಸ್, ಮತ್ತೆ ಇನ್ನೂ ಸುಮಾರು ವೈರಸ್ಸುಗಳ ಬಗ್ಗೆ ಗೊತ್ತು ಗೊತ್ತಾ?
ಸಂಧ್ಯ: ಹ್ಹೆ ಹ್ಹೆ ಹ್ಹೆ. ನಾನು ಹೇಳಿದ್ದು ಆ ವೈರಸ್ಸುಗಳ ಬಗ್ಗೆ ಅಲ್ಲ. ಹೋಗ್ಲಿ. ನಿಂಗೆ ಬ್ರೈನ್, ಸ್ಟೋನ್, ಬಗ್‌ಬೇರ್, ಜೋಶಿ ವೈರಸ್ಸುಗಳು ಗೊತ್ತಾ?
ಸೌಮ್ಯ: ನಂಗೆ, ಬ್ರೈನ್ ಅಂದ್ರೆ ನಮ್ಮ ಮೆದುಳು ಗೊತ್ತು. ಆದ್ರೆ ಬ್ರೈನ್ ವೈರಸ್ ಆದದ್ದು ಯಾವಾಗ? ಸ್ಟೋನ್ ಅಂದ್ರೆ ಕಲ್ಲು ಗೊತ್ತು. ಆದ್ರೆ ಅದು ಕೂಡ ವೈರಸ್ ಅಲ್ಲ. ಜೋಶಿ ಅಂತ ಒಬ್ಬ ವ್ಯಕ್ತಿ ನಂಗೆ ಗೊತ್ತು. ಅವನ್ಯಾವಾಗ ವೈರಸ್ ಆದ?
ಸಂಧ್ಯ: ಮತ್ತೆ ಬಗ್‌ಬೇರ್ ಯಾಕೆ ಬಿಟ್ಟೆ? ಅದಕ್ಕೇನೂ ಹೊಳೀಲಿಲ್ವೆ?
ಸೌಮ್ಯ: ಅದೇನೇ ಬಗ್‌ಬೇರ್? ಹಾಗಂದ್ರೆ ತಿಗಣೆ ಕರಡಿ ಅಂತಲೇ?
ಸಂಧ್ಯ: ಅದಕ್ಕೇ ಹೋಳೋದು, ನಿಮ್ಮಂತ ಡಾಕ್ಟ್ರುಗಳ ತಲೇಲೇ ವೈರಸ್ಸ್ ತುಂಬ್ಕೊಂಡ್ ಬಿಟ್ಟಿದೆ ಅಂತ
ಸೌಮ್ಯ: ಅದ್ಯಾಕೆ ಹಂಗಂತೀಯಾ? ನಾವು ಎಷ್ಟು ವೈರಸ್‌ಗಳು ನಮ್ಮ ದೇಹಕ್ಕೆ ಬಾರದ ಹಾಗೆ ಮೊದ್ಲೇ ವ್ಯಾಕ್ಸಿನೇಶನ್ ಮಾಡ್ತೀವಿ ಗೊತ್ತಾ? ನೀನೂ ವ್ಯಾಕ್ಸಿನೇಶನ್ ಮಾಡಿಸ್ಕೊಂಡಿದ್ರೆ ನಿಂಗೆ ಈ ನನ್ ಬುಡವೋ ನಿಮ್ ಬುಡವೋ ಅದೇನೋ ಹೇಳ್ತಿದ್ದಿಯಲ್ಲ, ಅದು ಬರ್‍ತಿರಲಿಲ್ಲ.
ಸಂಧ್ಯ: ನೀವ್ ಡಾಕ್ಟ್ರುಗಳಿಗೆ ನಿಮ್ ಫೀಲ್ಡ್ ಬಿಟ್ಟ್ ಬೇರೆ ಫೀಲ್ಡ್ ಬಗ್ಗೆ ಏನೇನೂ ಗೊತ್ತಿಲ್ಲ. ನಿನ್ ಕಿಡ್ನಿ ಒಳಗೇ ವೈರಸ್ ಸೇರ್‍ಕೊಂಡ್ ಬಿಟ್ಟಿದೆ. ನಾನು ಹೇಳ್ತಾ ಇರೋ ವೈರಸ್ಸೇ ಬೇರೆ. ನೀನ್ ಹೇಳ್ತಾ ಇರೋ ವೈರಸ್ಸೇ ಬೇರೆ.
ಸೌಮ್ಯ: ಅದ್ ಹ್ಯಾಗೆ ಬೇರೆ ಬೇರೆ?
ಸಂಧ್ಯ: ನಾನ್ ಹೇಳ್ತಾ ಇರೋದು ಕಂಪ್ಯೂಟರ್‌ಗೆ ಬರೊ ವೈರಸ್ಸು ಬಗ್ಗೆ. ನೀನೋ ಮನುಷ್ಯರ ದೇಹದಲ್ಲಿ ಸೇರ್‍ಕೊಂಡು ಕಾಟ ಕೊಡೋ ವೈರಸ್ ಬಗ್ಗೆ ಹೇಳ್ತಾ ಇದ್ದೀಯಾ.
ಸೌಮ್ಯ: ಕಂಪ್ಯೂಟರ್‌ಗೂ ವೈರಸ್ ಕಾಟ ಇದೆಯೇನೇ? ಕಂಪ್ಯೂಟರ್‌ಗೆ ಜೀವಾನೇ ಇಲ್ಲ. ಅದಕ್ಕೆ ಹ್ಯಾಗೆ ವೈರಸ್ ಬರಲು ಸಾಧ್ಯ?
ಸಂಧ್ಯ: ಕಂಪ್ಯೂಟರ್‌ಗೂ ವೈರಸ್ ಬರುತ್ತೆ ಗೊತ್ತಾ? ಆದ್ರೆ ಅದು ಜೀವಿಗಳಿಗೆ ಬರೋ ವೈರಸ್ ಅಲ್ಲ. ಅದೂ ಒಂದು ತರಾ ಪ್ರೋಗ್ರಾಂಏ. ಇನ್ನೂ ಸರಿಯಾಗಿ ಹೇಳಬೇಕೆಂದ್ರೆ ಪ್ರೋಗ್ರಾಂ ಒಳಗೆ ಸೇರ್‍ಕೊಂಡು ತರ್‍ಲೆ ಎಬ್ಬಿಸೋ ಇನ್ನೊಂದು ಚಿಕ್ಕ ಪ್ರೋಗ್ರಾಂ. ಇವುಗಳ ಬಗ್ಗೆ ಪೂರ್ತಿಯಾಗಿ ತಿಳ್ಕೋಬೇಕಾದ್ರೆ ಇನ್ನೊಮ್ಮೆ ದೊಡ್ಡ ಭಾಷಣ ಕೊಡ್ತೀನಿ. ಈಗ ಅದ್ಕೆ ಟೈಮಿಲ್ಲ.
ಸೌಮ್ಯ: ಸರಿ. ಆಗ್ಬಹುದಮ್ಮ. ನಿಂಗೆ ಪುರುಸೊತ್ತಾದಾಗ ವಿವರವಾಗಿ ಹೇಳು. ವೈರಸ್‌ಗಳ ಬಗ್ಗೆ, ಅಂದ್ರೆ ಜೀವಿಗಳಿಗೆ ಕಾಟ ಕೊಡೋ ವೈರಸ್‌ಗಳ ಬಗ್ಗೆ ಒಂದು ಸ್ವಾರಸ್ಯಕರವಾದ ಥಿಯರಿ ಇದೆ ಗೊತ್ತಾ?
ಸಂಧ್ಯ: ಇಲ್ಲಮ್ಮ. ಅದೇನು? ಚಿಕ್ಕದಾಗಿ ಹೇಳೋ ಹಾಗಿದ್ರೆ ಹೇಳು ನೋಡುವಾ.
ಸೌಮ್ಯ: ಮಂಗನಿಂದ ಮಾನವ ಎಂಬ ವಿಕಾಸವಾದ ನಿಂಗೆ ಗೊತ್ತಿದೆ ತಾನೆ? ಚಿಂಪಾಂಜಿಗಳ ದೇಹದಲ್ಲಿ ಸೇರಿಕೊಂಡ ಯಾವುದೋ ಒಂದು ವೈರಸ್ಸಿನ ಕಿತಾಪತಿಯಿಂದಾಗಿ ಚಿಂಪಾಂಜಿ ವಿಕಾಸವಾಗಿ ಮನುಷ್ಯನಾಯಿತು ಎಂಬುದೇ ಆ ವಾದ.
ಸಂಧ್ಯ: ಚೆನ್ನಾಗಿದೆ. ಆದ್ರೆ ನನ್ನ ಕಂಪ್ಯೂಟರ್‌ನಲ್ಲಿ ಸೇರ್‍ಕೊಂಡಿರೋ ವೈರಸ್ಸಿನಿಂದಾಗಿ ಅದು ವಿಕಾಸವಾಗಿ ಮನುಷ್ಯನಾಗೊಲ್ಲ ಎಂದು ನಾನು ಗ್ಯಾರಂಟಿ ಕೊಡ್ತೇನೆ.
ಸೌಮ್ಯ: ಅಲ್ಲ ಕಣೇ. ನಾನು ಬಂದು ಇಷ್ಟು ಹೊತ್ತಾಯಿತು. ಏನು ಕಾಫಿ ಗೀಪಿ ಕೊಡೊಲ್ವೇ?
ಸಂಧ್ಯ: ಹೌದಲ್ಲ. ಮರೆತೇ ಹೋಗಿತ್ತು. ಬಾ. ಕಾಫಿ ಕೊಡ್ತೀನಿ. ಗೀಪಿ ಕೊಡೊಲ್ಲ.
-ಪವನಜ ಯು. ಬಿ.