ಮೊಳೆಗಳು ಸಾರ್ ಮೊಳೆಗಳು

‘ಥೋಥೋಥೋ! ಈ ವರ್ಲೆ ಕಾಟದಗೆ ಆಗ್ಲಿಲ್ಲಪ್ಪಾ’ ಅಂತ ಅಜ್ಜಿ ಆಗಾಗ ಕೂಗುತ್ತಿದ್ದಳು. ಅಜ್ಜಿಯಷ್ಟೇ ಏನು- ಅಪ್ಪ, ಅಮ್ಮ, ನಾನು -ಎಲ್ಲರೂ ಒಂದಿಲ್ಲೊಂದು ಹೊತ್ತಿನಲ್ಲಿ ವರಲೆ ಹುಳುಗಳನ್ನು ಬೈದುಕೊಂಡವರೇ. ಏಕೆಂದರೆ ವರಲೆ ಹುಳುಗಳ ಗತ್ತು-ಗಮ್ಮತ್ತು ಹಾಗಿತ್ತು ಆಗ. ಮಣ್ಣಿನ ಗೋಡೆಯಿಂದಾದ ನಮ್ಮ ಮನೆ ಅವಕ್ಕೆ ಅರಮನೆಯಾಗಿತ್ತು. ಕಾಡುಮರದ ತೊಲೆಗಳು, ಅಡಿಕೆ ದಬ್ಬೆಯ ರೀಪುಗಳು, ಎಳೆಯ ನಾಟಾದಿಂದ ಮಾಡಿದ್ದ ಮುಂಡಿಗೆಗಳು –ಅವಕ್ಕೆ ಸುಗ್ರಾಸ ಕೂಳು ಒದಗಿಸುತ್ತಿದ್ದವು. ಮಣ್ಣಿನ ಗೋಡೆಯಲ್ಲಿ ಎಲ್ಲಿ ತಟ್ಟಿದರೂ ವರಲೆ ಹುಳುಗಳು ಕೊರೆದ ದೊರಗಿನಿಂದಾಗಿ ಗೋಡೆ ಕಳಚಿಕೊಂಡು ಬರುತ್ತಿತ್ತು.

 

ಇದರಿಂದಾದ ದೊಡ್ಡ ಸಮಸ್ಯೆ ಎಂದರೆ ನಾವು ಹೊಸದಾಗಿ ತಂದ ವಸ್ತುಗಳನ್ನು ನೇತುಬಿಡಲು ಮೊಳೆ ಹೊಡೆಯಲು ಹೋದರೆ, ಮೊಳೆಯನ್ನು ಗೋಡೆಯ ಮೇಲಿಟ್ಟರೆ ಸಾಕು, ಮೊಳೆ ತಾನಾಗೇ ಒಳಗೆ ಹೋಗುತ್ತಿತ್ತು! ನಿರುದ್ಯೋಗ ಸಮಸ್ಯೆಗೆ ಒಳಗಾದ ಸುತ್ತಿಗೆ ಬೆಪ್ಪುತಕ್ಕಡಿಯಂತೆ ಮಿಕಮಿಕ ನೋಡುತ್ತಿತ್ತು. ಭಾರವಾದ ವಸ್ತುಗಳನ್ನು ಬಿಡಿ, ಒಂದು ಕ್ಯಾಲೆಂಡರ್ ನೇತುಹಾಕಬೇಕೆಂದರೂ ಮೂರ್ನಾಲ್ಕು ಕಡೆ ಪ್ರಯತ್ನಿಸಿ ಕೊನೆಗೆ ಎಲ್ಲೋ ಒಂದು ಮೂಲೆಯಲ್ಲಿ, ವರಲೆ ಹುಳುಗಳ ಹಸಿವಿಗೆ ತುತ್ತಾಗದ ಗೋಡೆಯ ಭಾಗದಲ್ಲಿ ಕ್ಯಾಲೆಂಡರಿಗೆ ಜಾಗ ಸಿಗುತ್ತಿತ್ತು.

 

ಅಂತೂ ಕ್ಯಾಲೆಂಡರ್ ನೇತುಹಾಕಿದೆ, ಕೆಲಸ ಮುಗಿಯಿತು ಅಂತ ಕೂರಲು ಸಾಧ್ಯವೇ? ಈ ಕ್ಯಾಲೆಂಡರ್ ನೇತುಹಾಕುವ ಪ್ರಯತ್ನದಲ್ಲಿ ಗೋಡೆಯ ವಿವಿಧ ಭಾಗಗಳಲ್ಲಿ ಮಾಡಿದ ಹಾನಿಯನ್ನು ಸರಿಪಡಿಸಬೇಕಲ್ಲವೇ? ಇಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುತ್ತಿದ್ದುದು ಪೋಸ್ಟರುಗಳು! ಪೇಟೆಯ ಬೀದಿಬದಿ ಮಾರಲ್ಪಡುತ್ತಿದ್ದ, ನಾವೆಂದೂ ನೋಡದ ಜಲಪಾತವೋ, ಹೂದೋಟವೋ, ಹಿಮವದ್ಪರ್ವತವೋ ಅಥವಾ ಇಷ್ಟದ ನಟ-ನಟಿಯರ ಚಿತ್ರವನ್ನು ಹೊಂದಿದ ಫಳಫಳ ಹೊಳೆವ ಪೋಸ್ಟರು ತಂದು ಗೋಡೆಯ ಹಾನಿಗೊಳಗಾದ ಭಾಗಕ್ಕೆ ಅಂಟಿಸುವುದು. ಅವಾದರೂ ಅಷ್ಟು ಸುಲಭಕ್ಕೆ ಅಂಟಿಕೊಳ್ಳುತ್ತವೆಯೇ? ಇಲ್ಲ.  ಆಗ ಮತ್ತೆ ಮೊಳೆಗಳ ಮೊರೆ ಹೋಗಬೇಕು. ಸಣ್ಣ ಕುಕ್ಕುಮೊಳೆಗಳಿಗೆ ದಪ್ಪನೆಯ ರಟ್ಟಿನ ಸಣ್ಣ ಚೂರನ್ನು ವಾಷರಿನಂತೆ ತೂರಿಸಿ ಆ ಪೋಸ್ಟರಿನ ನಾಲ್ಕೂ ಮೂಲೆಗಳಿಗೆ ಹೊಡೆಯುವುದು. ಮೊಳೆ ನಿಲ್ಲಲಿ ಅಂತ ಸಕಲ ದೇವರನ್ನೂ ಪ್ರಾರ್ಥಿಸುವುದು. ಪೋಸ್ಟರು ಗೋಡೆಯ ಮೇಲೆ ಐದಾರು ನಿಮಿಷ ನಿಂತಿತೋ, ಒಲಿಂಪಿಕ್ಸಿನಲಿ ಗೆದ್ದವರಂತೆ ಕುಣಿಯುವುದು.

 

ಮನೆಯಲ್ಲಿ ವರಲೆ ಹುಳುಗಳ ಕಾಟ ಅತಿಯಾಗಿ, ಹಳತಾಗಿದ್ದ ಮನೆ ಬೀಳುವ ಹಂತ ತಲುಪಿದಾಗ ಅಪ್ಪ ಹೊಸ ಮನೆ ಕಟ್ಟಿಸುವ ಆಲೋಚನೆ ಮಾಡಿದ. ಸಾಲವೋ ಸೋಲವೋ, ಹೊಸ ಮನೆ ಎಂದಮೇಲೆ ಗಟ್ಟಿಮುಟ್ಟಾಗಿರಬೇಕು. ಉತ್ತಮ ಗುಣಮಟ್ಟದ ಇಟ್ಟಿಗೆ, ಹೆಸರುವಾಸಿ ಕಂಪನಿಯ ಸಿಮೆಂಟು, ಎರಡೆರಡು ಸಲ ಸಾಣಿಸಿದ ಮರಳು, ಮೇಸ್ತ್ರಿಗಳ ಮೇಲೆ ಸದಾ ಕಣ್ಗಾವಲು –ಹೀಗೆ ಎಲ್ಲೂ ಕೊರತೆಯಾಗದಂತೆ ಮನೆ ಕಟ್ಟಿಸಿದ್ದಾಯಿತು. ಆ ಮನೆಗೆ ಪ್ರವೇಶವೂ ಆಯಿತು. ಅಲ್ಲಿಗೆ ಹೋದಮೇಲೆ ನಮಗೆ ಅರಿವಾಯಿತು, ಹಳೇಮನೆಯಲ್ಲಿದ್ದ ಹಾಗೆ ಇಲ್ಲಿ ಗೋಡೆಗೆ ಮೊಳೆ ಹೊಡೆಯುವುದು ಸುಲಭವಿಲ್ಲ! ಗಡಿಯಾರ, ಫೋಟೋಗಳು, ಮೂಲೆಸ್ಟಾಂಡುಗಳು, ಬಟ್ಟೆಯ ಹ್ಯಾಂಗರುಗಳು –ಹೀಗೆ ಹೊಸಮನೆಯಲ್ಲಿ ಮೊಳೆ ಹೊಡೆಸಿಕೊಳ್ಳಲು ಕಾತರರಾಗಿ ಕಾಯುತ್ತಿದ್ದ ಅನೇಕ ವಸ್ತುಗಳು ಇದ್ದವು. ಆದರೆ ನಾವು ಯಾವಾಗ ಸುತ್ತಿಗೆ-ಮೊಳೆ ಹಿಡಿದು ಗೋಡೆಯ ಬಳಿ ಬಂದೆವೋ, ಆಗ ಗೋಡೆ ರಾಹುಲ್ ದ್ರಾವಿಡ್ ಥರ ನಮ್ಮನ್ನು ಎದುರಿಸಿತು. ಅಪ್ಪ ಅರ್ಧ ಇಂಚಿನ ಒಂದು ಮೊಳೆ ಹಿಡಿದು ಸುತ್ತಿಗೆಯಿಂದ ಒಂದೇಟು ಕೊಟ್ಟ; ಗೋಡೆ ಕಂಕಿಂ ಎನ್ನಲಿಲ್ಲ.  ಬಲ ಸೇರಿಸಿ ಮತ್ತೂ ನಾಲ್ಕು ಏಟು ಕೊಟ್ಟ; ಆದರೆ ಗೋಡೆ ತನ್ನೊಳಗೆ ಮೊಳೆಯನ್ನು ಬಿಟ್ಟುಕೊಳ್ಳಲಿಲ್ಲ.  ಅಪ್ಪನ ಓವರ್  ಮುಗಿದಮೇಲೆ ನಾನು ಕಣಕ್ಕಿಳಿದೆ. ಸ್ಪೀಡು, ಬೌನ್ಸು, ಸ್ಪಿನ್ನು –ಎಲ್ಲವನ್ನೂ ಗೋಡೆ ಡಿಫೆಂಡ್ ಮಾಡಿತೇ ವಿನಃ ನಮ್ಮ ಮೇಲೆ ಕರುಣೆ ತೋರಿಸಲಿಲ್ಲ. ನಾನು-ಅಪ್ಪ ಮೊಳೆಗಳ ಮೇಲೆ ಮೊಳೆಗಳನ್ನು ಪ್ರಯೋಗಿಸಿದೆವು. ಬದಲಾಗಿ ನಮಗೆ ಸಿಕ್ಕಿದ್ದು ಬೆವರಹನಿ ಮಾತ್ರ. ಅರ್ಧಕ್ಕರ್ಧ ಮೊಳೆಗಳು ನೆಗ್ಗಿಹೋದವು. ಎಷ್ಟು ಬೇಕಾದರೂ ಪ್ರಯೋಗಿಸಲು ಇದೇನು ಟೆಸ್ಟ್ ಮ್ಯಾಚೇ? ಮೊಳೆಗಳು ಲಿಮಿಟೆಡ್ ಇದ್ದ ಕಾರಣ ನೆಗ್ಗಿಹೋದ ಮೊಳೆಗಳನ್ನೇ ಚಪ್ಪಡಿ ಕಲ್ಲಿನ ಮೇಲಿಟ್ಟು ಬಡಿದು ನೆಟ್ಟಗೆ ಮಾಡಿ ಮತ್ತೆ ಹೊಡೆಯುವ ಪ್ರಯತ್ನ ಮಾಡಿದೆವು. ಗಂಟೆಗಟ್ಟಲೆ ಒದ್ದಾಡಿ ಒಂದೆರಡು ಮೊಳೆಗಳನ್ನು ಗೋಡೆಯಲ್ಲಿ ನಿಲ್ಲಿಸುವ ಹೊತ್ತಿಗೆ ನಾವು ಬಸವಳಿದುಹೋಗಿದ್ದೆವು. ಮೇಸ್ತ್ರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆಂದು ನಮಗೆ ಹೆಮ್ಮೆಯಾಯಿತಾದರೂ ನೇತಾಡಲು ಕಾಯಿತ್ತಿದ್ದ ಹಲವು ವಸ್ತುಗಳನ್ನೀಗ ಏನು ಮಾಡುವುದು ಅಂತ ಚಿಂತೆಯಾಯಿತು.

 

ಆಗ ಬಂದ ಪ್ರಾಜ್ಞರು, ‘ಈ ಸಿಮೆಂಟು-ಕಾಂಕ್ರೀಟ್ ಗೋಡೆಗಳಿಗೆ ಮೊಳೆ ಹೊಡೆಯಕ್ಕೆ ಸಾಧ್ಯ ಇಲ್ಲ ಮಾರಾಯಾ. ಒಂದು ಡ್ರಿಲ್ಲಿಂಗ್ ಮಶೀನ್ ತಗಬೇಕು ನೀವು’ ಅಂತ ಹೇಳಿದರು. ಮೊದಲೇ ಮನೆ ಕಟ್ಟಿಸಿ ಬಸವಳಿದಿದ್ದ ನಮಗೆ ಮತ್ತೆ ಡ್ರಿಲ್ಲಿಂಗ್ ಮಶೀನಿಗೆ ಸಾವಿರಾರು ರೂಪಾಯಿ ದುಡ್ಡು ಹಾಕುವ ಸಂಕಷ್ಟ ಬಂತಲ್ಲಪ್ಪಾ ಅಂತ ತಲೆಬಿಸಿಯಾಯಿತು. ಈ ಸಂದರ್ಭದಲ್ಲಿ ಬಂದ ಮತ್ಯಾರೋ ಹೇಳಿದರು, ‘ಈಗೆಲ್ಲ ನೇತುಹಾಕುವ ಹುಕ್ಕುಗಳು ಪೇಟೆಗೆ ಬಂದಿವೆ. ಅದರ ಹಿಂದೆಯೇ ಗಮ್ ಇರೋ ಸ್ಟಿಕ್ಕರ್ ಇರುತ್ತೆ. ಅದನ್ನ ತೆಗೆದು ಅಂಟಿಸಿದ್ರೆ ಆಯ್ತು.  ಕ್ಯಾಲೆಂಡರ್-ಫೋಟೋಗಳಂತಹ ಹಗುರವಾದ ವಸ್ತುಗಳನ್ನು ನೇತುಹಾಕಬಹುದು’ ಅಂತ.  ಸರಿ, ಅಪ್ಪ ಹೋಗಿ ಸ್ಟೇಶನರಿ ಅಂಗಡಿಯಿಂದ ಇಂತಹ ಒಂದಷ್ಟು ಹ್ಯಾಂಗಿಂಗ್ ಹುಕ್ಕುಗಳನ್ನು ತಂದ. ನಾನು ಬೇಕಾದ ಜಾಗಗಳಲ್ಲಿ ಅವನ್ನು ಅಂಟಿಸಿ ಹಗುರ ವಸ್ತುಗಳನ್ನು ತೂಗುಹಾಕಿದೆ. ಭಾರ ತಾಳುತ್ತದೆ ಅಂದುಕೊಂಡು ತೂಗುಹಾಕಿದ ಕೆಲ ವಸ್ತುಗಳು ಆ ಹುಕ್ಕಿನೊಂದಿಗೇ ಕಳಿಚಿಬಿದ್ದು ರಾಮಾಯಣವೂ ಆಯಿತು.

 

ಆದರೂ ಭಾರದ ವಸ್ತುಗಳನ್ನು ನೇತುಹಾಕಲಾಗದ ನಮ್ಮ ಸಮಸ್ಯೆ ಹಾಗೆಯೇ ಉಳಿದಿತ್ತು. ಅಪ್ಪ ಒಂದು ದಿನ ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದಾಗ, ಈಗ ಸ್ಟೀಲ್ ಮೊಳೆಗಳು ಬಂದಿರುವುದಾಗಿಯೂ, ಅವನ್ನು ಕಾಂಕ್ರೀಟ್ ಗೋಡೆಯ ಮೇಲಿಟ್ಟು ಹೊಡೆಯಬಹುದೆಂದೂ, ಅವು ಬೆಂಡ್ ಆಗುವುದಿಲ್ಲವೆಂದೂ ಹೇಳಿದರಂತೆ. ನಮ್ಮಂತವರಿಗೆ ವರದಾನವೆಂಬಂತೆ ಬಂದಿದ್ದ ಈ ಸ್ಟೀಲ್ ಮೊಳೆಗಳನ್ನು ತಂದಮೇಲೆ ನಮ್ಮ ಸಮಸ್ಯೆ ಅರ್ಧಕ್ಕರ್ಧ ಪರಿಹಾರವಾಯಿತು. ಅವನ್ನು ಗೋಡೆಗೆ ಹೊಡೆಯುವುದು ಶ್ರಮ ಬೇಡಿದರೂ ಸ್ಟೀಲ್ ಮೊಳೆಗಳು ಗಟ್ಟಿಮುಟ್ಟಾಗಿದ್ದು ನೆಗ್ಗಿಹೋಗದ ಕಾರಣ, ನಮ್ಮ ಮನೆಯಲ್ಲಿ ಗೋಡೆಯನ್ನಪ್ಪಬೇಕಿದ್ದ ವಸ್ತುಗಳ ಬಯಕೆ ಅಂತೂ ಇಂತೂ ಈಡೇರಿತು.

 

ನಾನು ನಗರಕ್ಕೆ ಬಂದು ಬಾಡಿಗೆ ಮನೆಗಳನ್ನು ಬದಲಿಸುವವನಾದಮೇಲೆ ಈ ಸಮಸ್ಯೆ ನನ್ನೊಂದಿಗೇ ಮುಂದುವರೆಯಿತು. ಈ ನಗರದ ಮನೆಗಳಲ್ಲಿ ಪ್ರತಿ ಸಲ ಹೊಸ ಬಾಡಿಗೆದಾರ ಬರುವ ಮುನ್ನ ಮನೆಯ ಹಾಳಾದ ವಸ್ತುಗಳನ್ನೆಲ್ಲ ರಿಪೇರಿ ಮಾಡಿಸಿ, ಗೋಡೆಗೆ ಹೊಸದಾಗಿ ಬಣ್ಣ ಬಳಿದು ಕೊಡುತ್ತಾರಷ್ಟೇ? ಹಾಗೆ ಬಣ್ಣ ಬಳಿಸುವಾಗ ಆ ಹಿಂದಿನ ಬಾಡಿಗೆದಾರರು ಅಲ್ಲಲ್ಲಿ ಬಡಿದಿದ್ದ ಮೊಳೆಗಳನ್ನೆಲ್ಲ ಕಿತ್ತು, ಗಾಯಗೊಂಡ ಗೋಡೆಗೆ ಲಪ್ಪಾ ಹಚ್ಚಿ ಸಪಾಟು ಮಾಡಿ, ಅದರ ಮೇಲೆ ಬಣ್ಣ ಬಳಿದು ಎಲ್ಲಾ ಹೊಸದು ಕಾಣುವಂತೆ ಮಾಡುವರು. ಹೀಗಾಗಿ ಪ್ರತಿ ಹೊಸ ಮನೆಗೆ ಹೋದಾಗಲೂ ನಾವು ಹೊಸ ಮೊಳೆಗಳನ್ನು ಕೊಂಡು ನಮಗೆ ಬೇಕಾದ ಜಾಗಗಳಲ್ಲಿ ಹೊಡೆದುಕೊಳ್ಳುವುದು ಅನಿವಾರ್ಯ. ಆದರೆ ಹಾಗೆ ಬೇಕಾದ ಕಡೆಗೆಲ್ಲ ಮೊಳೆ ಹೊಡೆಯಲು ಮಾಲೀಕರು ಬಿಡುವರೇ? ಬಾಡಿಗೆಗೆ ಕೊಡುವಾಗಲೇ ‘ಗೋಡೆ ತುಂಬಾ ಮೊಳೆ ಹೊಡೆದು ಡ್ಯಾಮೇಜ್ ಮಾಡ್ಬೇಡ್ರೀ ಮತ್ತೆ’  ಅಂತ ಎಚ್ಚರಿಸುವರು. ಹಾಗೂ ನಾವು ನೇತುಹಾಕಲೇಬೇಕಿರುವ ವಸ್ತುಗಳಿಗೆ ಒಂದಷ್ಟಾದರೂ ಮೊಳೆ ಹೊಡೆಯುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಇಡೀ ಕಟ್ಟಡವಾಸಿಗಳಿಗೆ ಕೇಳುವಂತೆ ಸುತ್ತಿಗೆ ಹಿಡಿದು ಸದ್ದು ಮಾಡುವುದೂ, ಆ ಕಟ್ಟಡದ ಇತರೆ ಬಾಡಿಗೆದಾರರು ನಮ್ಮನ್ನು ಬೈದುಕೊಳ್ಳುವುದೂ ಸಾಮಾನ್ಯವಾಯಿತು. ಹೊತ್ತಲ್ಲದ ಹೊತ್ತಲ್ಲಿ ಆ ಪರಿ ಸದ್ದು ಮಾಡಿದರೆ ಅವರಾದರೂ ಏಕೆ ಸುಮ್ಮನಿದ್ದಾರು? ಕೆಲವರು ಎದುರಿಗೇ ಹೇಳುವರು: ‘ಏನ್ರೀ, ನಿಮ್ಮನೆಯಲ್ಲಿ ಯಾವಾಗ್ ನೋಡಿದ್ರೂ ದೋಡ್ದಾಗ್ ಸೌಂಡ್ ಮಾಡ್ತಾ ಇರ್ತೀರಾ. ಇವತ್ತು ನಮ್ ಮಗು ಆಗಷ್ಟೇ ಮಲ್ಗಿತ್ತು, ನೀವ್ ಮಾಡಿದ್ ಸೌಂಡಿಂದ ಎಚ್ರಾಯ್ತು. ಸ್ವಲ್ಪ ಹೊತ್ತು-ಗೊತ್ತು ನೋಡ್ಕೊಂಡ್ ಸೌಂಡ್ ಮಾಡಿ.’  ಮೂರ್ನಾಲ್ಕು ಮನೆಗಳನ್ನು ಬದಲಿಸಿದಮೇಲೆ ಇಂತಹ ಮಂಗಳಾರತಿಗಳನ್ನು ಸೈರಿಸಿಕೊಳ್ಳುವುದು ನಮಗೂ ಅಭ್ಯಾಸವಾಗಿಹೋಗಿ, ‘ಆಯ್ತ್ ಬಿಡ್ರೀ ಕಂಡಿದೀವಿ’ ಅಂತ ನಾವೂ ಮನಸಲ್ಲಿ ಬೈದುಕೊಳ್ಳುವೆವು.

 

ಜಗತ್ತು ಆಧುನಿಕವಾಗುತ್ತ ಹೋದಂತೆ, ಹೊಸಹೊಸ ಆವಿಷ್ಕಾರಗಳ ಫಲವಾಗಿ ಬರುವ ವಸ್ತುಗಳು ಗೋಡೆಯನ್ನು ಹೆಚ್ಚು ಅವಲಂಬಿಸತೊಡಗಿದವು ಅಂತ ನನ್ನ ಅಭಿಪ್ರಾಯ.  ಡೂಮ್ ಟೀವಿಗಳು ಹೋಗಿ ಎಲ್‌ಸಿಡಿ-ಎಲ್‌ಇಡಿ ಟೀವಿಗಳು ಬಂದವು.  ಸ್ಟೀಲಿನ ವಾಟರ್ ಫಿಲ್ಟರ್ ಹೋಗಿ ಯುವಿ-ಯುಎಫ್-ಆರ್ಓ ಇತ್ಯಾದಿ ವಿಶೇಷಗಳುಳ್ಳ ಫಿಲ್ಟರುಗಳು ಬಂದವು. ಟೇಬಲ್ ಫ್ಯಾನು ಹಳತಾಗಿ ಎಸಿ ಬಂತು. ಹಂಡೆ-ಒಲೆ ಹೋಗಿ ಗೀಸರು ಬಂತು.  ಈ ಹೊಸ ಆವಿಷ್ಕಾರದ ಆಧುನಿಕ ವಸ್ತುಗಳು ದುಬಾರಿಯವೂ-ನಾಜೂಕಿನವೂ ಆದರೂ, ಒಂದು ರೀತಿಯಲ್ಲಿ ಮನೆಯ ಜಾಗವನ್ನು ಉಳಿಸುವಲ್ಲಿ ನೆರವಾದವು. ಮೊದಲು ನೆಲವನ್ನೋ ಟೇಬಲನ್ನೋ ಸ್ಟಾಂಡನ್ನೋ ಅವಲಂಬಿಸುತ್ತಿದ್ದ ವಸ್ತುಗಳು ಈಗ ಗೋಡೆಗೆ ಅಪ್ಪಿಕೊಂಡು ನಿಂತು ‘ಸ್ಪೇಸ್ ಸೇವರ್’ ಆದವು.  ಆದರೆ ಇಲ್ಲಿ ಮತ್ತೆ ಅದೇ ಸಮಸ್ಯೆ: ಮನೆ ಬದಲಿಸುವಾಗೆಲ್ಲ ಈ ವಸ್ತುಗಳನ್ನು ಹೊತ್ತುಕೊಂಡು ಹೋಗಬೇಕು ಮತ್ತು ಹೊಸಮನೆಯಲ್ಲಿ ಗೋಡೆಯನ್ನು ಕೊರೆಯಬೇಕು. ಇವುಗಳನ್ನೆಲ್ಲಾ ನಾವೇ ಮೊಳೆ ಹೊಡೆದು ಕೂರಿಸಲಾದರೂ ಆಗುವುದೇ? ಇಲ್ಲ. ಎಲ್ಲಕ್ಕೂ ಅವುಗಳ ಎಕ್ಸ್‌ಪರ್ಟುಗಳನ್ನೇ ಕರೆಸಬೇಕು.

 

ಹಳೆ ಮನೆಯಿಂದ ತಂದಿದ್ದ ಡಿಶ್ ಹೊಸ ಮನೆಯಲ್ಲಿ ಕೂರಿಸಲು ಡಿಟಿಎಚ್ ಆಪರೇಟರಿಗೆ ಬುಲಾವ್ ಕೊಡಲಾಯಿತು. ಬಂದವನ ಬಳಿ ‘ಒಂಚೂರು ಟೀವಿಯನ್ನೂ ವಾಲ್‌ಮೌಂಟ್ ಮಾಡ್ಕೊಡಯ್ಯಾ’ ಅಂದರೆ ‘ಅದಕ್ಕೆಲ್ಲಾ ಎಕ್ಸ್‌ಟ್ರಾ ಛಾರ್ಜ್ ಆಗುತ್ತೆ ಸಾರ್’ ಅಂದ. ನಾಲ್ಕು ರಂದ್ರ ಕೊರೆದು ಟೀವಿಯನ್ನು ಗೋಡೆಗೆ ಕೂರಿಸಲು ಮುನ್ನೂರು ರೂಪಾಯಿ ಆಗುತ್ತೆ ಅಂತ ಹೇಳಿದ. ಇನ್ನೇನು ಮಾಡುವುದು? ಚೌಕಾಶಿ ಮಾಡಿಯಾದರೂ ಕೆಲಸ ಮಾಡಿಸಿಕೊಳ್ಳಲೇಬೇಕು. ಹಾಗೆಯೇ ವಾಟರ್ ಪ್ಯೂರಿಫೈಯರ್, ಗೀಸರ್, ಮತ್ತೊಂದು-ಮಗದೊಂದು ವಸ್ತುಗಳನ್ನು ಕೂರಿಸಲು ಆಯಾ ತಂತ್ರಜ್ಞರನ್ನು ಕರೆಸಿ ಅವರು ಹೇಳಿದ ಬೆಲೆ ತೆತ್ತಿದ್ದಾಯ್ತು.  ಒಮ್ಮೆ ಮನೆ ಬದಲಾಯಿಸಿ ಹೊಸ ಮನೆಯಲ್ಲಿ ಸೆಟಲ್ ಆಗುವುದು ಎಂದರೆ ಅದು ಸಾವಿರಾರು ರೂಪಾಯಿಯ ಖರ್ಚಿನ ಬಾಬ್ತು.

 

ಈ ಮೊಳೆಗಳಲ್ಲೂ ಹಲವು ಬಗೆ, ಹಲವು ಅಳತೆ. ಕುಕ್ಕುಮೊಳೆಯಿಂದ ಹಿಡಿದು ನಾಲ್ಕಿಂಚಿನ ಮೊಳೆಯವರೆಗೆ ಅಳತೆಗಳು. ಕೆಲವಕ್ಕೆ ಸಣ್ಣ ತಲೆಯಾದರೆ ಕೆಲವಕ್ಕೆ ದೊಡ್ಡ ತಲೆ. ಇನ್ನು ಕೆಲವಕ್ಕೆ ವಾಶರು ಎಂಬ ಸಂಗಾತಿ.  ಹಾರ್ಡ್‌ವೇರ್ ಅಂಗಡಿಗೆ ಹೋಗಿ ಮೊಳೆ ಕೇಳಿದರೆ ‘ಸೆಲ್ಫ್ ಟೈಟನಿಂಗ್ ಸ್ಕ್ರೂ ತಗಂಬುಡಿ ಸಾರ್, ನಿಮಗೂ ಸುಲಭ ಆಗುತ್ತೆ’ ಎಂದರು. ಏನೋ, ಮೊಳೆಗಳಿಗೂ ಆಧುನಿಕತೆಯ ಸ್ಪರ್ಶ ಸಿಕ್ಕಿರುವುದು ಕೇಳಿ ಖುಷಿಯಾಯಿತು. ಸಿಮೆಂಟಿನ ಗೋಡೆಯ ಮನೆಗಳಲ್ಲಿ ಮೊಳೆ ಹೋಡೆಯಬೇಕೆಂದರೆ ಬರೀ ಮೊಳೆ ಕೊಂಡರಾಗಲಿಲ್ಲ, ಅವುಗಳ ಜೊತೆಗೆ ‘ಗಟ್ಟ’ವನ್ನೂ ಕೊಳ್ಳಬೇಕು. ಮೊದಲ ಸಲ ಈ ಶಬ್ದ ಕೇಳಿದಾಗ ನಾನು ಊರಿನ ಎಲೆಕ್ಟ್ರಿಕ್ ಅಂಗಡಿಯೊಂದರ ಕಟ್ಟೆಯ ಮೇಲಿದ್ದೆ. ಒಂದು ಹೊಸ ಸ್ವಿಚ್‌ಬೋರ್ಡ್ ಕೂರಿಸಲು ಸ್ಕ್ರೂ ಕೇಳಿದರೆ ಅಂಗಡಿಯವನು ‘ಜೊತೆಗೆ ಗಟ್ಟಾನೂ ಕೊಡ್ಲಾ ಸಾರ್?’ ಅಂತ ಕೇಳಿದ. ‘ಗಟ್ಟ ಕೊಡ್ಲಾ ಅಂದ್ರೆ ಏನ್ರೀ? ಗಟ್ಟ ಇಳಿಯೋದು-ಹತ್ತೋದು ಗೊತ್ತಿದೆ ನಂಗೆ’ ಎಂದೆ.  ‘ಅಯ್ಯೋ, ಆ ಗಟ್ಟ ಅಲ್ಲಾ ಸಾರ್, ಈ ಗಟ್ಟಾ’ ಅಂತ ಸಣ್ಣಸಣ್ಣ ಮರದ ತುಂಡುಗಳನ್ನು ತೋರಿಸಿದ. ‘ಗೋಡೆಗೆ ಹೋಲ್ ಮಾಡ್ಕೊಂಡು ಈ ಗಟ್ಟ ಹೊಡ್ಕೊಂಡು ಆಮೇಲೆ ಸ್ಕ್ರೂ ಫಿಟ್ ಮಾಡಿದ್ರೆ ಭದ್ರವಾಗಿ ನಿಲ್ಲುತ್ತೆ ಸಾರ್’ ಅಂದ.  ‘ಇದನ್ಯಾಕೆ ದುಡ್ಡು ಕೊಟ್ಟು ತಗೊಳ್ಲಿ ಬಿಡ್ರೀ. ನಮ್ಮನೆ ಸೌದೆ ರಾಶಿಯಿಂದಾನೇ ಕತ್ತರಿಸಿ ಗಟ್ಟ ಮಾಡ್ಕೋತೀನಿ’ ಎಂದಿದ್ದೆ.  ಆದರೆ ನಗರವಾಸಿಯಾದಮೇಲೆ ಗಟ್ಟವನ್ನೂ ದುಡ್ಡು ಕೊಟ್ಟೇ ಖರೀದಿಸುವುದು ಅನಿವಾರ್ಯವಾಯಿತು.

 

ಡ್ರಿಲ್ಲಿಂಗ್ ಮಶೀನು ಬಂದಮೇಲೆ ಗೋಡೆಗೆ ರಂದ್ರ ಕೊರೆಯುವ ಕೆಲಸ ಸುಲಭವಾಗಿದ್ದು ನಿಜ. ಈ ಮಶೀನನ್ನು ರಂದ್ರವನ್ನು ಕೊರೆಯಲಷ್ಟೇ ಅಲ್ಲ, ಸ್ಕ್ರೂ ಟೈಟ್ ಮಾಡಲೂ ಬಳಸಬಹುದಿತ್ತು.  ಡಿಶ್ ಕೂರಿಸಲು ಬಂದವನು ಆ ಮಶೀನಿನಿಂದ ರಂದ್ರ ಕೊರೆದು ಅದರಲ್ಲೇ ನಟ್ಟು-ಬೋಲ್ಟುಗಳನ್ನು ಕೂರಿಸಿ ಎರಡು ನಿಮಿಷದಲ್ಲಿ ದುಡ್ಡು ಎಣಿಸಿಕೊಂಡು ಹೊರಟುಹೋದಾಗ ‘ಎಲಾ!’ ಎಂದುಕೊಂಡೆ. ಒಂದು ಮೊಳೆ ಹೊಡೆಯಲು ಸುತ್ತಿಗೆ-ಸ್ಕ್ರೂಡ್ರೈವರು-ಸ್ಪಾನರು-ಇಕ್ಕಳ ಇತ್ಯಾದಿಗಳನ್ನು ಹಿಡಿದುಕೊಂಡು ಹತ್ತಾರು ನಿಮಿಷ ಕಷ್ಟ ಪಡುತ್ತಿದ್ದ ದಿನಗಳು ನೆನಪಾದವು.  ‘ಎಲ್ಲಾ ಕಾಲದ ಮಹಿಮೆ’ ಅಂತ ನಿಟ್ಟುಸಿರು ಬಿಟ್ಟೆ.

 

‘ಕೈಯಲ್ಲೊಂದು ಸುತ್ತಿಗೆ ಇದ್ದರೆ ಎದುರಿಗಿರುವುದೆಲ್ಲಾ ಮೊಳೆಯ ಹಾಗೆ ಕಾಣುತ್ತೆ’ ಎಂಬ ಮಾತಿನಂತೆ, ಮೊಳೆಗಳ ಬಗ್ಗೆ ಯೋಚಿಸುತ್ತಿದ್ದರೆ ಕಣ್ಮುಂದೆಲ್ಲಾ ಮೊಳೆಗಳೇ ಬರುತ್ತವೆ. ರಸ್ತೆಯ ಮೇಲೆ ಬಿದ್ದುಕೊಂಡು ಬೈಕು-ಕಾರಿನ ಟಯರಿಗೆ ಚುಚ್ಚಿಕೊಂಡು ಪಂಕ್ಚರ್ ಮಾಡುವ ಮೊಳೆಗಳು, ಅಕಸ್ಮಾತ್ ಕಾಲಿಗೆ ಚುಚ್ಚಿದರೆ ಸೆಪ್ಟಿಕ್ ಆಗಿ ಡಾಕ್ಟರನ್ನು ಕಾಣುವಂತೆ ಮಾಡುವ ಹಳೆಯ ತುಕ್ಕು ಹಿಡಿದ ಮೊಳೆಗಳು, ಯೋಧನ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳು, ಎರಡಂತಸ್ತಿನ ಮನೆಯ ಮೇಲೆ ನಿಂತು ಹೆಂಚು ಹೊದಿಸಲು ರೀಪು-ಪಕಾಸಿಗಳನ್ನು ಜೋಡಿಸುತ್ತಾ ಯಾರೋ ಬಡಗಿ ಹೊಡೆಯುತ್ತಿರುವ ದೊಡ್ಡ ಮೊಳೆಗಳು, ಗಡಿಯಾರದ ಅಂಗಡಿಯವ ಕಣ್ಣಿಗೊಂದು ಭೂತಕನ್ನಡಿ ಸಿಕ್ಕಿಸಿಕೊಂಡು ವಾಚಿನೊಳಗೆ ಕೂರಿಸಲು ಹೆಣಗುತ್ತಿರುವ ಸಣ್ಣ ಮೊಳೆಗಳು… ನಮ್ಮ ಅವಶ್ಯಕತೆಗೆ ತಕ್ಕಂತೆ ವಸ್ತುಗಳನ್ನು ಗೋಡೆಯಲ್ಲೋ ಮತ್ಯಾವುದೋ ವಸ್ತುವಿನ ಮೇಲೋ ಒತ್ತಿ ಹಿಡಿದಿಟ್ಟುಕೊಂಡು ಆಮೇಲೆ ನಮ್ಮ ಅವಜ್ಞೆಗೊಳಗಾದರೂ ತಮ್ಮ ಕರ್ತವ್ಯವನ್ನು ವರುಷಗಟ್ಟಲೇ ಪಾಲಿಸುವ ಮೊಳೆಗಳಿಗೆ ನಾವು ಎಷ್ಟು ಬೈದರೂ ಎಷ್ಟು ಬಡಿದರೂ ಬೇಸರವಿಲ್ಲ. ತಮ್ಮ ಪಾಡಿಗವು ಸಣಕಲು ಮೈಯನ್ನು ಮುದುಡಿಸಿ ಒಳಗಿಟ್ಟುಕೊಂಡು ತಲೆಯನ್ನಷ್ಟೇ ಹೊರಗಿಟ್ಟುಕೊಂಡು ಮೌನವಾಗಿವೆ. ನಿರ್ಮೋಹಿಗಳಂತೆ ಎಂತಹ ಚುಂಬಕ ಗಾಳಿಗೂ ಹೆದರದೆ ಸ್ಥಿರವಾಗಿವೆ. ಹಾಗೂ ಅವುಗಳೊಡಲಲ್ಲಿ ಎಂದೋ ಕೇಳಿದ ಒಂದು ವಾಕ್ಯ ಪ್ರತಿಧ್ವನಿಸುತ್ತಿರುತ್ತೆ: ‘ತಂದೆಯೇ, ಇವರಿಗೆ ತಾವು ಏನು ಮಾಡುತ್ತಿದ್ದೇವೆಂಬುದು ತಿಳಿದಿಲ್ಲ, ಇವರನ್ನು ಕ್ಷಮಿಸು’.

– ಸುಶ್ರುತ ದೊಡ್ಡೇರಿ

Leave a Reply