ಬೀchi ಅವರ ಬೆಳ್ಳಿ ತಿಂಮನ ಆಯ್ದ ನಗೆಹನಿಗಳು
ಹಳೆಯ ಕೋಟು
ದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ.
ಬೆಳಿಗ್ಗೆ ಎಂಟಕ್ಕೆ ಸ್ನಾನ, ಊಟ ಮಾಡಿ ಶಾಲೆಗೆ ಹೊರಟ.
“ಅಮ್ಮಾ…”
“ಏನೋ ತಿಂಮಾ?”
“ನನ್ನ ಕೋಟು ಎಲ್ಲಿ?”
ದಿಗಿಲು ಬಿದ್ದು ಕೇಳಿದ ತಾಯಿಯನ್ನು.
“ಅಗಸನಿಗೆ ಹಾಕಿದೆ, ತುಂಬ ಕೊಳೆಯಾಗಿದ್ದಿತು”
ಗಳಗಳ ಅಳುತ್ತ ಕುಳಿತ ತಿಂಮ.
“ಬೇರೆ ಇನ್ನೊಂದು ಇದೆಯಲ್ಲವೊ? ಆ ಕೋಟು ಹಾಕಿಕೊಂಡು ಹೋಗು, ಅಳಬೇಕೆ? ಆ ಹೊಲಸು ಕೋಟೇ ಆಗಬೇಕೇ ನಿನಗೆ?”
ಅದರ ಒಳಗಡೆ ಉತ್ತರಗಳನ್ನು ಬರೆದಿಟ್ಟುಕೊಂಡಿದ್ದ ತಿಂಮ.
ಎರಡು ಅರ್ಧಗಳಾದರೆ ಒಂದು
ತಿಂಮನಿಗೆ ಪರೀಕ್ಷೆ ಸಮೀಪಿಸಿದಂತೆಲ್ಲ ಅವನ ತಂದೆಗೆ ಯೋಚನೆ ಹೆಚ್ಚಿತು. ದುಗುಡ, ಕಳವಳಕ್ಕೀಡಾಯಿತು ಅವರ ಮನಸ್ಸು.
ಸುಖವಾಗಿ ಮೂರು ಸಲ ಉಣ್ಣುತ್ತಿದ್ದ, ಉಳಿದ ಸಮಯವೆಲ್ಲ ನಿದ್ರೆ ಮಾಡುತ್ತಿದ್ದ ತಿಂಮ.
ಆ ಈ ಮಾಸ್ತರುಗಳನ್ನೆಲ್ಲ ಕಂಡು ಸಲಹೆ ಪಡೆದರು ತಿಂಮನ ತಂದೆ. ಪುಸ್ತಕದ ಅಂಗಡಿಗಳನ್ನೆಲ್ಲ ಹೊಕ್ಕು ಬಂದರು.
“ತಿಂಮಾ!”
“ಏನಪ್ಪಾ?”
“ತೆಗೆದುಕೋ, ಈ ಗೈಡ್ ತಂದಿದ್ದೇನೆ.”
“ಒಳ್ಳೆಯದೇನಪ್ಪಾ ಇದು?”
“ನಿನ್ನ ಕ್ಲಾಸಿನ ಟೀಚರೇ ಹೇಳಿದರಯ್ಯ ಇದನ್ನು ಓದಿಬಿಡು. ಅರ್ಧ ಪಾಸಾದಂತೆಯೇ.”
ಗೈಡನ್ನು ತೆಗೆದು ನೋಡುತ್ತ ಮೆಲ್ಲನೆ ಗೊಣಗಿಕೊಂಡ ತಿಂಮ.
“ಇನ್ನೊಂದು ಪ್ರತಿಯನ್ನು ತಂದುಬಿಡಬೇಕಿತ್ತು. ಪೂರ್ತಿ ಪಾಸು…”
ನನ್ನ ತಪ್ಪಿಲ್ಲ
ಅನೇಕರಿಗಿರುವಂತೆ ಲೈಬ್ರರಿಯಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಒಯ್ಯುವ ಅಭ್ಯಾಸ ತಿಂಮನಿಗೆ. ಕೇವಲ ಕೆಲವರಿಗೆ ಮಾತ್ರವೇ ಇರುವಂತೆ ಮರಳಿ ತಂದುಕೊಡುವ ಅಭ್ಯಾಸವೂ ಇದ್ದಿತು ಇವನಲ್ಲಿ.
ಓದುವ ಅಭ್ಯಾಸ? ಆ ಮಾತು ಈಗ ಬೇಡ.
ಲೈಬ್ರರಿಯ ಮಾಸ್ತರಿಗೆ ತಿಂಮ ತಂದುಕೊಟ್ಟ, ತಾನು ಕೊಂಡೊಯ್ದಿದ್ದ ಪುಸ್ತಕವನ್ನು.
“ಓದಿದೇನಯ್ಯಾ”
“ಓದಿದೆ ಸಾರ್.”
ಮಾಮೂಲು ಪ್ರಶ್ನೆ, ಮಾಮೂಲು ಉತ್ತರ.
“ಹೇಗಿದೆ?”
“ಚೆನ್ನಾಗಿದೆ ಸಾರ್.”
ಎರಡೆರಡು ಬಾರಿ ಪುಸ್ತಕವನ್ನು ಹಿಂದು-ಮುಂದು ನೋಡಿ ಮಾಸ್ತರರು ನುಡಿದರು:
“ಬಹು ಕ್ಲಿಷ್ಟವಾಗಿದೆ.”
“ಇಲ್ಲ ಸಾರ್, ನೀವು ಕೊಡುವಾಗಲೇ ಹೀಗಿತ್ತು ಸಾರ್.”
ಅಂತೂ ಸರಿಯಾಗಿದೆ
ತಿಂಮನ ತಾಯಿ ಮಹಾ ಗಠಾಣಿ.
ಒಂದು ದಿನ ಅಂಗಡಿಯ ಸೆಟ್ಟಿಯೊಡನೆ ಜಗಳಕ್ಕೇ ಬಂದಳು.
“ಏನಪ್ಪಾ ಸೆಟ್ಟಿ? ಒಂದು ವೀಸೆ ಹುಣಸೆಹಣ್ಣು ಕೊಡೆಂದು ತಿಂಮನನ್ನು ಕಳಿಸಿದರೆ ಎಷ್ಟು ಕೊಟ್ಟೆ ನೀನು?”
“ಏಕ್ರಮ್ಮಾ, ಒಂದು ವೀಸೆ ಸರಿಯಾಗಿ ಕಳಿಸಿದೆನಲ್ಲ.”
“ವೀಸೆ ಎಲ್ಲಿ ಬರಬೇಕು? ನಾನು ಮನೇಲಿ ತೂಕ ಮಾಡಿದೆ, ಮೂರು ಸೇರು ಮಾತ್ರವೇ ಇತ್ತಲ್ಲ.”
ಕಕ್ಕಾಬಿಕ್ಕಿಯಾದ ಸೆಟ್ಟಿ ಕೇಳಿದ-
“ಅಹುದಾ? ತಿಂಮನನ್ನು ತೂಕ ಮಾಡಿ ನೋಡಿದಿರೇನಮ್ಮಾ?”
ಉಪಯೋಗ
(ಪ್ರಶ್ನೆಯೊಂದಕ್ಕೆ ತಿಂಮನ ಉತ್ತರ ಹೀಗಿತ್ತು-)
ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ-ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು ಹಿಡಿಯುತ್ತದೆ.
ಹೆಂಡತಿಗೆ ಕಾಯಿಲೆ
ತಿಂಮನ ಹೆಂಡತಿಯನ್ನು ಡಾಕ್ಟರು ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ.”
“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆಮಧ್ಯೆ ನಿಲ್ಲಿಸಿಬಿಡುತ್ತಾಳೆ.”
“ಏಕೆ?”
“ಉಸಿರಾಡಲಿಕ್ಕೆ.”
ತಿಳಿದರೆ ಗತಿ?
ತಿಂಮ ಊರಿಗೆ ಬಂದುದೇ ತಡ, ಮನೆಯಾಕೆ ಶುರುಮಾಡಿಬಿಟ್ಟಳು:
“ಪಕ್ಕದ ಮನೆಯ ಶಾರದಮ್ಮನಿಗೆ ಆಕೆಯ ಗಂಡ ಏನೇನು ಮಾಡಿಸಿದ್ದಾರೆ ನೋಡಿ…”
“ಏನು ಮಾಡಿಸಿದ್ದಾರಂತೆ?”
ತಿಂಮ ಕೇಳಿದ.
“ವಜ್ರದ ಓಲೆ ತಂದಿದ್ದಾರೆ. ರೇಡಿಯೋ,ಬಳೆ, ಇನ್ನೂ ಏನೇನೋ ಚಿನ್ನದ ಒಡವೇನೆಲ್ಲ ತಂದುಕೊಟ್ಟಿದ್ದಾರೆ.”
“ಹೂ, ಏನು ಈಗ?”
“ನೀವೇನು ತಂದುಕೊಟ್ಟಿರಿ?”
ಗಾಬರಿಯಿಂದ ಕೇಳಿದ ತಿಂಮ-
“ಯಾರು ನಾನೇ? ನಾಳೆ ತಿಳಿದರೆ ಸುಮ್ಮನಿರುತ್ತಾನೆಯೇ ಆ ಶಾರದಮ್ಮನ ಗಂಡ?
ಜೇಬು-ತಲೆ
ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ-ಇಲ್ಲಿ ನೋಡುತ್ತ ಊರೆಲ್ಲ ಸುತ್ತಿದ. ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು.
ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು ಹಿಡಿದರು.
“ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು” ಎಂದರು.
“ಕೊಡುವುದಿಲ್ಲ.”
ತಕರಾರು ಹೂಡಿದ ತಿಂಮ.
“ನಿನ್ನ ತಲೆ ತೆಗೆಯುತ್ತೇವೆ.”
“ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ.”
ಹೆಚ್ಚು ಭಾರವಾದವು
ತಿಂಮ ಸಪತ್ನೀಕನಾಗಿ ಪ್ರಯಾಣ ಹೊರಟ ಒಂದು ಸಾರಿ. ದಾರಿಯಲ್ಲಿದ್ದ ನದಿಯೊಂದನ್ನು ದಾಟಬೇಕಾಯಿತು. ಇನ್ನಿತರ ಪ್ರಯಾಣಿಕರುಗಳೊಂದಿಗೆ ತಿಂಮ ದಂಪತಿಗಳು ಹರಿಗೋಲಿನಲ್ಲಿ ಏರಿ ಕುಳಿತರು.
ಮಧ್ಯ ನದಿ, ಹರಿಗೋಲು ಹೊಯ್ದಾಡಿ ಮಗುಚಿಕೊಳ್ಳುವಂತಾಯಿತು. ದಿಗ್ಭ ಮೆಯಿಂದ ಕಿರುಚಿದರು. ಗಾಬರಿಯಿಂದ ಅಂಬಿಗ ಕೂಗಿಕೊಂಡ.
“ಹೆಚ್ಚು ಭಾರವಾದುದನ್ನು ನದಿಯಲ್ಲಿ ಬಿಸುಟಿಬಿಡಿ. ಹೂ ಬೇಗ ಬೇಗ!”
ಅವರಿವರು ಗಂಟು ಮೂಟೆಗಳನ್ನು ನದಿಗೆ ಎಸೆದರು.
ತಿಂಮ?
September 29th, 2017 at 7:23 am
ಹಾ ಹಾ ಹಾ