– ನಾಗೇಶ ಹೆಗಡೆ
ಅಮೆರಿಕದ ಬಾಲ್ಟಿಮೋರ್ ನಗರದಲ್ಲಿ ಏಳು ತಿಂಗಳ ಹಿಂದೆ ‘ಅಕ್ಕ’ ಸಮ್ಮೇಳನಕ್ಕೆ ಇಲ್ಲಿಂದ ದೊಡ್ಡ ದಂಡೇ ಹೋಗಿತ್ತಲ್ಲ? ಆ ದಂಡಿನಲ್ಲಿ ಕನ್ನಡ ನಾಡಿನ ಸಣ್ಣ ಕೈಗಾರಿಕೆಗಳ ಒಕ್ಕೂಟದ ಪದಾಧಿಕಾರಿಯೊಬ್ಬರು ಕೂಡ ಹೋಗಿದ್ದರು. ಸಮ್ಮೇಳನ ಮುಗಿಯುತ್ತ ಬಂದಂತೆ ಒಬ್ಬೊಬ್ಬ ಗಣ್ಯ ಅತಿಥಿಯೂ ಕನ್ನಡ ಮಾಧ್ಯಮಗಳಿಗೆ ಒಂದೊಂದಿಷ್ಟು ಹೇಳಿಕೆಗಳನ್ನು ನೀಡಿದರು. ತಾನೇನು ಕಮ್ಮಿ ಎಂದು ಈ ನಮ್ಮ ಕೈಗಾರಿಕಾ ಮಿತ್ರರೂ ಹೇಳಿಕೆ ನೀಡಿದರು: ‘ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದಿಷ್ಟು ರಾಸಾಯನಿಕ ಉದ್ಯಮಗಳನ್ನು ಆರಂಭಿಸುವಂತೆ ಅಮೆರಿಕದ ಉದ್ಯಮಿಗಳನ್ನು ನಾನು ಕೇಳಿಕೊಂಡಿದ್ದೇನೆ’ ಎಂದು.
ನನಗೆ ದಿಗಿಲು. ಆ ಅಮೆರಿಕದವರು ಬೆರಳು ತೋರಿಸುವ ಮೊದಲೇ ಹಸ್ತವನ್ನು ನುಂಗುವ ಪೈಕಿ. ನಮಗೆ ಪರಿಚಯವೇ ಇಲ್ಲದ, ಆದರೆ ಔದ್ಯಮಿಕ ಲೋಕದಲ್ಲಿ ಅತ್ಯಂತ ಅಪಾಯಕಾರಿ ಎನ್ನಿಸಿದ ಅದೆಷ್ಟೊ ರಸಾಯನ ತ್ಯಾಜ್ಯಗಳನ್ನು ಬಡ ದೇಶಗಳ ಪರಿಸರದಲ್ಲಿ ಬಿಡುಗಡೆ ಮಾಡಿದ ಕುಖ್ಯಾತಿ ಅವರದ್ದು. ಈಚಿನ ವರ್ಷಗಳಲ್ಲಂತೂ ಅದೆಷ್ಟೊ ಹೊಸ ಹೊಸ ಬಗೆಯ ರಾಸಾಯನಿಕಗಳು ತಮ್ಮ ಕರಾಳ ಚಾರಿತ್ರ್ಯವನ್ನು ವಿಜ್ಞಾನಿಗಳಿಗೆ ತೋರ್ಪಡಿಸುವ ಮೊದಲೇ ಹಿಂದುಳಿದ ದೇಶಗಳನ್ನು ಆವರಿಸಿಬಿಡುತ್ತವೆ.
ಡಿಎಚ್ಎಮ್ಮೊ (ಅಂದರೆ ಡೈ ಹೈಡ್ರೊಜನ್ ಮೊನೊಕ್ಸೈಡ್) ಎಂಬ ರಸಾಯನದ ಉದಾಹರಣೆಯನ್ನೇ ನೋಡಿ. ಈ ಬಗ್ಗೆ ಈಗ ಎಲ್ಲೆಲ್ಲೂ ಹಾಹಾಕಾರ ಏಳತೊಡಗಿದೆ. ಅದನ್ನು ಕುರಿತು ಜನಸಾಮಾನ್ಯರಲ್ಲಿ ದಿಗಿಲು ಹುಟ್ಟಿಸಬಲ್ಲ, ಅಷ್ಟೇಕೆ ವೈದ್ಯ ತಜ್ಞರನ್ನೂ ರಸಾಯನ ವಿಜ್ಞಾನಿಗಳನ್ನೂ ಕಂಗೆಡಿಸಬಲ್ಲ ಕೆಲವು ಸಂಗತಿಗಳು ಇಲ್ಲಿವೆ:
ಸಾವಿನ ಅಂಚಿನಲ್ಲಿರುವ ವ್ಯಕ್ತಿಗಳ ಕ್ಯಾನ್ಸರ್ ಕೋಶಗಳಲ್ಲಿ ಶೇಕಡಾ ೮೫ರಷ್ಟು ಈ ‘ಡಿಎಚ್ಎಮ್ಮೊ’ ಎಂಬ ರಸಾಯನ ವಸ್ತು ಇರುವುದು ಪತ್ತೆಯಾಗಿದೆ. ಗರ್ಭದ ಕೊರಳಿನ ಕ್ಯಾನ್ಸರ್ನಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು, ಅಂದರೆ ಶೇ. ೯೫ರಷ್ಟು ಇದೆಯೆಂದು ವಿಜ್ಞಾನಿಗಳು ಹೇಳುತ್ತಾರೆ.
ಜಗತ್ತಿನಲ್ಲಿ ಯಾವುದೇ ವಸ್ತು ಅಪಾಯಕಾರಿ ಎಂಬುದು ಗೊತ್ತಾದ ತಕ್ಷಣ ಮಿಲಿಟರಿ ಅದನ್ನು ತನ್ನದಾಗಿಸಿಕೊಳ್ಳಲು ಹೊರಡುತ್ತದೆ. ಈ ರಸಾಯನ ಕೂಡ ಮಿಲಿಟರಿಯನ್ನು ಬಹುವಾಗಿ ಆಕರ್ಷಿಸಿದೆ. ಮುಂದಿನ ಯುದ್ಧದಲ್ಲಿ ಇದೇ ಮಹತ್ವದ ಪಾತ್ರ ವಹಿಸಲಿದೆ ಎಂಬ ಸಂಗತಿ ದಿನದಿನಕ್ಕೆ ನಿಚ್ಚಳವಾಗುತ್ತಿದೆ. ಯುದ್ಧಾಸ್ತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳಲ್ಲಿ ಬಳಕೆಯಾಗುವ ಈ ದ್ರವ್ಯ ಇಂದಿನ ಸಾಮಾನ್ಯ ಜನಜೀವನದಲ್ಲೂ ಹಾಸುಹೊಕ್ಕಾಗುತ್ತಿದೆ. ಗೊತ್ತಿದ್ದೊ ಇಲ್ಲದೆಯೊ, ಉದ್ಯಮಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ್ವೆಂಟ್ನಂತೆ (ಕರಗುಕಾರಿಯಾಗಿ), ಕೂಲಂಟ್ನಂತೆ (ಶೀತಕಾರಿಯಾಗಿ), ಅಷ್ಟೇ ಅಲ್ಲ ಪ್ರಮುಖ ಅಗ್ನಿ ನಿರೋಧಕ ರಸಾಯನವಾಗಿ ಬಳಕೆಯಾಗುತ್ತಿದೆ. ಪರಮಾಣು ಸ್ಥಾವರಗಳು ಅದೆಷ್ಟೇ ಪರಿಸರಸ್ನೇಹಿ ಆಗಿವೆಯೆಂದರೂ ಅಲ್ಲಿಂದ ಹೊರಬರುವ ತ್ಯಾಜ್ಯ ವಸ್ತುಗಳಲ್ಲಿ ‘ಡಿಎಚ್ಎಮ್ಮೊ’ ಪತ್ತೆಯಾಗುತ್ತಿದೆ. ಅಚ್ಚರಿಯ ಸಂಗತಿ ಏನೆಂದರೆ ಅಥ್ಲೀಟ್ಗಳು ಅದರಲ್ಲೂ ವಿಶೇಷವಾಗಿ ಮ್ಯಾರಥಾನ್ ಓಟಗಾರರು ಇದನ್ನು ಹೆಚ್ಚು ಹೆಚ್ಚಾಗಿ ಬಳಕೆಗೆ ತರುತ್ತಿದ್ದಾರೆ. ಅದರಿಂದ ದೂರ ಇರುವುದು ಸಾಧ್ಯವೇ ಇಲ್ಲವೆಂಬಷ್ಟು ಅವಲಂಬಿತರಾಗುತ್ತಾರೆ; ಏನೆಲ್ಲ ಯತ್ನಿಸಿ, ಎರಡು ದಿನಗಳ ಕಾಲ ಇದರಿಂದ ದೂರವಿದ್ದರೆ, ಕೊಕೇನ್ ಅಥವಾ ಹೆರಾಯಿನ್ ಚಟದಾಸರಿಗೆ ಆಗುವಂತೆ ಹಠಾತ್ ಸಾವು ಸಂಭವಿಸಬಹುದೆಂದೂ ಹೇಳುವವರಿದ್ದಾರೆ.
ವೈದ್ಯಕೀಯ ಜಗತ್ತಿನಲ್ಲೂ ಇದರ ಪ್ರಭಾವ ಸಾಕಷ್ಟು ಹಾಸು ಹೊಕ್ಕಾಗಿದೆ. ಅದರಲ್ಲೂ ಅತಿಸಾರ, ವಾಂತಿ ಮುಂತಾದ ಕಾಯಿಲೆಗೆ ತುತ್ತಾದವರ ಶರೀರದಲ್ಲಿ ‘ಡಿಎಚ್ಎಮ್ಮೊ’ ಪಾತ್ರ ಗಣನೀಯವಾಗಿ ಕಂಡುಬರುತ್ತಿದೆ.
ಡಯಾಕ್ಸಿನ್ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅದೆಷ್ಟೇ ಅಪಾಯಕಾರಿ ಎಂದು ವಿಜ್ಞಾನಿಗಳು ಸಾರಿದರೂ ಔದ್ಯಮಿಕ ರಂಗದಲ್ಲಿ ಅದನ್ನು ಕೈಬಿಡುವುದು ಸಾಧ್ಯವೇ ಇಲ್ಲವೆಂಬಂತೆ ಮತ್ತೆ ಮತ್ತೆ ಅದು ಬಳಕೆಗೆ ಬರುತ್ತಿದೆ. ‘ಡಿಎಚ್ಎಮ್ಮೊ’ದ್ದು ಕೂಡ ಅಂಥದೇ ಕತೆ. ಇದನ್ನು ಸಾಧ್ಯವಿದ್ದಷ್ಟೂ ಕಡಿಮೆ ಬಳಸಿ ಎಂದು ಜಗತ್ತಿನ ಎಲ್ಲ ಸರಕಾರಗಳೂ ಹೇಳುತ್ತಿವೆ. ಕಡಿಮೆ ಬಳಸಲು ಯತ್ನಗಳೇನೊ ನಡೆಯುತ್ತಿವೆ. ಆದರೆ ತ್ಯಾಜ್ಯ ರೂಪದಲ್ಲಿ ಇದು ಹೊರಬಿದ್ದಾಗ ನಾನಾ ಬಗೆಯ ಅಡ್ಡ ಪರಿಣಾಮಗಳು ವರದಿಯಾಗುತ್ತಿವೆ. ಆಸಿಡ್ ಮಳೆಯಲ್ಲಿ ಇದು ಮುಖ್ಯ ಖಳನಾಯಕನೆಂದು ಗುರುತಿಸಲಾಗಿದೆ. ‘ಹಸಿರು ಮನೆ ಪರಿಣಾಮ’ ಅಂದರೆ ಭೂಮಿಯನ್ನು ಬಿಸಿ ಮಾಡುವ ಕ್ರಿಯೆಯಲ್ಲೂ ಇದರ ಪಾತ್ರ ಗಣನೀಯವಾಗಿದೆ. ಆಧುನಿಕ ಜಗತ್ತಿನ ಅನೇಕ ನಿತ್ಯದ ಚಟುವಟಿಕೆಗಳಿಗೆ ಇದು ಅಡ್ಡಿ ಉಂಟುಮಾಡುತ್ತದೆ. ವಿದ್ಯುತ್ ಟ್ರಾನ್ಸ್ಫಾರ್ಮರ್ಗಳಲ್ಲಿ ಎಣ್ಣೆ ಜಿಡ್ಡಿನೊಂದಿಗೆ ಇದು ಸೇರಿತೆಂದರೆ ಹಠಾತ್ ವಿದ್ಯುತ್ ನಿಲುಗಡೆ ಆಗುತ್ತದೆ. ಕಾರಿನ ಎಂಜಿನ್ಗಳಲ್ಲಿ ಇದು ಕಲಬೆರಕೆ ಆದರಂತೂ ಬ್ರೇಕ್ನ ದಕ್ಷತೆ ಸಾಕಷ್ಟು ಕಡಿಮೆ ಆಗುತ್ತದೆ.
ಪ್ರಾಣಿಗಳ ಮೇಲೆ ನಡೆಸುವ ನಾನಾ ಬಗೆಯ ಕ್ರೂರ ಪ್ರಯೋಗಗಳಲ್ಲಿ ‘ಡಿಎಚ್ಎಮ್ಮೊ’ ಬಳಕೆಯಾಗುತ್ತಿರುವುದನ್ನು ಗುರುತಿಸಲಾಗಿದೆ. ನಗರದ ಯುವಪೀಳಿಗೆಯವರನ್ನು ಬಹುವಾಗಿ ಆಕರ್ಷಿಸುತ್ತಿರುವ ‘ಜಂಕ್ಫುಡ್’ನಲ್ಲಿ ‘ಡಿಎಚ್ಎಮ್ಮೊ’ ಇರುವುದು ಗೊತ್ತಾಗಿದೆ. ಆದರೆ ಅದರ ನಿವಾರಣೆ ಹೇಗೆಂಬುದು ಮಾತ್ರ ಈವರೆಗೂ ಪತ್ತೆಯಾಗಿಲ್ಲ.
ಆಧುನಿಕ ಜಗತ್ತಿನಿಂದ ದೂರ ಇರುವ ಕೃಷಿರಂಗದಲ್ಲೂ ಇದರ ಪಾತ್ರ ದಿನದಿನಕ್ಕೆ ನಿಚ್ಚಳವಾಗುತ್ತಿದೆ. ಕೀಟನಾಶಕ, ಕಳೆನಾಶಕ ಹಾಗೂ ರಸಗೊಬ್ಬರಗಳೊಂದಿಗೆ ‘ಡಿಎಚ್ಎಮ್ಮೊ’ವನ್ನು ಬೆರೆಸಿ ಸಿಂಪರಣೆ ಮಾಡಿದರೆ ಉಪಯುಕ್ತವೆಂದು ಕಂಪನಿಗಳು ಶಿಫಾರಸು ಮಾಡುತ್ತವೆ. ಕೀಟನಾಶಕ ಹಾಗೂ ಕಳೆನಾಶಕಗಳು ಕ್ರಮೇಣ ಮಣ್ಣಿನಲ್ಲಿ ದುರ್ಬಲ ಆದರೂ ಇದು ಮಾತ್ರ ಸಾಕಷ್ಟು ದೀರ್ಘಕಾಲ ಮಣ್ಣಿನಲ್ಲಿ ಉಳಿಯುತ್ತದೆ. ಎಷ್ಟೇ ಯತ್ನ ನಡೆಸಿದರೂ ಇದನ್ನು ಜೀವ-ಪರಿಸರದಿಂದ ಹೊರ ಹಾಕುವುದು ಕಠಿಣವಾಗಿದೆ.
‘ಡಿಎಚ್ಎಮ್ಮೊ’ ಅಷ್ಟರಮಟ್ಟಿಗೆ ಅವಿನಾಶಿಯಾಗಿ, ಅಷ್ಟೊಂದು ಅಪಾಯಕಾರಿ ಆಗಿರಲು ಮುಖ್ಯ ಕಾರಣ ಏನೆಂದರೆ, ದ್ರವ್ಯದ ಮೂರೂ ಸ್ಥಿತಿಯಲ್ಲಿ (ಘನ-ದ್ರವ-ಅನಿಲ ರೂಪದಲ್ಲಿ) ರುವ ಸಾಮರ್ಥ್ಯ ಅದಕ್ಕಿದೆ. ಊಸರವಳ್ಳಿಯ ಗುಣ ಅದರದ್ದು. ತಾನಿದ್ದ ಪರಿಸರದ ಬಣ್ಣವನ್ನೇ ಅದೂ ಪಡೆಯುತ್ತದೆ. ಪರಿಸರವನ್ನೂ ತನ್ನ ಗುಣಕ್ಕೆ ತಕ್ಕಂತೆ ಪರಿವರ್ತಿಸುತ್ತದೆ. ಘನ ರೂಪದಲ್ಲಿದ್ದಾಗ ಅದು ನಮ್ಮ ಅಂಗಾಂಶವನ್ನು ತೀವ್ರವಾಗಿ ಸುಡಬಲ್ಲದು. ಅನಿಲ ರೂಪದಲ್ಲಿ ಪ್ರತಿ ವರ್ಷವೂ ನೂರಾರು ಜನರು ಅದರಿಂದ ಸಾವಪ್ಪುತ್ತಿದ್ದಾರೆ. ದ್ರವರೂಪಿ ‘ಡಿಎಚ್ಎಮ್ಮೊ’ ಅತಿ ಸಣ್ಣ ಪ್ರಮಾಣದಲ್ಲಿ ಶ್ವಾಸಕೋಶದಲ್ಲಿ ಸೇರಿಕೊಂಡರೂ ಸಾವು ಬರಬಹುದು. ಪ್ರತಿ ವರ್ಷ ಸಾವಿರಾರು ಜನರು ಈ ದುರ್ಘಟನೆಯಿಂದಾಗಿ ಸಾಯುತ್ತಾರೆ.
ಇಂದಿಗೆ ಸುಮಾರು ಹದಿನೇಳು ವರ್ಷಗಳ ಹಿಂದೆ ಅಂದರೆ ೧೯೯೦ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಎರಿಕ್ ಲಾನ್ಸರ್ ಮತ್ತು ಸಂಗಡಿಗರು ‘ಡಿಎಚ್ಎಮ್ಮೊ’ ಅಂದರೆ ಡೈಹೈಡ್ರೊಜನ್ ಮೊನೊಕ್ಸೈಡ್ ಎಂಬ ರಸಾಯನ ದ್ರವ್ಯದಿಂದಾಗುವ ಅಪಾಯಗಳನ್ನೆಲ್ಲ ಪಟ್ಟಿ ಮಾಡಿ ಸಂಶೋಧನ ಲೇಖನ ಪ್ರಕಟಿಸಿದರು.
ನಿಸರ್ಗದಲ್ಲಿ ‘ಡಿಎಚ್ಎಮ್ಮೊ’ ಹಾವಳಿಯನ್ನು ಕಡಿಮೆ ಮಾಡುವಂತೆ ಸರಕಾರಗಳನ್ನು ಒತ್ತಾಯಿಸುವ ಉದ್ದೇಶದಿಂದ ನಾಗರಿಕ ವೇದಿಕೆಗಳನ್ನು ಜಗತ್ತಿನಾದ್ಯಂತ ಹುಟ್ಟುಹಾಕಲು ‘ಡಿಎಚ್ಎಮ್ಮೊ’ ನಿಷೇಧ ಕೂಟ’ (ಕೋಆಲೀಶನ್ ಟು ಬ್ಯಾನ್ ‘ಡಿಎಚ್ಎಮ್ಮೊ’ ) ಎಂಬ ಸಂಘಟನೆಯೂ ತಲೆಯೆತ್ತಿತು. ಇಂದು ಅಂತರ್ಜಾಲದಲ್ಲಿ ಇದರ ಪ್ರಚಾರಕ್ಕೆಂದೇ ಅನೇಕ ಜಾಲತಾಣಗಳಿವೆ. ಅವುಗಳಲ್ಲಿ ಮುಖ್ಯವಾಗಿ dhmo.org ನೋಡಬಹುದು. ಆದರೆ ನಾನಾ ಕಾರಣಗಳಿಂದಾಗಿ ಯಾವ ಸರಕಾರವೂ ‘ಡಿಎಚ್ಎಮ್ಮೊ’ ರಸಾಯನವನ್ನು ನಿಷೇಧಿಸುವಲ್ಲಿ ಯಶಸ್ವಿಯಾಗಲಿಲ್ಲ.
ಆದರೆ ನಾಗರಿಕ ವಲಯಗಳಲ್ಲಿ ಸಾಕಷ್ಟು ಸಂಚಲನವಂತೂ ಕಂಡುಬಂದಿದೆ. ‘ಡಿಎಚ್ಎಮ್ಮೊ’ದ ಅಪಾಯಗಳು ಏನೇನು ಎಂಬುದು ಗೊತ್ತಾದ ಇಡಾಹೊ ಪಟ್ಟಣದ ಕೆಲವರು ಇದನ್ನು ನಿಷೇಧಿಸಬೇಕೆಂದು ಅಮೆರಿಕದ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಯಾವುದೇ ಪ್ರಯೋಜನ ಕಂಡುಬರಲಿಲ್ಲ.
ಎಪಿ ವಾರ್ತಾಸಂಸ್ಥೆಯ ವರದಿಯ ಪ್ರಕಾರ ೨೦೦೪ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯಲ್ಲಿರುವ ಅಲಿಸೊ ವಿಯೆವೊ ಹೆಸರಿನ ಪಟ್ಟಣವೊಂದರ ಮುನಿಸಿಪಾಲಿಟಿಯ ಅಧಿಕಾರಿಗಳು ಸ್ಟೈರೊಫೋಮ್ (ಒಂದು ಬಗೆಯ ಪ್ಲಾಸ್ಟಿಕ್) ಕಪ್ಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕೆಂಬ ಕಾರ್ಯಸೂಚಿಯನ್ನು ಮುಂದಿಟ್ಟಿದ್ದರು. ಏಕೆಂದರೆ ಸ್ಟೈರೊಫೋಮ್ ಉತ್ಪಾದನೆಯಲ್ಲಿ ‘ಡಿಎಚ್ಎಮ್ಮೊ’ ಬಳಕೆಯಾಗುತ್ತಿದೆ ಎಂಬ ವೈಜ್ಞಾನಿಕ ತಥ್ಯ ಅವರ ಗಮನಕ್ಕೆ ಬಂದಿತ್ತು. ಅಂತರ್ಜಾಲದಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಈ ಕಾರ್ಯಸೂಚಿಯನ್ನು ರೂಪಿಸಲಾಗಿತ್ತು. ಆದರೆ ಅಲ್ಲಿನ ನಗರವಾಸಿಗಳ ಅದೃಷ್ಟವೊ ಏನೊ, ಈ ನಿಷೇಧಾಜ್ಞೆ ಕಾರ್ಯರೂಪಕ್ಕೆ ಬರಲಿಲ್ಲ.
ನಿಷೇಧ ಹಾಕದಿರುವುದು ನಗರವಾಸಿಗಳ ಅದೃಷ್ಟವೆ?
ಹೌದು.
ಏಕೆಂದರೆ ‘ಡಿಎಚ್ಎಮ್ಮೊ’ (ಡೈಹೈಡ್ರೊ ಮೊನಾಕ್ಸೈಡ್) ಅರ್ಥಾತ್ ಹೈಡ್ರಿಕ್ ಆಸಿಡ್, ಅಂದರೆ ಎಚ್‌ಟುಓ (H2O), ಅಂದರೆ ಮತ್ತೇನಲ್ಲ, ನಮ್ಮ ನಿಮ್ಮೆಲ್ಲರ ಜೀವದ್ರವ ನೀರು.
ಈಗಾಗಲೇ ನಿಮಗಿದು ಅರ್ಥವಾಗಿಲ್ಲವೆಂದರೆ ಮೇಲಿನ ಲೇಖನದಲ್ಲಿ ‘ಡಿಎಚ್ಎಮ್ಮೊ’ ಎಂಬ ಪದ ಬಂದಲ್ಲೆಲ್ಲ ‘ನೀರು’ ಎಂದು ಬದಲಾಯಿಸಿಕೊಂಡು ಓದಿನೋಡಿ. ಆಗ ನಿಮಗೆ ಜೋಕ್ ಅರ್ಥವಾಗುತ್ತದೆ.
ಈಚಿನ ವರ್ಷಗಳಲ್ಲಿ ನಮ್ಮ ಸುತ್ತಲಿನ ಪರಿಸರದ ಏನೆಲ್ಲ ಸಂಗತಿಗಳ ಬಗ್ಗೆ ‘ಅತಿ ಅಪಾಯಕಾರಿ’ ಎಂಬ ಉತ್ಪ್ರೇಕ್ಷಿತ ವರದಿಗಳು ಬರುತ್ತಿವೆ. ವಿಜ್ಞಾನದ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ಸಾಮಾನ್ಯ ಬಳಕೆದಾರರನ್ನು ಬೆದರಿಸಿ, ಚಿಟಿಕೆಗಾತ್ರದ ಅಪಾಯಗಳನ್ನು ಪರ್ವತವೆಂಬಷ್ಟು ಹಿಗ್ಗಿಸಿ ತೋರಿಸಿ ಕಂಗಾಲು ಮಾಡುವ ಹುನ್ನಾರಗಳು ನಡೆಯುತ್ತವೆ. ಅಲ್ಯೂಮಿನಿಯಂ ಟಾಕ್ಸಿಸಿಟಿಯೇ ಇರಬಹುದು ಇಲ್ಲವೆ ತಂಪುಪೇಯಗಳಲ್ಲಿ ಕೀಟನಾಶಕ ದ್ರವ್ಯಗಳ ಅಂಶವೇ ಇರಬಹುದು. ಸತ್ಯವನ್ನು ಅತಿ ರಂಜಿತವಾಗಿ, ಆದರೆ ಹೇಳಬೇಕಿದ್ದ ಪ್ರಮುಖ ಅಂಶವನ್ನು ಮರೆಮಾಚಿ ಬಣ್ಣಿಸಿದರೆ ಯಾರನ್ನೂ ಬೇಸ್ತುಬೀಳಿಸಲು ಸಾಧ್ಯ ಎಂಬುದನ್ನು ತೋರಿಸಲೆಂದೇ ಈ ಕಥೆಯನ್ನು ರೂಪಿಸಲಾಗಿದೆ. ನೀರಿನಂಥ ನಿರುಪದ್ರವಿ, ಅತ್ಯಗತ್ಯ ದ್ರವ್ಯವನ್ನೂ ಖಳನಾಯಕನಂತೆ ಬಿಂಬಿಸಿ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯ ಗೊತ್ತಾಯ್ತಲ್ಲ?
ಇಗ್ನೊರನ್ಸ್‌ಗಿಂತ ದೊಡ್ಡ ಅಪಾಯ ಯಾವುದಿದೆ?
Dear Sir,
please send me kannada language history.
Thanks & Reg
santhosh
Sir,
Your article is nothing but the truth!
Dear Sir
Nanage English Barangilla Illi Kannada tagollangilla kshamisi
your friend
mukund
a creative and intelligent attempt, i enjoyed a lot while reading for the second time thank you sir
sir,
very good attempt to inform the effects.
Thankyou,
sridas
Well said!
Is this written by Nagesh Hegde?